Thursday, June 6, 2019

ಆಹಾ! ಆ ಕಂಗಳ ಸೊಬಗು (Ahaa! Aa kangala sobagu)

ಲೇಖಕರು: ಡಾ. ಆರ್. ಮೋಹನ


ಶ್ರೀರಂಗಂ ರಂಗನಾಥಸ್ವಾಮಿ ದೇವಾಲಯದ ಪ್ರಾಕಾರದಲ್ಲಿ ಸ್ವಾಮಿಯ ಉತ್ಸವ ಹೊರಟಿತ್ತು. ಗರುಡವಾಹನನಾಗಿ ಕಂಗೊಳಿಸುತ್ತಿರುವ ನಾರಾಯಣನ ದರ್ಶನಕ್ಕಾಗಿ ಎಲ್ಲರೂ ಹಾತೊರೆಯುತ್ತಿದ್ದರು. ಒಬ್ಬರಮೇಲೊಬ್ಬರು ಎದ್ದು ಬಿದ್ದು ಅತ್ತಣಿಂದ ಇತ್ತಣಿಂದ ಇಣುಕಿ ನೋಡುತ್ತಿದ್ದರು. ಆದರೆ ಒಬ್ಬ ಮಹಾಶಯ - ಧನುರ್ದಾಸ  ಉತ್ಸವ-ವಿಮುಖನಾಗಿ ತನ್ನದೇ ಲೋಕದಲ್ಲಿದ್ದ. ಕೈಲಿ ಛತ್ರ ಚಾಮರಗಳನ್ನು ಧರಿಸಿ ಒಬ್ಬ ಸುಂದರಸ್ತ್ರೀಯ ಸೇವೆಯಲ್ಲಿ ನಿರತನಾಗಿದ್ದ. ಅವಳ ಮುಖಸೌಂದರ್ಯವನ್ನೇ ಆಲಿಸುತ್ತ, ಸುತ್ತಲೂ ತನ್ನನ್ನು ನೋಡಿ ನಗಾಡುತ್ತಿರುವ ಜಗತ್ತು ಅವನ ಗಮನಕ್ಕೆ ಬಂದೆ ಇರಲಿಲ್ಲ. ‘ಇಂಥ ಕಾಮುಕ ಉಂಟೆ?‘ ಎಂದು ಎಲ್ಲರೂ ಅಂದುಕೊಂಡರು. ಅಲ್ಲೇ ಇದನ್ನು ಗಮನಿಸುತ್ತಾ ಭಕ್ತಶ್ರೇಷ್ಠರಾದ ರಾಮಾನುಜಾಚಾರ್ಯರೂ ನಿಂತಿದ್ದರು. ಶಿಷ್ಯನೊಬ್ಬನನ್ನು ಕಳುಹಿಸಿ ಧನುರ್ದಾಸನನ್ನು ಕರೆತರಲು ಹೇಳಿದರು. ‘ನಿನಗೆ ಆಕೆಯಲ್ಲಿ ಏನಪ್ಪಾ ಕಾಣಿಸಿತು? ಜನಸಮೂಹದ ಛೀ - ಥೂ ಗಳನ್ನೂ ನಿರ್ಲಕ್ಷಿಸಿ ಅವಳಲ್ಲೆ ತಲ್ಲೀನನಾಗಿದ್ದೀಯೆ ?’ ಎಂದು ವಿಚಾರಿಸಿದರು. ‘ಸ್ವಾಮೀ, ಆಕೆಯ ಕಣ್ಣುಗಳಲ್ಲಿ  ಅಸಾಧಾರಣ ಸೌಂದರ್ಯವಿದೆ. ನಾನದನ್ನು ಬಿಟ್ಟಿರಲಾರೆ’ ಎಂದು ಸತ್ಯವನ್ನು ನುಡಿದನು. ರಾಮಾನುಜರು  ‘ಹಾಗಾದರೆ, ಇದಕ್ಕಿಂತಲೂ ಸುಂದರವಾದ ಕಣ್ಣುಗಳನ್ನು ತೋರಿಸಿದರೆ ನನ್ನ ಜೊತೆ ಬರುತ್ತೀಯಾ ?’ ಎಂದರು. ‘ಖಾಂಡಿತ ‘ ಎಂದನು .

