Monday, January 12, 2026

ವ್ಯಾಸ ವೀಕ್ಷಿತ 170 ಅರ್ಜುನೋಕ್ತಿಗೆ ಕೃಷ್ಣನಿತ್ತ ಸಮ್ಮತಿ ( Vyaasa Vikshita 170)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ರಾಜಸೂಯವಿಷಯಕವಾಗಿ ಯುಧಿಷ್ಠಿರನು ತಾಳಿದ ನಿಲುವಿಗೆ ತನ್ನ ವಿಮತಿಯನ್ನು ತೋರುತ್ತಾ ಅರ್ಜುನನು ತನ್ನ ಮಾತನ್ನು ಹೀಗೆ ಮುಂದುವರಿಸಿದನು.

"ಬಲಯುಕ್ತನಾಗಿದ್ದರೂ ಪ್ರಮಾದಿಯಾಗಿದ್ದರೆ, ಎಂದರೆ ಕರ್ತವ್ಯದಲ್ಲಿ ಎಚ್ಚರವುಳ್ಳವನಾಗದಿದ್ದರೆ, ತನ್ನ ಉದ್ದೇಶ್ಯದಲ್ಲಿ ಸಫಲನಾಗನು.

ಎಚ್ಚರತಪ್ಪುವುದೆಂಬುದು ಒಂದು ರಂಧ್ರ, ಎಂದರೆ ದೋಷ; ಆ ರಂಧ್ರದಿಂದಾಗಿ, ಬಲಶಾಲಿಯಾದ ಶತ್ರುವೂ ಕ್ಷೀಣನಾಗುತ್ತಾನೆ. ಬಲಶಾಲಿಯಾದವನಲ್ಲಿ ಕೆಲವೊಮ್ಮೆ ತೋರುವ ದೀನತೆಯು ವಿನಾಶಕಾರಿ; ಅದು ಹೇಗೆ ವಿನಾಶಕಾರಿಯೋ, ಹಾಗೆಯೇ ವಿನಾಶಕಾರಿಯಾದದ್ದು, ಬಲಿಷ್ಠನಲ್ಲಿ ಕೆಲವೊಮ್ಮೆ ಉಂಟಾಗುವ ಮೋಹ. ಆದುದರಿಂದ ಜಯಾಪೇಕ್ಷಿಯಾದವನು ದೈನ್ಯ-ಮೋಹಗಳೆರಡನ್ನೂ ತೊರೆಯತಕ್ಕದ್ದು.

ಈಗ ಈ ರಾಜಸೂಯದ ಸನ್ನಿವೇಶದಲ್ಲಿ ಇವೆರಡು ಕೆಲಸಗಳು - ಜರಾಸಂಧನನ್ನು ಸಂಹಾರಮಾಡುವುದು, ಹಾಗೂ ಅವನಲ್ಲಿ ಬಂದಿಯಾಗಿರುವ ರಾಜರುಗಳನ್ನು ರಕ್ಷಿಸುವುದು –ಇವನ್ನು ನಾವು ಮಾಡುವುದಾದರೆ, ಅದಕ್ಕಿಂತಲೂ ಉತ್ತಮವಾದದ್ದು ಮತ್ತೇನಿದ್ದೀತು?

ಇತ್ತ ನಾವು ಯಜ್ಞವನ್ನು ಮಾಡಲೇ ಇಲ್ಲವೆಂದಾದರೆ, ನಮ್ಮಲ್ಲಿ ಆ ಗುಣ-ಸಾಮರ್ಥ್ಯಗಳು ಇಲ್ಲವೆಂಬುದೇ ಸಿದ್ಧವಾಗುವುದು! ಆವಶ್ಯಕವಾದ ಗುಣಗಳು ನಮ್ಮಲ್ಲಿ ನಿಃಸಂಶಯವಾಗಿಯೂ ಇರುವಾಗಲೂ, ಗುಣಗಳಿಲ್ಲವೆಂಬುದಾಗಿ ನೀನು ಭಾವಿಸುವುದಾದರೂ ಹೇಗೆ?

ಶಮವನ್ನು ಬಯಸುವ ಮುನಿಗಳ ಹಾಗೆ ಕಾಷಾಯವಸ್ತ್ರವನ್ನು ಮುಂದೆ ಧರಿಸುವುದು ಸುಲಭವೇ ಆಗಿದೆ. ಆದರೀಗ ಸಾಮ್ರಾಜ್ಯವೆಂಬುದು ನಮಗೆ ಶಕ್ಯವಾಗಿದೆ. ಹಾಗಾಗಿ ಶತ್ರುಗಳನ್ನು ಈಗ ನಾವು ಜಯಿಸುವುದೇ ಸರಿ" ಎಂದನು.

ಅರ್ಜುನನು ಹೀಗೆ ತನ್ನ ಮಾತನ್ನು ಮುಗಿಸಲಾಗಿ ಶ್ರೀಕೃಷ್ಣನು ಹೀಗೆ ನುಡಿದನು:

"ಭರತವಂಶದಲ್ಲಿ ಜನಿಸಿದವನಿಗೆ ಹಾಗೂ ಕುಂತಿಯ ಪುತ್ರನಾದವನಿಗೆ ಯಾವ ಮತಿಯು ಯುಕ್ತವಾದುದೋ ಅದನ್ನೇ ಅರ್ಜುನನೀಗ ಪ್ರದರ್ಶಿಸಿದ್ದಾನೆ.

