Sunday, March 3, 2019

ಶಿವರಾತ್ರಿ ಮಹಾಪರ್ವ (Shivarathri Mahaparva)

ಲೇಖಕರು: ತಾರೋಡಿ ಸುರೇಶ

ಪೀಠಿಕೆ:
ಶೈವರಿಗೆ ಅತ್ಯಂತ ವಿಶೇಷವಾದ ಪರ್ವವಿದು. ಆದರೆ ಶೈವರಲ್ಲದವರೂ ಬಹುಶ್ರದ್ಧೆಯಿಂದ ಆಚರಿಸಬೇಕಾದದ್ದು ಎಂದು ಶಾಸ್ತ್ರ, ಸಂಪ್ರದಾಯಗಳು ಹೇಳುತ್ತವೆ. ಅಂದು ಬಹಿರ್ಮುಖವಾಗಿರುವವರು ಉಳಿದೆಲ್ಲ ಪೂಜೆಗಳ ಫಲದಿಂದ ವಂಚಿತರಾಗುತ್ತಾರೆ ಎಂದು ಜ್ಞಾನಿಗಳು ಸಾರುತ್ತಾರೆ. ಇದರಲ್ಲಿ ಉಪವಾಸವು ಬಹುಮುಖ್ಯ ಅಂಗವಾಗಿರುವುದರಿಂದ ಇದನ್ನು ಉಪವಾಸದ ಹಬ್ಬವೆಂದೂ ಕರೆಯುವುದುಂಟು. ಇದರ ಆಚರಣೆಗೆ ರಾತ್ರಿಕಾಲವೇ ಪ್ರಶಸ್ತ.


ಅರ್ಷಸಾಹಿತ್ಯಗಳಲ್ಲಿ ಪ್ರಶಂಸೆ:
ಇಂದು ಉಪವಾಸ, ಜಾಗರಣೆ ಮಾಡಿ ಈ ಪರ್ವವನ್ನು ಆಚರಿಸಿದರೆ ಮಹಾದೇವನು ಭುಕ್ತಿಮುಕ್ತಿಗಳೆರಡನ್ನೂ ದಯಪಾಲಿಸುತ್ತಾನೆ. ನರಕದಿಂದ ಉದ್ಧರಿಸುತ್ತಾನೆ. ಬಿಲ್ವಪತ್ರೆಗಳಿಂದ ಶಿವರಾತ್ರಿಯ ನಾಲ್ಕು ಯಾಮಗಳಲ್ಲಿ ಪೂಜಿಸಿದರೆ ಶಿವನಿಗೇ ಸಮಾನನಾಗಿಬಿಡುತ್ತಾನೆ. ಇಂದು ಶಿವನನ್ನು ಆರಾಧಿಸುವವರು ಧರ್ಮಾರ್ಥಕಾಮಮೋಕ್ಷವೆಂಬ ನಾಲ್ಕು ಪುರುಷಾರ್ಥಗಳನ್ನು ಪಡೆಯುವರು. ಆತ್ಮಗುಣಸಂಪನ್ನರಾಗಿದ್ದು, ಒಳಹೊರ ಶುದ್ಧಿಯನ್ನು ಇಟ್ಟುಕೊಂಡಿರುವ ಭಕ್ತರು ವಿಶೇಷ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಎಂದೆಲ್ಲ ಆರ್ಷಸಾಹಿತ್ಯಗಳು, ಶಿವರಾತ್ರಿಯ ಮಾಹಾತ್ಮೆಯನ್ನು ಯತಾರ್ಥವಾಗಿ ಹೊಗಳುತ್ತವೆ. ಅಷ್ಟಲ್ಲದೆ, ಅಂದು ಎಲ್ಲಾ ಸ್ಥಾವರಜಂಗಮಲಿಂಗಗಳಲ್ಲೂ ಶಿವನ ವಿಶೇಷ ಸಾನಿಧ್ಯವಿರುತ್ತದೆ ಎಂದು ಅದನ್ನು ಗುರುತಿಸಿರುವ ಋಷಿಗಳು ಎತ್ತಿಹೇಳುತ್ತಾರೆ.

