Sunday, June 23, 2019

ಪರಮಾತ್ಮನೊಡನೆ ಸೇರುವೆಯೇ “ಯೋಗ” (Paramaathmanodane seruveye yoga)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ


ಒಂದು ಸುಭಿಕ್ಷವಾದ ರಾಜ್ಯದಲ್ಲಿ ಜನಾನುರಾಗಿಯಾದ ರಾಜನಿದ್ದ, ಒಮ್ಮೆ ದುರದೃಷ್ಟವಶಾತ್ ಆ ರಾಜ್ಯದ ಮೇಲೆ ಶತ್ರುಗಳ ಆಕ್ರಮಣವಾಯಿತು. ಶತ್ರುಗಳ ಕೈ ಮೇಲಾಯಿತು. ಆಗ ಮಂತ್ರಿಗಳೆಲ್ಲ ಸೇರಿ ಹೇಗಾದರೂ ಮಹಾರಾಜನನ್ನು ಕಾಪಾಡಬೇಕು. ಅವನು ಉಳಿದರೆ ಮುಂದೆ ಎಂದಾದರೂ ನಮ್ಮ ರಾಜ್ಯ ಸ್ವತಂತ್ರವಾದೀತು ಎಂದು ನಿಶ್ಚಯಿಸಿ ರಾಜನನ್ನು ತಲೆಮರೆಸಿಕೊಳ್ಳಲು ಪ್ರಾರ್ಥಿಸಿದರು. ಮೊದಲಿಗೆ ಒಪ್ಪದಿದ್ದರೂ ಮಂತ್ರಿಗಳ ಒತ್ತಾಯಕ್ಕೆ ಮಣಿದು ರಾಜ್ಯದ ಭವಿಷ್ಯದ ದೃಷ್ಟಿಯಿಂದ ರಾಜ-ರಾಣಿಯರು ಕಾಡಿನಲ್ಲಿ ತಲೆ ಮರೆಸಿಕೊಂಡರು. ಅನೇಕ ದಿನಗಳು ಕಾಡಲ್ಲಿ ಕಳೆಯಲಾಗದೆ ರಾಣಿ, ನಂತರ  ರಾಜ ಇಬ್ಬರೂ  ಸ್ವರ್ಗಸ್ಥರಾದರು. ಆದರೆ ಅವರ ಪುಟ್ಟ ಮಗುವೊಂದು ಮಾತ್ರವೇ ಉಳಿಯಿತು. ಕಾಡಿನಲ್ಲಿ ಮಗುವಿನ ಅಳುವನ್ನು ಕೇಳಿ ಬೇಡರ ಪರಿವಾರವೊಂದು ಕರುಣೆಯಿಂದ ಅದನ್ನು  ತಮ್ಮ ಮನೆಗೆ ಕರೆದೊಯ್ದರು. ತಮ್ಮ ಮಗುವಿನಂತೆಯೇ ಬೆಳೆಸಿದರು. ದೊಡ್ಡವನಾದ ಮೇಲೆ ಆ ಹುಡುಗ ಆ ಬೇಟೆಗಾರ ಹುಡುಗರ ಮುಖಂಡನಾಗಿ ಬೇಟೆಯಾಡುತ್ತಿರುವಾಗ ಅಲ್ಲೊಬ್ಬ ಸಾಧುಗಳು ಇವನನ್ನು ನೋಡಿದರು. ಇವನ ಲಕ್ಷಣಗಳನ್ನೆಲ್ಲ ನೋಡಿ ಅವನಿಗೆ ಹೇಳಿದರು -ನೀನು ಎಲ್ಲರಂತಲ್ಲ. ಇಂದು ಮನೆಗೆ ಹೋಗಿ ನಿನ್ನ ಶರೀರದ ಭಾಗಗಳನ್ನೆಲ್ಲ ಸೂಕ್ಷ್ಮವಾಗಿ ಕನ್ನಡಿಯಲ್ಲಿ ನೋಡು. ನಿನ್ನ ವಕ್ಷಸ್ಥಳ, ಬಾಹುಗಳು, ಮೈಮಾಟ ಎಲ್ಲವೂ ಇತರರಂತೆಯೇ ಇದೆಯೇ ಎಂದು ಗಮನಿಸು ಎಂದರು. 

