Monday, January 26, 2026

ಪ್ರಶ್ನೋತ್ತರ ರತ್ನಮಾಲಿಕೆ 50 (Prasnottara Ratnamalike 50)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ - ೫೦ - ಮೂಕನು ಯಾರು ?

ಉ. ಸರಿಯಾದ ಸಮಯದಲ್ಲಿ ಒಳ್ಳೆಯಮಾತನ್ನು ಆಡದವ.

ಈ ಹಿಂದಿನ ಎರಡು ಪ್ರಶ್ನೋತ್ತರಗಳಿಗೆ ಹತ್ತಿರವಾದ ಪ್ರಶ್ನೋತ್ತರ ಇದಾಗಿದೆ. ಕುರುಡ, ಕಿವುಡ ಮತ್ತು ಮೂಕ ಈ ಮೂರು ದೋಷಗಳು, ಈ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಇರುವ ಪ್ರಧಾನವಾದ ಮೂರು ಇಂದ್ರಿಯಗಳಿಗೆ ಬರುವ ದೋಷಗಳು. ಇವು ಮೂರು ಇದ್ದರೆ ಅಥವಾ ಇವುಗಳಲ್ಲಿ ಒಂದು ಅಥವಾ ಎರಡು ಇದ್ದರೂ ಆ ವ್ಯಕ್ತಿಯು ತನ್ನ ಜೀವನದಲ್ಲಿ ಯಾವುದೋ ಬಗೆಯ ಖೇದವನ್ನು ಅನುಭವಿಸುತ್ತಾನೆ, ಅಥವಾ ಈ ಅನುಭವಕ್ಕೆ ಹಿಂದಿನ ಯಾವುದೋ ಖೇದ ಕಾರಣ ಎಂಬ ಕರ್ಮಸಿದ್ದಾಂತ ಇದರ ಹಿಂದೆ ಅಡಗಿದೆ. ಆಯುರ್ವೇದದಲ್ಲಿ ಹೇಳುವಾಗ - ಗರ್ಭೋತ್ಪತ್ತಿಯ ಸಂದರ್ಭದಲ್ಲಿ ವಾತದ ಉದ್ರೇಕದಿಂದಾಗಿ ಗರ್ಭಸ್ಥ ಶಿಶುವಿನ ಈ ಇಂದ್ರಿಯಗಳಿಗೆ ಸಂಬಂಧಪಟ್ಟ ನಾಡಿಗಳು ಅಥವಾ ಧಮನಿಗಳು ತಡೆಯಲ್ಪಡುತ್ತವೆ. ಇದರಿಂದ ಈ ದೋಷಗಳು ಉಂಟಾಗುತ್ತವೆ ಎಂಬುದಾಗಿ. ಇಂದ್ರಿಯದ ಹೊರಕವಚ ಎಷ್ಟೇ ಚೆನ್ನಾಗಿ ಇದ್ದರೂ, ಉಳಿದ ಎಲ್ಲಾ ಭಾಗಗಳು ಇದ್ದರೂ, ಇಂದ್ರಿಯದ ಪ್ರಧಾನವಾದ ಭಾಗ ಮಾತ್ರ ಅಲ್ಲಿ ನಷ್ಟವಾಗಿರುತ್ತದೆ. ಅಂತಯೇ ಇಲ್ಲೂ ಸಹ ಬಾಯಿ ಇದೆ, ಆದರೂ ಮಾತನಾಡದಿರುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಅವನನ್ನು 'ಮೂಕ' ಎನ್ನಲಾಗುತ್ತದೆ. 

ಪ್ರಕೃತ ಪ್ರಶ್ನೆಯ ಆಶಯ ಅದಲ್ಲ. ಒಬ್ಬ ಮಾತನ್ನು ಆಡುವ ವ್ಯಕ್ತಿ ಯಾವ ಸಂದರ್ಭದಲ್ಲಿ ಮಾತನ್ನು ಆಡಬೇಕು; ಯಾವ ಸಂದರ್ಭದಲ್ಲಿ ಮಾತನ್ನು ಆಡಬಾರದು; ಎಷ್ಟು ಮಾತನ್ನು ಆಡಬೇಕು; ಹೇಗೆ ಮಾತನ್ನು ಆಡಬೇಕು? ಎಂಬ ವಿವೇಕವನ್ನು - ಅರಿವನ್ನು ಕಳೆದುಕೊಂಡಾಗ ಬಾಯಿ ಇದ್ದರೂ ಅವನು ಮೂಕನಾಗುತ್ತಾನೆ ಎಂಬುದು ಇಲ್ಲಿನ ತಾತ್ಪರ್ಯ. 

