Monday, June 12, 2023

ಯಕ್ಷ ಪ್ರಶ್ನೆ 41 (Yaksha prashne 41)


ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಒಬ್ಬಂಟಿನಗನಾಗಿ ಸಂಚರಿಸುವವನು ಯಾರು ?

ಉತ್ತರ - ಸೂರ್ಯ

ತೈತ್ತಿರೀಯ ಸಂಹಿತೆಯಲ್ಲಿ ಈ ಪ್ರಶ್ನೆಗೆ ಸಂವಾದಿಯಾದ ಪ್ರಶ್ನೆ ಮತ್ತು ಉತ್ತರವನ್ನು ಕಾಣಬಹುದು. "ಕಸ್ವಿದೇಕಾಕೀ ಚರತಿ? ಸೂರ್ಯ ಏಕಾಕೀ ಚರತಿ " ಎಂದು. ಮಹಾಭಾರತವನ್ನು ಪಂಚಮವೇದ ಅಂದು ಹೇಳಿದ್ದು ಕಂಡುಬರುತ್ತದೆ. ಈ ಕಾರಣಕ್ಕೇ ಆ ಮಾತು ಬಂದಿರಬಹುದೇನೋ ಎಂದು ಅನಿಸುತ್ತದೆ. ಯಜುರ್ವೇದದ ಮಂತ್ರಕ್ಕೂ ಇಲ್ಲಿ ಬರುವ ಶ್ಲೋಕಕ್ಕೂ ಸ್ವಲ್ಪವೂ ವ್ಯತ್ಯಾಸವಿಲ್ಲ. ಆ ಮಂತ್ರವನ್ನೇ ಕಾಪಿ ಮಾಡಲಾಗಿದೆಯೋ ಎನ್ನುವಷ್ಟರಮಟ್ಟಿಗೆ ವಿಷಯವನ್ನು ಕಾಣಬಹುದು. ಸೂರ್ಯನು ಒಬ್ಬನೇ ಚೈಲಿಸುತ್ತಾನೆ ಎಂಬ ರೀತಿಯಲ್ಲಿ ಇಲ್ಲಿನ ಪ್ರಶ್ನೋತ್ತರವಿದೆ. ಸೂರ್ಯನು ಚಲಿಸುವುದು ಎಂಬ ವಿಷಯವೇ ಎಲ್ಲರೂ ಒಪ್ಪುವಂತಹದ್ದಲ್ಲ. ಸೂರ್ಯನು ಚಲಿಸುವುದೇ ಇಲ್ಲ ಎಂದು ಆಧುನಿಕ ವಿಜ್ಞಾನದ ಮತವಾಗಿದೆ. ಆದರೆ ಭಾರತೀಯ ಜ್ಯೋತಿಷ್ಯಶಾಸ್ತ್ರವು ಇನ್ನೊಂದು ಬಗೆಯಲ್ಲಿ ಸೂರ್ಯನು ಚಲಿಸುವುದಿಲ್ಲ; ಬದಲಿಗೆ ಅವನು ಚಲಿಸಿದಂತೆ ಕಾಣುತ್ತಾನೆ ಎಂದು ಹೇಳುವುದರ ಮೂಲಕ ಆಧುನಿಕವಿಜ್ಞಾನದ ಮತಕ್ಕೆ ತನ್ನ ಶಮತವನ್ನು ಸೂಚಿಸುತ್ತದೆ ಎಂದು ಹೇಳಬಹುದು. ಅಥವಾ ಆಧಿನ ವಿಜ್ಞಾನವು ಸೂರ್ಯನ ಸ್ಥಿರತ್ವವನ್ನು ಯಾವರೀತಿಯಾಗಿ ಪ್ರತಿಪಾದನೆ ಮಾಡುತ್ತಿದೆಯೋ ಅದು ಭಾರತೀಯ ಆರ್ಷವಿಜ್ಞಾನಕ್ಕೆ ವಿರೋಧವಾಗಿಲ್ಲ ಎನ್ನುವುವನ್ನೂ ಅಷ್ಟೇ ಖಚಿತವಾಗಿ ಹೇಳಬಹುದು. ಹೀಗಿದ್ದರೂ ವೇದ ಅಥವಾ ವೇದಾನುವಾದಿಯಾದ ಮಹಾಭರತದಲ್ಲಿ ಇದಕ್ಕೆ ವಿರುದ್ಧವಾದ ಭಿಪ್ರಯವನ್ನು ಹೇಳುವ ಈ ಪ್ರಶ್ನೋತ್ತರ ಎಷ್ಟು ಸೂಕ್ತ ಎಂಬ ಸಂಶಯವೂ ಬಾರದಿರದು. ಹಾಗಾದರೆ ಈ ವಿರೋಧಕ್ಕೆ ಪರಿಹಾರವೇನು ಎಂಬುದನ್ನು ನಾವಿಲ್ಲ ಚಿಂತಿಸೋಣ. 

