ಲೇಖಕರು: ತಾರೋಡಿ ಸುರೇಶ
ಷೋಡಶ ಸಂಸ್ಕಾರಗಳಲ್ಲಿ ವಿವಾಹ ಸಂಸ್ಕಾರವು ಎಲ್ಲರಿಗೂ ಸುಪರಿಚಿತ. ಅತ್ಯಂತ ವೈಭವದಿಂದ ನಡೆಯುತ್ತದೆ ಕೂಡ. ಭಾರತದಲ್ಲಿ ಮಾತ್ರವೇ ಇದನ್ನು ಸಂಸ್ಕಾರವೆಂದು ಕರೆಯುವುದು. ಮಹರ್ಷಿಗಳು ಭಾರತದಲ್ಲಿ ವಿವಾಹಪದ್ಧತಿಯನ್ನು ವಿಶೇಷವಾದ ರೀತಿಯಲ್ಲಿ ಅಳವಡಿಸಿಕೊಟ್ಟಿದ್ದಾರೆ. ತನ್ನ ಮೌಲಿಕವಾದ ಸತ್ವದಿಂದ ಇಂದು ಜಾರಿದ್ದರೂ ಅದರ ಅನೇಕ ಅವಶೇಷಗಳನ್ನು ನಮ್ಮ ದೇಶದ ವಿವಾಹದ ಆಚರಣೆಯಲ್ಲಿ ಇಂದಿಗೂ ನೋಡಬಹುದು. ಕೊಳೆಯನ್ನು ತೊಳೆದು ಹೊಳೆಯುವಂತೆ ಮಾಡಿ ಮೌಲಿಕ ರೂಪಕ್ಕೆ ತರುವುದೇ ಸಂಸ್ಕಾರ. ದೇಹವನ್ನು ಸ್ನಾನದಿಂದ ಶುದ್ಧವಾಗಿಟ್ಟುಕೊಳ್ಳುತ್ತೇವೆ. ಹಾಗೆಯೇ ಅಂತಕರಣಗಳಾದ ಮನೋಬುದ್ಧಿಗಳನ್ನು ಶುದ್ಧಗೊಳಿಸುವ ಕರ್ಮಗಳನ್ನು ಸಂಸ್ಕಾರವೆಂದು ಕರೆಯಲಾಗಿದೆ. ಅಂತಹ ಸಂಸ್ಕಾರವನ್ನು ಕೊಟ್ಟು ಶುದ್ಧಿಯನ್ನು ತಂದುಕೊಂಡಾಗ ಅವು ಪರಮಾತ್ಮದರ್ಶನವನ್ನು ಮಾಡಿಸುತ್ತವೆ. ಈ ವಿವಾಹವೂ ಅಂತಹ ಒಂದು ಸಂಸ್ಕಾರವಾಗಿದೆ.
ವಿವಾಹವನ್ನು ಎಂಟು ಬಗೆಯಲ್ಲಿ ವರ್ಗೀಕರಿಸಿದ್ದಾರೆ. ಭಗವಂತನ ಆಶಯವನ್ನು ಅರಿತು ಅದಕ್ಕನುಗುಣವಾಗಿ ನಡೆಸುವ ವಿವಾಹಕ್ಕೆ ಬ್ರಾಹ್ಮವಿವಾಹವೆಂದು ಹೆಸರು. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಬ್ರಾಹ್ಮವಿವಾಹವೇ ನಡೆಯುವಂತಹದ್ದು. ದೈವ, ಪ್ರಾಜಾಪತ್ಯಾ ಆರ್ಷ,ಆಸುರ, ಗಾಂಧರ್ವ,ರಾಕ್ಷಸ ಮತ್ತು ಪೈಶಾಚ ಎಂದು ಅನ್ಯ ಏಳು ವಿವಾಹಗಳೂ ಉಂಟು. ಉದ್ವಾಹ, ಪರಿಣಯ, ಉಪಯಮ, ಪಾಣಿಗ್ರಹಣ ಇತ್ಯಾದಿಗಳು ವಿವಾಹಕ್ಕೆ ನಮ್ಮ ದೇಶದಲ್ಲಿ ಬಳಸುವ ಅನ್ಯ ಮಂಗಳ ಹೆಸರುಗಳು. ಅನ್ಯದೇಶಗಳಲ್ಲಿ ಕೇವಲ ಇಂದ್ರಿಯಸುಖಕ್ಕಾಗಿ ವಿವಾಹವೆಂಬ ವ್ಯವಹಾರವಿದೆ. ಆದರೆ ಮಹರ್ಷಿಗಳು ತಮ್ಮ ಭಾವವನ್ನು ವ್ಯಕ್ತಪಡಿಸಲು ಬಹಳ ಯೋಗ್ಯವಾದ ಪದಗಳನ್ನು ಬಳಸಿದ್ದಾರೆ.ಅವು ಇಂದ್ರಿಯಸುಖದ ಜೊತೆಯಲ್ಲಿ ಬದಕನ್ನು ಪರಮಾರ್ಥದಲ್ಲಿ ನಿಲ್ಲಿಸುವ ಅತೀಂದ್ರಿಯ ಸುಖವೆರಡನ್ನೂ ಒಳಗೊಳ್ಳುತ್ತದೆ. ಪರಬ್ರಹ್ಮದ ಸಂಕಲ್ಪಕ್ಕೆ ಅನುಗುಣವಾಗಿ ನಡೆಯುವಂತಹದ್ದಾದ್ದರಿಂದ ಬ್ರಾಹ್ಮವಿವಾಹ ಎನ್ನಿಸಿದೆ. ಎಂಟು ವಿವಾಹಗಳಲ್ಲಿ ಇದು ಅತ್ಯಂತ ಶ್ರೇಷ್ಠವಾದುದು. ಇದು ಬ್ರಹ್ಮಪ್ರಾಪ್ತಿಯನ್ನೇ ಜೀವನದ ಮಹಾಧ್ಯೇಯವಾಗಿ ಹೊಂದಿದೆ. ಉಳಿದ ವಿವಾಹಗಳು ಎಲ್ಲಕ್ಕೂ ಮೂಲನಾಗಿರುವ ಬ್ರಹ್ಮವನ್ನು ಬಿಟ್ಟು ಮಧ್ಯದಲ್ಲಿ ಪ್ರಾರಂಭವಾಗುತ್ತವೆ.
