Saturday, March 23, 2019

ಉನ್ನಯನ ಮಾಡುವ ಸೀಮಂತ (Unnayana maaduva seemantha)

ಲೇಖಕರು: ತಾರೋಡಿ ಸುರೇಶ


ಪುಂಸವನದ ನಂತರದ ಸಂಸ್ಕಾರವಿದು. ಇದು ಗರ್ಭಿಣೀ-ಸ್ತ್ರೀಸಂಸ್ಕಾರ. ಆದ್ದರಿಂದ ಒಮ್ಮೆ ಮಾಡಿದರೆ ಸಾಕು. ಪ್ರತಿಗರ್ಭಕ್ಕೂ ಬೇಕಿಲ್ಲ. ಇದರ ಪೂರ್ಣಹೆಸರು “ಸೀಮಂತೋನ್ನಯನ”.ತಲೆಯ ಮಧ್ಯರೇಖೆಗೆ ಸೀಮಂತ-ಬೈತಲೆ ಎಂದು ಹೆಸರು. ಕೇಶವೇಶದ ಮಧ್ಯದ ಎಲ್ಲೆಕಟ್ಟಿನ ಜಾಗ. ಎಲ್ಲೆ ಎಂದರೆ ಸೀಮೆ ಎಂದರ್ಥ. ಆ ಸೀಮಂತವನ್ನು ಉನ್ನಯನ ಅಂದರೆ ಮೇಲಕ್ಕೆ ಎತ್ತಿ ಬಾಚುವುದು ಈ ಸಂಸ್ಕಾರದ ಪ್ರಮುಖ ಅಂಗ.

ಮೇಧೆ, ಯಶಸ್ಸು, ಪ್ರಜ್ಞಾ ಮತ್ತು ತೇಜಸ್ಸು ಇರುವ ಶಿಶು ಹುಟ್ಟಬೇಕು. ಇಂತಹ ವಿಶೇಷ ಶಕ್ತಿಗಳು ಶಿಶುವಿನಲ್ಲಿದ್ದಾಗ ಅವುಗಳನ್ನು ಅಪಹರಿಸುವ ದುಷ್ಟಶಕ್ತಿಗಳಿಂದ ರಕ್ಷಣೆ ದೊರೆಯಬೇಕು. “ಜ್ಞಾನಪೂರ್ಣತೆಯಿಂದ ಕೂಡಿದ ಸರ್ವಾಂಗಸುಂದರವಾದ ಸಂತಾನವಾಗಬೇಕು. ಆ ಪೂರ್ಣತೆಯಲ್ಲಿ ಆತ್ಮಚೈತನ್ಯ, ಆತ್ಮಗುಣ, ದೇಹಪುಷ್ಟಿ ಎಲ್ಲವೂ ಇರುತ್ತದೆ” ಎಂದು ಶ್ರೀರಂಗಮಹಾಗುರುಗಳ ತಿಳಿಸಿದ್ದರು. ಮಹರ್ಷಿಗಳು ತಂದುಕೊಟ್ಟ ಯಾವುದೇ ಕರ್ಮಗಳಲ್ಲಿಯೂ ಆತ್ಮಧರ್ಮ,ಮನೋಧರ್ಮ ಮತ್ತು ದೇಹಧರ್ಮಗಳೂ ಎಲ್ಲವೂ ಅರಳಲು ಬೇಕಾದ ವಿಜ್ಞಾನವಿರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಕೊನೆಯಲ್ಲಿ “ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ” ಎಲ್ಲವೂ ಈಶ್ವರನಲ್ಲಿ ಲಯಗೊಳ್ಳಬೇಕು. ಇಲ್ಲಿ ವಿಧಿಸಿರುವ ಮಂತ್ರ, ತಂತ್ರ ದ್ರವ್ಯಗಳೆಲ್ಲವೂ ಇದಕ್ಕೆ ಪೂರಕವಾಗಿವೆ.

ಗರ್ಭಸ್ಪಂದನವಾದ ನಂತರ ಮೂರು ಅಥವಾ ನಾಲ್ಕನೇ ತಿಂಗಳಲ್ಲಿ, ಶುಕ್ಲಪಕ್ಷ, ಪುರುಷನಕ್ಷತ್ರಗಳಲ್ಲಿ ಸೀಮಂತವನ್ನು ನಡೆಸುವುದು ಉತ್ತಮ. ಹಗಲಿನಲ್ಲಿಯೇ ಮಾಡಬೇಕು.
ವೃಷಭದ ಚರ್ಮ, ಭೂತದಅತ್ತಿ ಮರದ ಕಾಯಿಗಳ ಗೊಂಚಲು, ಮತ್ತು ಮೂರು ಬಿಳೀಚುಕ್ಕಿಗಳಿರುವ ಅಥವಾ ಪರ್ವಗಳಿರುವ ಶಲಲೀ(ಮುಳ್ಳುಹಂದಿಯ ಮುಳ್ಳು) ಗಳನ್ನು ಹೊಂದಿಸಿಕೊಳ್ಳಬೇಕು. ಆದರೆ ಶಲಲಿಯನ್ನು ಗೃಹದ ಒಳಗೆ ಇಡಕೂಡದು. ಅದರಿಂದ ಕಲಹ ಉಂಟಾಗುತ್ತದೆ ಎಂಬ ಅಭಿಪ್ರಾಯವಿದೆ. ಹಾಗೆಯೇ,ಮೂರು  ದರ್ಭೆಗಳಿಂದ ಹೆಣೆದ ಮೂರು ಪುಂಜಗಳು ಸಿದ್ಧವಿರಬೇಕು.

