Sunday, June 23, 2019

ಜ್ಞಾನ ಸಂತಾನಕ್ಕಾಗಿ ವಿವಾಹ ಸಂಸ್ಕಾರ.(Jnaana santhaanakkagi vivaha samskara)

ಲೇಖಕರು: ತಾರೋಡಿ ಸುರೇಶ



ವಿವಾಹ ಸಂಸ್ಕಾರದ ವಿವಿಧ ಹೆಸರುಗಳ ವಿವರಗಳನ್ನು ನೋಡುತ್ತಿದ್ದೆವು. ‘ನಿನ್ನ ಹೃದಯ ನನ್ನದಾಗಲಿ, ನನ್ನ ಹೃದಯ ನಿನ್ನದಾಗಲೀ’ ಎನ್ನುವ ಸಂಕಲ್ಪದಿಂದ ವಿಶಿಷ್ಟವಾಗಿ ಕೈಹಿಡಿಯುವ ಕ್ರಮವಿದಾಗಿರುವುದರಿಂದ ಪಾಣಿಗ್ರಹಣವೆಂಬ ಹೆಸರು. ವರನು ವಧುವನ್ನು ತನ್ನ ಬಳಿಗೆ ಕರೆದುಕೊಳ್ಳುವಾಗ ಸಂಯಮದಿಂದ ಕೂಡಿದ್ದು, ಧರ್ಮರೂಪವಾದ ಒಂದು ಕಟ್ಟಿಗೆ ಒಳಪಡುವಂತಹ ದಿವ್ಯಭಾವವನ್ನು ಹೊಂದುವುದಕ್ಕೆ ಉಪಯಮ ಎಂದು ಹೆಸರು ಪಶುಪ್ರಾಣಿಗಳಲ್ಲಿ ವಿಶೇಷ ಸಂಕಲ್ಪವೇನೂ ಇರುವುದಿಲ್ಲ. ಅವು ಇಂದ್ರಿಯ ಪ್ರೇರಣೆಗೆ ಅನುಗುಣವಾಗಿ ಸೇರುತ್ತವೆ. ಮನುಷ್ಯನಲ್ಲಿಯೂ ‘ವಯಸ್ಸಾಯಿತು, ಮದುವೆ ಮಾಡಿಬಿಡಿ’ ಎನ್ನುವ ಧೋರಣೆಯಿದ್ದಲ್ಲಿ ಅದು ಪ್ರಾಣಿಗಳ ಜೀವನವೇ ಆಯಿತು. ಆದರೆ ಜ್ಞಾನಿಗಳು ಇನ್ನೂ ಕೆಲವು ಪಾತ್ರತೆಯನ್ನು ಗಮನಿಸಿದ್ದಾರೆ. ಅಂತಹ ಪಾತ್ರತೆ ಇದ್ದಲ್ಲಿ ವಿವಾಹವು ಸಂಸ್ಕಾರರೂಪದಲ್ಲಿ ನಡೆದು ಶುದ್ಧಿಯನ್ನು ಉಂಟುಮಾಡುತ್ತದೆ. ವರನು ಗುರುಕುಲದಲ್ಲಿ ಬ್ರಹ್ಮಚಾರಿಯಾಗಿ ಅಧ್ಯಯನ ನಡೆಸಿ ಸ್ನಾತಕನಾಗುತ್ತಾನೆ. ಪ್ರಜಾತಂತುವನ್ನು ಕಡಿಯಬೇಡ ಎಂದು ಗುರುವು ಅದೇಶನೀಡಿ ಗೃಹಸ್ಥಾಶ್ರಮ ಸ್ವೀಕರಿಸಲು ಅನುಮತಿಸುತ್ತಾನೆ. ಸೂರ್ಯನಿಂದ ಬೆಳಕನ್ನು ಪಡೆಯುವಂತೆ ಗುರುವಿನಿಂದ ಜ್ಞಾನವನ್ನು ಪಡೆದಿರುವ ಬ್ರಹ್ಮಚಾರಿಯು, ಧರ್ಮಸಂತಾನವನ್ನು ಪಡೆಯಲು ವಿವಾಹ ಮಾಡಿಕೊಳ್ಳುತ್ತಾನೆ. ಗುರು ಕೊಟ್ಟ ಶಿಕ್ಷಣದಂತೆ  ಜ್ಞಾನಿಯಾಗಿ, ಆ ಜ್ಞಾನನೇತ್ರದಿಂದ ಜೀವನವನ್ನು ನಡೆಸಬಲ್ಲ ಯೋಗ್ಯತೆಯನ್ನು ಹೊಂದಿರುವವನು ಯುಕ್ತವಯಸ್ಸಿನಲ್ಲಿ ವಿವಾಹಿತನಾಗಬೇಕು. “ ವಿದ್ಯಾಂಚ ವಿತ್ತಂಚ ವಪುಃ ವಯಶ್ಚ” ಎಂದು ಸೂಚಿಸುವಾಗ ವಯಸ್ಸನ್ನು ಕೊನೆಯಲ್ಲಿ ಹೇಳಿದ್ದಾರೆ. ಅವನು ಪಡೆದಿರುವ ವಿದ್ಯೆಯಾದರೂ ವಿದ್ ಜ್ಞಾನೇ ಎನ್ನುವಂತೆ ಪರಮಾತ್ಮಸಾಕ್ಷಾತ್ಕಾರವನ್ನು ಹೊಂದಿಸುವಂತಹದ್ದು. ಅದು ಕೇವಲ ಎಂಎ ಪಿಹೆಚ್‍ಡಿ ತರಹದ್ದಲ್ಲ.