ಅಂದು ಸಂಜೆ ಆಚಾರ್ಯರು, ಧನುರ್ದಾಸ ಇಬ್ಬರೂ ರಂಗನಾಥನ ದೇವಾಲಯದ ಕಡೆಗೆ  ಹೊರಟರು. ಒಂದೊಂದಾಗಿ ಪ್ರಾಕಾರವನ್ನು ದಾಟಿ ಗರ್ಭಗುಡಿ ಪ್ರವೇಶಿಸಿದರು. ಸಂಜೆಯ ಆರತಿಯ ವೇಳೆಯಾಗಿತ್ತು. ಕತ್ತಲೆಯ ಗವಿಯೊಳು ಕರ್ಪೂರದಾರತಿಯ ಹೊಂಬೆಳಕು ಒಂದೇ ಕಂಗೊಳಿಸುತ್ತಿತ್ತು. ಆರತಿಯನ್ನು ಪ್ರದಕ್ಷಿಣವಾಗಿ ತಿರುಗಿಸಿದಾಗ ಭಗವಂತನ ಅಂಗಾಂಗಗಳು ಗೋಚರವಾದವು. ಮಂತ್ರಘೋಷ, ಘಂಟಾನಾದಗಳು ಮೊಳಗುತ್ತಿದ್ದವು. ಗರ್ಭಗುಡಿಯಲ್ಲಿ ಆ ನಾದ ಉದ್ಘೋಷಿಸಲು, ಹೊಂಬೆಳಕೊಮ್ಮೆ ಶೇಷ ಸರ್ಪದ ಮೇಲೆ ಯೋಗಶಯನದಲ್ಲಿ ಪವಡಿಸಿದ ರಂಗನಾಥನ ಕಣ್ಣುಗಳನ್ನು ಪ್ರತ್ಯಕ್ಷಗೊಳಿಸಿದವು. ಅರಳುತ್ತಿರುವ ಕಮಲದಂತೆ ಅರೆತೆರೆದು ಆ ಕಣ್ಣುಗಳು ಹೊಂಬೆಳಕಿನಲ್ಲಿ ಮಿಂಚಿದವು.  ಕ್ಷಣಾರ್ಧದಲ್ಲಿ ಹಾದು ಹೋದ ಆ  ಚಿತ್ರವು ಧನುರ್ದಾಸನ ಹೃನ್ಮನಗಳಲ್ಲಿ ಆಳವಾದ ಅಚ್ಚನ್ನೊತ್ತಿದವು. ಕಣ್ಣಲ್ಲಿ ಧಾರಾಕಾರವಾಗಿ ಆನಂದಭಾಷ್ಪವು ಹರಿಯ ತೊಡಗಿದವು. ಅಂದಿನಿಂದ ಧನುರ್ದಾಸ ಮತ್ತು ಅವನ ಆಕೆ ಭಗವಂತನ ಮಹಾಭಕ್ತರಾದರು.   

ಸೃಷ್ಟಿಯಲ್ಲಿ ಯಾವುದೂ ಪೂಜ್ಯ  ಅಥವಾ ತ್ಯಾಜ್ಯವೆಂದಿರುವುದಿಲ್ಲ. ಜಾಣ್ಮೆಯಿಂದ ಧ್ಯೇಯಸಿದ್ಧಿಗೆ  ಬಳಸಿಕೊಂಡರೆ  ಎಲ್ಲವೂ ಉತ್ಕೃಷ್ಟವೇ  ಸರಿ. ಸೌಂದರ್ಯವನ್ನು ನೋಡಿ ಮೈಮರೆವ ಕಾಮುಕನಲ್ಲಿ ಭಗವದ್ರಸದ ರಸಿಕನನ್ನು ಕಾಣಬೇಕಾದರೆ ರಾಮಾನುಜಾಚಾರ್ಯರಂಥಹ ಯೋಗಿಪುರುಷರಿಂದಲೇ ಸಾಧ್ಯ. ಸೃಷ್ಟಿಯಲ್ಲಿ ಮೈ ಮರೆತು ದೈವೀ ಅನುಭವವನ್ನು ಪಡೆಯುವ ನಾನಾ ಸಂಗತಿಗಳಿವೆ ಎಂದು ಜ್ಞಾನಿಗಳಾದ ಶ್ರೀರಂಗ ಮಹಾಗುರುಗಳು ತಿಳಿಸಿದ್ದರು. ಲೌಕಿಕ ಸೌಂದರ್ಯದ ರಸಿಕನಾದರೆ ಕಾಮುಕ. ದೈವೀ  ಸೌಂದರ್ಯದಲ್ಲಿ ಅದೇ ಆಸಕ್ತಿ ಮೂಡಿಬಂದರೆ ಪರಮ ಭಕ್ತ, ಭಾಗವತನಾಗುತ್ತಾನೆ. ಅಂಥಹ ದರ್ಶನಗಳನ್ನು ಒದಗಿಸಿ ಕೊಡುವ ಸ್ಥಾನಗಳೇ ದೇವಾಲಯಗಳು. ಅಲ್ಲಿನ ಸನ್ನಿವೇಶ ಹೇಗೆ ಕಲ್ಪಿಸಿದೆ ನೋಡಿ ! ಭಗವಂತನ ದಿವ್ಯ ದರ್ಶನದ  ಜೊತೆಗೆ ಘಂಟಾನಾದ, ಆ ಹೊಂಬೆಳಕು, ಮಂತ್ರಘೋಷ, ಶಂಖ-ಜಾಘಂಟೆಗಳ ಗುಂಗು ಎಲ್ಲವೂ ಸೇರಿ ನಮ್ಮನ್ನು ಈ ಪ್ರಪಂಚದಿಂದ ಹಾರಿಸಿ ಒಳ ಆನಂದದ ಕಡೆಗೆ ಕರೆತರುತ್ತವೆ.

ಸೂಚನೆ:  06/06/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.