ಮಹಾಶಿವರಾತ್ರಿಯ ಮಹಿಮೆ:  
ಇದನ್ನು  ತಿಳಿಯದೇ ಆಚರಿಸಿದರೂ ಫಲವನ್ನು ನೀಡುವ ಪ್ರಭಾವೀ ಪರ್ವದಿನವಿದು. ಶಿವಪುರಾಣದಲ್ಲಿ ಈ ಕಥೆಯು ಭಕ್ತಿಪ್ರಭೋದವನ್ನುಂಟು ಮಾಡುವಂತೆ ಚಿತ್ರಿತವಾಗಿದೆ. ಬೇಡನ ಹೆಸರು ಗುರುದ್ರುಹ. ಅವನು ಮಹಾದುಷ್ಟ, ಕ್ರೂರಿ. ಒಂದು ದಿನ ಅವನಿಗೆ ಬೇಟೆ ದೊರೆಯಲಿಲ್ಲ. ಅನಿವಾರ್ಯವಾಗಿ ದಿನವಿಡೀ ಉಪವಾಸವಿರಬೇಕಾಯಿತು. ಸೋರೆಬುರಡೆಯಲ್ಲಿ ನೀರನ್ನು ತುಂಬಿಟ್ಟುಕೊಂಡು, ಒಂದು ಬಿಲ್ವವೃಕ್ಷದ ಮೇಲೇರಿ ಬೇಟೆಯ ಪ್ರಾಣಿಗಾಗಿ ಕಾಯುತ್ತಾನೆ. ಅಲ್ಲಿಗೆ ಅಕಾಸ್ಮಾತ್ ಬಂದ ಹೆಣ್ಣುಜಿಂಕೆಯ ಮೇಲೆ ಬಾಣಪ್ರಯೋಗ ಮಾಡಬೇಕೆನ್ನುವಷ್ಟರಲ್ಲಿ ಸೋರೆಬುರಡೆಯಲ್ಲಿದ್ದ ನೀರೂ, ಬಿಲ್ವಪತ್ರೆಯ ದಳಗಳೂ ಕೆಳಗೆ ಬೀಳುತ್ತವೆ. ಅವನ ಭಾಗ್ಯವೆಂದರೆ ಅಂದು ಶಿವರಾತ್ರಿಯಾಗಿತ್ತು ಮತ್ತು ನೀರು ಮತ್ತು ಬಿಲ್ವಪತ್ರೆಗಳು ಕೆಳಗೆ ಇದ್ದ ಶಿವಲಿಂಗದ ಮೇಲೆ ಬಿದ್ದವು. ಹೀಗಾಗಿ ಮೊದಲನೆಯ ಜಾವದ ಪೂಜೆ ಸಂಪನ್ನಯಿತು. ಅವನ ಪಾಪ ಕ್ಷೀಣಿಸಿತು. ಇದರಂತೆಯೇ ಉಳಿದ ಜಾವದ ಪೂಜೆಗಳೂ ನಡೆದವು. ಇವೆಲ್ಲವೂ ಅವನ ಅರಿವಿಗೆ ಬಾರದೇ ನೆರವೇರುತ್ತವೆ. ಜಾಗರಣೆ, ಉಪವಾಸರೂಪವಾದ ಸೇವೆಗಳೂ ಪ್ರಯತ್ನವಿಲ್ಲದೇ ಶಿವನಿಗೆ ಅರ್ಪಿತವಾದವು. ಕೊನೆಯ ಯಾಮದ ಪೂಜೆಯಿಂದ ಅವನ ಸಮಸ್ತಪಾಪಗಳೂ ಭಸ್ಮವಾಗಿ ಅವನಿಗೆ ಭಗವತ್ಸಾಕ್ಷಾತ್ಕಾರವೇ ಉಂಟಾಯಿತು. ಮುಕ್ಕಣ್ಣನೂ ರಾಮಾವತಾರದಲ್ಲಿ ಗುಹನೆಂಬ ಹೆಸರಿನಲ್ಲಿ ಶ್ರೀರಾಮನ ಸ್ನೇಹಯೋಗವೂ, ಮುಕ್ತಿಯೂ ಲಭಿಸುವಂತೆ ಅವನಿಗೆ ವರವನ್ನು ಅನುಗ್ರಹಿಸುತ್ತಾನೆ.

