Wednesday, June 26, 2019

ಅಂಟಿಲ್ಲದೆ ಕರ್ಮ ಮಾಡಲಾದೀತೆ? (Antillade karma maadalaadeete?)

ಲೇಖಕರು: ರಾಜಗೋಪಾಲನ್. ಕೆ. ಎಸ್


ಒಬ್ಬ ವೃದ್ಧ ಸಂನ್ಯಾಸಿ ಹಾಗೂ ಮತ್ತೊಬ್ಬ ಯುವ ಸಂನ್ಯಾಸಿ ನದೀ ತೀರದಲ್ಲಿ ಅನುಷ್ಠಾನದಲ್ಲಿದ್ದರು. ಯುವತಿಯೊಬ್ಬಳು ಕಾಲು ಜಾರಿ ನೀರಿನಲ್ಲಿ ಬಿದ್ದುಬಿಟ್ಟಳು. ಈಜುಬಾರದ ಆಕೆಯ ಕೂಗು ಸಂನ್ಯಾಸಿಗಳಿಗೆ ಕೇಳಿತು. ಬಿದ್ದವಳು ಯುವತಿ ಎಂದರಿತೊಡನೆಯೇ  ವೃದ್ಧ ಸನ್ಯಾಸಿ, ಸ್ತ್ರೀಸ್ಪರ್ಶ ಮಾಡಬಾರದೆಂಬ ತನ್ನ ವ್ರತಭಂಗವಾಗಬಾರದೆಂದು ತಟಸ್ಥನಾಗಿಬಿಟ್ಟ. ಅಸಹಾಯಕಳಾದ ಸ್ತ್ರೀಯ ಕೂಗಿಗೆ ಓಗೊಟ್ಟ ಯುವ ಸಂನ್ಯಾಸಿ ಒಡನೆಯೇ ನೀರಿಗೆ ಹಾರಿ ಆಕೆಯನ್ನು ಹೊತ್ತು ಸುರಕ್ಷಿತ ತಾಣಕ್ಕೆ ಬಿಟ್ಟು ಮತ್ತೆ ಅನುಷ್ಠಾನಕ್ಕಿಳಿದ. ಎಲ್ಲವನ್ನು ನೋಡುತ್ತಿದ್ದ ವೃದ್ಧ ಸನ್ಯಾಸಿಗೆ ಈ ತರುಣ ಸಂನ್ಯಾಸಿಯ ವರ್ತನೆಯಿಂದ ಕೋಪ ಉಕ್ಕೇರಿತು. ಆದರೂ ಏನನ್ನೂ ಮಾತನಾಡದೆ ಮೌನಕ್ಕೆ ಶರಣಾದ. ಹಾಗೂ ಹೀಗೂ ಮೂರು ದಿನಗಳಾದವು. ವೃದ್ಧ ಸನ್ಯಾಸಿಯ ಮೌನದ ಕಟ್ಟೆಯೊಡೆಯಿತು. “ಆದರೂ ನೀನು ಆ ಯುವತಿಯನ್ನು ಹೊತ್ತೊಯ್ಯಬಾರದಿತ್ತು” ಎಂದು ಕ್ರೋಧದಿಂದ ಉದ್ಗರಿಸಿದ. ತರುಣ ಸಂನ್ಯಾಸಿ ಒಮ್ಮೆ ವೃದ್ಧ ಸನ್ಯಾಸಿಯನ್ನು ದಿಟ್ಟಿಸಿ ನೋಡಿದ. “ಯಾರು ಆಕೆಯನ್ನು ಹೊತ್ತಿರುವುದು? ಅವಳನ್ನು ನಾನು ಅಂದೇ ಕೆಳಗಿಳಿಸಿಯಾಯಿತಲ್ಲ” ಎಂದ. ವೃದ್ಧ ಸನ್ಯಾಸಿಗೆ ಅರಿವಾಯಿತು--ಮೂರೂ ದಿವಸಗಳಿಂದ ಮಾನಸಿಕವಾಗಿ ಆ ತರುಣಿಯನ್ನು ಹೊತ್ತಿರುವುದು ತಾನೇ ಎಂದು. ಎಚ್ಚೆತ್ತುಕೊಂಡ. 

