ಲೇಖಕರು: ನಾಗರಾಜ ಗುಂಡಪ್ಪ
ಈ ಹಿನ್ನೆಲೆಯಲ್ಲಿ ಒಂದೆರಡು ಆಕ್ಷೇಪಣೆಗಳು ಮತ್ತು ಕುಚೋದ್ಯಗಳು ಕೇಳಿ ಬರುವುದುಂಟು. ನಾವು ಸಮರ್ಪಣೆ ಮಾಡುವ ಭಕ್ಷ್ಯವನ್ನು ದೇವರೇನು ಬಂದು ತಿನ್ನುತ್ತಾನಾ? ಅದನ್ನು ತಿನ್ನುವುದು ನಾವೇ! ಆದುದರಿಂದ ನೈವೇದ್ಯ ಎಂದು ಮಾಡುವುದು ನಮ್ಮ ಆಸೆಯನ್ನು ಪೂರೈಸಿಕೊಳ್ಳುವುದಕ್ಕಾಗಿಯೇ ಹೊರತು ಅದರಲ್ಲಿ ದೇವರಿಗೆ ಸಲ್ಲುವ ಅಂಶವೇನಿಲ್ಲಾ ಎನ್ನುವುದು ಒಂದು ಆಕ್ಷೇಪಣೆಯಾದರೆ, ಇದರ ಮುಂದುವರಿಕೆಯಾಗಿ ಇಂತಹಾ ಭಕ್ಷ್ಯ ಇಂತಹಾ ದೇವರಿಗೆ ಪ್ರಿಯ ಎನ್ನುತ್ತೇವಲ್ಲಾ ಅದು ಹೇಗೆ? ಆ ದೇವರೇನು ಬಂದು ತಿನ್ನುವುದಿಲ್ಲ; ಆದುದರಿಂದ ನಮಗಿಷ್ಟವಾದ ತಿಂಡಿಗಳನ್ನು ಮಾಡಿಕೊಂಡು ತಿನ್ನುವುದಕ್ಕೆ ನಾವು ದೇವರ ಹೆಸರನ್ನು ಬಳಸಿಕೊಳ್ಳುತ್ತಿದ್ದೇವೆ ಎನ್ನುವುದು ಮತ್ತೊಂದು ಆಕ್ಷೇಪಣೆ. ಹೀಗೆ ನೈವೇದ್ಯ ಹಾಗೂ ಪ್ರಸಾದದ ಬಗ್ಗೆ ಅಸಡ್ಡೆ ಬೆಳೆಯುವ ಚಿಂತನೆ ಒಂದು ಕಡೆ ಬೆಳೆಯುತ್ತಿದ್ದರೆ, ಅದಕ್ಕೆ ಉತ್ತರ ಕೊಡುವ ಚಿಂತನೆಗಳು ಸಾಕಷ್ಟು ಕಾಣುತ್ತಿಲ್ಲ. ಆದುದರಿಂದ ನೈವೇದ್ಯ ಎನ್ನುವ ಪೂಜಾಂಗದ ಹಿಂದಿರುವ ವಿಜ್ಞಾನ ಏನು? ಅದು ಹೇಗೆ ಒಂದು ಯುಕ್ತವಾದ ಪೂಜಾಂಗ ಎಂದು ವಿಶ್ಲೇಷಿಸುವ ಅಗತ್ಯ ಇದೆ.