ಕಥೆಯ ಅಂತರಾರ್ಥ:
ಈ ಕಥೆಯ ವಿವರಣೆಯಲ್ಲಿ ಅನ್ಯಾನ್ಯ ಗ್ರಂಥಗಳಲ್ಲಿ ಚಿಕ್ಕಪುಟ್ಟ ವ್ಯತ್ಯಾಸಗಳಿವೆ. ಆದರೆ ಎಲ್ಲವುದರಲ್ಲಿಯೂ ಮಹಾಶಿವರಾತ್ರಿಯ ಮಹಿಮೆ, ಶಿವನಲ್ಲಿ ಭಕ್ತಿಯ ಮಹಿಮೆಗಳ ಪಾರಮ್ಯವನ್ನು ಕಾಣಬಹುದು. ಶ್ರದ್ಧೆ, ಅರಿವು ಯಾವುದೂ ಇಲ್ಲದೇ, ಯಾವುದೋ ಕಾರಣದಿಂದ ಶಿವರಾತ್ರಿಯಂದು ಶಿವನ ಆರಾಧನೆಯು ಕೂಡಿಬಂದರೂ ಉತ್ಕೃಷ್ಟವಾದ ಫಲ ಸಿಗುವಾಗ ಭಕ್ತಿ, ಶ್ರದ್ಧೆ, ವಿಜ್ಞಾನಪೂರ್ವಕವಾಗಿ, ಅಂದು ಉಪವಾಸ, ಜಾಗರಣೆಗಳೊಂದಿಗೆ ಶಿವಪೂಜೆಯನ್ನು ಮಾಡಿದವನಿಗೆ ಪುರುಷಾರ್ಥ ಸಿದ್ಧಿಯು ಶತಸ್ಸಿದ್ಧವಾದದ್ದು ಎಂಬ ನಿರ್ಣಯದಲ್ಲಿ ಈ ಕಥೆಗಳಿಗೆ ತಾತ್ಪರ್ಯ.

ಶಂಕರಭಗವತ್ಪಾದರು ತಮ್ಮ ಶಿವಾನಂದಲಹರೀ ಸ್ತೋತ್ರದಲ್ಲಿ ಬೇಡರ ಕಣ್ಣಪ್ಪನ ಕಥೆಯನ್ನಾಧರಿಸಿ ಹರಿಸಿದ ಭಕ್ತಿಪ್ರವಾಹವೂ ಪ್ರಸಿದ್ಧವಾದದ್ದೇ. ಈ ಕಥೆಯನ್ನಾಧರಿಸಿ-“ಸವೆದ ಪಾದರಕ್ಷೆಯು ಪಶುಪತಿಯು ದಿವ್ಯದೇಹವನ್ನು ಒರೆಸವ ಕೂರ್ಚವಾಗಬಹುದು. ಬಾಯಿ ಮುಕ್ಕಳಿಸಿದ ನೀರು ದಿವ್ಯಾಭಿಷೇಕವಾಗಬಹುದು. ತಾನು ತಿಂದು ಮಿಕ್ಕಿದ್ದು ನೈವೇದ್ಯವಾಗಬಲ್ಲುದಾದರೆ ಭಕ್ತಿಗೆ ಅಸಾಧ್ಯವಾದದ್ದು ಯಾವುದು?. ಬೇಡನೊಬ್ಬ ಭಕ್ತಶಿರೋಮಣಿಯಾಗಿಬಿಟ್ಟನಲ್ಲ! ಏನಾಶ್ಚರ್ಯ!” ಎಂದi ಉದ್ಗರಿಸುತ್ತಾರೆ. ಆದ್ದರಿಂದ ಎಲ್ಲರೂ ಪರಮಮಂಗಳಕರವಾದ ಶಿವರಾತ್ರಿ ಮಹಾಪರ್ವವನ್ನು ಆಚರಿಸಿ ಇಹ-ಪರಗಳ ಸೌಖ್ಯವೆರಡನ್ನೂ ತಮ್ಮದಾಗಿಸಿಕೊಳ್ಳಬೇಕು.

