Monday, June 5, 2023

ಯಕ್ಷ ಪ್ರಶ್ನೆ40(Yaksha prashne 40)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – 39 ಈ ಸಮಸ್ತ ಜಗತ್ತು ಯಾವುದು ?
ಉತ್ತರ - ವಾಯು

ಭಾರತೀಯ ಸಂಸ್ಕೃತಿಯು ಪ್ರಪಂಚದಲ್ಲಿ ಇರುವ ಎಲ್ಲಾ ವಸ್ತುಗಳಲ್ಲೂ ಪರಮಾತ್ಮನನ್ನು ಕಂಡಿದೆ. ಆದ್ದರಿಂದ ಎಲ್ಲಾ ವಸ್ತುಗಳು ಈ ಪ್ರಪಂಚದಲ್ಲಿ ಅತ್ಯಗತ್ಯವಾದವುಗಳೇ ಆಗಿವೆ. ಆದರೆ ಎಲ್ಲಾ ವಸ್ತುಗಳೂ ಎಲ್ಲರಿಗೂ ಅತ್ಯವಶ್ಯ ಎಂದು ಪರಿಗಣಿತವಾಗಿರುವುದಿಲ್ಲ. ಕೆಲವು ಪದಾರ್ಥಗಳು ಮಾತ್ರವೇ ಎಲ್ಲಾರಿಗೂ ಬೇಕಾದವುಗಳು ಆಗಿವೆ. ಅವುಗಳನ್ನು ಪಂಚಭೂತಗಳು ಎಂದು ಕರೆಯುತ್ತಾರೆ. ಅಂದರೆ ಈ ಪ್ರತಿಯೊಂದು ಕಣಕಣವೂ ಈ ಐದು ಪ್ರಾತಿನಿಧಿಕ ತತ್ತ್ವಗಳಿಂದಲೇ ಆಗಿರುತ್ತದೆ. ಪೃಥಿವೀ, ಜಲ, ಅಗ್ನಿ, ವಾಯು ಮತ್ತು ಆಕಾಶ ಎಂದು ಆ ಐದು ಪಂಚಭೂತತತ್ತ್ವಗಳು. ತತ್ತ್ವಗಳೆಂದರೆ ನಮ್ಮ ಕಣ್ಣಿಗೆ ಕಾಣುವ ಪೃಥಿವೀ ಮೊದಲಾದ ಭೂತಪದಾರ್ಥಗಳ ಸೂಕ್ಷ್ಮರೂಪಗಳು. ಅವುಗಳನ್ನು ಕೆಲವು ಶಾಸ್ತ್ರೀಯ ಪರಿಭಾಷೆಯಲ್ಲಿ ಪರಮಾಣು ಎಂದೂ ಕರೆಯುತ್ತಾರೆ. ಅವುಗಳು ನಮ್ಮ ಇಂದ್ರಿಯಗಳಿಗೆ ಗೋಚರವಾಗುವಂತೆ ಆದರೆ ಅವುಗಳನ್ನು ಭೂತಗಳೆಂದು ಕರೆಯುತ್ತಾರೆ. ಈ ದೃಷ್ಟಿಯಿಂದ ಈ ಪಂಚಭೂತಗಳಲ್ಲಿ ಜಗತ್ತಿನ ಅಸ್ತಿತ್ವವನ್ನು ಅಂಗೀಕರಿಸಲಾಗಿದೆ. ಅಂದರೆ ಅವುಗಳಿಲ್ಲದಿದ್ದರೆ ಯಾವ ಪದಾರ್ಥಕ್ಕೂ ಅಸ್ತಿತ್ವವಿಲ್ಲವೆಂದೇ ಅರ್ಥ. ಒಂದು ಕಲ್ಲು ಆಗಬೇಕಾದರೂ ಯಾವುದೋ ಒಂದು ಪ್ರಮಾಣದಲ್ಲಿ ಈ ಐದು ಸೇರಿದಾಗ ಮಾತ್ರ ಸಾಧ್ಯ. ಹೀಗೆ   ಇವುಗಳಲ್ಲಿ ಒಂದಾದದ್ದು ವಾಯು. ಇದರ ಪ್ರಾಮುಖ್ಯವನ್ನು ಎತ್ತಿ ಸಾರಲು ಯಕ್ಷನು ಈ ಪ್ರಶ್ನೆಯನ್ನು ಕೇಳುತ್ತಿದ್ದಾನೆ ಎಂದು ಭಾವಿಸಬಹುದು. 

