Friday, June 16, 2023

ಒಳ್ಳೆಯದನ್ನೇ ಗಮನಿಸೋಣ ....( Olleyadanne Gamanisona....)


ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)


ಅವನೊಬ್ಬ ಜಗದ್ವಿಖ್ಯಾತ ಚಿತ್ರಕಾರ. ಅದೊಂದು ದಿನ ಸರ್ವಾಂಗಸುಂದರವಾದ ಚಿತ್ರವೊಂದನ್ನು ಚಿತ್ರಿಸಿದ.  ಜನಾಭಿಪ್ರಾಯವನ್ನು ಪಡೆಯಲೆಂದು ಆ ಚಿತ್ರವನ್ನು ಪ್ರಸಿದ್ಧವಾದ ಚಿತ್ರಪ್ರದರ್ಶಿನಿಯಲ್ಲಿ ಇಟ್ಟು, ಚಿತ್ರದ ಕೆಳಗೆ ಟಿಪ್ಪಣಿಯೊಂದನ್ನು ಅಂಟಿಸಿದ-" ಈ ಚಿತ್ರದಲ್ಲಿ ದೋಷಗಳೇನಾದರೂ ಕಂಡುಬಂದಲ್ಲಿ ಆ ದೋಷಭಾಗವನ್ನು ಗುರುತಿಸಿ ಬರೆಯಿರಿ" ಎಂದು. ಜನರೆಲ್ಲಾ ಬಂದರು. ಕೆಳಗಿನ ಟಿಪ್ಪಣಿಯನ್ನು ನೋಡಿದರು. ಒಬ್ಬೊಬ್ಬರೂ ಅವರವರ ಕಣ್ಣುಗಳಿಗೆ ಯಾವ ಯಾವ ಅಂಗಗಳಲ್ಲಿ ದೋಷ ಎನ್ನಿಸಿದ್ದನ್ನೆಲ್ಲ್ಲಾ ಗೆರೆಯೆಳೆದು ಗುರುತಿಸಿದರು. ಸಂಜೆಯ ವೇಳೆ ಆ ಚಿತ್ರಕಾರ ಬಂದು ನೋಡುತ್ತಾನೆ.ಅವನಿಗೆ ಅತ್ಯಾಶ್ಚರ್ಯ, ದುಃಖ ಕಾದಿತ್ತು. ಆ ಚಿತ್ರದ ಎಲ್ಲಾ ಅಂಗಾಂಗಗಳೂ ದೋಷಪೂರ್ಣವೆಂದು ಗುರುತಾಗಿದೆ! ಸಹಿಸಲಾಗದ ದುಃಖ, ದುಗುಡಗಳಿಂದ ಅವನು-"ನಾನು ಪ್ರಸಿದ್ಧ ಚಿತ್ರಕಾರನೆಂದುಕೊಂಡಿದ್ದೆ. ಆದರೆ ಜನರು ನನ್ನ ಚಿತ್ರದ ಎಲ್ಲಾ ಭಾಗಗಳಲ್ಲೂ ದೋಷಗಳನ್ನು ಗುರುತಿಸಿದ್ದಾರೆ. ನನ್ನ ಅಭಿಮಾನಕ್ಕೆ ಧಿಕ್ಕಾರವಿರಲಿ! ಇನ್ನು ಮುಂದೆ ಯಾವ ಚಿತ್ರವನ್ನೂ ರಚಿಸುವುದಿಲ್ಲ" ಎಂದುಕೊಂಡು ಹತಾಶನಾಗಿ ಮನೆ ಸೇರಿದನು. ಇವನ ಪರಮಾಪ್ತ ಸ್ನೇಹಿತನೊಬ್ಬ, ಈ ಚಿತ್ರಕಾರ ಬಹಳದಿನ ಕಾಣಿಸಿಕೊಳ್ಳದ ಕಾರಣ ಅವನ ಮನೆಗೆ ಹೋದನು. ಅಲ್ಲಿ ನಡೆದುದೆಲ್ಲವನ್ನೂ ಕೇಳಿ, ಮುಂದೆಂದೂ ಚಿತ್ರ ಬರೆಯಲಾರೆನೆಂಬ ಅವನ ನಿಶ್ಚಯವನ್ನೂ ಕೇಳಿದನು. "ಜನರಿಗಾಗಿ ಬೇಡ, ನನಗಾಗಿ ಒಂದು ಚಿತ್ರವನ್ನು ಬರೆದುಕೊಡು ಎಂದು ಒತ್ತಾಯಿಸಿದನು. ಆ ಚಿತ್ರಕಾರನು ಒಲ್ಲದ ಮನಸ್ಸಿನಿಂದ ಸ್ನೇಹಿತನ ಒತ್ತಾಯಕ್ಕೆ ಕಟ್ಟುಬಿದ್ದು ಹೇಗೋ ಒಂದು ಚಿತ್ರ ಬರೆದುಕೊಟ್ಟನು. ಆ ಸ್ನೇಹಿತನು ಆ ಚಿತ್ರವನ್ನು ಅದೇ ಪ್ರದರ್ಶಿನಿಯಲ್ಲಿ ಇಟ್ಟು ಕೆಳಗೆ ಬರೆದ ಟಿಪ್ಪಣಿ ಮಾತ್ರ ಬೇರೆಯಾಗಿತ್ತು-"ಈ ಚಿತ್ರದಲ್ಲಿನ ಒಳ್ಳೆಯ ಅಂಶಗಳನ್ನೆಲ್ಲಾ ಗೆರೆಯೆಳೆದು  ಗುರುತಿಸಿ" ಎಂದು ಬರೆದನು. ಮತ್ತೆ ಜನರೆಲ್ಲಾ ಬಂದರು. ಚಿತ್ರವನ್ನೂ, ಕೆಳಗಿನ ಟಿಪ್ಪಣಿಯನ್ನೂ ನೋಡಿದರು. ಒಬ್ಬರಿಗೆ ಒಂದೊಂದು ಅಂಗಗಳು ಇಷ್ಟವಾದವು. ಹಾಗೆಯೇ ಗುರುತಿಸಿದರು. ಸಂಜೆಯ ವೇಳೆಗೆ ಚಿತ್ರದ ಎಲ್ಲಾ ಭಾಗಗಳೂ ಬಹಳ ಚೆನ್ನಾಗಿವೆ ಎಂದು ಗುರುತಾಗಿದ್ದವು. ವಾಸ್ತವವಾಗಿ ಮೊದಲಿನ ಚಿತ್ರ ಇದಕ್ಕಿಂತ ಚೆನ್ನಾಗಿತ್ತು. ಆದರೆ ದೋಷಗಳನ್ನು ಗುರುತಿಸಿ ಎಂದಾಗ ಮನಸ್ಸು ದೋಷಗಳ ಕಡೆಗೇ ಗಮನ ಹರಿಸಿತ್ತು. ಅದೇ ಒಳ್ಳೆಯದನ್ನು ಗುರುತಿಸಿ ಎಂದಾಗ ಒಳ್ಳೆಯದನ್ನೇ ಹುಡುಕಿತು-ಅದೇ ಪ್ರದರ್ಶಿನಿ! ಅದೇ ಜನ! 