ಆಚರಣೆಯ ಸೂಕ್ತ ಕಾಲ:
ಶಿವರಾತ್ರಿ ಎಂಬ ಹೆಸರೇ ತಿಳಿಸುವಂತೆ ಉಪಾಸನೆಗೆ ಅಂದಿನ ರಾತ್ರಿಯೇ ಅತ್ಯಂತ ಪ್ರಶಸ್ತವಾದ ಕಾಲ. ಅಂದು ರಾತ್ರಿಯಲ್ಲಿ ಶೂಲಪಾಣಿ ಶಿವನೂ,ಆತನ ಶಕ್ತಿಗಳೂ, ಭೂತಗಣಗಳೂ ಸಂಚಾರ ಮಾಡುವುದರಿಂದ ಆಗಲೇ ಅವನನ್ನು ಪೂಜಿಸಬೇಕೆಂಬ ಮಾತೂ ಇದೆ.
ಶಿವನ ಸಹಚಾರಿಗಳಾಗಿ ಹೇಳಲ್ಪಟ್ಟಿರುವ ಭೂತಗಳು ಭಯ ಅಥವಾ ಭೀಭತ್ಸರಸಗಳಿಗೆ ಕಾರಣವಾಗುವ ಜೀವಿಗಳಲ್ಲ. ಜ್ಞಾನಿಗಳೂ, ಭಕ್ತರೂ ಆದ ಮಹಾದೇವನ ಪರಿವಾರಗಳು. ಆರಾಧಿಸುವವರಿಗೆ ಜ್ಞಾನವನ್ನೂ, ಉಳಿದ ಇಷ್ಟಾರ್ಥಗಳನ್ನೂ ಅನುಗ್ರಹಿಸುವ ಶಕ್ತಿ ಅವುಗಳಿಗೆ ಇದೆ. ಅವು ಸಂಹಾರಕಾರ್ಯದಲ್ಲಿಯೂ ಶಿವನಿಗೆ ಸಹಾಯ ಮಾಡುತ್ತವೆ. ಎಂದು ಶ್ರೀರಂಗಮಹಾಗುರುಗಳು  ನುಡಿದಿದ್ದರು.


ರಾತ್ರಿಯ ವಿಶೇಷತೆ:
ಸದಾಕಾಲದಲ್ಲಿಯೂ, ಸರ್ವತ್ರವೂ ವ್ಯಾಪಿಸಿರುವ ದೇವರಿಗೆ ರಾತ್ರಿಕಾಲದಲ್ಲಿ ಮಾತ್ರ ಪೂಜೆ ಏಕೆ? ಎಂಬ ಪ್ರಶ್ನೆ ಬರಬಹುದು. ಇದಕ್ಕೆ ಉತ್ತರ,ಮಹಾಕಾಲನಾದ ಶಿವನ ಕಾಲಶರೀರದಲ್ಲಿ ಅಂದು ರಾತ್ರಿಕಾಲದಲ್ಲಿಯೇ ಭಗವಂತನ ಧ್ಯಾನಾರಾಧನೆಗೂ, ಭಕ್ತರ ಇಷ್ಟಾರ್ಥಸಿದ್ಧಿಗೂ ಅತ್ಯಂತ ಅನುಕೂಲವಾದ ಅಂತರಂಗ ಬಹಿರಂಗಗಳ ಧರ್ಮಗಳು ಇರುತ್ತವೆ ಎನ್ನುವುದು ಇದರಲ್ಲಿರುವ ವಿಜ್ಞಾನದ ವಿಷಯ. ಹಗಲು ಮಾಡಬಾರದೆಂದಲ್ಲ.
“ತ್ರಯೋದಶಿಯು ಶಕ್ತಿಸ್ವರೂಪ. ಚತುರ್ದಶಿಯು ಶಿವಸ್ವರೂಪ. ಆದುದರಿಂದ ತ್ರಯೋದಶೀಸಹಿತವಾದ ಚತುರ್ದಶೀ ತಿಥಿಯು ಸೇರಿದ್ದರೆ ಶಿವಶಕ್ತಿಯೋಗವು ಕೂಡಿಬರುತ್ತದೆ. ಅಂಥಹ ಕಾಲವು ಒದಗಿಬಂದರೆ ಶಿವರಾತ್ರಿಯ ಆಚರಣೆಗೆ ಪ್ರಶಸ್ತ” ಎಂದು ಶ್ರೀರಂಗಮಹಾಗುರುಗಳು ಅದರ ವಿಜ್ಞಾನವನ್ನು ವಿವರಿಸಿದ್ದರು.

