Monday, June 5, 2023

ಅಷ್ಟಾಕ್ಷರೀ​ - 36 ಕೂರ್ಮೋಂಽಗಾನೀವ ಸರ್ವಶಃ (Astakshara Darshana 36 Kurmo’nganiva Sarvashah)

  1. ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಪಂಚದಲ್ಲಿರುವ ಸಮಸ್ತ ಜೀವಿಗಳಲ್ಲೂ ಒಂದು ಸಮಾನವಾದ ಲಕ್ಷಣವಿದೆ; ಮತ್ತು ಇದಕ್ಕೆ ಒಂದೇ ಒಂದು ಅಪವಾದವೂ ಇಲ್ಲ: "ನಾನು ಇರಬೇಕು" ಎನ್ನುವುದೇ ಅದು.

ಬದುಕಿರಬೇಕೆಂದರೆ ಎರಡು ಆವಶ್ಯಕತೆಗಳನ್ನು ಪೂರೈಸಬೇಕು. ಕಾಲಕಾಲಕ್ಕೆ ಆಹಾರವು ದೊರೆಯುಬೇಕು; ಮತ್ತು ಪ್ರಾಣಕ್ಕೆ ಸಂಚಕಾರವಿರಬಾರದು. ಈ ಬಗ್ಗೆ ಸದಾ ನಿಗಾ ಬೇಕಾದದ್ದೇ.

ಮೊದಲನೆಯದು ಅಷ್ಟು ಕಷ್ಟವಲ್ಲವೇನೋ. ಎರಡನೆಯದೇ ಕಷ್ಟ: ತನಗೆ ಪ್ರಾಣಭಯ ಯಾರಿಂದ, ಹಾಗೂ ಸ್ವರಕ್ಷಣೆಗೆ ಏನು ಮಾಡಬೇಕು? – ಎಂಬುದರ ಅರಿವು ಪ್ರತಿಪ್ರಾಣಿಗೂ  ಅವಶ್ಯ. ಕೊಂಬೋ ಕೋರೆದಾಡೆಯೋ ಉಗುರೋ ಪ್ರಾಣಿಗಳಿಗೊಂದು ಸಹಜಾಯುಧವಾಗಬಲ್ಲದು. ಆದರೆ ಜಿಂಕೆ-ಆಮೆಗಳಿಗೆ? ಜಿಂಕೆಗೆ ವೇಗದೋಟವೆಂಬ ರಕ್ಷೆಯುಂಟು. ಆಮೆಗದಿಲ್ಲ; ಅದಕ್ಕಿರುವ ರಕ್ಷೆಯೆಂದರೆ ಅದರ ಬೆನ್ನಿಗಿರುವ ಘಟ್ಟಿಯಾದ ಒಂದು ಕವಚ. ಪ್ರಾಣಾಪತ್ತು ಬಂದಿತೋ, ಕವಚದೊಳಗೆ ಅಂಗಗಳನ್ನು ಸೆಳೆದುಕೋ; ಆಪತ್ತು ಕಳೆಯಿತೋ, ಅವನ್ನು ಆಚೆ ಚಾಚಿ ಮುನ್ನಡೆ.

ಮಂದಗತಿಯಾದರೂ, ಈ ಪ್ರಾಣಿಗೆ 'ಮಹಾಭಾಗ್ಯ'ವೊಂದುಂಟು. ಅದೆಂದರೆ ಸಾಕ್ಷಾದ್-ಭಗವಂತನ ಬಾಯಲ್ಲಿ ಉಪಮಾನವಾಗಿ ಬಳಕೆಯಾಗಿರುವುದು! ಅದೂ ಯಾವುದಕ್ಕೆ? ಜೀವನ ಒಂದು ಉತ್ಕೃಷ್ಟವಾದ ಸ್ಥಿತಿಗೆ: ಸಮಾಧಿಯಲ್ಲಿರುವ ಸ್ಥಿತಪ್ರಜ್ಞನ ಲಕ್ಷಣಗಳನ್ನು ಅರ್ಜುನನಿಗೆ ಹೇಳುವಾಗ ಶ್ರೀಕೃಷ್ಣನು ಇದರ ಉಪಮೆಯನ್ನಿತ್ತಿರುವನು: "ಕೂರ್ಮೋಂಽಗಾನೀವ ಸರ್ವಶಃ" - "ಎಲ್ಲೆಡೆಗಳಿಂದಲೂ ಆಮೆಯು ತನ್ನಂಗಗಳನ್ನು ಸೆಳೆದುಕೊಳ್ಳುವಂತೆ."

