ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
"ನಾನು ಸಾಯಬಾರದು" ಎಂಬ ಪ್ರವೃತ್ತಿ ಯಾರಿಗೆ ತಾನು ಇರುವುದಿಲ್ಲ? ಖೇದಾತಿರೇಕವಾದಾಗ ಸಾಯಬೇಕೆನಿಸುವುದೋ, ಸತ್ತರೇ ವಾಸಿಯೆಂದು ತೋರುವುದೋ, ಆದೀತು. ಆದರೆ ಬುದ್ಧಿ ನೆಟ್ಟಗಿರುವವರು ಯಾರೂ ಸಾಯಬಯಸರು. ಮನುಷ್ಯರಿಗೇನು, ಪ್ರಾಣಿಗಳಿಗೂ ಸಹ ತಮ್ಮ ಪ್ರಾಣವೆಂದರೆ ಪರಮವೇ. ಪ್ರಾಣಕಳೆದುಕೊಳ್ಳಲು ಯಾವ ಪ್ರಾಣಿ ತಾನೆ ಬಯಸೀತು? ತನ್ನನ್ನು ತಾನುಳಿಸಿಕೊಳ್ಳಲೇ ಸದಾ ಸರ್ವಪ್ರಯತ್ನಗಳೂ.
ಪ್ರಾಣಿಗಳ ವಿಷಯ ಬಿಟ್ಟು ಮನುಷ್ಯರ ಲೆಕ್ಕಕ್ಕೇ ಬರೋಣ. "ಸಾವು ಬೇಡ" - ಎಂದರೆ "ಬದುಕು ಬೇಕು" - ಎಂದೇ. ಆದರೆ "ಬದುಕಬೇಕೇಕೆ?" – ಎಂಬ ಪ್ರಶ್ನೆಯೂ ಜೊತೆಗೇ ಬರುವಂತಹುದೇ ತಾನೆ? "ಸ್ವ-ಪರೀಕ್ಷೆಯನ್ನು ಮಾಡಿಕೊಳ್ಳದ ಬದುಕು ಯೋಗ್ಯವಾದ ಬದುಕಲ್ಲ" – ಎಂದು ಸಾಕ್ರೆಟೀಸನೂ ಹೇಳಿರುವನಲ್ಲವೇ?
ಬಹುಮಂದಿಗೆ ಈ ಪ್ರಶ್ನೆಗಳೇ ಕ್ಲಿಷ್ಟ, ಗೊಂದಲಮಯ. ಇದಕ್ಕೆಲ್ಲಾ ಏಕೆ ತಲೆಕೆಡಿಸಿಕೊಳ್ಳಬೇಕು? ಎಲ್ಲರಂತೆ ಇದ್ದರಾಯಿತು – ಎಂದುಕೊಳ್ಳುವವರೇ ಹೆಚ್ಚು.
ಎಂದೇ ಬಹುಮಂದಿಯ ಬದುಕು, ತಾ ಸತ್ತಿಲ್ಲದಿರುವಿಕೆಯಷ್ಟನ್ನೇ ಹೇಳುವಂತಹುದು! ಜೀವನದಲ್ಲಿ ಏನೋ ಸಾಧಿಸಿದೆವು - ಎನ್ನಿಸಬೇಕಾದರೆ, ಸರಿಯಾದವರ ಮಾರ್ಗದರ್ಶನ ಬೇಕು. ನಿಜ, ಎಮರ್ಸನ್ ಹೇಳುವಂತೆ, ನಮಗೆ ಪ್ರತಿ ಹೆಜ್ಜೆಯಲ್ಲೂ ದಾರಿತೋರಿಸಿಕೊಡುವವರೊಬ್ಬರು ದೊರೆತುಬಿಟ್ಟರೆ ಜೀವನವೇ ಸುಗಮವಾಗಿಬಿಡುತ್ತದೆ!
ನಾವು ಪ್ರಯಾಣಿಸಬೇಕಾದ ದಾರಿಯೇನು, ತಲುಪಬೇಕಾದ ಗುರಿಯೇನು, ಸಾಗುವ ಪರಿಯೇನು, ಹಾದಿಯಲ್ಲಿ ಬರುವ ಅಡ್ಡಿಗಳೇನು, ಅವನ್ನು ಪರಿಹರಿಸಿಕೊಳ್ಳುವ ಬಗೆಯೇನು? – ಇವಕ್ಕೆಲ್ಲ ಮಾರ್ಗದರ್ಶಿಯೊಬ್ಬರಿದ್ದಲ್ಲಿ ಎಲ್ಲವೂ ಸುಕರವೇ ಸರಿ!
