Monday, June 5, 2023

ವ್ಯಾಸ ವೀಕ್ಷಿತ - 40 ತಪತೀ-ಸಂವರಣ-ವೃತ್ತಾಂತ (Vyaasa Vikshita - 40 Tapati-Samvarana-Vrittanta)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಅದೇ ಸಮಯಕ್ಕೆ ಸಂವರಣನೆಂಬ ರಾಜಕುಮಾರನು ಸೂರ್ಯನ ಆರಾಧನೆಯನ್ನು ಮಾಡುತ್ತಿದ್ದನು. ಋಕ್ಷನೆಂಬವನ ಪುತ್ರನಾದ ಆತನು ಕುರುಕುಲಕ್ಕೆ ಪುಂಗವನಿದ್ದಂತೆ. (ಪುಂಗವ ಎಂದರೆ ಗಂಡುಗೂಳಿ, ಅರ್ಥಾತ್, ಮಹಾಬಲಶಾಲಿ). ಅಲ್ಲದೆ, ನಾನಾವಿಧವಾದ ನಿಯಮ-ಉಪವಾಸ-ತಪಸ್ಸುಗಳಲ್ಲಿ ತೊಡಗುತ್ತಿದ್ದನು. ಧರ್ಮಜ್ಞನೂ, ರೂಪದಲ್ಲಿ ನಿಸ್ಸಮನೂ ಆದ ಸಂವರಣನೇ ತಪತಿಗೆ ತಕ್ಕ ಪತಿಯೆಂಬುದಾಗಿ ಸೂರ್ಯನು ಭಾವಿಸಿದನು.


ಹೀಗಿರಲು, ಸಂವರಣನೊಮ್ಮೆ ಬೇಟೆಗೆ ಹೊರಟನು. ಆತನ ಕುದುರೆಯು ಹಸಿವು ಬಾಯಾರಿಕೆಗಳಿಂದಾಗಿ ಆ ಪರ್ವತಭೂಮಿಯಲ್ಲಿ ಕುಸಿದು ಸಾವನ್ನಪ್ಪಿತು. ಕಾಲ್ನಡಿಗೆಯಿಂದಲೇ ಆತನು ಮುನ್ನಡೆಯುತ್ತಿರಲು ಸುಂದರಿಯಾದ ಕನ್ಯೆಯೊಬ್ಬಳನ್ನು ಕಂಡು ಅವಳಿಗೆ ಮನಸೋತನು. ಆಕೆಯು ಲಕ್ಷ್ಮಿಯೋ ಸೂರ್ಯನ ಪ್ರಭೆಯೋ ಆಗಿರಬೇಕೆಂದೂ ತರ್ಕಿಸಿದನು. ಅವಳನ್ನು ಕಂಡು ತನ್ನ ಕಣ್ಣುಗಳು ಸಫಲವಾದವೆಂದು ಭಾವಿಸಿದನು.

ತನ್ನ ಗುಣಮಯವಾದ ಪಾಶಗಳಿಂದ ಆತನ ಮನಸ್ಸನ್ನೂ ಚಕ್ಷುಸ್ಸನ್ನೂ(=ನೇತ್ರವನ್ನೂ) ಕಟ್ಟಿಹಾಕಿಬಿಟ್ಟಳು.

 "ಸುಂದರಿ, ಯಾರು ನೀನು? ಯಾರ ಮಗಳು? ಇಲ್ಲೇಕೆ ನಿಂತಿರುವೆ? ನಿನ್ನ ಮುಖವನ್ನು ಕಂಡಷ್ಟಕ್ಕೇ ನನ್ನ ಮನಸ್ಸು ಕ್ಷೋಭೆಗೊಂಡಿದೆ." ಎಂದನು.

ಆದರೆ ಏನನ್ನೂ ಹೇಳದ ಅವಳು ಅಲ್ಲೇ ಮಾಯವಾದಳು. ಉನ್ಮತ್ತನಂತೆ ಅವಳಿಗಾಗಿ ಹುಡುಕಾಡಿ, ಆಯಾಸಗೊಂಡು ಮೂರ್ಛಿತನಾಗಿ ಕ್ಷಣಕಾಲ ನಿಶ್ಚೇಷ್ಟನಾದನು, ಸಂವರಣ.

ಮುಗ್ಧವಾದ ನಗೆಯುಳ್ಳ ಆ ಸುಂದರಿಯು ಆ ರಾಜನಿಗೆ ಮತ್ತೆ ಕಾಣಿಸಿಕೊಂಡು ಮಧುರವಾದ ಮಾತನ್ನು ಆಡಿದಳು.

  

ನಿನಗೆ ನನ್ನಲ್ಲಿ ಪ್ರೀತಿಯಿರುವುದಾದಲ್ಲಿ, ನನ್ನ ತಂದೆಯ ಬಳಿ ಪ್ರಾರ್ಥಿಸಿಕೋ. ನಾನು ತಪತಿ, ಸಾವಿತ್ರಿಯ ತಂಗಿ" ಎಂದಳು.