ಹುಡುಗನಿಗೆ ಕುತೂಹಲ. ಅವರೆಂದಂತೆಯೇ ತನ್ನನ್ನು ತಾನು ನೋಡಿಕೊಂಡನು. ಹೌದು. ತನ್ನ ಜೊತೆಯ ಇತರ ಹುಡುಗರಿಗೂ ತನಗೂ ಬಹಳ ವ್ಯತ್ಯಾಸವಿದೆ. ತನ್ನ ವ್ಯಕ್ತಿತ್ವ, ತೇಜಸ್ಸು ಎಲ್ಲವೂ ಅವರಿಗಿಂತ ವಿಶೇಷವಾಗಿದ್ದುದು ಗಮನಕ್ಕೆ ಬಂತು. ಮತ್ತೊಮ್ಮೆ ಆ ಸಾಧುಗಳನ್ನು ಭೇಟಿಯಾದ. ತಾವೆಂದಂತೆ ನನ್ನಲ್ಲಿ ವಿಶೇಷವೇನೋ ಇದೆ. ದಯಮಾಡಿ ನಾನು ಯಾರೆಂದು ತಿಳಿಸಿ ಎಂದು ಪ್ರಾರ್ಥಿಸಿದ. ತ್ರಿಕಾಲಜ್ಞರಾದ ಸಾಧುಗಳು ಅವನ ವೃತ್ತಾಂತವೆಲ್ಲವನ್ನೂ ವಿವರವಾಗಿ ತಿಳಿಸಿದರು. ಮತ್ತು ಅವನಿಗೆ ಅವನ ಕರ್ತವ್ಯದ ಅರಿವನ್ನು ಮೂಡಿಸಿದರು. ಅವನನ್ನು ಸೈನ್ಯವನ್ನು ಕಟ್ಟಲು ಪ್ರೇರೇಪಿಸಿದರು. ರಾಜಕುಮಾರನು ಅಂದಿನಿಂದ ತನ್ನ ಜೀವನದ ದಾರಿಯನ್ನು ಬದಲಿಸಿದ. ಅತ್ಯಂತ ಪರಿಶ್ರಮದಿಂದ ಜನಗಳನ್ನು ಸಂಘಟಿಸಿದ. ಎಲ್ಲ ಶಸ್ತ್ರ ವಿದ್ಯೆಗಳನ್ನು ಕರಗತ ಮಾಡಿಕೊಂಡ. ಒಂದು ಬಲಿಷ್ಠ ಸೈನ್ಯವನ್ನು ಕಟ್ಟಿ  ಹೋರಾಡಿ ತನ್ನ ಪೂರ್ವಿಕರು ಕಳೆದುಕೊಂಡಿದ್ದ ರಾಜ್ಯವನ್ನು ಮತ್ತೆ ಪಡೆದುಕೊಂಡು ರಾಜನಾಗಿ ಬೆಳಗಿದ.

ಇದು ನಮ್ಮೆಲ್ಲರ ಕಥೆಯಾಗಿದೆ. ನಮ್ಮೊಳಗೇ ಬೆಳಗುತ್ತಿರುವ ಆತ್ಮರಾಜ್ಯ ಒಂದಿದೆ. ಅದೇ ಭಗವಂತನ ಮಡಿಲು. ಅಲ್ಲಿಂದ ನಮ್ಮ ಮನಸ್ಸುಗಳು ವಿಯೋಗವಾಗಿ ಕಾಡುಪಾಲಾಗಿದ್ದೇವೆ. ನಮ್ಮ ಇಂದ್ರಿಯ ಜೀವನದ ವೇಗದಲ್ಲಿ ನಮ್ಮ ಸ್ವಸ್ವರೂಪವನ್ನೇ ಸಂಪೂರ್ಣವಾಗಿ ಮರೆತಿದ್ದೇವೆ. ಜೀವನದ ಸಣ್ಣ ಸುಖಗಳಿಗೆ ಮಾರುಹೋಗಿ ಆನಂದದ ಒಳಬದುಕನ್ನು ಕಳೆದುಕೊಂಡಿದ್ದೇವೆ. ನಮ್ಮ ಸ್ವರೂಪದಿಂದ  ನಮಗೆ ವಿಯೋಗ ಉಂಟಾಗಿದೆ, ಆ ರಾಜಕುಮಾರನಿಗೆ ಆದಂತೆ. ಮತ್ತೆ ನಮ್ಮ ನೈಜ ಸ್ವರೂಪವನ್ನು ನಾವು ನೆನಪು ಮಾಡಿಕೊಳ್ಳಬೇಕೆಂದೇ ನಮ್ಮ ಮಹರ್ಷಿಗಳು ಯೋಗವನ್ನು ಉಪಾಯವಾಗಿ  ತಂದುಕೊಟ್ಟರು.“ಜೀವ-ದೇವರ ಸಂಯೋಗವೇ ಯೋಗ” ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ. ಯೋಗವೆಂದರೆ ನಿಜವಾಗಿ ಪರಮಾತ್ಮನಲ್ಲಿ ಒಂದಾಗುವುದೇ ಆಗಿದೆ. ಆ ಸೇರುವೆಯ ಸಾಧನ ಮಾರ್ಗಕ್ಕೂ ಯೋಗವೆಂದೇ ಹೆಸರು. ಅದರಿಂದ  ನಮ್ಮ ಸ್ವರೂಪದಲ್ಲಿ “ಯೋಗ” ಉಂಟಾಗಿ ಆನಂದಿಸುವುದೇ ಯೋಗದ ಪರಮಗುರಿ. ನಮ್ಮೆಲ್ಲರ ಜೀವನದಲ್ಲೂ ಅಂತಹ ಯೋಗವನ್ನು ಹೊಂದುವಂತಾಗಲಿ. 


ಸೂಚನೆ:  21/06/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.