ಆದರೆ ನಮ್ಮ ದುರದೃಷ್ಟದಿಂದ ತಪ್ಪುದಾರಿ ತೋರಿಸುವವರಾಗಿಬಿಟ್ಟರೆ ಏನು ಗತಿ? - ಎಂದೂ ಯೋಚನೆಗಿಟ್ಟುಕೊಳ್ಳುತ್ತದೆ: ಇಂದು ಸ್ವ-ಘೋಷಿತ ಬಾಬಾಗಳೋ ಪವಾಡ-ದರ್ಶಕರೋ ಅದೆಷ್ಟೊಂದು ಮಂದಿ ಕಂಡುಬರುತ್ತಾರೆ! ಇವರಲ್ಲಿ ಯಾರು ಸರಿ, ಯಾರಲ್ಲ? - ಹೇಳುವುದೆಂತು? ಕೇವಲ ಪುಸ್ತಕ-ಜ್ಞಾನವನ್ನೋ ವಾಕ್-ಚಾತುರ್ಯವನ್ನೋ ಬಂಡವಾಳಮಾಡಿಕೊಂಡು ಇತರರಿಗೆ ಉಪದೇಶಮಾಡುವವರಾಗಿಬಿಟ್ಟರೆ ಆಯಿತೇ?
ಬೈಬಲ್ಲಿನಲ್ಲೊಂದು ಮಾತಿದೆ: "ಕುರುಡರು ಕುರುಡರಿಗೆ ದಾರಿ ತೋರುವವರಾದರೆ ಇಬ್ಬರೂ ಹಳ್ಳಕ್ಕೆ ಬೀಳುವರೇ!" - ಎಂದು. ಅಜ್ಞಾನಿಗಳು ಅಜ್ಞಾನಿಗಳಿಗೆ ಏನು ಮಾರ್ಗದರ್ಶನವಿತ್ತಾರು? – ಎಂಬುದು ಅದರ ತಾತ್ಪರ್ಯ.
ಕುರುಡರಿಗೆ ಕುರುಡರದ್ದೇ ನಾಯಕತ್ವವೆಂಬ ಘೋರಸ್ಥಿತಿಯ ಬಗೆಗಿನ ಈ ಮಾತು ಮಾರ್ಮಿಕವಾದುದು. ಆದರೆ ಇದು ಬಂದಿರುವುದು ಬೈಬಲ್ಲಿನಲ್ಲಿ ಮಾತ್ರವೇ, ಅಥವಾ ಮತ್ತೆಲ್ಲಾದರೂ ಬಂದಿದೆಯೇ? – ಎಂಬ ಕುತುಕವೂ ಉಂಟಾಗುತ್ತದೆಯಲ್ಲವೇ?
ವಾಸ್ತವವಾಗಿ, ಕ್ರಿಸ್ತನು ಹುಟ್ಟುವದಕ್ಕಿಂತಲೂ ಮೊದಲೇ ಈ ಮಾತು ಬಂದಿದೆ! ಬೌದ್ಧ-ಗ್ರಂಥವಾದ "ಮಜ್ಝಿಮನಿಕಾಯ"ದ "ಚಂಕೀಸುತ್ತ"ದಲ್ಲಿ. ಬುದ್ಧನ ಮಾತಿನಲ್ಲಿ ಇನ್ನೂ ವಿಶದವಾಗಿಯೇ ಬಂದಿದೆ!
"ಸಾಲಾಗಿ ಹೋಗುತ್ತಿರುವ ಕುರುಡರಲ್ಲಿ ಮೊದಲಿಗನಿಗೂ ಕಣ್ಣು ಕಾಣದು, ಮಧ್ಯದಲ್ಲಿರುವವನಿಗೂ ಕಾಣದು, ಕೊನೆಯಲ್ಲಿರುವವನಿಗೂ ಕಾಣದು - ಎಂದಾದರೆ, ಒಬ್ಬರನ್ನೊಬ್ಬರು ಸ್ಪರ್ಶಿಸಿಕೊಂಡೇ ಹೋಗುತ್ತಿದ್ದ ಮಾತ್ರಕ್ಕೇ ಪ್ರಯೋಜನವೇನು?" – ಎಂಬುದು ಬುದ್ಧನ ಪ್ರಶ್ನೆ.
ಈ ಉಪಮಾನದ ಮೂಲವನ್ನು ಅರಸಿ ಮತ್ತೂ ಹಿಂದಕ್ಕೆ ಹೋದೆವೆಂದರೆ, ವಿಶ್ವದಲ್ಲೇ ಮೊಟ್ಟಮೊದಲು ಅದು ದೊರೆಯುವುದು ಉಪನಿಷತ್-ಸಾಹಿತ್ಯದಲ್ಲಿ! ಕಠೋಪನಿಷತ್ತಿನಲ್ಲಿ ಯಮ-ನಚಿಕೇತರ ಸಂವಾದವಿದೆಯಲ್ಲವೇ? ಅಲ್ಲಿ ಶ್ರೇಯಸ್ಸು-ಪ್ರೇಯಸ್ಸುಗಳನ್ನು ಯಮನು ವಿವರಿಸುವ ಪ್ರಸಂಗದಲ್ಲೇ ಇದನ್ನು ಮೊಟ್ಟಮೊದಲು ಬಳಸಿರುವುದು.