ಆಚರಣೆಯ ವಿವರ:
ಶಿವನಿಗೆ ಪರಮಪ್ರಿಯವಾದದ್ದು ಧ್ಯಾನ ಮತ್ತು ಆತ್ಮಗುಣಸಂಪತ್ತು. ಸದಾಶಿವನಿಗೆ ಅದೇ ಧ್ಯಾನ ಎಂಬಂತೆ ಅವನು ವಿಶೇಷವಾಗಿ ಧ್ಯಾನಪ್ರಿಯ. ದಯೆ,ಅನಸೂಯತೆ ಅನಾಯಾಸ, ಕಾರ್ಪಣ್ಯವಿಲ್ಲದಿರುವಿಕೆ, ಕ್ಷಮಾಗುಣ, ದುರಾಸೆಯಿಲ್ಲದಿರುವಿಕೆ ಇವು ಪ್ಪ್ರಸಿದ್ಧವಾದ ಆತ್ಮಗುಣಗಳು. ಇಲ್ಲಿ ಧ್ಯಾನರೂಪವಾದ ಅಂತರಂಗದ ಪೂಜೆಯ ಜೊತೆಗೆ ಬಾಹ್ಯಪೂಜೆಯೂ ಶ್ರೇಷ್ಠವಾದುದೇ. ಉಪಚಾರಗಳಲ್ಲಿ ಶಿವನಿಗೆ ಅಭಿಷೇಕಪ್ರಿಯ. ಬಿಲ್ವಪತ್ರೆ, ಪದ್ಮಪುಷ್ಪ, ತುಂಬೇಹೂಗಳು ಶಿವನಿಗೆ ವಿಶೇಷವಾದ ತೃಪ್ತಿಯನ್ನು ನೀಡುತ್ತವೆ. ಕೆಂಪುದಾಸವಾಳವೂ ಶಿವನಿಗೆ ಪರಮಪ್ರಿಯವಾದುದು ಎಂದು ಶ್ರೀರಂಗಮಹಾಗುರುಗಳು ಗುರುತಿಸಿದ್ದರು.

ಪ್ರಿಯ ಎಂದರೆ ಏನು:
ಇಲ್ಲಿ ಪ್ರಿಯವೆಂದರೆ ಏನು? ಸಮಸ್ತ ಜಗತ್ತೂ ಅವನ ಸೃಷ್ಟಿಯೇ ಆಗಿರುವಾಗ ಕೆಲವನ್ನು ಮಾತ್ರ ಪ್ರಿಯ ಎಂದರೇನು?  ನಮ್ಮ ದೇಹದಲ್ಲಿ ಸಮಸ್ತ ದೇವತೆಗಳಿಗೂ ಅವುಗಳದೇ ಆದ ಕೇಂದ್ರಗಳುಂಟು. ಅಂತಹ ಕೇಂದ್ರಗಳನ್ನು ಅರಳಿಸಿ ಆಯಾದೇವತೆಗಳ ಪ್ರಸನ್ನತೆಯನ್ನು ಈ ಪದಾರ್ಥಗಳು ನಮಗೆ ದೊರಕಿಸಿಕೊಡುತ್ತವೆ. ಆದ್ದರಿಂದ ಆಯಾ ದೇವತೆಗಳಿಗೆ ನಿರ್ದಿಷ್ಟವಾದ ಪುಷ್ಪಗಳು, ಫಲಾಹಾರಗಳು ಋಷಿಗಳಿಂದ ನಿರ್ದೇಶಿಸಲ್ಪಟ್ಟಿದೆ.

