ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಇಬ್ಬರು ಪತ್ನಿಯರಿದ್ದರೂ ಸಂತತಿಯಿಲ್ಲವೆಂದು ಕೊರಗುತ್ತಿದ್ದ ಬೃಹದ್ರಥನು ಚಂಡಕೌಶಿಕಮುನಿಯ ಬಳಿಗೆ ಬಂದು ಎಲ್ಲ ಬಗೆಯ ರತ್ನಗಳನ್ನೂ ಆತನಿಗೆ ಸಮರ್ಪಿಸಿ ವಂದಿಸಿದನು.
ಆಗಮನ-ಕಾರಣವನ್ನು ಋಷಿಯು ಕೇಳಲಾಗಿ, ತನಗೆ ಸಂತತಿಯಿಲ್ಲದಿರುವ ಖೇದವನ್ನು ತೋಡಿಕೊಂಡನು. ಸತ್ಯವಾಕ್ಯನೂ ಸತ್ಯನಿಷ್ಠನೂ ಆದ ಆ ಋಷಿಯು, "ನಿನ್ನ ವಿಷಯದಲ್ಲಿ ನಾನು ಸಂತುಷ್ಟನಾಗಿದ್ದೇನೆ, ವರವೇನನ್ನಾದರೂ ಕೇಳಿಕೋ" ಎಂದು ನುಡಿದನು.
ಆಗ ಪತ್ನೀ-ಸಮೇತನಾಗಿ ರಾಜನು ಆತನಿಗೆ ವಂದಿಸಿ, ಸಂತತಿಯಿಲ್ಲದ ಕಾರಣ ಬಾಷ್ಪ-ಗದ್ಗದಿತವಾದ ಮಾತಿನಿಂದ ಹೀಗೆ ಹೇಳಿದನು.
"ಪೂಜ್ಯರೇ, ರಾಜ್ಯವನ್ನು ತೊರೆದು ತಪೋವನಕ್ಕೆ ಹೊರಟುನಿಂತಿದ್ದೇನೆ, ನಾನು. ಅಲ್ಪ-ಭಾಗ್ಯನಾದ ನನಗೆ ಯಾವ ವರದಿಂದ ಏನು ಪ್ರಯೋಜನ? ಸಂತಾನವಿಲ್ಲದ ನನಗೆ ರಾಜ್ಯದಿಂದಲಾದರೂ ಏನು ಪ್ರಯೋಜನ?" ಎಂದು.
ಈ ಮಾತನ್ನು ಕೇಳಿದ ಮುನಿಗೆ ಇಂದ್ರಿಯ-ಕ್ಷೋಭವಾಗಿ, ಧ್ಯಾನಪರನಾದನು. ಅದೇ ಮಾವಿನ ಮರದ ನೆರಳಿನಲ್ಲಿಯೇ ಕುಳಿತುಕೊಂಡನು. ಆ ಮುನಿಯು ಹಾಗೆ ಕುಳಿತುಕೊಂಡಂತೆಯೇ, ಆತನ ಮಡಿಲಲ್ಲಿ ಮಾವಿನ ಹಣ್ಣೊಂದು ಬಿದ್ದಿತು. ಅದೇನು ಗಾಳಿ ಬೀಸಿದುದಕ್ಕಾಗಿ ಅಲ್ಲ, ಗಿಣಿಯು ಕಚ್ಚಿತ್ತೆಂದಲ್ಲ, ತಾನಾಗಿಯೇ ಬಿದ್ದದ್ದದು!
ಅದನ್ನು ಕೈಗೆತ್ತಿಕೊಂಡವನೇ ಆ ಮುನಿಶ್ರೇಷ್ಠನು ಹೃದಯದಿಂದ ಅಭಿಮಂತ್ರಿಸಿದನು; ಪುತ್ರ-ಸಂತಾನಕ್ಕೆ ಕಾರಣವಾಗುವ ಆ ಅಪ್ರತಿಮವಾದ ಫಲವನ್ನು ಆ ರಾಜನಿಗೆ ಕೊಟ್ಟನು. ಮತ್ತು ಮಹಾ-ಪ್ರಾಜ್ಞನಾದ ಆ ಮುನಿ-ವರನು ಆ ರಾಜನಿಗೆ ಹೇಳಿದನು "ರಾಜನೇ, ನೀನು ಕೃತಾರ್ಥನಾಗಿದ್ದೀಯೇ. ನರೇಶ್ವರಾ, ನೀನಿನ್ನು ಹಿಂದಿರುಗಬಹುದು" ಎಂದು.
ಮುನಿಯ ಈ ಮಾತನ್ನು ಕೇಳಿದ ರಾಜನು ಶಿರಸಾ ಮುನಿ-ಪಾದಗಳಿಗೆ ವಂದಿಸಿದನು. ತನ್ನ ಅರಮನೆಗೆ ಹಿಂದಿರುಗಿದನು. ಸರಿಯಾದ ಸಮಯವನ್ನರಿತು ಆ ರಾಜನು ತನ್ನ ಇಬ್ಬರೂ ಪತ್ನಿಯರಿಗೆ ಆ ಒಂದು ಹಣ್ಣನ್ನು ಕೊಟ್ಟನು.
