ಲೇಖಕರು: ತಾರೋಡಿ ಸುರೇಶ
ಜ್ಞಾನಸಂತಾನವನ್ನು ಬೆಳೆಸಬಲ್ಲ ವಧೂವರರೇ ವಿವಾಹಕ್ಕೆ ಯೋಗ್ಯರು ಎಂಬುದನ್ನು ನೋಡಿದೆವು. ವರನು ನಾರಾಯಣ ಸ್ವರೂಪನಾದರೆ ವಧುವು ಲಕ್ಶ್ಮೀಸ್ವರೂಪಳು. ವರನು ಮಹೇಶ್ವರನಾದರೆ ಅವಳು ಪಾರ್ವತೀಸ್ವರೂಪಳು. ಅವರಿಬ್ಬರೂ ಸೃಷ್ಟಿಮೂಲದಲ್ಲಿ ಬೆಳಗುತ್ತಿರುವ ಪ್ರಕೃತಿಪುರುಷ ತತ್ವಗಳನ್ನು ಪ್ರತಿನಿಧಿಸುವವರು. ಆರ್ಷಸಾಹಿತ್ಯಗಳಲ್ಲಿ ಇದನ್ನು ಅರ್ಥಮಾಡಿಸಬಲ್ಲ ಶ್ವೇತಕೇತು-ಸುವರ್ಚಲಾ ಮುಂತಾದವರ ಕಥೆಗಳನ್ನೂ ನೋಡಬಹುದು. ವಿವಾಹ ಆರಂಭವಾಗುವ ರೀತಿಯೂ ಇದನ್ನೇ ಪ್ರತಿಬಿಂಬಿಸುತ್ತದೆ.
ವಿವಾಹದಲ್ಲಿ ಕಾಶೀಯಾತ್ರೆಯ ಪ್ರಕರಣವೊಂದು ಬರುತ್ತದೆ. ಬ್ರಹ್ಮಚಾರಿಯು ಗುರುಕುಲದಲ್ಲಿ ಬ್ರಹ್ಮಚರ್ಯದ ನಿಯಮಗಳನ್ನೆಲ್ಲಾ ಪೂರ್ಣವಾಗಿ ಪಾಲಿಸಿ ಮಾಲೆಯನ್ನು ಧರಿಸಿ, ಉತ್ತರದಿಕ್ಕಿನಲ್ಲಿರುವ, ಜ್ಞಾನಮೂರ್ತಿಯಾದ ಶಿವನ ಕ್ಷೇತ್ರವಾದ ಪವಿತ್ರವಾದ ಕಾಶಿಯತ್ತ ಪ್ರಯಾಣ ಬೆಳೆಸುತ್ತಾನೆ. ವಯಸ್ಸಿನಲ್ಲಿ ಚಿಕ್ಕವನು. ಆದರೆ ಜ್ಞಾನದಲ್ಲಿ ಅಧಿಕನು. ಅಂತಹ ಮಹಾಪುರುಷ ಜೈ ಶಂಕರ್ ಎಂದು ಹೋಗುತ್ತಿರುವಾಗ ಕನ್ಯಾಪಿತೃಗಳು ‘ಜೈ ಶಂಕರ್ ಬದಲು ಜೈ ಪಾರ್ವತೀಶಂಕರ್ ಆಗು’ ಎಂದು ಅವನನ್ನು ಪ್ರಾರ್ಥಿಸಿ ತಮ್ಮ ಮನೆಗೆ ಕರೆದೊಯ್ಯುತ್ತಾರೆ. ‘ನಿನ್ನೊಳಗೆ ಬೆಳಗುತ್ತಿರುವ ಜ್ಯೋತಿಯನ್ನು ಹಾಗೆಯೇ ಧರಿಸಿ ಬೆಳೆಸಬಲ್ಲ ಸುಕ್ಷಿತಳಾದ ಕನ್ಯೆಯೊಬ್ಬಳಿದ್ದಾಳೆ. ಅವಳನ್ನು ಸ್ವೀಕರಿಸಿ ಧನ್ಯೋ ಗೃಹಸ್ಥಾಶ್ರಮಃ ಎನ್ನುವುದನ್ನು ಸಾರ್ಥಕಪಡಿಸಿ’ ಎಂದು ಪೂಜಾದಿಗಳನ್ನು ಮಾಡಿ ಸಾಲಂಕೃತ ಕನ್ಯೆಯನ್ನು ವಿವಾಹ ಮಾಡಿಕೊಡುತ್ತಾರೆ. ಧರ್ಮಸಂತಾನವನ್ನು ಪಡೆಯಿರಿ ಎಂದು ಆಶೀರ್ವದಿಸುತ್ತಾರೆ. ಲೋಕದಲ್ಲಿ ಸತ್ಪ್ರಜೆ ಬೇಕು. ಅದಕ್ಕೆ ಜ್ಞಾನಿಯಾದವನು ಪರಮಾತ್ಮನಲ್ಲಿಯೇ ವಿಹರಿಸುವುದರ ಜೊತೆಗೆ ಪ್ರಕೃತಿಕ್ಷೇತ್ರದಲ್ಲಿಯೂ ಇಳಿದುಬಂದು ತನ್ನ ಧರ್ಮವನ್ನು ಬೆಳೆಸಬೇಕು. “ತಂದೆ ಏನು ತಂದೆ? ಎಂದರೆ ಜ್ಞಾನವನ್ನು ತಂದೆ” ಎಂದು ಹೇಳುವ ಪಿತನಾಗಬೇಕಪ್ಪಾ” ಎಂದು ಶ್ರೀರಂಗಮಹಾಗುರುಗಳು ನುಡಿಯುತ್ತಿದ್ದರು. ಈ ತತ್ವವನ್ನು ತಿಳಿಯಪಡಿಸಲು ಕಾಶೀಯಾತ್ರೆಯ ಒಂದು ತಾತ್ವಿಕವಾದ ಮತ್ತು ರಸಮಯವಾದ ಸನ್ನಿವೇಶ.