ಪೂಜೆ-ಉಪವಾಸ-ಜಾಗರಣೆ:
ಶಿವರಾತ್ರಿಯಲ್ಲಿ ಪೂಜೆ, ಉಪವಾಸ, ಜಾಗರಣೆಯುಂಟು. ಇವುಗಳಲ್ಲಿ ಮೂರೂ ಮುಖ್ಯವೇ. ಈ ಮೂರನ್ನೂ ಯಥಾಶಕ್ತಿ ಆಚರಿಸಬೇಕು. ಧ್ಯಾನ ಮತ್ತು ಅದರ ವಿಸ್ತಾರವಾದ ಬಾಹ್ಯಪೂಜೆ, ಅದಕ್ಕೆ ಪೋಷಕವಾಗಿ ಉಪವಾಸ. ಇಲ್ಲಿ ಉಪ ಎಂದರೆ ಸಮೀಪ ಎಂದರ್ಥ. ಒಳ-ಹೊರಪೂಜೆಗಳನ್ನು ಭಗವಂತನ ಸಮೀಪದಲ್ಲಿ ಇದ್ದುಕೊಂಡೇ ಆಚರಿಸಬೇಕು. ನಿರಾಹಾರವಾಗಿದ್ದಾಗ ಉದರವು ಹಗುರವಾಗಿರುವುದರಿಂದ ಅದು ಧ್ಯಾನಕ್ಕೆ ಪೋಷಕ. ಶಿವನ ಸಮೀಪದಲ್ಲಿ ನಮ್ಮನ್ನು ಇಟ್ಟುಕೊಳ್ಳಲು ಸಹಕರಿಸುತ್ತದೆ. ಸಾಧಕರ-ಜ್ಞಾನಿಗಳ ಅನುಭವಗಳ ಮಾತಿದು. ಶಿವರಾತ್ರಿಯಲ್ಲಿ ಇಡೀ ರಾತ್ರಿಯು ಧ್ಯಾನಕ್ಕೆ ಪೋಷಕವಾದ್ದರಿಂದ ಅಂದು ಜಾಗರಣೆ ಮಾಡಿ ಕಾಲದ ಪೂರ್ಣೋಪಯೋಗವನ್ನು ಮಾಡಿಕೊಳ್ಳಬೇಕು. ಆದರೆ ಅದನ್ನು ಪೂಜೆಗಾಗಿ ವಿನಿಯೋಗಿಸದೆ. ಜೂಜಾಟ ಇತ್ಯಾದಿಗಳು ಇಂದು ಚಾಲ್ತಿಗೆ ಬಂದಿವೆ. ಇದಕ್ಕಿಂತ ನಿದ್ರಿಸುವುದೇ ಹೆಚ್ಚು ಆರೋಗ್ಯಕರ. ಜಾಗರಣೆ ಎಂದರೆ ಭಗವಂತನ ಧ್ಯಾನ-ಪೂಜೆಗಳಲ್ಲಿ ತಲ್ಲೀನವಾಗಿ ಎಚ್ಚರವಾಗಿರುವುದು ಎಂದರ್ಥ. ಪೂಜಾಕಲ್ಪಗಳಲ್ಲಿ ಅನೇಕ ವೈವಿಧ್ಯಗಳಿದ್ದರೂ ಶಿವನ ಧ್ಯಾನ, ಅಭಿಷೇಕ, ಪೂಜೆ, ಜಾಗರಣೆ ಮತ್ತು ಉಪವಾಸಗಳನ್ನು ಎಲ್ಲಾ ಕಲ್ಪಗಳೂ ವಿಧಿಸಿವೆ.

