Sunday, June 9, 2019

ರಾಜನಾಗುವ ಬಗೆ (Raajanaguva bage)

ಲೇಖಕರು: ನಾಗರಾಜ ಗುಂಡಪ್ಪ


ಹಿಂದೊಂದು ಕಾಲದಲ್ಲಿ ಮಕ್ಕಳಿಲ್ಲದ ರಾಜನೊಬ್ಬನು ಉತ್ತರಾಧಿಕಾಯನ್ನು ಆಯ್ಕೆ ಮಾಡಲು ಅನೇಕ ಯುವಕರನ್ನು ಪರೀಕ್ಷೆಗಳಿಗೆ ಒಳಪಡಿಸಿ ಯಶಸ್ವಿಯಾದ ಹತ್ತು ಮಂದಿ ಯುವಕರಿಗೆ ಒಂದು ಅಂತಿಮ ಪರೀಕ್ಷೆಯನ್ನು ಕೊಡುತ್ತಾನೆ. ಎಲ್ಲರಿಗೂ ಒಂದೊಂದು ಬೀಜವನ್ನು ಕೊಟ್ಟು, ಅದನ್ನು ನೆಟ್ಟು, ಪೋಷಿಸಿ ಆರು ತಿಂಗಳ ನಂತರ ತಂದು ತೋರಿಸಬೇಕು ಎಂದು ಹೇಳುತ್ತಾನೆ. ಜೊತೆಯಲ್ಲಿಯೇ ಒಂದು ನಿಯಮವನ್ನೂ ಹೇಳುತ್ತಾನೆ - ಇವರಿಗೆ ಯಾವ ಬೀಜವನ್ನು ಕೊಟ್ಟಿರುತ್ತಾನೆಯೋ ಅದೇ ಬೀಜವನ್ನೇ ನೆಟ್ಟು ಬೆಳೆಸಬೇಕು ಮತ್ತು ಯಾವುದೇ ಕಸಿಯನ್ನು ಮಾಡಬಾರದು ಎಂದು. 

ನಂತರ ಎಲ್ಲರೂ ಬೀಜವನ್ನು ನೆಟ್ಟು ಕೃಷಿ ಮಾಡಲು ಆರಂಭಿಸುತ್ತಾರೆ; ಅವರಲ್ಲಿ ಸತ್ಯಪಾಲನೆಂಬ ಯುವಕನಿಗೆ ಮಾತ್ರ ಯಾವ ಫಲಿತಾಂಶವೂ ದೊರಕುವುದಿಲ್ಲ.  ಬೀಜವನ್ನು ನೆಟ್ಟು ನೀರು, ಗೊಬ್ಬರಗಳನ್ನು ಹಾಕುತ್ತ ಬಂದರೂ ಅದು ಮೊಳೆಯುದಿಲ್ಲ; ಮಣ್ನನ್ನು ಬದಲಿಸಿದರೂ ಸಹಾ ಪ್ರಯೋಜನವಾಗುವುದಿಲ್ಲ.  ನಾನಾ ಪ್ರಯತ್ನಗಳು ವ್ಯರ್ಥವಾಗಲು, ಇತರರ ಪ್ರಯತ್ನ ಹೇಗಿದೆ ನೋಡೋಣವೆಂದು ಅಕ್ಕ ಪಕ್ಕದ ಗ್ರಾಮಗಳಿಗೆ ಹೋಗಿ ನೋಡುತ್ತಾನೆ - ಒಬ್ಬೊಬ್ಬರ ಬೀಜವೂ ಮೊಳೆತು ಸೊಂಪಾದ ಗಿಡವಾಗಿ ಬೆಳೆಯುತ್ತಲಿರುತ್ತದೆ. ಎಲ್ಲರ ಬೀಜವೂ ಇಷ್ಟು ಚೆನ್ನಾಗಿ ಬೆಳೆದರೂ ತನ್ನದು ಮಾತ್ರ ಏಕೆ ಮೊಳೆತಿಲ್ಲವೆಂದು ಎಷ್ಟು ಯೋಚಿಸಿದರೂ ಅವನಿಗೆ ಹೊಳೆಯುವುದಿಲ್ಲ; ತನ್ನ ಅದೃಷ್ಟವೇ ಇಷ್ಟು ಎಂದುಕೊಂಡು ಮರುಗುತ್ತಾ ವ್ಯರ್ಥ ಪ್ರಯತ್ನ ಪಡುತ್ತಲೇ ಆರು ತಿಂಗಳು ಕಳೆದೇ ಹೋಗುತ್ತದೆ. 