ಇತ್ತ ರಾಜನನ್ನು ಹುಡುಕಿಕೊಂಡು ಬಂದ ಮಂತ್ರಿಯು ರಾಜನಿದ್ದಲ್ಲಿಗೆ ಬಂದನು. ಬೇಟೆಯ ಬಳಲಿಕೆಯಿಂದ ಬಿದ್ದಿರುವನೆಂದು ಭಾವಿಸಿದನು. ಅರಸನ ಮೇಲೆ ತಣ್ಣೀರನ್ನು ಸಿಂಪಡಿಸಿದನು. ಆಗ ಎಚ್ಚರಗೊಂಡ ಸಂವರಣನು, ತಪತಿಗಾಗಿ ಸೂರ್ಯನನ್ನು ಕುರಿತು ಪ್ರಾರ್ಥನೆಯನ್ನು ಆರಂಭಿಸಿದನು. ಹಾಗೆ ಪ್ರಾರ್ಥಿಸುತ್ತಿರುವಾಗ, ಮಧ್ಯದಲ್ಲಿ ಕುಲಪುರೋಹಿತರಾದ ವಸಿಷ್ಠರನ್ನು ಸ್ಮರಿಸಿಕೊಂಡನು.

 

ಹನ್ನೆರಡನೆಯ ದಿನಕ್ಕೆ ಆಗಮಿಸಿದ ವಸಿಷ್ಠರು ತಮ್ಮ ದಿವ್ಯದೃಷ್ಟಿಯಿಂದಲೇ ಅರಸನ ಇಂಗಿತವನ್ನರಿತರು. ಆತನಿಗಾಗಿ ತಪತಿಯನ್ನು ಯಾಚಿಸಲೆಂದು ಸೂರ್ಯನ ಬಳಿ ತಾವೇ ಸಾಗಿದರು. ಸ್ವಾಗತೋಪಚಾರಗಳಾದ ಬಳಿಕ, ಬಂದ ಉದ್ದೇಶವನ್ನು ತಿಳಿಸಿದರು. ಸಂತುಷ್ಟನಾದ ಸೂರ್ಯನು ತನ್ನ ಮಗಳನ್ನು ಸಂವರಣನಿಗಾಗಿ ಅವರೊಂದಿಗೆ ಕಳುಹಿಸಿಕೊಟ್ಟನು. ತಪತೀ-ಸಂವರಣರ ವಿವಾಹವೂ ನೆರವೇರಿತು.

ಪತ್ನಿಯೊಂದಿಗೆ ವಿಹರಿಸಿಕೊಂಡಿರಲು ಬಯಸಿದ ರಾಜನು ರಾಜ್ಯರಕ್ಷಣೆಯನ್ನು ಮಂತ್ರಿಗೇ ವಹಿಸಿದನು. ಹನ್ನೆರಡು ವರ್ಷಗಳು ಕಳೆದುಹೋದವು. ಯಜ್ಞಯಾಗಾದಿಗಳಿಲ್ಲದೆ, ಮಳೆಯೂ ಬರದೆ ರಾಜ್ಯದಲ್ಲಿ ಕ್ಷಾಮವು ತಲೆದೋರಿತು. ಪ್ರಜೆಗಳಿಗೆ ದುರವಸ್ಥೆಯಾಗಿತು. ತಮ್ಮ ತಪೋಬಲದಿಂದ ಮಳೆಬರುವಂತೆ ಮಾಡಿದರು, ವಸಿಷ್ಠರು. ಜೊತೆಗೆ, ತಪತೀ-ಸಂವರಣರೂ ರಾಜಧಾನಿಗೆ ಬರುವಂತೆ ಮಾಡಿದರು. ಪ್ರಜೆಗಳು ಸಂತುಷ್ಟರಾದರು. ಹನ್ನೆರಡು ವರ್ಷಗಳ ಕಾಲ ಯಜ್ಞಯಾಗಾದಿಗಳನ್ನು ಸಂವರಣನು ಮಾಡಲು ಎಲ್ಲವೂ ಸುಸಮೃದ್ಧವಾಯಿತು. ಓ ಅರ್ಜುನ, ನಿನ್ನ ಪೂರ್ವಜನಾದ ಕುರುವು ತಪತೀ-ಸಂವರಣರ ಮಗ. ಎಂದೇ ನಿನ್ನನ್ನು ತಾಪತ್ಯ ಎಂದದ್ದು - ಎಂದನು.

ವಸಿಷ್ಠರ ತಪೋಬಲವನ್ನು  ಕೇಳಿ ತಿಳಿದುಕೊಂಡ ಅರ್ಜುನನು, ಅವರ ಪೂರ್ವವೃತ್ತಾಂತವನ್ನೂ ಕೇಳಬಯಸಿದನು. ಇಂದ್ರಿಯಗಳನ್ನು ವಶದಲ್ಲಿಟ್ಟುಕೊಂಡಿದ್ದರಿಂದಲೇ ಅವರಿಗೆ ವಸಿಷ್ಠರೆಂದು ಹೆಸರು (ಇಂದ್ರಿಯಾಣಾಂ ವಶಕರೋ ವಸಿಷ್ಠ ಇತಿ ಚೋಚ್ಯತೇ) ಎಂದು ಹೇಳಿ, ವಸಿಷ್ಠಕಥೆಯನ್ನು ಗಂಧರ್ವನು ಆರಂಭಿಸಿದನು.


ಸೂಚನೆ : 04/6/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.