ಒಂದು ಗಿಡವನ್ನು ಬೆಳೆಸಲು ಕೆಲವರು ಎಲೆಗಳಿಗೆ ನೀರೆರದರೆ ಇನ್ನು ಕೆಲವರು ಕಾಂಡಕ್ಕೆ ಹಾಕುತ್ತಾರೆ.ಆದರೆ ಬೇರಿಗೆ ನೀರು ಹಾಕಿದಾಗ ತಾನೇ ವೃಕ್ಷವು ಬೆಳೆಯುತ್ತದೆ. ಹಾಗೆ ಜೀವನದ ಮೂಲದಲ್ಲಿ ಬೆಳಗತ್ತಿರುವ ಪರಬ್ರಹ್ಮರೂಪವಾದ ಬೇರನ್ನು ಸೇರುವಂತೆ ನಡೆಸುವ ವಿಧಾನವನ್ನೊಳಗೊಂಡಿದ್ದರಿಂದ ಬ್ರಾಹ್ಮವಿವಾಹವು ಶ್ರೇಷ್ಠವಾದದ್ದು. ಜೊತೆಗೆ ಧರ್ಮಾರ್ಥಕಾಮಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನೂ ಇದು ಕೂಡಿಸಿಕೊಡುತ್ತದೆ.
ವಿಶೇಷವಾದ ಮನೋಧರ್ಮದಿಂದ ಒಯ್ಯುವಿಕೆ, ವಿಶೇಷವಾದ ಸಂಕಲ್ಪದಿಂದ ಒಯ್ಯುವಿಕೆಗೆ ವಿವಾಹವೆಂಬ ಹೆಸರು. “ನಾವು ಒಟ್ಟಿಗೆ ಸೇರೋಣ, ಸತ್ಸಂಕಲ್ಪ ಮಾಡೋಣ, ಒಳ್ಳೆಯ ಪ್ರೇಮದಿಂದ ಕೂಡಿರೋಣ, ಬೆಳಗೋಣ, ಸುಮನಸ್ಕರಾಗೋಣ ಎಂಬುದು ವಧೂವರರ ನಡುವೆ ಆಗುವ ಒಪ್ಪಂದ. ಅದಕ್ಕೋಸ್ಕರ ವರನು ವಧುವನ್ನು ತನ್ನ ಮನೆಗೆ ಒಯ್ಯುತ್ತಾನೆ. ಭಗವಂತನ ಆಶಯವನ್ನು ವಿಸ್ತಾರಗೊಳಿಸುತ್ತಾ ಪುನಃ ಭಗವಂತನನ್ನೇ ಸೇರುವ ಸಂಕಲ್ಪದಿಂದ ಭಗವಂತನನ್ನು ಪ್ರತಿನಿಧಿಸುವ ಅಗ್ನಿಯನ್ನು ಪ್ರದಕ್ಷಿಣೆ ಬರುವುದು ಪರಿಣಯ ಎನ್ನಿಸಿಕೊಳ್ಳುತ್ತದೆ. ಪಾಣಿಗ್ರಹಣವೆಂದರೆ ಕೈಯಲ್ಲಿ ಹಿಡಿದುಕೊಳ್ಳುವಿಕೆ. ಮೇಲ್ಮುಖವಾಗಿ ಮಾಡಿಕೊಂಡಿರುವ ವಧುವಿನ ಹಸ್ತವನ್ನು ತನ್ನ ಹಸ್ತದಿಂದ, ಇಬ್ಬರ ಅಂಗುಷ್ಟವೂ ಮೇಲೆ ಬರುವಂತೆ ಹಿಡಿದುಕೊಳ್ಳುವುದು. “ಊರ್ಧ್ವಂ ಗಚ್ಛಂತಿ ಸತ್ವಸ್ಥಾಃ”-ಎಂಬಂತೆ ನಮ್ಮ ಜೀವನವೆಲ್ಲ ಊರ್ಧ್ವಮುಖವಾಗಿರಲಿ ಎಂಬ ಸಂಕಲ್ಪವಿರುತ್ತದೆ. ಪಾಣಿಗ್ರಹಣ ಪ್ರಕ್ರಿಯೆಯಲ್ಲಿ ಪಂಚಭೂತಗಳನ್ನು ಪ್ರತಿನಿಧಿಸುವ ಐದು ಬೆರಳುಗಳ ಸೇರುವೆಯುಂಟಾಗಿ ಜೀವನದಲ್ಲಿ ಒಂದು ಐಕ್ಯವನ್ನು ಸಾಧಿಸಿಕೊಳ್ಳುವ ಭಾವವಿರುತ್ತದೆ. (ಮುಂದುವರೆಯುತ್ತದೆ)