ನಮ್ಮ ನಿತ್ಯಜೀವನದ ಕಥೆ ಇದು. ಜೀವನ, ದೋಷಗಳ ಚೀಲವಲ್ಲ.  ಜೀವನದಲ್ಲಿ ಆನಂದ, ನೆಮ್ಮದಿಯೇ ಮೊದಲಾದ ಸದ್ವಿಚಾರಗಳನ್ನು ಕಂಡು ಕರುಣಿಸಿದ ಋಷಿಗಳ ಭೂಮಿಯಲ್ಲಿ ಬದುಕುತ್ತಿದ್ದೇವೆ. "ಜೀವನಕ್ಕೆ ಅರ್ಥ ಇದೆಯಪ್ಪಾ, ಅರ್ಥ ಅಷ್ಟೇ ಅಲ್ಲ ,ಪರಮಾರ್ಥ ಇದೆ" ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಜೀವನದಲ್ಲಿ ದೋಷಗಳನ್ನು ಹುಡುಕತೊಡಗಿದರೆ ಜಗತ್ತೆಲ್ಲವೂ ದೋಷಪೂರ್ಣ ಎನಿಸುತ್ತದೆ. ಅದೇ ಗುಣಗಳನ್ನು ಹುಡುಕುವ ಅಭ್ಯಾಸ ಮಾಡಿಕೊಂಡರೆ ಸೃಷ್ಟಿಯೆಲ್ಲವೂ ಸರ್ವಾಂಗ ಸುಂದರ. ಮನಸ್ಸಿಗೆ ಯಾವ ಟಿಪ್ಪಣಿ ಅಂಟಿಸುತ್ತೇವೋ ಅದರಂತೆ ತಯಾರಾಗುತ್ತದೆ.  ಧರ್ಮರಾಜ-ದುರ್ಯೋಧನರಿಗೆ ಒಡ್ಡಿದ ಪರೀಕ್ಷೆ ಪ್ರಸಿದ್ಧವಾಗಿದೆ. ದುರ್ಯೋಧನನಿಗೆ ವಿಶ್ವದಲ್ಲಿ ಒಳ್ಳೆಯದನ್ನೂ, ಧರ್ಮಜನಿಗೆ ಕೆಟ್ಟದ್ದನ್ನೂ ಗುರುತಿಸುವ ಪರೀಕ್ಷೆ. ಇಬ್ಬರೂ ಅನುತ್ತೀರ್ಣರಾದರು. ದುರ್ಯೋಧನನಿಗೆ ಒಳ್ಳೆಯದೇ ಕಾಣದು. ಧರ್ಮಜನಿಗೆ ಕೆಟ್ಟದ್ದೇ ಕಾಣದು. ಧರ್ಮಜನ ಮಾನಸಿಕತೆ ನಮ್ಮೆಲ್ಲರ ಆದರ್ಶವಾಗಲಿ ಎಂದು ಪ್ರಾರ್ಥಿಸೋಣ.

ಸೂಚನೆ: 15/06/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.