Thursday, June 20, 2019

ಹೂವಿನ ಮಾಲೆಯಿಂದ ನಿರ್ಣಯ (Hoovina maaleyinda nirnaya)

ಲೇಖಕರು: ತಾರೋಡಿ ಸುರೇಶ


ಸಭೆಯಲ್ಲಿ ಗಂಭೀರವಾದ ಮೌನ ಆವರಿಸಿದೆ. ವಿಶೇಷ ಕುತೂಹಲದಿಂದ ಸಭಾಸದರೆಲ್ಲ ಪ್ರತೀಕ್ಷೆಯಲ್ಲಿದ್ದಾರೆ. ಸಂಸ್ಕೃತಿಯ ಬಹುಮುಖ್ಯ ವಿಷಯವೊಂದನ್ನು ಕುರಿತು ಚರ್ಚೆ ನಡೆಯಲಿದೆ. ಸಂದರ್ಭದ ಗಹನತೆಯನ್ನು ಬಲ್ಲ ಪಂಡಿತರು, ಪಾಮರರು ಹೀಗೆ ಎಲ್ಲ ಬಗೆಯವರೂ ಸಭೆಯಲ್ಲಿ ಉಪಸ್ಥಿತರಿದ್ದರು. ಚರ್ಚೆಯಲ್ಲಿ ಜ್ಞಾನದ ಪಾರಮ್ಯವನ್ನು ಪ್ರತಿಪಾದಿಸುವವರು ಶ್ರೀಶಂಕರರು.  ಶಾಂತಗಂಭೀರವಾದ ಮುಖ. ಸರ್ವರನ್ನು ಆಕರ್ಷಿಸುವ, ಸಹಜವಾಗಿಯೇ  ದಿವ್ಯತೆಯ ಅನುಭೂತಿಯನ್ನುಂಟುಮಾಡುವ ವ್ಯಕ್ತಿತ್ವ. ಹಾಗೆಯೇ ಬೌದ್ಧಿಕ ಪ್ರಾಮಾಣಿಕತೆಯುಳ್ಳ ಸದ್ಗೃಹಸ್ಥರಾದ ಮಂಡನಮಿಶ್ರರು ಕರ್ಮಕಾಂಡದ ಶ್ರೇಷ್ಠತೆಯನ್ನು ಪ್ರತಿಪಾದಿಸಿ, ಶ್ರೀಶಂಕರರ ವಾದವನ್ನು ಖಂಡಿಸುವವರು. ಅವರು ಪ್ರಕಾಂಡ ಪಂಡಿತರೂ ಕೂಡ.

ಇಂತಹವರ ಚರ್ಚೆಗೆ ತೀರ್ಪುಗಾರರಾಗಲು ಯಾರು ಸಮರ್ಥರು ಎನ್ನುವುದು ಬಹು ದೊಡ್ಡ ವಿಷಯವೇ. ಶ್ರೀಮಂಡನಮಿಶ್ರರ ಧರ್ಮಪತ್ನಿಯಾದ ಉಭಯಭಾರತೀಯೇ ನಿರ್ಣಾಯಕಳಾಗಲಿ ಎನ್ನುವ ಸಲಹೆ ಶ್ರೀ ಶಂಕರರ ಕಡೆಯಿಂದಲೇ ಬಂದಿತು, ಎಲ್ಲರೂ ಅದನ್ನು ಒಪ್ಪಿದರು. ಚರ್ಚೆ ಆರಂಭಗೊಂಡಿತು.ಒಬ್ಬರ ಮಂಡನೆ. ಇನ್ನೊಬ್ಬರ ಖಂಡನೆ, ಪುನಃ ಪ್ರತಿಮಂಡನೆ ಹೀಗೆ ವಾದವು ಸಾಗುತ್ತಿತ್ತು.  ಹೀಗೆ ಮಂಡನೆ-ಪ್ರತಿಮಂಡನೆಗಳು ಕೊನೆಯಿಲ್ಲದೆ ಸಾಗಿತಾದರೂ ಯಾವುದು ಶ್ರೇಷ್ಠ ಎನ್ನುವುದು ತೀರ್ಮಾನವಾಗಲೇ ಇಲ್ಲ.