ಭಾರತೀಯ ಸಂಸ್ಕೃತಿಯ ಬಹಳಷ್ಟು ವಿಷಯಗಳಲ್ಲಿ ಪದದ ವಿಶ್ಲೇಷಣೆಯೇ ಅರ್ಥದ ವಿಶ್ಲೇಷಣೆಯನ್ನೂ ಕೊಡುತ್ತದೆ. ನೈವೇದ್ಯ ಪದವೇ ಏನು ಹೇಳುತ್ತದೆ ಎಂದು ನೋಡಿದರೆ, ಯಾವುದು ನಿವೇದಿಸಲ್ಪಡುತ್ತದೆಯೋ ಅದು ನೈವೇದ್ಯ. ನಿವೇದನೆ ಎಂದರೆ ಅರಿಕೆ, ದೇವರ ಮುಂದೆ ಒಂದು ವಿಷಯವನ್ನು ಅರಿಕೆ ಮಾಡುವುದು ನಿವೇದನೆ. ಈ ನೇರದಲ್ಲಿ, ನೈವೇದ್ಯ ಎನ್ನುವ ಪೂಜಾಂಗ ಏನು? ಅಲ್ಲಿ ಏನು ನಿವೇದನೆ ಮಾಡುತ್ತೇವೆ ಎಂದರೆ,ಅಪ್ಪಾ! ಇದು ನೀನು ಒದಗಿಸಿರುವ ಪದಾರ್ಥ, ಇದು ನಿನ್ನದೇ ಎಂದು ಅವನಿಗೆ ಒಪ್ಪಿಸುವ ಅಥವಾ ಮಾಡುವ ಸಮರ್ಪಣೆಯೇ ನಿವೇದನೆ. ಪ್ರಪಂಚದಲ್ಲಿ ಉತ್ಪತ್ತಿಯಾಗುವ ಆಹಾರವೆಲ್ಲಾ ನಮಗೆ ಭಗವಂತನ ಕೊಡುಗೆಯೇ ಆಗಿದೆ. ರೈತನೊಬ್ಬ ಬೆಳೆ ಬೆಳೆದರೂ ಬೆಳೆಸುವ ಸಾಮರ್ಥ್ಯ ಮಣ್ಣಿಗೂ ಹಾಗೂ ಬೆಳೆಯುವ ಧರ್ಮವನ್ನು ಬೀಜದಲ್ಲೂ ಇಟ್ಟಿದ್ದು ರೈತನಲ್ಲ; ಅದು ಪ್ರಕೃತಿಯ ಕೊಡುಗೆ ಅಥವಾ ಆ ಪ್ರಕೃತಿಗೂ ಒಡೆಯನಾದ ಭಗವಂತನ ಕೊಡುಗೆ. ಬೆಳೆಗೆ ಅವಶ್ಯಕವಾದ ಜಲ ಸಂಪತ್ತೂ ಸಹಾ ಮನುಷ್ಯನ ಸೃಷ್ಟಿಯಲ್ಲಾ! ನೀರಾವರಿ ಯೋಜನೆಯ ಮೂಲಕ ನದಿಯ ನೀರನ್ನು ಗದ್ದೆ, ತೋಟಗಳಿಗೆ ಹರಿಸುವಲ್ಲಿ ಮನುಷ್ಯ ಪ್ರಯತ್ನವಿದ್ದರೂ ಸಹಾ ನದಿಗೆ ನೀರು ಬರುವಲ್ಲಿ ಮನುಷ್ಯನ ಪಾತ್ರವಿಲ್ಲ. ಹೀಗೆ ಕೃಷಿಭೂಮಿಯಿಂದ ಹಿಡಿದು ನಮಗೆ ಆಹಾರ ರೂಪದಲ್ಲಿ ಅದು ಬರಬೇಕಾದರೆ ಉದ್ದಕ್ಕೂ ಭಗವಂತನ ಕೃಪೆ ಹಾಗೂ ಪಾತ್ರ ಇದ್ದೇ ಇದೆ. ಆದುದರಿಂದ ಭಗವಂತನದೇ ಆದ ಪದಾರ್ಥವನ್ನು ಅವನದ್ದೇ ಎಂದು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುವುದೇ ನಾವು ಮಾಡುವ ನಿವೇದನೆ. ಹೀಗೆ ನಿವೇದನೆ ಮಾಡಿದಾಗ, ಭಗವಂತ ಆ ಆಹಾರ ಪದಾರ್ಥದಲ್ಲಿರುವ ಸೂಕ್ಷ್ಮಾಂಶವನ್ನು ಸ್ವೀಕರಿಸುತ್ತಾನೆ ಮತ್ತು ಆಗ ನಿವೇದಿತ ಪದಾರ್ಥವು ಪ್ರಸಾದವಾಗುತ್ತದೆ. ಭಗವಂತನಿಗೆ ಸಮರ್ಪಿಸಿದಾಗ, ಆ ಪದಾರ್ಥದಲ್ಲಿ ಭಗವಂತನ ಒಂದು ಶಕ್ತಿ ಹರಿದು, ಸೇವಿಸಿದವರಿಗೆ ಒಂದು ಪ್ರಸನ್ನತೆಯುಂಟು ಮಾಡುತ್ತದೆ.
