ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಕೃಷ್ಣನು ನನ್ನನ್ನು ದೂರದಿಂದ ನೋಡುತ್ತಾನೆ. ಬಳಿಕ ಬಳಿಗೇ ಬಂದುಬಿಡುತ್ತಾನೆ.
ಆತನ ನಡಿಗೆ ಹೇಗಿದೆ? ವಾರಣಗಳ ನಡಿಗೆಯಂತೆ. ವಾರಣವೆಂದರೆ ಆನೆ. ಗಜಗಳ ಗಮನವು ಖೇಲದಿಂದ, ಎಂದರೆ ವಿಲಾಸದಿಂದ, ಕೂಡಿರುತ್ತದೆ. ಖೇಲವೆಂದರೆ ಕೇಲಿಯೇ, ಅರ್ಥಾತ್ ಆಟವೇ, ವಿಲಾಸವೇ.
ಗಜ-ಗತಿಯೆಂಬುದು ಇತ್ತ ಲೀಲೆಗೂ ಅತ್ತ ಗಾಂಭೀರ್ಯಕ್ಕೂ ಪ್ರಸಿದ್ಧವಾದುದು. ಎಂದೇ ಸ್ತ್ರೀಯರ ನಡೆಗೂ ಪುರುಷರ ನಡೆಗೂ ಉತ್ತಮವಾದ ಉಪಮೆಯಾಗುವಂತಹುದು. ಉತ್ತಮನಾರಿಯ ಲೀಲಾಯುತವಾದ ನಡೆಯನ್ನು ಲಕ್ಷಿಸಿ ಅವಳನ್ನು ಗಜ-ಗಮನೆಯೆನ್ನುವರು. ಗಾಂಭೀರ್ಯದಿಂದ ಹೆಜ್ಜೆಹಾಕುವ ಪುರುಷನನ್ನು ಲಕ್ಷಿಸಿ ಮಾತಂಗ-ಗಾಮೀ – ಎನ್ನುವರು.
ಎಂದೇ ಕೃಷ್ಣನು ವಾರಣ-ಖೇಲ-ಗಾಮಿ. ವಿಲಾಸ-ಭರಿತವಾಗಿ ಹೆಜ್ಜೆಯಿಡುವ ಹಸ್ತಿಯ ನಡೆಯನ್ನು ಹೊಂದಿರುವವನು. ಭಯ, ಕೋಪ ಮೊದಲಾದ ವಿಶೇಷ-ಸನ್ನಿವೇಶಗಳನ್ನು ಬಿಟ್ಟರೆ, ಗಜ-ಗತಿಯೆಂಬುದು ಮಂಥರವಾದದ್ದೇ, ಎಂದರೆ ನಿಧಾನವಾದದ್ದೇ. ಹಾಗೆ ಕೃಷ್ಣನು ಮೆಲ್ಲಮೆಲ್ಲನೆ ನನ್ನತ್ತಲೇ ಬರುತ್ತಿದ್ದಾನೆ.
ಇನ್ನು ಆತನ ನೋಟ ಹೇಗಿದೆ? ಧಾರಾ-ಕಟಾಕ್ಷಗಳಿಂದ ತುಂಬಿದೆ. ಕಟಾಕ್ಷಗಳ ಧಾರೆಯೇ ಧಾರಾ-ಕಟಾಕ್ಷ. ಕಟಾಕ್ಷವೆಂಬುದು ಒಮ್ಮೆ ನಮ್ಮತ್ತ ಬೀರಿದರೂ ನಮ್ಮಲ್ಲಿ ಧನ್ಯತೆಯುಂಟಾಗುವುದು. ಹಾಗಿರಲು, ಧಾರಾಕಟಾಕ್ಷ-ಭರಿತವಾದ ನೋಟಗಳೆಂದರೆ ಪರಮ-ಧನ್ಯತೆಯೇ. ಕಟಾಕ್ಷವು ಆಗೊಮ್ಮೆ ಈಗೊಮ್ಮೆಯೆಂದಲ್ಲದೆ, ಪ್ರವಾಹವೆಂಬಂತಿರುವಂತಹುದು.