ಭೀಷ್ಮ-ದ್ರೋಣರು ತನ್ನ ಆಚಾರ್ಯರು, ಪೂಜಾರ್ಹರು; ಅವರನ್ನೂ ಇನ್ನೂ ಅದೆಷ್ಟು ಮಂದಿ ಬಂಧು-ಬಾಂಧವರನ್ನೂ ಮಿತ್ರರನ್ನೂ ಇಲ್ಲಿ ಕೊಲ್ಲಬೇಕಾಗಿದೆ! - ಎಂದು ಪೇಚಿಗೆ ಸಿಲುಕಿ, "ನ ಯೋತ್ಸ್ಯೇ" "ಯುದ್ಧ ಮಾಡೆ" ಎನ್ನುತ್ತಿದ್ದಾನೆ, ಅರ್ಜುನ! ಕೊಲ್ಲಲು ಬಂದಿರುವವರನ್ನು ಸ್ವಜನರೆಂದುಕೊಳ್ಳುತ್ತಾ,  "ರಕ್ತಸಿಕ್ತಭೋಗವೇಕೆ?" – ಎಂಬ ಪ್ರಜ್ಞಾವಾದ ಬೇರೆ ಆತನದು!  ಆತನನ್ನು ಸರಿದಾರಿಗೆ ತರಲು ಶ್ರೀಕೃಷ್ಣನು ಶ್ರಮಿಸಬೇಕಾಯಿತು: ಧರ್ಮಶಾಸ್ತ್ರಗಳ ಮಾತನ್ನಾಡಿದ ಅರ್ಜುನನಿಗೆ ಮೋಕ್ಷಶಾಸ್ತ್ರಗಳ ವಿಷಯವನ್ನೂ ಹೇಳಬೇಕಾಯಿತು; ಪುಣ್ಯ-ಪಾಪಗಳ ಲೆಕ್ಕಾಚಾರ, ಲೋಕದಲ್ಲಿಯ ಕೀರ್ತಿ-ಅಕೀರ್ತಿಗಳ ಸಮಾಚಾರ, ಜನನ-ಮರಣಾತೀತವಾದ ವಿಚಾರ - ಎಲ್ಲವನ್ನೂ ತಿಳಿಸಬೇಕಾಯಿತು. ಯಾವ ಸಮತ್ವದ ನೆಲೆಯಿಂದ ಜಯಾಪಜಯಗಳನ್ನು ಲೆಕ್ಕಿಸದೆ ಯುದ್ಧಮಾಡಬೇಕೋ, ಅಂತಹ ಸ್ಥಿತಪ್ರಜ್ಞಸ್ಥಿತಿಯ ವಿಷಯವನ್ನು ವಿವರಿಸಬೇಕಾಯಿತು.

ಸ್ಥಿತಪ್ರಜ್ಞನ ಲಕ್ಷಣವೆಂದರೆ ಯೋಗಿಯ ಲಕ್ಷಣವೇ ಸರಿ: ಕಾಮಗಳನ್ನು ತ್ಯಜಿಸಿದವನು, ಸುಖದುಃಖಗಳಿಗೆ ಜಗ್ಗದವನು, ಪ್ರಸನ್ನಚೇತಸ್ಕನು; ಹಾಗೂ ಮುಖ್ಯವಾಗಿ ಇಂದ್ರಿಯಗಳನ್ನು ಒಳಕ್ಕೆ ಸೆಳೆದುಕೊಳ್ಳಬಲ್ಲವನು - ಅವನೇ ಸ್ಥಿತಪ್ರಜ್ಞ.

ಇಲ್ಲಿಯ ಕೊನೆಯ ಅಂಶಕ್ಕೆ ಬಂದುದೇ ಕೂರ್ಮದ ಉದಾಹರಣೆ. ಕೂರ್ಮಕ್ಕೇನಾದರೂ ಭಯ ಬಂದಿತೋ, ಅದು ತನ್ನ ಅಂಗಗಳನ್ನೆಲ್ಲಾ ಒಳಕ್ಕೆಳೆದುಕೊಂಡುಬಿಡುತ್ತದೆ. ಭಯವು ಹೋಯಿತೋ ಅವನ್ನು ಹೊರಚಾಚಿಕೊಳ್ಳುತ್ತದೆ. ನಮ್ಮ ಇಂದ್ರಿಯಗಳು ಸಾಮಾನ್ಯವಾಗಿ ಹೊರಕ್ಕೇ ಚಾಚಿರುತ್ತವೆ (ನಿದ್ದೆ-ಮೂರ್ಛೆಗಳನ್ನು ಬಿಟ್ಟು). ವಿಪತ್ತಿನ ವಿಷಯಗಳು ಎದುರಾದಾಗ ಇಂದ್ರಿಯಗಳ ಮೇಲೆ ಸಂಯಮ ಅವಶ್ಯ: ವಿಷಮಿಶ್ರಿತವಾದ ಆಹಾರವೆಂದು ಗೊತ್ತಿದ್ದೂ ಅದನ್ನು ತಿನ್ನುವುದುಂಟೇ?