ಅವರಾದರೂ ಆ ಮಾವಿನ ಹಣ್ಣನ್ನು ಇಬ್ಭಾಗ ಮಾಡಿದರು. ಮುನಿಯ ವಚನವು ಸತ್ಯವಾಗುವ ಕಾರಣ ಮುಂದಾಗುವ ಫಲವನ್ನು ಚಿಂತಿಸಿ, ಇಬ್ಬರೂ ಸೇವಿಸಿದರು. ಫಲ-ಪ್ರಾಶನದಿಂದಾಗಿ ಇಬ್ಬರೂ ಗರ್ಭವತಿಯರೂ ಆದರು. ಇಬ್ಬರೂ ಗರ್ಭಧರಿಸಿದುದನ್ನು ಕಂಡ ರಾಜನಿಗೆ ಸಂತೋಷವೇ ಆಯಿತು.
ಕಾಲಕಳೆದಂತೆ ಇಬ್ಬರೂ ರಾಣಿಯರೂ ಒಂದೊಂದು ಶರೀರಾರ್ಧವನ್ನು ಹೆತ್ತರು! ಒಂದು ಕಣ್ಣು, ಒಂದು ತೋಳು, ಒಂದು ಕಾಲು, ಅರ್ಧ ಹೊಟ್ಟೆ, ಅರ್ಧ-ಮುಖ, ಅರ್ಧ-ತಿಕಗಳು! ಹೀಗಿದ್ದ ಶರೀರದ ಅರ್ಧಭಾಗಗಳನ್ನು ಕಂಡು ಆ ಇಬ್ಬರೂ ರಾಣಿಯರೂ ನಡುಗಿಹೋದರು.
ಅತ್ಯಂತ-ದುಃಖ-ಭರಿತರಾಗಿ ಸಜೀವವಾದ ಆ ಪ್ರಾಣಿ-ಭಾಗಗಳೆರಡನ್ನು ಪರಿತ್ಯಜಿಸಿದರು. ಅವರಿಬ್ಬರಿಗೆ ದಾಸಿಯರಿಬ್ಬರಿದ್ದರು. ಅವರು ಆ ಎರಡು ಗರ್ಭ-ಭಾಗಗಳನ್ನು ಚೆನ್ನಾಗಿ ಬಟ್ಟೆಯಲ್ಲಿ ಸುತ್ತಿದರು; ಹಾಗೂ ಅಂತಃಪುರದಿಂದ ಹೊರಬಿದ್ದವರೇ ಅವನ್ನು ಬಿಸಾಡಿ ಹೊರಟುಹೋದರು.
ನಾಲ್ಕುದಾರಿಗಳು ಸೇರುವ ಎಡೆಯಲ್ಲಿ ಬಿಸಾಡಲಾಗಿದ್ದ ಆ ಶಿಶುಭಾಗಗಳನ್ನು ತೆಗೆದುಕೊಂಡಳು, ಜರಾ ಎಂಬ ಹೆಸರಿನ ರಾಕ್ಷಸಿ. ಅವಳೋ ಮಾಂಸ-ರಕ್ತಗಳನ್ನೇ ಸೇವಿಸತಕ್ಕವಳು. ವಿಧಿಬಲ-ಪ್ರೇರಿತಳಾದ ಅವಳು, ಆ ಎರಡು ತುಂಡುಗಳನ್ನು ಹೊತ್ತೊಯ್ಯಲು ಸುಲಭವಾಗಲೆಂದು ಸರಿಯಾಗಿ ಜೋಡಿಸಿದಳು.
ಆದರಿದೋ! ಆ ಎರಡು ತುಂಡುಗಳನ್ನು ಅವಳು ಸೇರಿಸಿದಳು. ಸೇರಿಸುತ್ತಿದ್ದಂತೆಯೇ ಅವಾದುದು ಏಕಶರೀರ-ಧಾರಿಯಾದ ಒಬ್ಬ ವೀರ-ಕುಮಾರ!
ಯುಧಿಷ್ಠಿರಾ, ಅದು ಆ ರಾಕ್ಷಸಿಗೇ ಅಚ್ಚರಿಯಾಯಿತು. ವಿಸ್ಮಯದಿಂದ ಅವಳ ಕಣ್ಣುಗಳರಳಿದವು. ಆದರೆ ಆ ಶಿಶುವನ್ನು ಅವಳಿಗೆ ಎತ್ತಿಕೊಳ್ಳಲೇ, ವಸ್ತುತಃ ಎತ್ತಲೇ, ಆಗಲಿಲ್ಲ! ಏಕೆಂದರೆ ಆ ಶಿಶುವು ವಜ್ರ-ಸಾರವಾಗಿತ್ತು! ಎಂದರೆ ವಜ್ರಮಯವೋ ಎಂಬಂತಾಗಿತ್ತು!
ಸೂಚನೆ : 25/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.