ಮಾತನಾಡಲು ಇರುವ ಇಂದ್ರಿಯ ಬಾಯಿ. ಇದನ್ನು 'ಕರ್ಮೇಂದ್ರಿಯ' ಎಂಬುದಾಗಿ ಕರೆಯಲಾಗುತ್ತಾರೆ. ಮಾತು ಅತ್ಯಂತ ಪ್ರಧಾನವಾದ ಸಾಧನ. ಇದರಿಂದ ನಮ್ಮ ಮುಂದಿರುವ ವ್ಯಕ್ತಿಯನ್ನು ಪ್ರಭಾವಿಸಬಹುದು. ವ್ಯಕ್ತಿಯಲ್ಲಿ ಅನೇಕ ಪರಿವರ್ತನೆಗಳನ್ನು ಮಾಡಬಹುದು. ಕೇವಲ ಮಾತನಾಡುವುದರಿಂದಲೇ ಆ ಸಂದರ್ಭದಲ್ಲಿ ಇಲ್ಲದ ಒಲ್ಲದ ಸಂದರ್ಭವನ್ನೂ ಸೃಷ್ಟಿಸಬಹುದು ಎಂದು ಶ್ರೀರಂಗ ಮಹಾಗುರು ಮಾತಿಗಿರುವ ಶಕ್ತಿಯನ್ನು ಹೀಗೆ ಹೇಳುತ್ತಿದ್ದರು ಎಂಬುದಾಗಿ ಅವರ ಶಿಷ್ಯರಿಂದ ಕೇಳಿದ್ದೇವೆ. "ಅತ್ಯಂತ ಬಿರು ಬೇಸಿಗೆಯಲ್ಲೂ ಮಾತಿನಿಂದ ಶೈತ್ಯವಾಗುವಂತೆ ಮಾಡಬಹುದಪ್ಪಾ, ಅಥವಾ ಶೀತಕಾಲದಲ್ಲೂ ಬೆವರು ಬರಿಸಬಹುದಪ್ಪ" ಎಂಬುದಾಗಿ. ಇದು ಮಾತಿಗಿರುವ ಶಕ್ತಿ ಎಷ್ಟು ಎಂಬುದನ್ನು ತಿಳಿಸುತ್ತದೆ. ಅಂದರೆ ಒಬ್ಬ ವ್ಯಕ್ತಿಯನ್ನು ಸರಿಯಾದ ಮಾತುಗಳಿಂದ ಒಪ್ಪಿಸುವ ಕಾಲವಿರುತ್ತದೆ. ಆಗ ಹೇಳಬೇಕಾದದ್ದನ್ನು ಹೇಳಬೇಕಾಗುತ್ತದೆ. ಅದಕ್ಕೆ ಅದು ಸಕಾಲವಾಗಿರುತ್ತದೆ. ಹೇಳಬಾರದದ್ದನ್ನು ಹೇಳಬಾರದು. ಅಥವಾ ಎಷ್ಟು ಹೇಳಬೇಕು ಎಂಬ ಒಂದು ಮಿತಿ ಇರಬೇಕಾಗುತ್ತದೆ. ಹಾಗಾಗಿ ಮಿತವಾದ ಮಾತು ಇರಬೇಕಾಗುತ್ತದೆ. ಮಾತಿನಲ್ಲಿ ಮಿತಿ ತಪ್ಪಿದರೆ ಮೃತ್ಯುವಿಗೂ ಆಹ್ವಾನವಿತ್ತಂತೆ ಎಂಬುದಾಗಿ ಸುಭಾಷಿತವು ಸಾರುತ್ತದೆ. ಅಂದರೆ ಮಿತವರಿತು ಮಾತನಾಡಬೇಕು ಎಂಬುದೂ ಇದರ ತಾತ್ಪರ್ಯ. ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದಲ್ಲಿ ಒಳ್ಳೆಯ ಮಾತನ್ನು ಹೇಳಬೇಕಾದ, ಹೇಳಲೇಬೇಕಾದ, ಉತ್ತಮಸ್ಥಾನ ಮತ್ತು ಅಧಿಕಾರಸಂಪತ್ತಿನಿಂದ ಕೂಡಿದ ಕುರುಕುಲಪಿತಾಮಹರಾದ ಭೀಷ್ಮಾಚಾರ್ಯರು ದುರ್ಯೋಧನನ ಪಾಳಯಕ್ಕೆ ಸರಿಯಾಗಿ ಬುದ್ಧಿವಾದವನ್ನು ಹೇಳಲಿಲ್ಲ. ಇಂತಹ ವಿಭಿನ್ನ ಸಂದರ್ಭಗಳಲ್ಲಿ ಮಾತನಾಡುವ ಸಂದರ್ಭದಲ್ಲಿ ಆಡದಿದ್ದರೆ ಅಥವಾ ಮಾತನಾಡದ ಸಂದರ್ಭದಲ್ಲಿ ಮಾತನಾಡಿದರೆ ಆಗ ಅವನು ಬಾಯಿದ್ದೂ ಮೂಕನಂತೆ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.

ಸೂಚನೆ : 24/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.