Sunday, March 31, 2019

ದೇವರು ಕಲ್ಪನೆಯೇ? (Devaru kalpaneye?)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ


ಶ್ರೀರಂಗ ಮಹಾಗುರುಗಳು ಒಂದು ಕತೆ ಹೇಳುತ್ತಿದ್ದರು -ಒಂದು ಗ್ರಾಮ. ಅಲ್ಲಿ ಅನೇಕರಿಗೆ ಕಾಲರಾ ರೋಗ ಬಂದಿದೆ. ಅವರನ್ನು ಪರೀಕ್ಷಿಸಲು ವೈದ್ಯರೊಬ್ಬರು ಬರುತ್ತಾರೆ. ಎಲ್ಲರನ್ನೂ ಪರೀಕ್ಷಿಸಿದ ನಂತರದಲ್ಲಿ ಆ ಊರಿನ ಕೆರೆಯ ನೀರನ್ನು ಪರೀಕ್ಷಿಸುತ್ತಾರೆ. ನಂತರ - “ಸ್ವಲ್ಪಕಾಲ ಈ ಕೆರೆಯ ನೀರನ್ನು ಕುಡಿಯಬೇಡಿ.ಇದರಲ್ಲಿ ಬ್ಯಾಕ್ಟೀರಿಯ ಇವೆ”. ಎನ್ನುತ್ತಾರೆ. ಹಳ್ಳಿಯ ಜನರು ವೈದ್ಯರನ್ನು ಅಪಹಾಸ್ಯ ಮಾಡುತ್ತಾರೆ -“ಕಳೆದ ಎಷ್ಟೋ ವರ್ಷಗಳಿಂದ ಈ ಕೆರೆಯ ನೀರನ್ನು ಕುಡಿಯುತ್ತಿದ್ದೇವೆ. ನೀವೆಂದ ಬ್ಯಾಕ್ಟೀರಿಯ ಇದ್ದಿದ್ದರೆ ನಮಗೆ ಕಾಣಬೇಕಿತ್ತಲ್ಲ? ಹೋಗಲಿ, ನಾವು ಆ ನೀರನ್ನು ಕುಡಿಯುವಾಗ ಗಂಟಲಿಗಾದರೂ ಸಿಕ್ಕಿಹಾಕಿಕೊಳ್ಳಬೇಕಿತ್ತಲ್ಲ? ನೀವು ಹೇಳುತ್ತಿರುವುದು ಸುಳ್ಳು.” ಎಂದರು. ವೈದ್ಯನು ಆ ಕೆರೆಯ ನೀರನ್ನು ಸಂಗ್ರಹಿಸಿ, ಕೆಲವು ಹಳ್ಳಿಗರನ್ನು  ಪ್ರಯೋಗಶಾಲೆಗೆ ಕರೆದೊಯ್ದನು.  ಸೂಕ್ಷ್ಮದರ್ಶಕ ಯಂತ್ರದಲ್ಲಿ ಲೆನ್ಸ್ ಹಾಕಿ ಆ ಲೋಟದ ನೀರನ್ನು ಅದರ ಮೂಲಕ ನೋಡುವಂತೆ ಹಳ್ಳಿಗರಿಗೆ ಹೇಳುತ್ತಾನೆ. ಆಗ ಅವರ ಆಶ್ಚರ್ಯಕ್ಕೆ ಪಾರವಿಲ್ಲ. ಸಾವಿರ ಸಾವಿರ ಸಂಖ್ಯೆಯಲ್ಲಿ ಬ್ಯಾಕ್ಟೀರಿಯಾಗಳು ನರ್ತಿಸುತ್ತಿವೆ! ಹಳ್ಳಿಗರಿಗೆ ನಂಬದೇ ಬೇರೆ ದಾರಿ ಇರಲಿಲ್ಲ.
