ಲೇಖಕರು: ಬಿ. ಜಿ. ಅನಂತ
ಮಾ ಹಿಂಸ್ಯಾತ್ ಸರ್ವಾ ಭೂತಾನಿ ( ಎಂದರೆ ಯಾರಿಗೂ ಹಿಂಸೆಯನ್ನು ಉಂಟು ಮಾಡಬೇಡ ) ಎನ್ನುತ್ತವೆ ಭಾರತೀಯ ಶಾಸ್ತ್ರಗಳು. ಹಿಂಸೆ ಎಂದರೆ ತೊಂದರೆ ಎಂದರ್ಥ. ಹಿಂಸೆಯೆಂಬುದು ಒಬ್ಬನನ್ನು ಸಣ್ಣ ಮಟ್ಟದಲ್ಲಿ ದೈಹಿಕ ಮಾನಸಿಕವಾಗಿ ಘಾಸಿಗೊಳಿಸುವುದರಿಂದ ಹಿಡಿದು ಪ್ರಾಣವನ್ನು ತೆಗೆಯುವವರೆಗೂ ಆಗಬಹುದು. ಹೀಗೆ ಯಾರಿಗೂ ಹಿಂಸೆ ಯನ್ನು ಉಂಟುಮಾಡದೆ ಬದುಕುವುದನ್ನೇ ಅಹಿಂಸೆ ಎಂದು ಕರೆದಿದ್ದಾರೆ. ಇದೊಂದು ಶ್ರೇಷ್ಠವಾದ ಆತ್ಮಗುಣ ಎಂಬುದು ಭಾರತೀಯ ಮಹರ್ಷಿಗಳ ಅಭಿಪ್ರಾಯ. ಅಹಿಂಸೆ ಎಂಬುದು ಕೇವಲ ಮನುಷ್ಯರಿಗೆ ಪ್ರಾಣಿ-ಪಕ್ಷಿಗಳಿಗೆ ಅಷ್ಟೇ ಅಲ್ಲದೆ ಜಡವಾಗಿ ಕಾಣುವ ಗಿಡ ಮರ ಬಳ್ಳಿಗಳಿಗೂ, ಕಲ್ಲು ಮಣ್ಣು ಕಾಷ್ಠಗಳಿಗೂ ಅನ್ವಯಿಸುತ್ತದೆ. ಏಕೆಂದರೆ ಅವೆಲ್ಲವೂ ಜೀವಗಳೇ ಎಂಬುದು ಭಾರತೀಯರ ದರ್ಶನ. ಹಾಗಾದರೆ ಬದುಕುವುದು ಹೇಗೆ? ಎಂಬ ಪ್ರಶ್ನೆ ಎದುರಾಗುವುದು ಸಹಜ. ಏಕೆಂದರೆ ಜೀವೋ ಜೀವಸ್ಯ ಜೀವನಂ ಎಂಬ ಮಾತು ಕೂಡ ಪ್ರಸಿದ್ಧವಾಗಿದೆ. ಎಂದರೆ ಒಂದು ಜೀವಿಯು ಮತ್ತೊಂದು ಜೀವಿಯನ್ನು ತಿಂದೇ ಬದುಕಬೇಕು. ಅಂತಿರುವಾಗ ಯಾರಿಗೂ ತೊಂದರೆಯನ್ನೇ ಕೊಡದೆ ನೂರಕ್ಕೆ ನೂರು ಅಹಿಂಸಾಪರನಾಗಿ ಬದುಕುವುದು ಸಾಧ್ಯವೇ? ಇದು ಮಹರ್ಷಿಗಳಿಗೆ ತಿಳಿಯದ್ದೇನೂ ಅಲ್ಲ. ಹಾಗಿದ್ದರೂ ಈ ಮಾತನ್ನು ಆಡಿದ್ದಾರೆ ಎಂದರೆ ಇದರ ಹಿಂದೆ ಆಳವಾದ ವೈಜ್ಞಾನಿಕ ಚಿಂತನೆ ಅಡಗಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು.