ಯುಧಿಷ್ಠಿರಾ, ಮೃತ್ಯುವು ಯಾವಾಗ ಬರುವುದೆಂಬುದನ್ನು ನಾವರಿಯೆವು - ಅದು ರಾತ್ರಿ ಬರುವುದೋ ಹಗಲು ಬರುವುದೋ ಬಲ್ಲವರಾರು? ಯುದ್ಧ ಮಾಡದ ಮಾತ್ರಕ್ಕೆ ಅಮರತ್ವವು ಬಂದುಬಿಡುವುದೆ? ಹಾಗಾಗುವುದನ್ನು ನಾವೆಲ್ಲೂ ಕೇಳಿಲ್ಲ.

ಹೃದಯಕ್ಕೆ ಸಂತೋಷವುಂಟುಮಾಡುವಂತಹ ಕಾರ್ಯವಿದು; ಪುರುಷರಾದವರು ಮಾಡತಕ್ಕದ್ದೇ: ಏನೆಂದರೆ ಶತ್ರುವಿನ ಮೇಲೆ ಆಕ್ರಮಣಮಾಡುವುದು.

ನೀತಿಶಾಸ್ತ್ರಗಳಲ್ಲಿ ಸುನಯ ಮತ್ತು ಅನಪಾಯಗಳನ್ನು ಹೇಳಿದೆ. ಸುನಯ  ಎಂದರೆ ಒಳ್ಳೆಯ ನೀತಿ; ಅನಪಾಯ - ಎಂದರೆ ತೊಂದರೆಗಳಿಲ್ಲದಂತೆ ವ್ಯವಸ್ಥೆ ಮಾಡಿರುವಿಕೆ. ಇವುಗಳ ಸಂಯೋಗವಾದಲ್ಲಿ ಅದುವೇ ಪರಮ-ಕ್ರಮವಾಗುವುದು, ಎಂದರೆ ಶ್ರೇಷ್ಠವಾದ ಕ್ರಮವೇ ಆಗುವುದು.

ಒಬ್ಬ ರಾಜನು ಮತ್ತೊಬ್ಬ ರಾಜನೊಂದಿಗೆ ಎದುರೆದುರಾದಾಗಲೇ ಪರಸ್ಪರ ಅಸಾಮ್ಯವು ತಿಳಿದುಬರುವುದು: ಯಾರಿಬ್ಬರು ಅರಸರೂ ಸರ್ವ-ರೀತಿಗಳಿಂದಲೂ ಸಮರಾಗಿರರು. ಯಾವನು ನಯವನ್ನೂ ಉಪಾಯವನ್ನೂ ಎರಡನ್ನೂ ಕಡೆಗಾಣಿಸುವನೋ ಅಂತಹವನಿಗೆ ಸೆಣಸಿನಲ್ಲಿ ಸಂಪೂರ್ಣ-ವಿನಾಶವೆಂಬುದು ಸಿದ್ಧವಾದದ್ದೇ ಸರಿ. ಆದರೆ ಇಬ್ಬರು ವೈರಿಗಳಲ್ಲೂ ಒಂದು ವೇಳೆ ಸಾಮ್ಯವೇ ಆಗಿಬಿಟ್ಟಿದ್ದಲ್ಲಿ ಸಂಶಯವೇ ಉಂಟಾಗುತ್ತದೆ: ಇಬ್ಬರಿಗೂ ಗೆಲುವೆಂದಾಗದಲ್ಲವೇ?

ನಾವಿದೋ ನಯದಲ್ಲಿ ನೆಲೆನಿಂತು ಶತ್ರುವಿನ ಸಮೀಪಕ್ಕೆ ಹೋಗತಕ್ಕವರು. ಹಾಗಿರುವಾಗ ನಾವೆಂತು ಲಕ್ಷ್ಯವನ್ನು ಸಾಧಿಸುವುದಿಲ್ಲ? ನದೀ-ವೇಗವು ಮರವನ್ನು ಉರುಳಿಸಿಕೊಂಡು ಹೋಗುವಂತೆ ಇದು. ಪರ-ರಂಧ್ರದ ಮೇಲೇ,  ಎಂದರೆ ಶತ್ರುವಿನಲ್ಲಿನ ನ್ಯೂನತೆಗಳನ್ನು ಹಿಡಿದೇ, ನಾವು ಆಕ್ರಮಣ ಮಾಡತಕ್ಕವರು; ಅಲ್ಲದೆ, ಸ್ವ-ರಂಧ್ರಗಳನ್ನು - ಎಂದರೆ ನಮ್ಮಲ್ಲಿಯ ದೋಷ/ನ್ಯೂನತೆಗಳನ್ನು, ಅನ್ಯರಿಗೆ ತಿಳಿಯದಂತೆ ಗೋಪ್ಯವಾಗಿಯೇ ಇಟ್ಟಿರತಕ್ಕವರು.

ಯಾವ ಶತ್ರುವು ಅತಿಬಲಶಾಲಿಯಾಗಿರುವನೋ, ಜೊತೆಗೆ ಸೈನ್ಯವನ್ನು ಸಜ್ಜುಗೊಳ್ಳಿಸಿಕೊಂಡೇ ನಿಂತಿರುವನೋ, ಅಂತಹ ಅರಿಯೊಂದಿಗೆ ಯುದ್ಧವನ್ನು ಮಾಡಲೇಕೂಡದು. ಇದುವೇ ಬುದ್ಧಿಶಾಲಿಗಳ ನೀತಿಯಾದುದು. ಆ ಮತವು ನನಗೂ ಸಂಮತವೇ." – ಎಂದನು.

ಸೂಚನೆ : 11/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.