ಭಾರತೀದೇವಿಯ ನಿರ್ಣಯದ ವಿಧಾನವು ವಿಚಿತ್ರವಾಗಿತ್ತು.ಆಕೆಯು ಇಬ್ಬರ ಕೊರಳಿಗೂ ಒಂದೊಂದು ಹೂವಿನ ಮಾಲೆಯನ್ನು ಹಾಕಿದಳು. ಯಾರ ಹೂಮಾಲೆ ಮೊದಲು ಬಾಡುವುದೋ ಅವರು ಸೋಲೊಪ್ಪಿಕೊಳ್ಳಬೇಕು ಎಂದು ತನ್ನ ತೀರ್ಮಾನವನ್ನು ಘೋಷಿಸಿದಳು. ನಿರ್ಣಯದ ಈ ಕ್ರಮ ಹೇಗೆ ಸರಿಯಾದೀತು?. ಇಂಥಹ ವಿಚಿತ್ರವುಂಟೆ?, ಪುಷ್ಪಮಾಲೆಯು ಬಾಡುವುದಕ್ಕೂ ವಾದಕ್ಕೂ ಏನು ಸಂಬಂಧ?.ಎಂಬ ಪ್ರಶ್ನೆಗಳು ಸಹಜ. ಆದರೂ ಈ ನಿರ್ಣಯವು ಬಹು ಜಾಣ್ಮೆಯಿಂದ ಕೂಡಿದೆ. ಶ್ರೀರಂಗಮಹಾಗುರುಗಳು ಇದರ ಗುಟ್ಟನ್ನು ಹೀಗೆ ಬಿಚ್ಚಿಟ್ಟಿದ್ದರು.  ಕೋಪ-ತಾಪಗಳು ಏರಿದಾಗ ಮೈ ಬಿಸಿಯಾಗುತ್ತದೆ. ಮಾಲೆಯನ್ನು ಧರಿಸಿದವನ ಮೈ ಬಿಸಿಯಾದರೆ ಪುಷ್ಪವು ಬಾಡುತ್ತದೆಯಷ್ಟೆ. ಆದರೆ ಶಾಂತವಾದ ನೆಲೆಯಲ್ಲಿ ನಿಂತು ಶಾಂತವಾಗಿರುವ ಮನಸ್ಸಿನಿಂದ ಕೂಡಿದ್ದರೆ ಮೈಯೂ ತಂಪಾಗಿಯೇ ಇರುತ್ತದೆ. ಕೇವಲ ಶಾಸ್ತ್ರಪಾಂಡಿತ್ಯವನ್ನಿಟ್ಟುಕೊಂಡು ಗ್ರಂಥಗಳ ಬಲದ ಮೇಲೆ ವಾದಿಸುತ್ತಿದ್ದ ಮಂಡನಮಿಶ್ರರಿಗೆ ನೆತ್ತಿಗೆ ಪಿತ್ತ ಏರಿತು. ಮೈ ಬಿಸಿಯಾಯಿತು. ಹೂಮಾಲೆ ಬಾಡಿತು. ಕಾರಣ ಅವರಿಗೆ ಶಾಂತವಾದ ನೆಲೆ ಸಿಕ್ಕಿರಲಿಲ್ಲ. ವಿಷಯದ ನೆಲೆ ಸಿಕ್ಕದೆ ಉದ್ರೇಕ, ಉದ್ವೇಗಗಳಿಂದ ವಾದ ಮಾಡಿದರೆ ಬಾಡದೇ ಏನಾದೀತು?. ಉದಾಹರಣೆಗೆ ಜ್ವರ ಬಂದವನಿಗೆ ಮಾಲೆ ಹಾಕಿದರೆ ಬಾಡದಿರುತ್ತದೆಯೇ?. 

ತತ್ವದ ನೆಲೆ ಸಿಕ್ಕದವನು ಚರ್ಚೆಯಲ್ಲಿ ವಿಷಯಕ್ಕೆ ದೂರನಾಗುತ್ತಾನೆ. ಆದರೆ ತತ್ವಭೂಮಿಕೆಗೆ ಹೋಗಿ ತತ್ವದರ್ಶಿಯಾದಾಗ ಪ್ರಸನ್ನನಾಗಿರುತ್ತಾನೆ. ಹಾಗೆ ತತ್ವದರ್ಶಿಯಾಗಿದ್ದ ಶಂಕರರು ಕೇವಲ ಸತ್ಯಪ್ರತಿಪಾದನೆಯ ಗುರಿಯಿದ್ದು ಶಾಂತಮಾನಸರಾಗಿದ್ದುದರಿಂದ ಧರಿಸಿದ್ದ ಮಾಲೆ ಬಾಡಲಿಲ್ಲ. ಕರ್ಮವು ವಿಜ್ಞಾನವರಿತು ಆಚರಿಸಿದಾಗ ಧರ್ಮದಲ್ಲಿ ನಿಲ್ಲಿಸಿ ತನ್ಮೂಲಕ ಜ್ಞಾನದಲ್ಲಿ ಅಂದರೆ ಪರಮಾತ್ಮನಲ್ಲಿ ನೆಲೆಗೊಳಿಸುತ್ತದೆ. “ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ” ಅಂತಹ ವಿಶ್ವಮೂಲದಲ್ಲಿ ಬೆಳಗುತ್ತಿರುವ ಜ್ಞಾನಕ್ಕಾಗಿಯೇ ಕರ್ಮ ಎನ್ನುವುದೂ ಸ್ಥಾಪಿತವಾಯಿತು. ತಮ್ಮ ಮಾತಿನಂತೆ ಮಂಡನಮಿಶ್ರರು ಶಂಕರರ ಶಿಷ್ಯತ್ವವನ್ನು ಸ್ವೀಕರಿಸುತ್ತಾರೆ. ಆದ್ದರಿಂದ  ವಾದನಿರ್ಣಯದ ವಿಧಾನ ಚಮತ್ಕಾರವಾಗಿ ಕಂಡರೂ ತತ್ವನಿರ್ಣಯದಲ್ಲಿ ನಿಲ್ಲಿಸಿತು ಎಂಬುದು ಗಮನಾರ್ಹ.


ಸೂಚನೆ:  20/06/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.