ಅಲ್ಲಿ ಯಮನ ನುಡಿಯಿಂತು: "ಅವಿದ್ಯೆಯಲ್ಲೇ ತಾವಿದ್ದುಕೊಂಡು, ತಮ್ಮನ್ನೇ ಪಂಡಿತರೆಂದುಕೊಂಡುಬಿಡುವವರುಂಟು. ಅಂತಹವರು ಅಂಧರಿಂದ ಒಯ್ಯಲ್ಪಡುವ ಅಂಧರ ಹಾಗೆ! "ಅಂಧೇನೇವ ನೀಯಮಾನಾ [ಯಥಾಂಧಾಃ]". ಆದರೂ ತಾವೇ ಧೀರರೆಂಬುದಾಗಿ ವರ್ತಿಸುವರು! ಭ್ರಮೆಗೊಳಗಾದ ಮೂಢರಾಗಿ ಲೋಕದಲ್ಲಿ ಅಲೆಯುತ್ತಿರುವರು!" ಎಲ್ಲರನ್ನೂ ಎಚ್ಚರಿಸುವ ಮಾತಿದು!
ಇದೇ ಉಪಮಾನವನ್ನು ಶ್ರೀರಂಗಮಹಾಗುರುಗಳು ಸ್ವಲ್ಪ ಬೇರೆಯೇ ರೀತಿಯಲ್ಲಿ ಬಳಸಿರುವರು. ಒಬ್ಬ ಸದ್ಗುರುವಿನ ನಡೆಯೆಂತಿರುವುದು? – ಎಂಬುದನ್ನು ಈ ಪರಿಯಲ್ಲಿ ಅರುಹಿರುವರು: "ಒಬ್ಬ ಕುರುಡನು ಮತ್ತೊಬ್ಬ ಕುರುಡನನ್ನು ಕರೆದೊಯ್ಯಲಾರನಷ್ಟೆ? ಅಂಧಕಾರದಲ್ಲಿ ಅಲೆಯುತ್ತಿರುವವರನ್ನು ಬೆಳಕಿಗೆ ಕರೆದೊಯ್ಯುವವನು ಗುರು. ಒಳಬೆಳಕನ್ನು ಕಂಡುಕೊಂಡವನೇ ಕಣ್ಣುಕಾಣುವ ಜ್ಞಾನಿ; ಭುವಿಯಲ್ಲಿ ಓಡಾಡುವ ಜೀವಿಯ ಗತಿಯನ್ನು ಅರಿತುಕೊಂಡು, ಆತನನ್ನು ದಿವಿಗೆ ಒಯ್ಯಬೇಕಾಗಿದೆ. ಅಂತರ್ದೃಷ್ಟಿಯನ್ನು ತಾ ಹೊಂದಿದವನಾಗಿ, ಅದಿಲ್ಲದವನನ್ನು ತಾನೊಯ್ಯಬೇಕು.ಇದುವೇ ಗುರು-ಕಾರ್ಯ."
ಉತ್ತಮವಾದ ಉಪನಿಷದುಪಮಾನವನ್ನು "ದುರ್ಗತಿಗೀಡಾಗುವುದರ ಬಗ್ಗೆ ಎಚ್ಚರಿಕೆ"ಗಾಗಿಯೇ ಬೇರೆಯವರೆಲ್ಲಾ ಬಳಸಿರುವರಷ್ಟೆ? ಆದರೆ, ಇದನ್ನೇ ಒಂದು ವ್ಯತಿರೇಕ-ದೃಷ್ಟಾಂತವಾಗಿ ಶ್ರೀರಂಗಮಹಾಗುರುಗಳು ಬಳಸಿದ್ದಾರೆ: ಸ್ವ-ತಪಸ್ಸಿನಿಂದ ಒಳಗಣ್ಣು ತೆರೆದುಕೊಂಡಿರುವ ಜ್ಞಾನಿ-ಗುರುವು, ಹೇಗೆ ಶಿಷ್ಯರ ಒಳಗಣ್ಣನ್ನು ತೆರೆಯಿಸಿ ಸದ್ಗತಿಗೊಯ್ಯುವನು? - ಎಂಬುದನ್ನು ತಿಳಿಸುವ ಸಲುವಾಗಿ.
ಹೀಗೆ ಈ ಯೋಗಿವರ್ಯರು ಸುಮಾರ್ಗ-ಬೋಧನೆಗಾಗಿ, ಗುರುವಿನ ಗುರುತರ ಜವಾಬ್ದಾರಿಯ ನಿದರ್ಶನಕ್ಕಾಗಿ, ಇದೇ ದೃಷ್ಟಾಂತವನ್ನು ಬಳಸಿರುವ ಬಗೆಯಲ್ಲೇ ಒಂದು ವಿಶಿಷ್ಟವಾದ ಔಚಿತ್ಯವಿದೆಯಲ್ಲವೇ?