ಭಾರತೀಯರ ವಿಜ್ಞಾನವು ಅಂತರಂಗದ ಸಾಕ್ಷಾತ್ಕಾರದ ಹಿನ್ನೆಲೆಯಿಂದ ಬೆಳೆದಿದ್ದು ಎಂಬುದನ್ನು ನಾವು ಮೊತ್ತಮೊದಲು ಅಂಗೀಕರಿಸಿಕೊಂಡು ಈ ವಿಷಯವನ್ನು ವಿಮರ್ಶಿಸಬೇಕು. ಅದಿಲ್ಲದೇ ಕೇವಲ ಹೊರಗಣ್ಣಿಗೆ ಕಾಣುವ ಸೂರ್ಯನನ್ನುಮಾತ್ರ ನೋಡಿಕೊಂಡರೆ ಈ ವಿಷಯ ತಪ್ಪಾಗಿ ಕಾಣುವ ಸಾಧ್ಯತೆ ದಟ್ಟವಾಗಿದೆ. ಹೊರಗಿನ ಸೂರ್ಯನಿಗೂ ಮೂಲ ಒಳಗಿನ ಆತ್ಮಸೂರ್ಯ.


ಸೃಷ್ಟಿಯ ಮೊದಲು ಇರುವಂತಹದ್ದು ಈ ಆತ್ಮಸೂರ್ಯನೇ. ಅವನೇ ವಿಕಾಸವಾದಾಗ ಈ ಪ್ರಪಂಚದ ಬೆಳವಣಿಗೆ ಆಯಿತು. ಮತ್ತೆ ಈ ಸೃಷ್ಟಿಯು ಅವನಲ್ಲೇ ಲಯಹೊಂದಿ ಪ್ರಪಂಚದ ಪೂರ್ಣವೃತ್ತವು ಘಟಿಸುವುದು. ಈ ವಿಕಾಸ ವಿಲಯಗಲನ್ನೇ ಸೂರ್ಯನ ಚಲನೆ ಎಂದು ಕರೆದಿದ್ದಾರೆ. ಆ ಆತ್ಮಸೂರ್ಯನಲ್ಲೇ ಮೊದಲ ಕಂಪನ ಅಂದರೆ ಚಲನೆ ಅಥವಾ ಸ್ಪಂದ ಉಂಟಾಗುತ್ತದೆ. ಅದರ ಪರಿಣಾಮವೇ ಈ ಜಗತ್ತಿನ ವ್ಯಾಪಾರ. ಹಾಗಾಗಿ ಸಮಸ್ತಪ್ರಪಂಚದ ವ್ಯಾಪಾರಕ್ಕೆ ಮೂಲ ಆ ಸೂರ್ಯನಾರಾಯಣನ ಆ ಚಲನೆಯೇ ಕಾರಣ. ಅದಕ್ಕೆ ಸೂರ್ಯನಿಗೆ 'ಸವಿತಾ' ಎಂಬ ಹೆಸರು(ಸವಿತೃ- ಪ್ರಸವಿತೃ) ಬಂದಿದೆ ಎಂಬ ಅಭಿಪ್ರಾಯವನ್ನು ಶ್ರೀರಂಗಮಹಾಗುರುಗಳು ಹೇಳಿದ್ದರಂತೆ. ಇದನ್ನೇ ವೇದವು ' ಸೂರ್ಯ ಆತ್ಮಾ ಜಗತಃ ತಸ್ಥುಷಶ್ಚ' ಎಂಬ ಮಂತ್ರದಿಂದ ಅಂತರಂಗದ ವಿಷಯವನ್ನು ಸಾರುತ್ತಿದೆ. ಈ ಹಿಂದೆ ಯಕ್ಷನ ಮೊದಲ ಪ್ರಶ್ನೆಯ ಆಶಯವೂ ಇದೇ ಆಗಿತ್ತು. ಸೂರ್ಯನ ಉದಯಾಸ್ತಗಳಿಗೆ ಕಾರಣವನ್ನು ಆ ಪ್ರಶ್ನೆಯಲ್ಲಿ ವಿಅವರವಾಗಿ ವಿವರಿಸಿದ್ದಾಗಿದೆ. ಅದನ್ನೊಮ್ಮೆ ಇಲ್ಲಿ ಸ್ಮರಣೆಗೆ ತಂದುಕೊಳ್ಳಬೇಕು ಎಂದು ಜ್ಞಾಪಿಸಿಕೊಳ್ಳುತ್ತೇನೆ. 


ಸೂಚನೆ : 11/6/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.