Monday, January 12, 2026

ಪ್ರಶ್ನೋತ್ತರ ರತ್ನಮಾಲಿಕೆ 48 (Prasnottara Ratnamalike 48)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ - ೪೮ - ಅಂಧನು ಯಾರು ?

ಉ. ಪಾಪಕರ್ಮವನ್ನು ಪ್ರೀತಿಸುವವನು.

ಅಂಧ ಎಂದರೆ ಕುರುಡ. ಕಣ್ಣಿಗೆ ಕಾಣುವ ಶಕ್ತಿ ಇಲ್ಲದಿರುವವ. ಕಣ್ಣಿನ ರೆಪ್ಪೆ, ಕಣ್ಣಿನ ಗುಡ್ಡೆ, ಎಲ್ಲವೂ ಇದೆ. ಆದರೆ ಕಣ್ಣಿಗೆ ನೋಡುವ ಶಕ್ತಿ ಇಲ್ಲ. ಅದನ್ನು ಕಳೆದುಕೊಂಡಿದ್ದಾನೆ. ಹಾಗಾಗಿ ಅವನು 'ಅಂಧ' ಎಂದು ಕರೆಸಿಕೊಳ್ಳುತ್ತಾನೆ. ಇಲ್ಲಿ ಹೇಳುವ ಅಂಧನು ಕಣ್ಣು ಇಲ್ಲದವನಲ್ಲ. ಕಣ್ಣು ಇರಬಹುದು ಅಥವಾ ಇಲ್ಲದೇ ಇರಬಹುದು. ಆದರೂ ಅವನನ್ನು 'ಅಂಧ' ಎಂಬುದಾಗಿ ಹೇಳಬೇಕಾಗುತ್ತದೆ. ಅದು ಹೇಗೆ? ಎಂಬ ಪ್ರಶ್ನೆ ಇಲ್ಲಿದೆ. ಅದಕ್ಕೆ ಉತ್ತರ- "ಪಾಪಕರ್ಮವನ್ನು ಯಾರು ಪ್ರೀತಿಸುತ್ತಾನೋ ಅವನು". ಕಣ್ಣಿದ್ದೂ ಕುರುಡನಂತೆ ಎಂಬ ತಾತ್ಪರ್ಯ ಇಲ್ಲಿದೆ. ಪಾಪಕರ್ಮವನ್ನು ಪ್ರೀತಿಸುವುದರಿಂದ ಅವನು ಹೇಗೆ ಅಂಧನಾಗುತ್ತಾನೆ ಎಂಬುದನ್ನು ಇಲ್ಲಿ ಚಿಂತಿಸಬೇಕಾಗಿದೆ.

ಪಾಪ ಕರ್ಮ ಎಂದರೆ ಯಾವುದು ಪಾಪ ಫಲವನ್ನು ಕೊಡುತ್ತದೆಯೋ ಅದು. ಅದರ ಸ್ವರೂಪ ದುಃಖವನ್ನು ಉಂಟುಮಾಡುವುದು. ಕರ್ಮವು ಯಾವಾಗ ಮಾಡಲ್ಪಡುತ್ತದೆಯೋ ಅದೇ ಕಾಲದಲ್ಲಿ ಫಲವನ್ನು ನೀಡಬೇಕು ಎಂಬ ನಿಯಮವಿಲ್ಲ. ಮಾಡಿದ ಕರ್ಮವು ಕೆಲವೊಮ್ಮೆ ತತ್ಕಾಲದಲ್ಲಿ ಫಲವನ್ನು ಕೊಡಬಹುದು. ಇನ್ನು ಕೆಲವು ಸ್ವಲ್ಪ ವಿಳಂಬವಾಗಿ ಫಲವನ್ನು ಕೊಡಬಹುದು. ಇನ್ನು ಕೆಲವು ಕರ್ಮಗಳು ಜನ್ಮಾಂತರದಲ್ಲೂ ಫಲವನ್ನು ಕೊಡಬಹುದು ಎಂಬುದಾಗಿ ನಮ್ಮ ಕರ್ಮಸಿದ್ಧಾಂತ ಸಾರುತ್ತದೆ. ಇದಂತೂ ಸತ್ಯ, ಮಾಡಿದ ಕರ್ಮ ಫಲವನ್ನು ಕೊಟ್ಟೇಕೊಡುತ್ತದೆ ಎಂಬುದು ನಿಶ್ಚಿತ. ಹಾಗಾದರೆ ಅಧರ್ಮದ ಕಾರ್ಯವು ಅಂದರೆ ಪಾಪಕರ್ಮವು ಹೇಗೆ ಅಂಧತ್ವವನ್ನು ಕೊಡುತ್ತದೆ? ಅಂದರೆ ಅವನು ಕಣ್ಣನ್ನು ಕಳೆದುಕೊಳ್ಳುತ್ತಾನೆ; ಅವನಿಗೆ ನೋಡುವ ಶಕ್ತಿ ಕಳೆಯುತ್ತದೆಯೆ ಎಂಬ ಅರ್ಥ ಅಲ್ಲ. ಇಲ್ಲಿ ಅಂಧತ್ವ ಎಂದರೆ ಧರ್ಮವನ್ನು ಅರಿಯುವ ಸಾಮರ್ಥ್ಯ ಇಲ್ಲದಿರುವಿಕೆ ಎಂದರ್ಥ. ಪಾಪಕರ್ಮ ಎಂಬುದು ಅವನಿಗೆ ಧರ್ಮ ಮತ್ತು ಅಧರ್ಮ ಎಂಬ ವಿಷಯದ ವಿವೇಚನ ಶಕ್ತಿಯನ್ನು ಕಳೆಯುತ್ತದೆ. ಕಾರಣವಾಗಿ ಅವನು ಧರ್ಮಕಾರ್ಯವನ್ನು ಪ್ರೀತಿಸದೇ ಹೋಗಬಹುದು ಮತ್ತು ಅಧರ್ಮಕಾರ್ಯದಲ್ಲಿ ಉತ್ಸಾಹವು ಬರಬಹುದು. ಹೀಗೆ ಈ ಉತ್ಸಾಹವು ಅವನಿಗೆ ಧರ್ಮವನ್ನು ಮರೆಸುತ್ತದೆ. ಅದರ ಪರಿಣಾಮವಾಗಿ ಅವನು ಅಧರ್ಮವನ್ನೇ ಪ್ರೀತಿಸುವಂಥಾಗುತ್ತದೆ. ಕೊನೆಯಲ್ಲಿ ಅವನು ಧರ್ಮಕ್ಕೆ ವಿರೋಧಿಯಾಗುತ್ತಾನೆ. ಅವನು ಒಳ್ಳೆಯ ಕಾರ್ಯವನ್ನು ಅಂದರೆ ಯಾವುದು ಧರ್ಮವನ್ನು ಉಂಟುಮಾಡುತ್ತದೆಯೋ ಅಂತಹ ಕಾರ್ಯವನ್ನು ಅವನು ದ್ವೇಷಿಸುವ ಸ್ವಭಾವದವನಾಗುತ್ತಾನೆ. ಇದೇ ಅಂಧತ್ವದ ಸ್ವಭಾವ ಎಂಬುದಾಗಿ ತಿಳಿಯಬೇಕು. ಹಾಗಾಗಿ ಪಾಪಕರ್ಮವು ಧರ್ಮದ ಅಂಧತ್ವವನ್ನು ಉಂಟುಮಾಡುತ್ತದೆ. ಪುಣ್ಯಕರ್ಮವು ಧರ್ಮಕ್ಕೆ ಬೆಳಕನ್ನು ನೀಡುತ್ತದೆ ಎಂಬುದು ಇದರ ಆಶಯವಾಗಿದೆ.