ಅಂದು,ಮಂಗಳಸ್ನಾನ,ಹೊಸವಸ್ತ್ರಗಳ ಧಾರಣೆ, ನಂತರ ಪುಣ್ಯಾಹ ಮತ್ತು ಸಂಕಲ್ಪ ಮಾಡಬೇಕು.ಆಮೇಲೆ,ಕಂಕಣಬಂಧ, ಇಷ್ಟದೇವತಾಪೂಜೆ ಹಾಗೂ ಎಂಟು ನಿರ್ದಿಷ್ಟಮಂತ್ರದೊಂದಿಗೆ ಹೋಮ. ಧಾತಾ, ರಾಕಾ, ನೇಜಮೇಷ ಮತ್ತು ಪ್ರಜಾಪತಿ-ದೇವತೆಗಳನ್ನು ಸ್ತುತಿಸುವ ಮಂತ್ರಗಳಿವು. ದೇವತೆಗಳ ಪ್ರಸನ್ನತೆ ಆವಶ್ಯಕ.

ಪತಿಪತ್ನಿಯರು ಕ್ರಮವಾಗಿ ಪೂರ್ವ-ಪಶ್ಚಿಮಾಭಿಮುಖವಾಗಿ ಕುಳಿತುಕೊಳ್ಳಬೇಕು. ಕಾಯಿಗಳಿಂದ ಕೂಡಿದ ಅತ್ತಿ ಗೊಂಚಲು,ಶಲಲೀ ಮತ್ತು ದರ್ಭೆಗಳ 3 ಪುಂಜಗಳು ಇವುಗಳೆಲ್ಲವನ್ನೂ ಒಟ್ಟಿಗೆ ಸೇರಿಸಿ ಹಿಡಿದುಕೊಂಡು,ಲಲಾಟಸಂಧಿಯಿಂದ ಆರಂಭಿಸಿ ಬೈತಲೆಯ ಹಿಂಭಾಗದವರೆಗೂ ರೇಖೆ ಪೂರ್ತಿ ಬರುವಂತೆ ಪತಿಯು ಬಾಚುತ್ತಾನೆ. ಉನ್ನಯನವನ್ನು ಮೂರು ಭಾರಿ ಮಾಡಬೇಕು. ಉನ್ನಯನವು ಊರ್ಧ್ವಸ್ಥಿತಿಗೆ ನಯನ ಮಾಡುವ ಮರ್ಮವನ್ನೊಳಗೊಂಡಿರುತ್ತದೆ.

ಇಲ್ಲೆಲ್ಲಾ ಮೂರರ ಸಂಯೋಜನೆಯನ್ನು ನೋಡುತ್ತೇವೆ. ಮೂರು ಲೋಕಗಳಿಗೂ ವ್ಯಾಪಿಸುವಂತಹ ಕರ್ಮವಿದು. ನಂತರ ಅವಕ್ಕೂ ಮೂಲವಾದ ಪ್ರಣವದಲ್ಲಿ ಮುಕ್ತಾಯಗೊಳ್ಳಬೇಕು.ಆದ್ದರಿಂದ ‘ಓಂ ಭೂರ್ಭುವಸ್ಸುವರೋಂ’ ಎನ್ನುವ ಮಂತ್ರದ ಅನುಸಂಧಾನವಿರುತ್ತದೆ. ಆದಿಯಲ್ಲಿಯೂ ಪ್ರಣವ, ಮಧ್ಯೆ ಅದರಿಂದ ವಿಕಾಸಗೊಂಡ ಮೂರುಲೋಕಗಳು ಮತ್ತು ಕೊನೆಯಲ್ಲಿ ಪುನಃ ಪ್ರಣವದಲ್ಲಿಯೇ ವಿಲೀನ. ಇದು ಕೇವಲ ಇಂದ್ರಿಯಕ್ಷೇತ್ರದ ವ್ಯವಹಾರ ಮಾತ್ರವಲ್ಲ


ಹಾಗೂ ಈ ಮೂರೂ ಪದಾರ್ಥಗಳ ಸಂಯೋಜನೆಯಲ್ಲಿ. ಒಂದರ ದೋಷವನ್ನು ಇನ್ನೊಂದು ನಿವಾರಿಸಿ ಉದ್ದೇಶಿತ ಫಲವನ್ನು ಪೂರ್ಣವಾಗಿ ನೀಡುವ ಯೋಗ ಕೂಡಿಬರುತ್ತದೆ. ,,,,, (ಮುಂದುವರೆಯುತ್ತದೆ)

ಸೂಚನೆ: ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.