Sunday, June 18, 2023

ಅಷ್ಟಾಕ್ಷರೀ​ - 37 ಯೋಗೇನಾಂತೇ ತನುತ್ಯಜಾಂ (Astakshara Darshana 37 Yogenante Tanutyajam)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಇದೋ ಮತ್ತೆ ಬರುತ್ತಿದೆ, ಅಂತಾರಾಷ್ಟ್ರಿಯ ಯೋಗ ದಿನ - ಈ ತಿಂಗಳ ೨೧ಕ್ಕೆ. ಯೋಗದ ಬಗ್ಗೆ ಮತ್ತೊಮ್ಮೆ ನಮ್ಮ ಚಿಂತನ-ಲಹರಿಯನ್ನು ಹರಿಸಲು ಇದೊಂದು ಸುಸಮಯ.

"ಸಮಸ್ಯೆಯೊಂದು, ಪರಿಹಾರಗಳು ಸಾವಿರಾರು; ಯಾವುದು ಸಮವೋ ಯಾವುದು ಬೆಸವೋ, ಬಲ್ಲವರಾರು?" - ಎಂದು ಭ್ರಾಂತಿಬರಿಸುವ ವಿಷಯವೊಂದಿದ್ದರೆ, ಅದು "ಜೀವನವನ್ನು ಹೇಗೆ ನಡೆಸಬೇಕು?" ಎಂಬುದೇ. ಸಾವಿರಾರು ಮತಿಗಳು, ಸಾವಿರಾರು ಮತಗಳು! ಯಾವ ಗುರಿ ಸರಿಯೋ ಯಾವ ಹಾದಿ ಹದವೋ ? ಭುಕ್ತಿಯು ಯುಕ್ತವೇ? ಮುಕ್ತಿಯು ಶಕ್ಯವೇ? – ಹೇಳಲಾರೆವು! ಬಯಸದೆ(?) ಹುಟ್ಟಿದ್ದಾಯಿತು, ಬಯಸಿ ಸಾಯುವುದು ತಪ್ಪೋ ಒಪ್ಪೋ? : ಗೊಂದಲ ಬಹುಮಂದಿಗೆ.

ಸಾಯುವ ಮಾತು ಬಂದಿತಲ್ಲವೆ? ಪ್ಲೇಟೋವಿನ ಸ್ಮರಣೆ ಬರುತ್ತದೆ. ಪಾಶ್ಚಾತ್ತ್ಯರಲ್ಲಿ ಹಲವು ಪ್ರಸಿದ್ಧಚಿಂತಕರ ಸಾವು ಅದೇನೋ ವಿಭಿನ್ನವಾದದ್ದು: ಸಾಕ್ರೆಟೀಸನು ಹೆಮ್ಲಾಕ್ ಕುಡಿಯುತ್ತ ಸತ್ತದ್ದು, ಹೊಡೆತ ತಿಂದು ಹೈಪಾಷಿಯಾ ಸಾವಿಗೀಡಾದದ್ದು, ಏಸು ಅಸು ನೀಗಿದ್ದು, ಬ್ರೂನೋ ಪ್ರಾಣ ತೆತ್ತದ್ದು, ಗೆಲಿಲಿಯೋ ಕೊನೆಕೊನೆಗೆ ವಿಲವಿಲನೆ ನರಳಿ ಮರಣಿಸಿದುದು – ಎಲ್ಲವೂ ವಿಚಿತ್ರ. ವಿಚಿತ್ರವೇನು, ಎಲ್ಲವೂ ಒಂದೇ ಬಗೆಯೇ: "ನನ್ನ ಮತವನ್ನು ನೀನೊಪ್ಪೆಯಲ್ಲವೇ? ಸಾಯಿ, ಪಾಪಿಬೆಪ್ಪನೇ" – ಎಂಬುದೊಂದೇ ಅಲ್ಲಿಯೆಲ್ಲರ "ಏಕಸೂತ್ರ"!

ಸಾಕ್ರೆಟೀಸನನ್ನು ಕುರಿತಾದ  ಮಾತುಗಳ ನಡುವೆ ಪ್ಲೇಟೋವಿನ ಮಾರ್ಮಿಕವಾದ ಮಾತೊಂದು ಬರುತ್ತದೆ: "ಬದುಕುವ ಕಲೆಯೆಂದರೆ ಅದು ಸಾಯುವ ಕಲೆಯೇ ಸರಿ". ಪ್ಲೇಟೋವಿಗೆ ಆ ಚಿಂತೆಯದೆಂತು ಬಂತೋ, ಸಾವಿಗೊಂದು ಸಿದ್ಧತೆ ಬೇಕೆಂಬುದು ಭಾರತೀಯಚಿಂತನೆಗೆ ಬಹಿರ್ಭೂತವಾದುದಲ್ಲ(= ಹೊರತಾದುದಲ್ಲ).