ಇದು ನೈವೇದ್ಯ ಎನ್ನುವ ಪೂಜಾಂಗದ ಹಿನ್ನೆಲೆ. ಇನ್ನು ಭಗವಂತ ಬಂದು ತಿನ್ನುತ್ತಾನೆಯೇ ಎನ್ನುವ ಆಕ್ಷೇಪಣೆಗೆ ಉತ್ತರ ಕೊಡುವುದಾದರೆ, ಈ ಪೂಜಾಂಗದ ಉದ್ದೇಶದಲ್ಲಿಯೇ ನಾವು ಈ ಭಕ್ಷ್ಯವನ್ನು ದೇವರಿಗೆ ತಿನ್ನಿಸುತ್ತೇವೆ ಎನ್ನುವ ಅಭಿಪ್ರಾಯವಿಲ್ಲ. ಉದಾಹರಣೆಗೆ, ದೇವರಿಗೆ ಹಾಲಿನ ಅಭಿಷೇಕ ಮಾಡಬೇಕಾದರೆ, ಪೂಜೆ ಮಾಡುವವರು "ಕ್ಷೀರೇಣ ಸ್ನಪಯಾಮಿ" (ಹಾಲಿನಿಂದ ಸ್ನಾನ ಮಾಡಿಸುತ್ತೇನೆ) ಎಂದು ಹೇಳಿ ನಂತರ ಮೂರ್ತಿಯ ಮೇಲೆ ಹಾಲಿನ ಧಾರೆಯನ್ನು ಎರೆಯುತ್ತಾರೆ. ಆದರೆ ಭಕ್ಷ್ಯವನ್ನು ದೇವರ ಮುಂದಿಟ್ಟು "ಭಕ್ಷ್ಯಂ ಖಾದಯಾಮಿ" (ಭಕ್ಷ್ಯವನ್ನು ತಿನ್ನಿಸುತ್ತೇನೆ) ಎಂದು ಹೇಳುವುದಿಲ್ಲ. ಬದಲಾಗಿ "ಭಕ್ಷ್ಯಂ ನಿವೇದಯಾಮಿ" ಅಥವಾ "ಸಮರ್ಪಯಾಮಿ" ಎಂದು ಹೇಳುತ್ತಾರೆ. ಆದುದರಿಂದ ನೈವೇದ್ಯವೆಂಬ ಪೂಜಾಂಗದಲ್ಲಿ ದೇವರು ಬಂದು ಅದೆಲ್ಲವನ್ನೂ ತಿನ್ನುತ್ತಾನೆ ಎನ್ನುವ ನಿರೀಕ್ಷೆಯಿಲ್ಲ. ಎರಡನೆಯದಾಗಿ, ಆಹಾರದ ಸೂಕ್ಷ್ಮಾಂಶವನ್ನು ಭಗವಂತನು ಪರಿಗ್ರಹಿಸುವುದರಿಂದ ನೈವೇದ್ಯ ನಿರರ್ಥಕವಾದ ಆಚರಣೆಯಲ್ಲಾ.
ದೇವರು ನೈವೇದ್ಯವನ್ನು ಬಂದು ತಿನ್ನದೇ ಇರುವುದರಿಂದ, ಇಂತಹಾ ದೇವತೆಗೆ ಇಂತಹಾ ಭಕ್ಷ್ಯ ಪ್ರಿಯ ಎನ್ನುವುದರ ಮರ್ಮವೇನು ಎನ್ನುವ ಪ್ರಶ್ನೆ ಉಳಿಯುತ್ತದೆ. ಇದಕ್ಕೆ ಉತ್ತರ ಸಿಗಬೇಕೆಂದರೆ, ಶ್ರೀರಂಗ ಮಹಾಗುರುಗಳು ನಾಡೀ ವಿಜ್ಞಾನದ ಆಧಾರದಿಂದ ಕೊಟ್ಟಿರುವ ನೋಟವನ್ನು ಅವಲಂಬಿಸಿ ಮೊದಲಿಗೆ ದೇವತಾ ಪ್ರೀತಿ ಎಂದರೇನು? ಆ ದೇವತೆಯ ಅನುಗ್ರಹ ಎಂದರೇನು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ.ನಾವು ಆರಾಧನೆ ಮಾಡುವ ದೇವತೆಗಳು ನಮ್ಮ ಒಳಗೇ ಬೇರೆ ಬೇರೆ ಸ್ಥಾನಗಳಲ್ಲಿ ಇರುವ ಶಕ್ತಿಗಳು. ಆಯಾ ದೇವತೆಯ ಶಕ್ತಿ ನಮ್ಮ ನಾಡಿಗಳ ಮೂಲಕ ಹರಿದಾಗ ನಮ್ಮ ದೇಹ, ಮನಸ್ಸು, ಬುದ್ಧಿಗಳ ಮೇಲೆ ವಿಶೇಷ ಪರಿಣಾಮವುಂಟಾಗುತ್ತದೆ. ಅಂದರೆ ನಮ್ಮ ದೇಹೇಂದ್ರಿಯ, ಮನಸ್ಸು ಬುದ್ಧಿಗಳಲ್ಲಿ ಒಂದು ಪ್ರಸನ್ನತೆ ಹಾಗೂ ಶಾಂತಿ ಉಂಟಾಗಿ ವಿಶೇಷ ಸಾಮರ್ಥ್ಯಗಳು ಕೂಡಿಬರತ್ತದೆ ಮತ್ತು ಹಾಗಾದಾಗ ಆ ದೇವತೆಯ ಪ್ರೀತಿ ಉಂಟಾಯಿತು ಅಥವಾ ಅನುಗ್ರಹ ಆಯಿತು ಎಂದು ಹೇಳುತ್ತೇವೆ. ನಾವು ಮಾಡುವ ಆರಾಧನೆಯಲ್ಲಿ, ಬಳಸುವ ಪದಾರ್ಥಗಳು, ಮಂತ್ರಗಳು, ಆ ಮೂರ್ತಿಯ ಆಕಾರ ಎಲ್ಲವೂ ಸಹಾ ನಮ್ಮ ಮನಸ್ಸು ಹಾಗೂ ಪ್ರಾಣಶಕ್ತಿಯು ನಾಡಿಗಳ ಮೂಲಕ ಹರಿದು ಆರಾಧಿತ ದೇವತೆಯ ಸ್ಥಾನವನ್ನು ತಲಪುವುದಕ್ಕೆ ಪೋಷಕವಾಗಿರುತ್ತದೆ. ನಮ್ಮ ಮನಸ್ಸು ಹಾಗೂ ಪ್ರಾಣಗಳು ಆ ದೇವತಾ ಕೇಂದ್ರವನ್ನು ತಲುಪಿದಾಗ ಅಲ್ಲಿನ ಬಾಗಿಲು ತೆರೆದು ಆ ದೇವತೆಯ ಶಕ್ತಿಯು ಶರೀರದಲ್ಲಿ ಹರಿದಾಗ ಅದು ನಮ್ಮ ಮೇಲೆ ವಿಶೇಷ ಪರಿಣಾಮವುಂಟಾಗಿ ದೇವತೆಯ ಅನುಗ್ರಹವು ಉಂಟಾಯಿತು ಎನ್ನುತ್ತೇವೆ. ನಾವು ಬಳಸಿದ ಪದಾರ್ಥಗಳು, ಮಾಡಿದ ಪೂಜೆ ಎಲ್ಲವೂ ಆ ದೇವತೆಗೆ ಪ್ರೀತಿಯಾಯಿತು ಎನ್ನುತ್ತೇವೆ. ಇದೇ ನೇರದಲ್ಲಿ ಯಾವ ಭಕ್ಷ್ಯಗಳನ್ನು ಪ್ರಸಾದ ರೂಪದಲ್ಲಿ ಸೇವಿಸಿದಾಗ ಅದು ಪ್ರಾಣಶಕ್ತಿಯು ಯಾವ ದೇವತಾಕೇಂದ್ರದ ಕಡೆಗೆ ಹರಿಯುವುದಕ್ಕೆ ಪೋಷಣೆಯನ್ನು ನೀಡುತ್ತದೆಯೋ ಆ ದೇವತೆಗೆ ಆ ಭಕ್ಷ್ಯ ಪ್ರಿಯ ಎಂದು ಪರಿಗಣಿಸಲ್ಪಡುತ್ತದೆ. ಅಂದರೆ, ಭಕ್ಷ್ಯವನ್ನು ಪ್ರಸಾದರೂಪದಲ್ಲಿ ಭಕ್ತರು ಸೇವಿಸಿದಾಗ ತಮ್ಮೊಳಗೆ ಇರುವ ದೇವತಾ ಕೇಂದ್ರಕ್ಕೆ ತಲುಪಿ ಆ ದೇವತೆಯ ಅನುಗ್ರಹಕ್ಕೆ ಪಾತ್ರರಾಗುವುಂತೆ ಆಗುವುದರಿಂದ ಆಯಾ ಭಕ್ಷ್ಯಗಳನ್ನು ಆಯಾ ದೇವತೆಗಳಿಗೆ ಪ್ರಿಯ ಎನ್ನುವ ರೂಢಿ ಬಂದಿದೆ.
ಆದುದರಿಂದ ನೈವೇದ್ಯ ಎನ್ನುವ ಪೂಜಾಂಗ ನಿರರ್ಥಕವಲ್ಲಾ; ಅದು ಬಹಳ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕಾದಂತಹ ವಿಜ್ಞಾನದ ಹಿನ್ನೆಲೆಯುಳ್ಳದ್ದಾಗಿದ್ದು ಆರಾಧಕರಿಗೆ ಭೌತಿಕ, ದೈವಿಕ, ಅಧ್ಯಾತ್ಮಿಕ ಪ್ರಯೋಜನಗಳನ್ನು ಕೊಡುವಂತಹಾ, ಸಾರ್ಥಕವಾದ ಆಚರಣೆಯಾಗಿದೆ.