ದೂರದಿಂದ ನೋಡುವುದು, ಗಜಗಮನದಿಂದ ಆಗಮಿಸುವುದು - ಎಂಬಿವೇ ಮುಂದುವರಿದು, ಕಟಾಕ್ಷ-ಪ್ರವಾಹವಾದುದಲ್ಲದೆ, ತನ್ನತ್ತಲೇ ಬರುತ್ತಿರುವುದನ್ನೂ ಹೇಳುತ್ತಿದ್ದಾನೆ, ಕವಿ. ಆತನ ಆಗಮನದಲ್ಲೊಂದು ವಿಶೇಷವನ್ನೂ ಹೇಳಿದ್ದಾನೆ.
ಕೃಷ್ಣನ ತುಟಿಯನ್ನೂ ಇಲ್ಲಿ ಚಿತ್ರಿಸಿದೆ. ಹಲ್ಲುಗಳನ್ನು ಮುಚ್ಚತಕ್ಕವು ತುಟಿಗಳಾದ್ದರಿಂದ, ತುಟಿಯನ್ನು ದಂತಚ್ಛದವೆಂದೋ ದಶನಾವರಣವೆಂದೋ ಕರೆಯುತ್ತಾರೆ. ಏಕೆಂದರೆ ದಶನಗಳಿಗೆ, ಎಂದರೆ ದಂತಗಳಿಗೆ, ತುಟಿಯೇ ಆವರಣ. ಹಲ್ಲುಬ್ಬಿಲ್ಲದವರೆಲ್ಲರ ತುಟಿ ಹೀಗೆ ತಾನೆ ಇರುತ್ತದೆ? ಆ ತುಟಿಗೇ ಒಂದು ವಿಶೇಷವಿದೆ. ಕೃಷ್ಣನು ವೇಣುಗಾನವನ್ನು ಮಾಡುವ ಸನ್ನಿವೇಶದಲ್ಲಿ ಅದು ಹೃದಯಂಗಮವಾಗಿರುತ್ತದೆ. ಆ ವೇಣುನಾದದ ಒಂದು ವೇಣಿಯನ್ನೇ, ಅರ್ಥಾತ್ ಪ್ರವಾಹವನ್ನೇ, ಸುರಿಸುವುದದು.
ಈ ಶ್ಲೋಕದಲ್ಲಿ ಕೃಷ್ಣನ ನಡೆ-ನೇತ್ರ-ವೇಣುನಾದ-ಅಧರಗಳನ್ನು ಚಿತ್ರಿಸಿದೆ. ಶ್ಲೋಕ ಹೀಗಿದೆ:
ದೂರಾದ್ ವಿಲೋಕಯತಿ ವಾರಣ-ಖೇಲ-ಗಾಮೀ /
ಧಾರಾ-ಕಟಾಕ್ಷ-ಭರಿತೇನ ವಿಲೋಚನೇನ |
ಆರಾದ್ ಉಪೈತಿ ಹೃದಯಂಗಮ-ವೇಣುನಾದ-/
-ವೇಣೀ-ದುಘೇನ ದಶನಾವರಣೇನ ದೇವಃ ||
**
ಮತ್ತೊಂದು ಪದ್ಯ:
ಶ್ರೀಕೃಷ್ಣನನ್ನು ನಾವು ನೋಡುತ್ತಿದ್ದೇವೆ - ಎನ್ನುತ್ತಾನೆ ಲೀಲಾಶುಕ. ಪದ್ಯದಲ್ಲೆಲ್ಲೂ ಕೃಷ್ಣನ ಹೆಸರೇ ಬರುವುದಿಲ್ಲ. ಬದಲಾಗಿ ಆತನ ಚಿತ್ರಣವನ್ನೇ ಕವಿಯು ಮುಂದಿಡುತ್ತಾನೆ. ಅದನ್ನು ಮನಸ್ಸಿನ ಮುಂದೆ ತಂದುಕೊಂಡರೆ ಮೂಡುವುದು ಕೃಷ್ಣ-ತತ್ತ್ವವೇ.
ಕೃಷ್ಣನನ್ನು ನೀಲ-ಮೇಘದಂತಿರುವವನು ಎನ್ನುತ್ತಾರಲ್ಲವೆ? ಎಂದೇ ಆತನನ್ನು, ನೀಲಿಬಣ್ಣವೇ ಅದು - ಎಂಬಂತೆ ತೋರಿಸುತ್ತಾನೆ. ನೀಲವರ್ಣವೇ ನೀಲಿಮೆ. ನಾ ನೋಡುತ್ತಿರುವುದು ನೀಲಿಮೆಯನ್ನು; ಅದೂ ನಿರ್ಮಲವಾದ ನೀಲಿಮೆ. ಯಾವುದರಲ್ಲಿ ಮಲವಿಲ್ಲವೋ, ಅಶುದ್ಧಿಯ ಲವ-ಲೇಶವೂ ಇಲ್ಲವೋ, ಅದುವೇ ನಿರ್ಮಲ.