ವಧೂವರರ ನಡುವೆ ನಡೆಯುವ ಸಂಭಾಷಣೆಯೂ ಇದಕ್ಕೆ ಸಾಕ್ಷಿಯಾಗಿದೆ.ವಧುವು ವರನನ್ನು ಕುರಿತು ”ತಪಸ್ಸಿನಿಂದ ಜ್ಞಾನಿಯಾಗಿರುವ ನಿನ್ನನ್ನು ನಾನು ನೋಡುತ್ತಿದ್ದೇನೆ.ನಿನ್ನಂತಹ ಜ್ಞಾನಿಯಾದ ಸತ್ಪುತ್ರನನ್ನು ನಾನು ಆಶಿಸುತ್ತೇನೆ. ಆ ದೃಷ್ಟಿಯಿಂದ ನೀನು ನನ್ನನ್ನು ಸೇರು” ಎಂದರೆ ವರನೂ ಕೂಡ “ಜ್ಞಾನಿಯಾಗಿರುವ ನಿನ್ನನ್ನು ನಾನೂ ನೋಡುತ್ತಿದ್ದೇನೆ” ಎಂದು ಪರಮಾತ್ಮಸ್ಮರಣೆಯಿಂದ ಹೇಳುತ್ತಾನೆ. ಜ್ಞಾನಿಗಳಾದ ವಧೂವರರು ಧರ್ಮಸಂತಾನವನ್ನು ಬಯಿಸಿ, ಒಂದು ಧರ್ಮದ ಕಟ್ಟುಪಾಡಿಗೆ ಒಳಪಟ್ಟು ಗೃಹಸ್ಥಜೀವನಕ್ಕೆ ಹೆಜ್ಜೆಯಿಡುವ  ಇಂತಹ ದೃಶ್ಯಗಳು ಅದೆಷ್ಟು ಮನೋಹರವಾಗಿವೆ.!  ಅಲ್ಲಿ ವಧೂವರರ, ಸಮಾರಂಭದಲ್ಲಿ ಭಾಗವಹಿಸಿರುವ ಬಂಧುಬಾಂಧವರ, ಇಷ್ಟರ ಎಲ್ಲರ ಮನಸ್ಸನ್ನೂ ಇಂತಹ ಪರಮಾತ್ಮ ಸ್ಮರಣೆಯಲ್ಲಿ ಮುಳುಗಿಸಿ ಶುದ್ಧಗೊಳಿಸುವ ಅದ್ಭುತವಾದ ಯೋಜನೆಯನ್ನು ಋಷಿಗಳು ಹೆಣೆದಿದ್ದಾರೆ. ಹಾಗಿದ್ದಲ್ಲಿ ತಾನೇ ಜೀವನವು ಪಶುಸ್ತರದಲ್ಲಿಯೇ ನಿಲ್ಲದೆ ಮಾನವನ ಸಹಜಯೋಗ್ಯತೆಯಾದ ಯೋಗ-ಭೋಗ ಎರಡನ್ನೂ ಪಡೆದು ಪೂರ್ಣಜೀವನವನ್ನು ನಡೆಸಿದಂತಾಗುತ್ತದೆ.

“ಜಾಮಾತಾ ವಿಷ್ಣುವತ್ಪೂಜ್ಯಃ”  ಎಂದು ಅಳಿಯನನ್ನು ಪೂಜಿಸುವ ಪದ್ಧತಿಯಿದೆ. ಶ್ರೀಧರಸ್ವರೂಪ -ಪರಮೇಶ್ವರ ಸ್ವರೂಪ ಎಂಬುದಾಗಿ ಪೂಜೆಯನ್ನು ಕೈಗೊಳ್ಳಬೇಕಾದಲ್ಲಿ ಎಂತಹ ಯೋಗ್ಯತೆ ಅಳಿಯನಾಗುವವನಲ್ಲಿ ಇರಬೇಕು. ಅದು ಕಾಲಕ್ರಮದಲ್ಲಿ ‘ಜಾಮಾತಾ ದಶಮೋಗ್ರಹಃ’ ಎಂದಾಗಿಬಿಟ್ಟಿದೆ. ಅನ್ಯ ಒಂಬತ್ತು ಗ್ರಹಗಳ ಗತಾಗತಿಯನ್ನು ನಿರ್ಣಯಿಸಿ ಹೇಳಬಹುದು. ಆದರೆ ಈ ಅಳಿಯ ಎನ್ನುವಂತಹ ಹತ್ತನೆಯ ಗ್ರಹವು ಯಾವಾಗ ಹೇಗೆ ವರ್ತಿಸುತ್ತದೆ ಎನ್ನುವುದು ಊಹಾತೀತ. ಇದು ಎಲ್ಲರ ಅನುಭವದಲ್ಲಿರುವಂತಹದ್ದೇ. ಋಷಿಸಂಸ್ಕೃತಿಯ ಅಪಮೌಲ್ಯವನ್ನು ಇದು ಎತ್ತಿ ತೋರಿಸುತ್ತದೆ.

ಶ್ರೀರಂಗಮಹಾಗುರುಗಳು  ‘ಅಳಿಯ ಎಂದರೆ ಅಳಿಯದೇ ಇರುವವನು, ಅವನು ಅಚ್ಯುತ ಎನ್ನುವ ಅರ್ಥದಲ್ಲಿ ಬಂದಿದೆಯಪ್ಪಾ’ ಎಂದು ವಿವರಿಸಿದ್ದರು. (ಮುಂದುವರೆಯುತ್ತದೆ)     


ಸೂಚನೆ: 22/06/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.