ಮಹಾತ್ಮರು ನಮ್ಮಂತೆಯೇ ವ್ಯವಹಾರ ಮಾಡುವ ಹಾಗೆ ಕಂಡರೂ ಅವರ ಮನದ ಅಂತರಾಳವನ್ನು ಅರಿಯುವುದು ಸಾಮಾನ್ಯರಿಗೆ ಸುಲಭವಲ್ಲ. ಜಗದ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಮಾನಸಿಕವಾಗಿ ಅಂಟದಂತಿರುವುದು ಅವರಿಗೆ ಸಾಧ್ಯ. ಈಜುಬಾರದವ, ಈಜು ಬರುವವ-- ಇಬ್ಬರೂ ನೀರಿನಲ್ಲಿರುವಂತೆ ಕಂಡರೂ, ಈಜು ಬಲ್ಲವ ನೀರಿನಿಂದ ಪಾರಾಗಿ ಮೇಲೇಳುತ್ತಾನೆ. ಈಜು ಬಾರದವ ನೀರಿನಲ್ಲೇ ಮುಳುಗಿಹೋಗುತ್ತಾನೆ. 

ಜೀವನದಲ್ಲಿ ಹೇಗಿರಬೇಕೆಂಬ ಬಗ್ಗೆ ಶ್ರೀರಂಗಮಹಾಗುರುಗಳು ಸಣ್ಣದೊಂದು ಸೂಕ್ತಿಯನ್ನು ಉದ್ಧರಿಸುತ್ತಿದ್ದರು--”ಪದ್ಮಪತ್ರಮಿವಾಂಭಸಾ” ಎಂದು. ತಾವರೆ ಎಲೆಯ ಮೇಲಿರುವ ನೀರು ಎಲೆಗೆ ಅಂಟದೇ ಇರುವಂತೆ ನಾವು ಇರಬೇಕೆನ್ನುತ್ತಿದ್ದರು. ತಾವರೆ ಎಲೆಗೆ ನೀರು ಅಂಟದೇ ಇರಲು, ಅದರಲ್ಲಿರುವ ಒಂದು ಬಗೆಯಾದ ಜಿಡ್ಡೇ ಕಾರಣ. ಜಿಡ್ಡಿಗೆ “ಸ್ನೇಹ” ಎಂಬ ಪದವೂ ಇದೆ. ಒಬ್ಬ ಜೀವಿಗೆ ಭಗವಂತನೊಡನೆ ಸ್ನೇಹವೇರ್ಪಟ್ಟರೆ, ಆತ ವ್ಯವಹಾರದಲ್ಲಿದ್ದರೂ ಅದಕ್ಕೆ ಅಂಟದೇ ಇರಬಹುದು. 

ಜೀವನದ ಗುರಿ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಎಂದು ಘೋಷಿಸುವ ಭಾರತೀಯ ಸಂಸ್ಕೃತಿಯಲ್ಲಿ ಹೆಜ್ಜೆ ಹೆಜ್ಜೆಗೂ ದೇವರ ಸ್ಮರಣೆ ಮಾಡದೇ ಯಾವ ಸತ್ಕಾರ್ಯವನ್ನೂ ಮಾಡುವ ಪದ್ಧತಿ ಇಲ್ಲ.(ದುಷ್ಕೃತ್ಯಗಳನ್ನು ಮಾಡುವಾಗ ಭಗವತ್ಸ್ಮರಣೆ ಮಾಡಿ ಪಾರಾಗಲಾರೆವು.) ಇದರ ಹಿಂಬದಿಯ ಆಶಯ, ಭಗವಂತನ ಸ್ಮರಣೆ ನಮ್ಮನ್ನು ಕರ್ಮಗಳಿಗೆ ಅಂಟದಂತೆ ಮಾಡುವುದೇ ಆಗಿದೆ. ಶ್ರೀಕೃಷ್ಣನೂ ಭಗವದ್ಗೀತೆಯಲ್ಲಿ ಧರ್ಮರಕ್ಷಣೆಗಾಗಿ ಯುದ್ಧ ಮಾಡಲೇಬೇಕಾಗಿದ್ದ ಅರ್ಜುನನಿಗೆ “ನನ್ನನ್ನು ಸ್ಮರಿಸಿ ಯುದ್ಧ ಮಾಡು” ಎನ್ನುತ್ತಾನೆ. ಲೌಕಿಕ ವ್ಯವಹಾರಗಳಲ್ಲಿ ಯೋಧನಂತೆ ಆಯಾ ಕೆಲಸಕ್ಕೆ ಬೇಕಾದ ಶ್ರದ್ಧೆಯಿಂದಲೇ ಕೆಲಸ ಮಾಡಬೇಕು. ಭಗವಂತನೊಡನೆ “ಸ್ನೇಹ” ವನ್ನು ಹೊಂದಿ ಸತ್ಕರ್ಮನಿರತರಾಗೋಣ. 


ಸೂಚನೆ:  26/06/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.