ನಾವೆಲ್ಲ ಮಲಿನರೇ. ನಮ್ಮ ದೇಹ ಮಲಿನ. ನಮ್ಮ ಮನಸ್ಸು ಮಲಿನ. ನಮ್ಮ ಬುದ್ಧಿ ಮಲಿನ. ಜನ್ಮಾಂತರಗಳಿಂದ ಬಂದು ತಗಲಿರುವ ವಾಸನೆಗಳೂ ಮಲಿನವೇ. ಯಾವ ಮಾಲಿನ್ಯದ ಸೋಂಕೂ ಇಲ್ಲದ ಪರ-ತತ್ತ್ವವೊಂದೇ ನಿರ್ಮಲ.
ಮಲಗಳಿರುವುದರಿಂದಲೇ ನಾವೆಲ್ಲ ಸಂಸಾರದಲ್ಲಿ ಸಿಲುಕಿಕೊಂಡಿರುವವರು. ಆತನು ಅಮಲನಾದ್ದರಿಂದಲೇ ಸಂಸಾರದಲ್ಲಿ ಸಿಲುಕಿಲ್ಲ. ಮಾತ್ರವಲ್ಲ, ಪರಿಶುದ್ಧನಾದ್ದರಿಂದಲೇ ಮಲಗಳನ್ನು ಕಳೆಯಬಲ್ಲ, ಸಿಲುಕಿರುವವರನ್ನು ಬಿಡಿಸಬಲ್ಲ.
ವಸ್ತುತಃ ಬಿಡಿಸಲೆಂದೇ ಬಂದಿರುವವ ಆತ. ಎಂದೇ, ಉಪಾಸ್ಯನೆಂದರೆ ಆತನೇ.
ಪರ-ತತ್ತ್ವವನ್ನು ನಮಗೆ ತಿಳಿಸಿಕೊಡಲೆಂದು ಬಂದಿರುವ ಸಾಹಿತ್ಯವೇ ನಿಗಮ ಅಥವಾ ವೇದ. ವಾಕ್ಕಿನ ಶಕ್ತಿಗೇ ಒಂದು ಮಿತಿಯಿರುವುದರಿಂದ, ಲೋಕೋತ್ತರವೆನಿಸುವ ನಿಗಮ-ವಾಕ್ಕಿಗೂ ಒಂದು ಮಿತಿಯುಂಟು. ಭಗವಂತನ ಪೂರ್ಣ-ಸ್ವರೂಪವನ್ನು ತಿಳಿಸಿಕೊಡಲು ಅದಕ್ಕೂ ಸರ್ವಥಾ ಆಗದು! ಎಂದೇ ಪರತತ್ತ್ವವನ್ನು "ನಿಗಮ-ವಾಕ್ಕಿಗೆ(ಗೂ) ಗೋಚರವಲ್ಲದ ಶಕ್ತಿ!" ಎನ್ನುವುದು. ಅದನ್ನೇ ಇಲ್ಲಿ ಕವಿಯು ನಿಗಮ-ವಾಕ್-ಅಗೋಚರವೆಂದಿರುವುದು.
ಹೀಗಾಗಿ, ಶ್ರೀಕೃಷ್ಣನೆಂಬುದು ನಿರ್ಮಲವೂ, ನಿಗಮ-ವಚನಕ್ಕೆ ನಿಲುಕದುದೂ, ಆದ ನೀಲತತ್ತ್ವ.
ಸ್ವತಃ ರೂಪ-ಆಕಾರಗಳನ್ನು ಮೀರಿದ ಅದು, ತನಗೆ ಬೇಕಾದ ರೂಪ-ಆಕಾರಗಳನ್ನು ತಳೆಯಬಲ್ಲುದು! ಹಾಗಿರುವುದರಿಂದಲೇ ಮಧುರವಾದ ನೀಲಿಮೆಯುಳ್ಳ ಶರೀರವನ್ನು ಧರಿಸಿಬಂದಿರುವುದು. ಇದಾಗಿರುವುದು ಕೃಷ್ಣಾವತಾರದಲ್ಲಿ.