ಗೀತೆ ಹೇಳುವುದಲ್ಲವೇ?: ಹುಟ್ಟಿದವರೆಲ್ಲ ಸಾಯತಕ್ಕದ್ದೇ; ಸತ್ತವರು ಹುಟ್ಟತಕ್ಕದ್ದೇ. ಈ ಹುಟ್ಟು-ಸಾವುಗಳ ವಿಷವರ್ತುಲಕ್ಕೆ ವಿಲಯವೇ ಇಲ್ಲವೆ? ಇದ್ದರೆ ಹೇಗೆ? - ಎಂಬ ಆಲೋಚನೆ ಅಸಾಧುವೇನಲ್ಲ. ಸದಾ ಸಪ್ಪೆಮೋರೆ ಹಾಕಿಕೊಂಡು ತೆಪ್ಪಗಿರುವುದನ್ನು ನಮ್ಮ ಸಂಸ್ಕೃತಿ ಎಂದೂ ಬೋಧಿಸಿಲ್ಲ."ಸೊಗಸಾಗಿ ಬದುಕು, ಸೊಗಸಾಗಿ ಸಾಯಿ ಕೂಡ"-ಗಳನ್ನೇ ಇಲ್ಲಿ ಹೇಳಿರುವುದು!

ಸೊಗಸಾಗಿ ಬದುಕೆಂಬುದನ್ನು ನಮ್ಮವರು ನಡೆದೇ ತೋರಿಸಿದ್ದಾರೆ: ನಮ್ಮಲ್ಲಿಯ ಹಬ್ಬಗಳಿಗೆ ಕಡಿಮೆಯೋ? ಹಬ್ಬಗಳಲ್ಲಿಯ ಸಡಗರಗಳಿಗೆ ಕಡಿಮೆಯೋ? ನಮ್ಮ ವೇಷಭೂಷಣಗಳಿಗೆ ಮಿತಿಯುಂಟೇ? ಆಹಾರ-ತಿನಿಸುಗಳಿಗೆ ಕೊನೆಯುಂಟೇ? ಉಟ್ಟು ಸುಖಿಸು, ತೊಟ್ಟು ತೋಷಿಸು: ಉಂಡು ಉಣಿಸಿ ತಣಿದು ತಣಿಸುವ ಸೊಗಸು ನಮ್ಮ ದೇಶದ್ದು. ಲೂಟಿಕಾರ ಮೊಘಲರ ದುರಾಕ್ರಮಣದ ಪರ್ಯಂತ ಇಲ್ಲಿದ್ದ ಸುಖ-ಸಮೃದ್ಧಿಗಳು ಆ ದರಿದ್ರಗೃಧ್ರಗಳ ಕಣ್ಗಳನ್ನು ಅದೆಷ್ಟು ಕುಕ್ಕಿದವೋ?

ರಘುವಂಶದ ಅರಸರನ್ನು ಚಿತ್ರಿಸುತ್ತಾ ಕಾಳಿದಾಸನು ಹೇಳುವುದು - ಅವರು ಯೌವನದಲ್ಲಿ ವಿಷಯಸುಖಗಳನ್ನು ಅನುಭವಿಸುತ್ತಿದ್ದರು - ಎಂಬುದನ್ನು. ಮುಪ್ಪಾವರಿಸಿದಾಗ ಮುನಿಜೀವನವನ್ನು ಹಿಡಿದು, ಕೊನೆಗೆ ಯೋಗಕ್ರಮದಿಂದ ದೇಹವನ್ನು ಬಿಟ್ಟುಹೋಗುತ್ತಿದ್ದರು – ಎಂಬುದನ್ನು: ಯೋಗೇನಾಂತೇ ತನುತ್ಯಜಾಂ.