ಶ್ರೀರಂಗಮಹಾಗುರುಗಳು ಹೇಳುತ್ತಾರೆ - ಹಳ್ಳಿಯ ಜನರಿಗೆ ಬರಿಗಣ್ಣಿಗೆ ಬ್ಯಾಕ್ಟೀರಿಯಾ ಕಾಣಲಿಲ್ಲ. ಎಂದಮೇಲೆ ಬ್ಯಾಕ್ಟೀರಿಯಾ ಇಲ್ಲವೆಂದಾಗುವುದೇ? ಒಂದು ಸಣ್ಣ ಬ್ಯಾಕ್ಟೀರಿಯಾ ನೋಡಲು ನಿಮಗೆ ಈಗಾಗಲೇ ಅದನ್ನು ನೋಡಿರುವ ವೈದ್ಯನೊಬ್ಬ ಬೇಕು. ಅವನಿಗೆ ನಿಮಗೂ ತೋರಿಸಬೇಕೆಂಬ ಅಪೇಕ್ಷೆ ಇರಬೇಕು. ನೀವು ಅವನೊಡನೆ ಪ್ರಯೋಗಶಾಲೆಗೆ ಹೋಗಲು ಸಿದ್ಧರಿರಬೇಕು, ಅವನ ಹತ್ತಿರ ಸೂಕ್ಷ್ಮದರ್ಶಕ ಯಂತ್ರವಿರಬೇಕು. ಹೇಗೆ ಅದರಲ್ಲಿ ಲೆನ್ಸ್ ಹಾಕಿ ನೋಡಬೇಕು ಎಂದು ಅವನು ತೋರಿಸಿಕೊಡಬೇಕು. ನಿಮಗೂ ನೋಡಲು ಬರಬೇಕು. ಇಷ್ಟು ನಿಯಮಗಳಿಗೆ ಒಳಪಟ್ಟರೆ ನೀವೂ ಬ್ಯಾಕ್ಟೀರಿಯಾ ನೋಡಬಹುದು. ಒಂದು ಸಣ್ಣ ಜೀವಿಯನ್ನು ನೋಡಲು ಇಷ್ಟೊಂದು ಪೂರ್ವಸಿದ್ಧತೆ ಬೇಕು.

ಎಂದಮೇಲೆ ಯಾವ ಪುರ್ವಸಿದ್ಧತೆಯೂ ಇಲ್ಲದೇ ದೇವರು  ಬರಿಗಣ್ಣಿಗೆ ಕಾಣುತ್ತಿಲ್ಲ. ಹಾಗಾದರೆ ಅವನು ಇರುವುದೇ ಸುಳ್ಳು ಎನ್ನುವ ಮಾತು ಎಷ್ಟರಮಟ್ಟಿಗೆ ಸರಿ? ದೇವರನ್ನು ನೋಡಬೇಕಾದರೆ ಈಗಾಗಲೇ ಅವನ ಅನುಭವವನ್ನು ಪಡೆದ ಗುರು ಬೇಕು. ಅವನಿಗೆ ನಿಮಗೆ ತೋರಿಸುವ ಅಪೇಕ್ಷೆ ಉಂಟಾಗಬೇಕು. ನಿಮಗೆ ಅವನಲ್ಲಿ ನಂಬಿಕೆ ಇರಬೇಕು. ಅವನು ಹೇಳಿದ ನೀತಿ ನಿಬಂಧನೆಗಳಿಗೆ ನೀವು ಒಳಪಡಬೇಕು. ಸೂಕ್ಷ್ಮಗ್ರಾಹಿಗಳಾಗಬೇಕು. ನಿಮ್ಮ ಶರೀರವೆಂಬ ಪ್ರಯೋಗಶಾಲೆಯಲ್ಲಿ ಅವನ ಮಾರ್ಗದರ್ಶನದಲ್ಲಿ ಪ್ರಯೋಗಕ್ಕಿಳಿಯಬೇಕು. ನಿಮ್ಮ ಮನಸ್ಸು ಬುದ್ಧಿ ಇಂದ್ರಿಯಗಳನ್ನೆಲ್ಲ ಸಂಯಮಮಾಡಲು ಸಿದ್ಧರಿರಬೇಕು. ಇದ್ಯಾವುದನ್ನೂ ಮಾಡದೇ ದೇವರ ಅಸ್ತಿತ್ವವನ್ನು ಅಲ್ಲಗಳೆಯುವುದು ಹಿಂದೆ ತಿಳಿಸಿದಂತೆ ಗ್ರಾಮಸ್ಥರ ಅವೈಜ್ಞಾನಿಕವಾದ ನಡೆಯಂತೆ ನಮ್ಮದೂ ಆಗುವುದಲ್ಲವೇ?