ಶ್ರೀಕೃಷ್ಣನ ಬಾಲ್ಯ-ಯೌವನಗಳನ್ನು ಮಹಾಭಾರತದಲ್ಲೂ, ಅದಕ್ಕಿಂತಲೂ ಹೆಚ್ಚಾಗಿ ಮಹಾಭಾರತದ ಖಿಲಭಾಗವೆನಿಸುವ ಹರಿವಂಶದಲ್ಲೂ, ಅಂತೆಯೇ ಶ್ರೀಮದ್ಬಾಗವತ-ಮಹಾಪುರಾಣದಲ್ಲೂ, ನಾವು ಕಾಣುತ್ತೇವೆ. ಹಾಗೆ ನೋಡಿದರೆ ರಾಮನನ್ನೂ ಮೇಘಶ್ಯಾಮನೆಂದು ಚಿತ್ರಿಸಿದರೂ, ಆತನ ಬಾಲ್ಯ-ಯೌವನಗಳನ್ನೇ ಶ್ರೀಮದ್ರಾಮಾಯಣದಲ್ಲಿ ವಾಲ್ಮೀಕಿಗಳು ಚಿತ್ರಿಸಹೋಗಿಲ್ಲ.
ಹಾಗಾದರೆ ಈ ಬಾಲ್ಯ-ಯೌವನಗಳ ಸಂಧಿಯಲ್ಲಿ ಹೇಗೆ ತೋರುವನು ಶ್ರೀಕೃಷ್ಣ? ಅದಕ್ಕೆ ಆತನ ಕೆನ್ನೆಯೊಂದನ್ನು ವರ್ಣಿಸಿದರೆ ಸಾಕು. ಆತನ ಕಪೋಲ-ಮಂಡಲವು, ಎಂದರೆ ದುಂಡನೆ ತೋರುವ ಕೆನ್ನೆಯು, ಅರುಣ-ವರ್ಣವನ್ನು ಹೊಂದಿದೆ, ಎಂದರೆ ಕೆಂಪಡರಿದೆ.
ಎಂತು ಬಂದಿತು ಕೆನ್ನೆಗೀ ಬಣ್ಣ? ನೀಲ-ವರ್ಣವನ್ನು ಮರೆಮಾಚಿ ಕೆನ್ನೆಯನ್ನು ಕೆಂಪಾಗಿಸಿರುವುದು ಯಾವುದು? ಕದಂಬ-ಮಂಜರಿಯ ಕೇಸರಗಳು. ಕದಂಬವೆಂದರೆ ನೀಪ; ಅದೊಂದು ಉತ್ತಮ-ಜಾತಿಯ ಈಚಲುಮರ. ಮಂಜರಿಯೆಂದರೆ ಹೂಗೊಂಚಲು. ಕುಸುಮಗಳಲ್ಲಿ ಕೇಸರಗಳಿರುತ್ತವೆಯಷ್ಟೆ. ಕೇಸರವೆಂದರೆ ಪುಷ್ಪಗಳಲ್ಲಿ ಎದ್ದುಕಾಣುವ, ಚಾಚಿರುವ ಭಾಗ. ಎಂದೇ ಆ ಕೇಸರಗಳಲ್ಲಿ ವರ್ಣ-ವಿಶೇಷವಿರುತ್ತದೆ. ಹೀಗೆ ನೀಪ-ಪುಷ್ಪ-ಗುಚ್ಛವೆಂದರೆ ಅದರಲ್ಲಿ ಅರುಣ-ವರ್ಣದ ಕೇಸರಗಳಿರುತ್ತವೆ.
ಕೇಸರಗಳ ಸ್ಪರ್ಶ ಕೃಷ್ಣನ ಕೆನ್ನೆಗಾಗಿದೆ. ಕೇಸರಗಳಲ್ಲಿ ಒಂದಿಷ್ಟು ಸೂಕ್ಷ್ಮವಾದ ಅಂಟಿನ ಅಂಶವೂ ಇರುತ್ತದೆಯಾಗಿ, ಕೃಷ್ಣನ ಕೆನ್ನೆಗೆ ಅವು ತಾಕಿವೆ. ತಾಕಿದಂತೆ ತಮ್ಮಲ್ಲಿಯ ಅರುಣ-ವರ್ಣವನ್ನು ಆತನ ಕೆನ್ನೆಗೂ ಒಂದಿಷ್ಟು ಲೇಪಿಸಿವೆ. ಈ ಅರುಣ-ಪರಾಗಗಳ ಸ್ಪರ್ಶದಿಂದಾಗಿ ಕೃಷ್ಣನ ಕೆನ್ನೆ ಕೆಂಪಡರಿದೆ.