ಈಗ ಎಲ್ಲರೂ ತಮ್ಮ ಫಸಲನ್ನು ರಾಜನಿಗೆ ಸಮರ್ಪಿಸುತ್ತಾರೆ ಮತ್ತು ಸತ್ಯಪಾಲನೂ ಸಹಾ ಬರಡು ಕುಂಡವನ್ನೇ ಸಮರ್ಪಿಸುತ್ತಾನೆ. ಎಲ್ಲರ ಫಸಲನ್ನೂ ವೀಕ್ಷಿಸಿದ ರಾಜನು ಎಲ್ಲರ ನಿರೀಕ್ಷೆಗೆ ವ್ಯತಿರಿಕ್ತವಾಗಿ ಸತ್ಯಪಾಲನೇ ಉತ್ತರಾಧಿಕಾರಿಯೆಂದು ಘೋಷಣೆ ಮಾಡಿಬಿಡುತ್ತಾನೆ. ಎಲ್ಲರಿಗೂ ಪರಮಾಶ್ಚರ್ಯ; ಬಗೆ ಬಗೆಯಾದ ಸೊಂಪಾದ ಗಿಡಗಳನ್ನು ತಂದವರೆಲ್ಲರನ್ನೂ ಕಡೆಗಣಿಸಿ ಬರಡು ಕುಂಡವನ್ನು ತಂದವನಿಗೆ ರಾಜ ಪಟ್ಟವೇ ಎಂದು ಅಂದುಕೊಳ್ಳುತ್ತಿರುವಾಗ ರಾಜನು ತನ್ನ ನಿಶ್ಚಯವನ್ನು ವಿವರಿಸುತ್ತಾನೆ. 

ನಾನು ಎಲ್ಲರಿಗೂ ಬೇಯಿಸಿ ಒಣಗಿಸಿದ ಬೀಜವನ್ನು ಕೊಟ್ಟಿದ್ದೆ; ಹೀಗಾಗಿ ಯಾರ ಕುಂಡದಲ್ಲಿಯೂ ಮೊಳಕೆ ಬರುವ ಸಾಧ್ಯತೆಯೇ ಇರಲಿಲ್ಲ. ಅದರೆ ಸತ್ಯಪಾಲನನ್ನು ಹೊರತು ಪಡಿಸಿ ಉಳಿದವರೆಲ್ಲರೂ ಆತಂಕದಿಂದ, ನಿಯಮವನ್ನು ಮೀರಿ, ನಾನು ಕೊಟ್ಟ ಬೀಜವಲ್ಲದೇ ಬೇರೆ ಬೀಜವನ್ನು ಬೆಳೆಸಿ ಗಿಡವನ್ನು ತಂದಿದ್ದಾರೆ. ಆದರೆ ಸತ್ಯಪಾಲನಾದರೋ ನಿಯಮವನ್ನು ಪಾಲಿಸಿ ತನ್ನ ಪರಿಶ್ರಮದ ಫಲ ಏನಿದೆಯೋ ಅದನ್ನೇ ಪ್ರಾಮಾಣಿಕವಾಗಿ ಸಮರ್ಪಿಸಿದ್ದಾನೆ. ರಾಜನಾಗಲು ಸತ್ಯಶೀಲತೆ ಹಾಗೂ ಧರ್ಮಪ್ರಜ್ಞೆ ಅತ್ಯಂತ ಮುಖ್ಯ. ಅದುದರಿಂದ, ಸಮರ್ಥನೂ ಸತ್ಯಶೀಲನೂ ಆದ ಸತ್ಯಪಾಲನೇ ಅತ್ಯುತ್ತಮ ಅಧಿಕಾರಿಯೆಂದು ವಿವರಿಸುತ್ತಾನೆ. 

ಇದರ ನೀತಿ ಏನೆಂದರೆ, ನಮ್ಮ ಬದುಕಿನಲ್ಲಿ ಭಗವಂತನೆಂಬ ರಾಜನು ಆತ್ಮ ಸಾಮ್ರಾಜ್ಯದ ಪಟ್ಟಾಭಿಷೇಕ ಮಾಡಲು ಯೋಗ್ಯ ಜೀವಿಗಳಿಗಾಗಿ ಕಾಯುತ್ತಿರುತ್ತಾನೆ. ತೋರಿಕೆಯ ಬದುಕನ್ನು ಬದಿಗೊತ್ತಿ ಸತ್ಯ ಧರ್ಮಗಳಿಂದ ಜೀವನ ಮಾಡಿ ಸಾಧನೆ ಮಾಡುವವರಿಗೆ ಆತ್ಮ ಸಾಕ್ಷಾತ್ಕಾರ, ಆತ್ಮ ಸಾಮ್ರಾಜ್ಯದ ಪಟ್ಟಾಭಿಷೇಕ ಕಟ್ಟಿಟ್ಟ ಬುತ್ತಿ. ನಮ್ಮಲ್ಲಿ ಏನೇ ಸಾಮರ್ಥ್ಯವಿದ್ದರೂ ಸಹಾ ಜೀವನದ ಅಂತಿಮ ಘಟ್ಟವನ್ನು ದಾಟಿಸಬಲ್ಲವು ಸತ್ಯ ಧರ್ಮಗಳು ಮಾತ್ರವೇ. 


ಸೂಚನೆ:  09/06/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.