ಭಯವಿದ್ದೆಡೆ ಕೂರ್ಮವು ಅಂಗಗಳನ್ನು ಒಳಸೆಳೆದುಕೊಳ್ಳುವ ಬಗೆಯನ್ನು ಎಲ್ಲ ವ್ಯಾಖ್ಯಾನಕಾರರೂ ವಿವರಿಸಿದ್ದಾರೆ. ಆದರೆ ಯಾರೊಬ್ಬರೂ ಹೇಳಿಲ್ಲದ ಎರಡು ವಿಶಿಷ್ಟವಾದ ಅಂಶಗಳನ್ನು ಈ ಕೂರ್ಮೋಪಮೆಯ ಬಗ್ಗೆ ಶ್ರೀರಂಗಮಹಾಗುರುಗಳು ಹೇಳಿರುವರು. ನಮಗೆ ಇಂದ್ರಿಯಗಳು ಐದು. ಐದನ್ನೂ ಒಳಕ್ಕೆ ಸೆಳೆದುಕೊಳ್ಳುವುದನ್ನು ಯೋಗಶಾಸ್ತ್ರವು ಹೇಳುತ್ತದೆ. ಇದನ್ನು ಇಲ್ಲಿಯ ಉಪಮೆಯು ಬಹಳ ಚೆನ್ನಾಗಿ ನಿದರ್ಶಿಸುತ್ತದೆ. ಹೇಗೆಂದರೆ ಆಮೆಯು ಒಳಕ್ಕೆ ಸೆಳೆದುಕೊಳ್ಳುವ ಅಂಗಗಳೂ ಐದೇ (ನಾಲ್ಕು ಕಾಲುಗಳು ಮತ್ತು ತಲೆ). ಹೀಗಾಗಿ ಐದಕ್ಕೆ ಐದು ಎಂಬ ಲೆಕ್ಕ ಇಲ್ಲಿ ಸಹಜವಾಗಿ ಚೆನ್ನಾಗಿ ಹೊಂದುತ್ತದೆ.

ಶ್ರೀಕೃಷ್ಣನ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದರೂ, "ಯೋಗದೃಷ್ಟಿಯಿಂದ ಈ ಉಪಮೆಯಲ್ಲಿ ಒಂದು ಸಣ್ಣದೋಷವನ್ನೂ ಹೇಳಬಹುದಪ್ಪಾ!" - ಎಂದೂ  ಮುಗುಳ್ನಗೆಯೊಂದಿಗೆ ಹೇಳಿದ್ದರು, ಶ್ರೀರಂಗಮಹಾಗುರುಗಳು. ಏನದು? ಭಯಹೇತುವು ಹೋಗುವುದನ್ನೇ ಆಮೆಯು ಕಾಯುತ್ತಿರುತ್ತದೆ; ಅದು ಹೋದೊಡನೆ ತನ್ನೆಲ್ಲ ಅಂಗಗಳನ್ನೂ ಅದು ಹೊರಚಾಚುವುದಲ್ಲವೇ? ಹೊರಗಣ ವಿಷಯಗಳ ಬಗ್ಗೆ ಚಾಪಲ್ಯವೆಂಬುದೊಂದಿರುತ್ತದೆ, ಆಮೆಗೆ; ಆದರೆ ಯೋಗಿಗೆ ಹಾಗಿರುವುದಿಲ್ಲ: ಆತ್ಮದ ನೆಲೆಯಲ್ಲಿ ತೃಪ್ತಿಯಾಗುವಷ್ಟು ಕಾಲ ನೆಮ್ಮದಿಯಾಗಿ ಆತ ನೆಲೆಸಿರಬಲ್ಲನು. ಚಾಪಲ್ಯದ ಕಾರಣಕ್ಕಾಗಿ ಆತನು ಬಹಿರ್ಮುಖನಾಗುವವನಲ್ಲ- ಎಂಬ ಯೋಗಾನುಭವಸಿದ್ಧವಾದ ಘನತತ್ತ್ವವನ್ನು ಅವರು  ವಿಶದಪಡಿಸಿದ್ದರು.

ಉಪಮೆಗಳಲ್ಲಿ ಸರ್ವಸಾಮ್ಯವು ಬರಲಾರದಾದರೂ, ಯೋಗಾನುಭವದ ಸೂಕ್ಷ್ಮಸ್ತರಗಳನ್ನು ಸ್ವಾನುಭವದಿಂದ ಪರೀಕ್ಷಿಸಿಕೊಂಡಿರುವವರು ಮಾತ್ರವೇ ಹೇಳಬಹುದಾದ ಮಾತಿದು. ಆರ್ಷವಾದ ಉಪಮೆಗಳ ಸೌಂದರ್ಯವನ್ನು ಆಸ್ವಾದಿಸುವಾಗಲೂ, ತಮ್ಮ ಅನುಭವದ ಒರೆಗಲ್ಲಿಗೆ ಹಚ್ಚಿಯೇ ಅವರ ವಿವರಣೆಯು ಹೊಮ್ಮುತ್ತಿದ್ದುದು.

ಸೂಚನೆ: 04/06/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.