ಆದರೆ ಈ ಕದಂಬ-ಪುಷ್ಪ-ಗುಚ್ಛವು ಬಂದುದೆಲ್ಲಿಂದ? ಮತ್ತೆಲ್ಲಿಂದ? ಆತನೇ ಅದನ್ನು ಧರಿಸಿದ್ದಾನೆ. ಕಿವಿಯ ಮೇಲೆ ಹೂವಿಟ್ಟುಕೊಳ್ಳುವ ಪರಿ ಇತ್ತೀಚಿನವರೆಗೂ ಇದ್ದದ್ದೇ. ದೇವ-ಪ್ರಸಾದವಾಗಿ ಕರ್ಣ-ಸ್ಥಾನದಲ್ಲಿ ಪುಷ್ಪವನ್ನಿಟ್ಟುಕೊಳ್ಳುವುದು ಇಂದೂ ಉಂಟಲ್ಲವೇ? ಅಲಂಕಾರ-ಪ್ರಿಯರಿಗೆ ಕಿವಿಯೆಡೆಯಲ್ಲೂ ಹೂ ಸಿಕ್ಕಿಸಿಕೊಳ್ಳುವ ಕ್ರಮವು ಪರಿಚಿತವಾದದ್ದೇ.
ವಿಷ್ಣುವನ್ನು ಅಲಂಕಾರ-ಪ್ರಿಯನೆಂದೇ ಗುರುತಿಸುವುದು. ಶ್ರೀಕೃಷ್ಣನು ವಿಷ್ಣುವಿನ ಅವತಾರವೇ. ಶೃಂಗಾರ-ರಸ-ಸರ್ವಸ್ವನೆಂದು ಹೊಗಳಿಸಿಕೊಳ್ಳುವ ಶ್ರೀಕೃಷ್ಣನು ತನ್ನನ್ನು ಸಿಂಗರಿಸಿಕೊಳ್ಳುವುದರಲ್ಲಿ ರುಚಿಯುಳ್ಳವನಷ್ಟೇ ಅಲ್ಲ, ಅದರಲ್ಲಿ ನಿಸ್ಸೀಮನೂ ಹೌದು.
ಹೀಗಾಗಿ ಆತನ ಕರ್ಣದಿಂದಲೇ ಜೋತಾಡುತ್ತಿದೆ, ಈ ಕದಂಬ-ಮಂಜರಿ. ಅದರ ಕೆಂಪು ಕೇಸರ ಕೆನ್ನೆಗೆ ಸೋಂಕಿದೆ. ಪರಾಗವಂಟಿದೆ. ಕೆಂಪನೆಯ ಛಾಯೆಯನ್ನು ಕೆನ್ನೆ ಹೊಂದಿದೆ.
ಕೆನ್ನೆಯಲ್ಲಿ ಕೆಂಪನ್ನು ಹೀಗೆ ಹೊಂದಿರುವ ನೀಲ-ವರ್ಣದ ರಾಶಿಯೇ ಈತ - ಎಂಬಂತೆ ತೋರುವ ಈ ಶ್ರೀಕೃಷ್ಣನನ್ನು ನಾವು ನೋಡುತ್ತಿದ್ದೇವೆ - ಎನ್ನುತ್ತಾನೆ ಲೀಲಾಶುಕ. ಕವಿಗಳು ತಮ್ಮನ್ನು ಬಹುವಚನದಿಂದ ನಿರ್ದೇಶಿಸಿಕೊಳ್ಳುವುದೂ ಸಾಮಾನ್ಯವೇ.
ಅಂತೂ ಹೀಗೆ ಕೆನ್ನೆಕೆಂಪಿನ ನೀಲಮೈಯ ಈ ದೇವತೆ ನಿಗಮಕೇ ನಿಲುಕದವನು. ಆತನನ್ನು ಕಾಣುತ್ತಿದ್ದೇವೆನ್ನುತ್ತಾನೆ, ಲೀಲಾಶುಕ.
ಕರ್ಣ-ಲಂಬಿತ-ಕದಂಬ-ಮಂಜರೀ- /
-ಕೇಸರಾರುಣ-ಕಪೋಲ-ಮಂಡಲಂ |
ನಿರ್ಮಲಂ ನಿಗಮ-ವಾಗ್-ಅಗೋಚರಂ /
ನೀಲಿಮಾನಂ ಅವಲೋಕಯಾಮಹೇ ||