ಕೆಲವು ಆಕ್ಷೇಪಗಳು:
ಶಿವನ ಕುರಿತು ಕೆಲವು ಪ್ರಶ್ನೆಗಳಿವೆ. ಸಂಕ್ಷೇಪವಾಗಿಯಾದರೂ ಅವುಗಳಿಗೆ ನಾವು ಸರಿಯಾದ ಸಮಾಧಾನ ಪಡೆಯದಿದ್ದರೆ, ನಮ್ಮ ಶ್ರದ್ಧೆಯು ಕುಂಠಿತವಾಗಬಹುದು.
ಶಿವನು ಕ್ರೂರಿ, ಪ್ರಳಯಕಾಲದಲ್ಲಿ ಎಲ್ಲ ಜೀವಿಗಳನ್ನೂ ಸಂಹರಿಸುವವನು. ಅಂತಹವನನ್ನು ಪೂಜಿಸಬೇಕೇ ಎಂದು ಕೆಲವರು ಕೇಳುತ್ತಾರೆ. ರುದ್ರನ ಸಂಹಾರಕ್ರಿಯೆಯು ನಿದ್ರೆಯಂತೆ ವರವೇ ಹೊರತು ಶಾಪವಲ್ಲ. ಒಂದು ದಿನ ನಿದ್ರೆ ಬಾರದಿದ್ದರೆ ಚಡಪಡಿಸುತ್ತೇವೆ. ನಿದ್ರೆಯಿಂದ ವಿಶ್ರಾಂತಿ, ಶಾಂತಿ, ಸಮಾಧಾನಗಳು ಉಂಟಾಗುತ್ತವೆ ಎನ್ನುವುದು ನಮ್ಮೆಲ್ಲರ ಅನುಭವದಲ್ಲಿಯೇ ಇದೆ. ಇದರಂತೆಯೇ, ಬಹಳ ದೀರ್ಘಕಾಲ ಕರ್ಮವನ್ನಾಚರಿಸಿ ದಣಿದಿರುವ ಸಮಸ್ತ ಜೀವಿಗಳಿಗೂ ವಿಶ್ರಾಂತಿಯನ್ನು ಪ್ರಳಯಕಾಲದಲ್ಲಿ ಎಲ್ಲರನ್ನೂ ಸಂಹರಿಸುವುದರ ಮೂಲಕ ಮಹಾದೇವನು ದಯಪಾಲಿಸುತ್ತಾನೆ. ಈ ವಿಶ್ರಾಂತಿಯ ನಂತರ ಜೀವಿಗಳಿಗೆ ತಮ್ಮ ಉಳಿದಿರುವ ಕರ್ಮಫಲವನ್ನು ಅನುಭವಿಸುವುದಕ್ಕೂ. ಮುಕ್ತಿಗಾಗಿ ಸಾಧನೆ ಮಾಡುವುದಕ್ಕೂ ತಕ್ಕ ಶಕ್ತಿಯೂ, ಹೊಸದೇಹವೂ ಪುನಃ ಕೂಡಿಬರುತ್ತದೆ. ಇಂತಹ ರುದ್ರದೇವರನ್ನು ಕರುಣಾಮಯನೆಂದೇ ಕರೆಯಬೇಕು.

ಭೀಕರರೂಪದ ಶಿವನನ್ನು ಪೂಜಿಸುವುದೇ ಎಂಬುದು ಇನ್ನೊಂದು ಪ್ರಶ್ನೆ. ಶಿವನು ಧ್ಯಾನದೃಷ್ಟಿಯಿಂದ ನೋಡಬಲ್ಲವರಿಗೆ ಪರಿಪೂರ್ಣವಾದ ಸೌಂದರ್ಯರಾಶಿ. ಸರ್ವವ್ಯಾಪಕನಾಗಿರುವ ಅವನಿಗೆ ರುಂಡಮಾಲೆಯೂ ಒಂದೇ, ಮಣಿಮಾಲೆಯೂ ಒಂದೇ. ಮದುವೆಮನೆ ಮಸಣಗಳೆರಡೂ ಒಂದೇ. ಯಾವುದರಿಂದಲೂ ಲಿಪ್ತನಾಗದ ಶುದ್ಧಚೈತನ್ಯಸ್ವರೂಪ ಅವನು. ಪರಮವೈರಾಗ್ಯಮೂರ್ತಿಯಾದ ಅವನು ದಿಗಂಬರನಾಗಿರುವುದು ಸಹಜವೇ. ಅವನಿಗೆ ಸುಂದರೇಶ್ವರನೆಂಬ ಹೆಸರೇ ಉಂಟು.