ಒಂದು ಹಿಂಸೆ ಮತ್ತೊಂದು ಹಿಂಸೆಗೆ ಮುನ್ನುಡಿಯನ್ನು ಬರೆಯುತ್ತದೆ. ಹೇಗೆಂದರೆ ಒಬ್ಬ ಮನುಷ್ಯನು ಒಂದು ಪ್ರಾಣಿಯನ್ನು ಕೊಂದ ಎಂದಿಟ್ಟುಕೊಳ್ಳೋಣ. ಮುಂದೆ ಆ ಪ್ರಾಣಿಯು ಮನುಷ್ಯನಾಗಿ ಹುಟ್ಟುತ್ತದೆ, ಈ ಮನುಷ್ಯನು ಪ್ರಾಣಿಯಾಗಿ ಹುಟ್ಟುತ್ತಾನೆ. ಹಿಂದೆ ಮನುಷ್ಯನು ಆ ಪ್ರಾಣಿಗೆ ಕೊಟ್ಟಿದ್ದ ಹಿಂಸೆಯನ್ನು ಮುಂದಿನ ಜನ್ಮದಲ್ಲಿ ಆ ಪ್ರಾಣಿಯ ಪುನರಾವರ್ತಿಸುತ್ತದೆ ಎನ್ನುತ್ತವೆ ನಮ್ಮ ಶಾಸ್ತ್ರಗಳು. ಇದಲ್ಲದೆ, ಮಾಡಿದ ಹಿಂಸೆಯು ವಾತಾವರಣದಲ್ಲಿ ಒಂದು ಅನಪೇಕ್ಷಿತ ವಾದ ಭಯದ ಅಲೆಯನ್ನು ಹುಟ್ಟು ಹಾಕುತ್ತದೆ. ಹಿಂಸೆಗೆ ಒಳಗಾದ ಪ್ರಾಣಿಯು ಅನುಭವಿಸುವ ಯಾತನೆಯು ಅಂತಹ ಅಲೆಗೆ ಕಾರಣ. ಇದಲ್ಲದೆ ಹಿಂಸೆಯನ್ನು ಕೊಟ್ಟ ಮನುಷ್ಯನ ಮನಸ್ಸಿನಲ್ಲಿಯೂ ಕೂಡ ಅದರ ಒಂದು ಅಲೆಯು ಮೂಡಿಯೇ ಮೂಡುತ್ತದೆ. ಇದು ಕ್ಷಣ ಕಾಲವಾದರೂ ಅವನ ಮನಸ್ಸಿನ ಶಾಂತತೆಯನ್ನು ಕದಡುತ್ತದೆ. ತತ್ಪರಿಣಾಮವಾಗಿ ಮನಸ್ಸಿನ ನೆಮ್ಮದಿ ಸಂತೋಷದ ಅನುಭವಗಳು ಕೆಲವು ಕಾಲದ ಮಟ್ಟಿಗಾದರೂ ಮರೆಯಾಗುತ್ತವೆ. ಈ ಕಾರಣದಿಂದಲೇ ಧ್ಯಾನವನ್ನು ಅಭ್ಯಾಸ ಮಾಡುವವರು ಸಾಧ್ಯವಾದಷ್ಟೂ ಹಿಂಸೆಯನ್ನು ಬಿಡಬೇಕು ಎನ್ನುತ್ತದೆ ಯೋಗಶಾಸ್ತ್ರ.
ಆದರೆ ಹಿಂಸೆಯ ಮೂಲಕವೇ ಆಹಾರವನ್ನು ಪಡೆಯಬೇಕಲ್ಲವೇ? ಹಾಗಾಗಿ ನಮಗೆ ಅಗತ್ಯವಿರುವಷ್ಟು ಆಹಾರಕ್ಕಾಗಿ ಮಾಡುವ ಹಿಂಸೆಯು ಹೆಚ್ಚಿನ ವಿಪರಿಣಾಮವನ್ನು ಉಂಟು ಮಾಡುವುದಿಲ್ಲ. ಆದರೆ ಅಲ್ಲಿಯೂ ಕೂಡ ಸಾಧ್ಯವಾದಷ್ಟೂ ಕಡಿಮೆ ಹಿಂಸೆ ಇರುವ ಆಹಾರವನ್ನು ಆರಿಸಿಕೊಳ್ಳಬೇಕು ಎಂಬುದು ತಿಳಿದವರ ಮಾತು. ಜೊತೆಗೆ, ಆಹಾರದಲ್ಲಿನ ಈ ಹಿಂಸೆಯ ದೋಷವು ಮರೆಯಾಗಲಿ ಎಂಬ ಕಾರಣದಿಂದಲೇ ನಾವು ಸ್ವೀಕರಿಸುವ ಆಹಾರವನ್ನು ಭಗವಂತನಿಗೆ ಸಮರ್ಪಿಸಿ ಅವನ ಸ್ಮರಣೆಯೊಂದಿಗೆ ಪ್ರಸಾದ ರೂಪವಾಗಿ ಅದನ್ನು ಬಳಸುವ ಪದ್ಧತಿಯಿದೆ. ಒಟ್ಟಾರೆ ಆಹಾರದ ಮೂಲಕ ಪಾಪವು ಸಂಗ್ರಹವಾಗುವುದುರಿಂದಲೇ ಅಗತ್ಯವಿರುವಷ್ಟು ಆಹಾರವನ್ನು ಮಾತ್ರ ಸೇವಿಸಬೇಕು, ಹಸಿವೆಯಾದಾಗ ಮಾತ್ರ ಆಹಾರವನ್ನು ಬಳಸಬೇಕು ಎಂಬ ನಿಯಮಗಳಿವೆ. ಆಹಾರವೆಂದರೆ ಅವೆಲ್ಲವೂ ಜೀವಗಳೇ- ಅದು ಪ್ರಾಣಿಯ ಮಾಂಸವಾಗಿರಲಿ ಅಥವಾ ಸಸ್ಯಗಳು ಧಾನ್ಯಗಳೇ ಆಗಿರಲಿ.
ಇನ್ನು ಆತ್ಮಸಾಕ್ಷಾತ್ಕಾರವನ್ನು ಮಾಡಿಕೊಂಡ ಯೋಗಿಯೊಬ್ಬನು ಆಹಾರವನ್ನು ಬಳಸಿದಾಗ ಅವನು, ತಾನು ಬಳಸಿದ ಆಹಾರವನ್ನು ನೇರವಾಗಿ ಭಗವಂತನಿಗೆ ಸಮರ್ಪಿಸುತ್ತಾನೆ. ಆದ್ದರಿಂದ ಅವನು ಆಹಾರ ರೂಪವಾಗಿ ಬಳಸಿದ ಜೀವಿಗಳೆಲ್ಲವೂ ಸದ್ಗತಿ ದೊರಕುತ್ತವೆ ಎನ್ನುತ್ತಾರೆ ಯೋಗಿ ಜನರು. ಹಾಗಾಗಿ ಅಲ್ಲಿ ಹಿಂಸೆಯ ದೋಷವಿಲ್ಲ.