ಧರ್ಮ ಎಂದರೆ ನಮ್ಮ ಮೂಲಸ್ವರೂಪ. ಅದನ್ನು ಮರೆಯುವಂತೆ. ಅದನ್ನು ಕಾಣದಂತೆ ಮಾಡುವ ಯಾವ ಕರ್ಮಗಳಿವೆಯೋ ಅವುಗಳನ್ನು 'ಪಾಪಕರ್ಮ' ಎಂಬುದಾಗಿ ಕರೆಯಲಾಗುತ್ತದೆ. ಪ್ರತಿಯೊಂದು ವಸ್ತುವೂ ಅದರ ಸ್ವರೂಪದಲ್ಲಿ ಇದ್ದರೆ, ಅದು 'ಧರ್ಮದಲ್ಲಿದೆ' ಎಂದರ್ಥ. ಅದು ಸ್ವರೂಪವನ್ನು ಕೆಡಿಸಿಕೊಂಡಿದೆ ಎಂದರೆ ಆ ಧರ್ಮಕ್ಕೆ ಚ್ಯುತಿ ಬಂದಿದೆ ಎಂದರ್ಥ. ಪಾಪಕರ್ಮವು ಈ ಧರ್ಮವನ್ನು ಮರೆಸುತ್ತದೆ. ವಸ್ತುತಃ 'ಯಾವುದು ಧರ್ಮ?' ಎಂದರೆ ಯಾವ ಕಾರ್ಯವು ಮೋಕ್ಷವನ್ನು ಉಂಟುಮಾಡುತ್ತದೆಯೋ, ಮೋಕ್ಷಕ್ಕೆ ಇರುವ ಪ್ರತಿಬಂಧಕವನ್ನು ನಿವೃತ್ತಿಗೊಳಿಸುತ್ತದೆಯೋ ಅದು. ಇದಕ್ಕೆ ವಿರುದ್ಧವಾದದ್ದು ಕುಕಾರ್ಯ ಅಥವಾ ಅಧರ್ಮ ಎಂಬುದಾಗಿ ಕರೆಸಿಕೊಳ್ಳುತ್ತದೆ. ಹಾಗಾಗಿ ಅತ್ಯಂತ ವಿಸ್ತಾರವಾದ ಈ ವಿಷಯವನ್ನು ಬಹಳ ಸಂಕ್ಷಿಪ್ತವಾಗಿ ಈ ಪ್ರಶ್ನೋತ್ತರರೂಪದಲ್ಲಿ ವಿವರಿಸಲಾಗಿದೆ. ಪಾಪಕರ್ಮವು ಧರ್ಮಕ್ಕೆ ವಿರೋಧಿಯಾಗಿ ಧರ್ಮವನ್ನು ಮರೆಯುವಂತೆ - ಕಾಣದಂತೆ ಮಾಡುವುದಕ್ಕಾಗಿ ಪಾಪಕರ್ಮವನ್ನು ಪ್ರೀತಿಸುವವನು ಅಂಧನೇ ಸರಿ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.

ಸೂಚನೆ : 11/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.