ಯಾರೋ ಮಹನೀಯರು ಹೇಳಿದರಂತೆ -ದೇವರು ಇರುವುದಾದಲ್ಲಿ ನನ್ನ ಮುಂದೆ ಬರಲಿ ಎಂದು. ಮಳೆ ಎನ್ನುವುದು ಇರುವುದಾದರೆ ಈಗ ನನ್ನ ಮುಂದೆ ಸುರಿಯಲಿ ಎಂದರೆ ಏನೆನ್ನಬೇಕು? ಮಳೆ ಬೀಳಲು ನಿಸರ್ಗದಲ್ಲಿ ಒಂದು ಸ್ಥಿತ್ಯಂತರ ಉಂಟಾಗಬೇಕಲ್ಲವೇ? ಸೂರ್ಯ ಇರುವುದಾದರೆ ಈ ಕ್ಷಣದಲ್ಲಿ ನನ್ನ ಮುಂದೆ ಪ್ರಕಾಶಿಸಲಿ ಎಂದು ೧೦ ಗಂಟೆಯ ರಾತ್ರಿಯಲ್ಲಿ ಘೋಷಿಸಿದರೆ? ಸೂರ್ಯೋದಯವಾಗುವವರೆಗೂ ಕಾಯಬೇಕಲ್ಲವೇ? ಹಾಗೆಯೇ ದೇವರು ಎನ್ನುವ ಶಕ್ತಿ ತಾನೇ ತಾನಾಗಿದೆ. ಅದರ ಇರುವಿಕೆ ನಾವು ನೀಡುವ  certificate  ಮೇಲೆ ನಿಂತಿಲ್ಲ. ಅದು ಎಂದೆಂದಿಗೂ ಇರುವ ವಸ್ತುಸ್ಥಿತಿ. ಅದನ್ನು ಕಾಣುವ, ಅನುಭವಿಸುವ ಪ್ರಯತ್ನವನ್ನುಅನುಭವಿಗಳ ಮಾರ್ಗದರ್ಶನದಲ್ಲಿ ಮಾಡುವಂತಾದರೆ ಅದರ ಸಾಕ್ಷಾತ್ಕಾರದ ಸುಖ, ನೆಮ್ಮದಿ ಎಲ್ಲವೂ. ಆಗ ಪರಿಷ್ಕೃತವಾದ ಜೀವನ. ಅದಿಲ್ಲದೇ ಬರಿಯ ಇಂದ್ರಿಯ ಗ್ರಾಮಗಳಷ್ಟರಲ್ಲೇ ಓಡಾಡುತ್ತಾ, ಇಂದ್ರಿಯಗಳಿಗೂ ಚೈತನ್ಯವನ್ನೆರೆಯುತ್ತಾ ಒಳಗೆ ಬೆಳಗುತ್ತಿರುವ ಪರಮಾನಂದದ ಸ್ರೋತಸ್ಸಿನೆಡೆಗೆ ಲಕ್ಷ್ಯವಿಲ್ಲದಿದ್ದಾಗ ಅಪರಿಷ್ಕೃತ ಜೀವನ. ಬರಿಯ ವೃಕ್ಷವೇ ಸತ್ಯ, ಕಣ್ಣಿಗೆ ಕಾಣದ ಬೇರು, ಬೀಜ ಎಲ್ಲವೂ ಕಲ್ಪನೆ ಎಂದರೆ ವ್ಯವಸಾಯದ ಪರಿಚಯವಿಲ್ಲವೆನ್ನುತ್ತೇವಲ್ಲವೇ? ಹಾಗೆಯೇ ಈ ಜೀವನ ವೃಕ್ಷದ ಹಿಂಬದಿಯಲ್ಲಿ ಬೆಳಗುತ್ತಿರುವ ಮಹಾಚೈತನ್ಯವೇ, ಜೀವ ರಸವೇ ದೇವರು ಎಂಬುದು ಈ ದೇಶದ ಮಹರ್ಷಿಗಳ ಅನುಭವದ ಮಾತು.

ಸೂಚನೆ: ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.