ಭಾರತೀಯ ಪರಂಪರೆಯು ಎಲ್ಲಾ ಪದಾರ್ಥವನ್ನು ಮೂರು ಸ್ತರಗಳಲ್ಲಿ ಗುರುತಿಸಿದೆ. ಅಂತೆಯೇ ಈ ವಾಯುವಿನಲ್ಲೂ ಸ್ಥೂಲ, ಸೂಕ್ಷ್ಮ ಮತ್ತು ಪರಾ ಎಂಬ ಮೂರು ಪದರಗಳಿವೆ. ನಮ್ಮ ಮೂಗಿನ ಸಹಾಯದಿಂದ ಯಾವುದನ್ನೂ ಆಘ್ರಾಣಿಸುತ್ತೇವೋ ಅದನ್ನು ಸ್ಥೂಲವಾಯು ಎಂದು ಕರೆಯಬಹುದಾದರೆ; ಅದೇ ವಾಯುವಿನಲ್ಲಿ ದೇವತಾರೂಪವಾಗಿಯೂ ಪರಿಚರಿಸಿದ್ದು ಉಂಟು. ಇದನ್ನು ವಾಯುದೇವತೆ ವಾಯುಶಕ್ತಿ ಎಂದು ಕರೆಯುತ್ತಾರೆ. ಇದೇ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮರೂಪವಾಗಿ ಗುರುತಿಸಿದಾಗ ಎಲ್ಲಾ ಕಡೆ ವ್ಯಾಪಿಸಿದ, ಎಲ್ಲರಲ್ಲೂ ವ್ಯಾಪಿಸಿದ,  ಸಕಲ ಚರಾಚರ ಜಗತ್ತಿನ ಉಳಿವಿಗೆ ಕಾರಣವಾದ, ಎಲ್ಲವನ್ನು ಧರಿಸಿದ ಆ ಪರಬ್ರಹ್ಮಸ್ವರೂಪ ಎಂದೂ ಕಂಡಿದ್ದಾರೆ. ಗಣಪತಿ ಅಥರ್ವಶೀರ್ಷ ಉಪನಿಷತ್ತಿನ ಮಂತ್ರದಲ್ಲಿ ಮಹಾಗಣಪತಿಯನ್ನು ಸ್ತುತಿಸುವಾಗ " ನಮೋ ಬ್ರಹ್ಮಣೇ। ನಮಸ್ತೇ ವಾಯೋ। ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ" ಎಂದೂ ಹೇಳಿದ್ದಾರೆ.  ಆ ಪರಬ್ರಹ್ಮರೂಪವೇ ವಿಸ್ತಾರವಾದಾಗ ಬ್ರಹ್ಮ, ವಿಷ್ಣು, ಮಹೇಶ್ವರ, ಇಂದ್ರ, ಅಗ್ನಿ, ವರುಣ, ವಾಯು ಅಂತ ಅನೇಕ ದೇವತಾ ರೂಪವನ್ನೂ ಕಾಣಬಹುದು. ಆದ್ದರಿಂದ ವಾಯುವು ಎಲ್ಲೆಡೆ ವ್ಯಾಪಿಸಿದೆ. ವಾಯುವಿಲ್ಲದೆ ಯಾವ ಜೀವಿಯೂ ಕ್ಷಣಮಾತ್ರವೂ ಬದುಕಲು ಸಾಧ್ಯವಿಲ್ಲ. ವಾಯುವೇ ನಮಗೆ ಗತಿ ಎಂಬ ಅರ್ಥದಲ್ಲಿ 'ಸಮಸ್ತ ಜಗತ್ತೂ ವಾಯುವೇ' ಆಗಿದೆ ಎಂಬ ಉತ್ತರವನ್ನು ಧರ್ಮರಾಜನು ಕೊಡುತ್ತಾನೆ.  

ಇದರಿಂದ ನಮ್ಮ ಭಾರತೀಯರ ಚಿಂತನೆಗೆ ಹೆಮ್ಮೆ ಬರುತ್ತದೆ, ಗೌರವ ಇನ್ನಷ್ಟು ಜಾಸ್ತಿ ಆಗುತ್ತದೆ. ಉಸುರಾಡುವ ಗಾಳಿಯಲ್ಲೂ ಆ ಭಗವಂತನ ಅಂಶವನ್ನು ಕಂಡರು. ಅದನ್ನೂ ಕೇವಲ ಒಂದು ರಾಸಾಯನಿಕ ಪದಾರ್ಥ H2O ಹೇಳಿಲ್ಲ. ಇತು ಭಾರತೀಯರು ಜಗತ್ತನ್ನು ಕಾಣುವ ಪರಿ.

ಸೂಚನೆ : 04/6/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.