“ಧರ್ಮೇಚ ಅರ್ಥೇಚ ಕಾಮೇಚ ನಾತಿ ಚರಾಮಿ” ಧರ್ಮಾರ್ಥಕಾಮಗಳಲ್ಲಿ ಈಕೆಯನ್ನು ಮೀರಿ ನಡೆಯಬಾರದು ಎಂದು ವರನಿಗೂ, ನನ್ನನ್ನು ಸದಾ ಅನುವರ್ತಿಸುವವಳಾಗು, “ಇಬ್ಬರೂ ಒಂದುಗೂಡಿ ಈ ಜೀವನರಥವನ್ನು ಎಳೆಯೋಣ” ಎಂದು ವಧುವಿಗೂ ನಡೆಯುವ ಸಂವಾದ, ಹಿರಿಯರ ಆದೇಶಗಳು. ಮೋಕ್ಷವೆಂಬ ಮುಖ್ಯ ಪುರುಷಾರ್ಥ ಸಾಧನೆಗಾಗಿ ತಕ್ಕುದಾದ ಶುದ್ಧ ಮನೋಧರ್ಮವು ಓತಪ್ರೋತವಾಗಿ ವಿವಾಹದಲ್ಲಿ ತುಂಬಿರುತ್ತದೆ. ಸಾಲಂಕೃತ ಕನ್ಯಾದಾನದ ಸಂದರ್ಭದಲ್ಲಿ ಪ್ರಸನ್ನವಾದ ಮನಸ್ಸಿನಿಂದ ಪುರೋಹಿತರು ಸಭಾಸದರ ಸಮಕ್ಷಮದಲ್ಲಿ “ ಸುಲಗ್ನಾ ಸಾವಧಾನಾಃ ಸುಮಹೂರ್ತಾಃ ಸಾವಧಾನಾಃ” ಎಂದು ಘೋಷಣೆ ಮಾಡುತ್ತಾರೆ. ನಿಮ್ಮ ಇಂದ್ರಿಯಮನೋಬುದ್ಧಿಗಳೆಲ್ಲವೂ ಈ ಸುಮುಹೂರ್ತದಲ್ಲಿ ಸಾವಧಾನವಾಗಿದ್ದು ವಧೂವರರನ್ನು ಮಂಗಳಮಯವಾದ ಮನಸ್ಸಿನಿಂದ ನೋಡಿರಿ ಎಂದು ಪ್ರಾರ್ಥಿಸುತ್ತಾರೆ. ಆದರೆ ಇಂದಿನ ದುರ್ದಶೆಯನ್ನು ನೋಡಿದಾಗ ಖೇದವಾಗುತ್ತದೆ. ಗಲಾಟೆಗಳು, ಅಸಂಬದ್ಧ ವಿಷಯಗಳನ್ನು ಕುರಿತು ವಾದವಿವಾದಗಳು, ಕೇವಲವಾದ ಲೌಕಿಕಭಾವಗಳು ವಿವಾಹದ ಉದ್ಧೇಶವನ್ನೇ ವ್ಯರ್ಥಗೊಳಿಸುತ್ತಿವೆ. ಈ ವಿವಾಹ ಕ್ರಮವನ್ನು ತಂದ ಕಾಲದಲ್ಲಿದ್ದ ಮಂತ್ರಗಳು, ಮಂಗಳ ವಾದ್ಯಗಳು, ದ್ರವ್ಯಗಳು, ದೇವಪ್ರೀತಿಗಾಗಿ ನಡೆಸುತ್ತಿದ್ದ ಉಪಚಾರಗಳು-ಇಂದು ವಿಸ್ಮೃತವಾಗಿ ಜೀವಚ್ಛವದಂತಾಗಿರುವುದು ಶೋಚನೀಯವಾಗಿದೆ.
ಹಿಂದಿನ ಮತ್ತು ಮುಂದಿನ ಹತ್ತು ತಲೆಮಾರುಗಳು ಉದ್ಧಾರವಾಗಬೇಕೆಂಬ, ಶಾಶ್ವತ ಬ್ರಹ್ಮಲೋಕ ಸಿದ್ಧಿಸಬೇಕೆಂಬ ಸಂಕಲ್ಪವು ಕನ್ಯಾದಾನದ ಹಿಂಬದಿಯಲ್ಲಿರುತ್ತದೆ. ಹೀಗೆ ದಾಟಿಸಬೇಕಾದರೆ ಅಳಿಯನಾದವನು ಎಷ್ಟು ಸಮರ್ಥನಾಗಿರಬೇಕು. ಅಂತಹ ಮಹಾಪುರುಷನನ್ನು ಅಚ್ಯುತ ಎಂದು ಪೂಜಿಸುವುದು ಎಂತಹ ಹೃದಯಂಗಮವಾದ ದೃಶ್ಯವಾಗಿದೆ. (ಮುಂದುವರೆಯುತ್ತದೆ)