ಬಯಸಿದರೆ ಸಾವು ಬಂದೀತೇ? – ಎನ್ನುತ್ತೇವಲ್ಲವೆ? ಆದರೆ ಯೋಗಸಿದ್ಧರಿಗೆ ಹಾಗಲ್ಲ. ಅವರಿಗೆ ಪ್ರಾಣವೆಂಬುದು ಹತೋಟಿಯಲ್ಲಿರುವುದು. ಎಂದೇ ದಕ್ಕತಕ್ಕದ್ದು, ಪ್ರಾಣತ್ಯಾಗವನ್ನು ಸಂಕಲ್ಪಪೂರ್ವಕವಾಗಿ ಮಾಡುವ ಸಾಮರ್ಥ್ಯ. ಪ್ರಾಣವನ್ನು ಬಿಡುವುದೆಂದರೆ ದೇಹವನ್ನೂ ಬಿಟ್ಟಂತೆಯೇ. ಉತ್ತರಾಯಣಕ್ಕಾಗಿ ಕಾದಿದ್ದು, ಆ ಸಮಯಕ್ಕೆ ಪ್ರಾಣಬಿಟ್ಟ  ಇಚ್ಛಾಮರಣಿಗಳಾದ ಭೀಷ್ಮರ ಬಗ್ಗೆ ಕೇಳಿಲ್ಲವೆ? ಕೊನೆಗಾಲದಲ್ಲಿ ಈ ಪರಿಯಲ್ಲಿ ಪ್ರಾಣತೊರೆದವರು ಜನನ-ಮರಣಗಳ ವಿಷವರ್ತುಲವನ್ನು ಮೀರುವರು.

"ಆರ್ಯಭಾರತೀಯರ ಜೀವನಪದ್ಧತಿಯ ಆದಿ-ಮಧ್ಯ-ಅಂತಗಳೆಂತು? – ಎಂಬುದನ್ನು ಕಾಳಿದಾಸನು ಈ ಶ್ಲೋಕದ ಮೂಲಕ ತಿಳಿಸಿದ್ದಾನೆ." - ಎಂದು ಜ್ಞಾಪಿಸುತ್ತಿದ್ದರು, ಶ್ರೀರಂಗಮಹಾಗುರುಗಳು: ಜೀವನದ ಬಗ್ಗೆ ಸಮಗ್ರವಾದ ನೋಟವೀವ ವಿದ್ಯೆ ಮೊಟ್ಟಮೊದಲು, ಶೈಶವದಲ್ಲಿ;  ವಿಷಯಸುಖ ಯೌವನದಲ್ಲಿ; ಮುನಿವೃತ್ತಿ ವಾರ್ಧಕದಲ್ಲಿ; ಯೋಗದ್ವಾರಾ ಇಚ್ಛಾಪೂರ್ವಕ ದೇಹತ್ಯಾಗ ಕೊನೆಯಲ್ಲಿ, ಕಟ್ಟಕಡೆಯಲ್ಲಿ!

ದಾಕ್ಷಾಯಣಿಯು ಸಹ ಯೋಗದಿಂದಲೇ ತನ್ನ ಶರೀರವನ್ನು ತ್ಯಜಿಸಿ(ಮತ್ತೆ ಪಾರ್ವತಿಯಾಗಿ ಜನಿಸಿ)ದಳು – ಎನ್ನುತ್ತದೆ, ಕುಮಾರಸಂಭವ. ರಘುವಂಶದ ಅರಸರಿಗೂ ಹೀಗೆಮಾಡುವುದು ಸಾಧ್ಯವಾಗಿತ್ತು ಎನ್ನುತ್ತದೆ, ರಘುವಂಶ.

ಅಲ್ಲಿಗೆ, ಅನವರತ ಕಾರ್ಯಭರಿತರಾದ ಅರಸರಿಗೆ ಸಹ ಸಾಧ್ಯವಾಗಿತ್ತು ಈ ವಿದ್ಯೆ! ಇನ್ನು ಇತರರಿಗಾಗದೇ? ಭವ್ಯವಾಗಿ ಬದುಕಿ ಬಾಳಲು ಬೇಕು ಯೋಗ; ಸೊಗಸಾಗಿ ಸಾಯಲಿಕ್ಕೂ ಬೇಕಾದದ್ದೇ ಯೋಗ!

ಆದರ್ಶಕ್ರಮವಿದು: ಅಂತಕಾಲದಲ್ಲಿ ದೇಹವನ್ನು ಯೋಗದ್ವಾರಾ ಬಿಡಬೇಕು; ಅಲ್ಲಿಯ ತನಕ ಯೋಗವನ್ನು ಮಾತ್ರ ಬಿಡಬಾರದು! ಜೀವಿತಕಾಲವಾಗಲಿ, ಮರಣಕಾಲವಾಗಲಿ, ಉತ್ತಮಗತಿಯನ್ನು ಕಾಣಿಸುವ ವಿದ್ಯೆಯೇ ಯೋಗ.


ಸೂಚನೆ: 18/06/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.