ಶಿವನು ತಮೋಗುಣದ ದೇವತೆ. ಆದ್ದರಿಂದ ರಾಕ್ಷಸರೇ ಹೆಚ್ಚಾಗಿ ಅವನ ಮಹಾಭಕ್ತರೆಂದು ಪ್ರಸಿದ್ಧರಾಗಿದ್ದಾರೆ. ಅಂತಹವನನ್ನು ಸಾತ್ವಿಕರು ಪೂಜಿಸಬಹುದೇ? ರುದ್ರನು ತಮೋಗುಣಕ್ಕೆ ಅಧಿದೇವತೆ. ಅವನು ಅದರ ನಿಯಾಮಕನೇ ಹೊರತು ಅದಕ್ಕೆ ಅಧೀನನಲ್ಲ. ವಾಸ್ತವಿಕವಾಗಿ ಅವನಲ್ಲಿ ಸಾತ್ವಿಕ ಮತ್ತು ತಾಮಸಕಳೆಗಳೆರಡೂ ಇರುತ್ತವೆ. ಅಸುರರು ಶಿವನ ತಾಮಸಕಳೆಯನ್ನು ಉಪಾಸನೆ ಮಾಡಿ ಸಿದ್ಧಿಗಳನ್ನು ಪಡೆದರೆ, ಸಾತ್ವಿಕರು ಅವನ ಸಾತ್ವಿಕಕಳೆಯನ್ನು ಉಪಾಸಿಸಿ ಜ್ಞಾನಾದಿ ಸಿದ್ಧಿಗಳನ್ನು ಪಡೆಯುತ್ತಾರೆ.

ವಿಕಾರರಹಿತನಾದ ಪರಮಾತ್ಮನಿಗೆ ಲಿಂಗಾಕಾರದೊಂದಿಗೆ ಜನನೇಂದ್ರಿಯದೊಡನೆ ಐಕ್ಯವನ್ನು ಕಲ್ಪಿಸುವುದು ಅಸಹ್ಯಕ್ಕರವಲ್ಲವೇ ಎಂಬ ಪ್ರಶ್ನೆಯೂ ಇದೆ. ಇದಕ್ಕೆ ಸಂಕ್ಶಿಪ್ತವಾಗಿ ಹೀಗೆ ಉತ್ತರಿಸಬಹುದು. ಶುದ್ಧಾತ್ಮರಾದ ಯೋಗಿಗಳು ತಮ್ಮ ಅಂತರಂಗದಲ್ಲಿ, ಮೂಲಾಧಾರ, ಹೃದಯ, ಭ್ರೂಮಧ್ಯ ಇತ್ಯಾದಿ ಸ್ಥಾನಗಳಲ್ಲಿ ದಿವ್ಯವಾದ ಈ ಲಿಂಗವನ್ನು ದರ್ಶನ ಮಾಡುತ್ತಾರೆ. “ಮಧ್ಯಮೇ ಚ ಹೃದಯಸ್ಯ ಲಲಾಟೇ ಸ್ಥಾಣುವಜ್ವಲತಿ ಲಿಂಗಮದೃಶ್ಯಂ...” ಎಂದು ಯೋಗಗ್ರಂಥಗಳು ಸಾರುತ್ತವೆ. ಇದು ಜ್ಞಾನಿಗಳಿಗೆ ಅನುಭವೇದ್ಯವಾದದ್ದು. ಆದ್ದರಿಂದಲೇ ಸಾಧನೆಯ ಮಾಧ್ಯಮವಾಗಿ ಲಿಂಗವು ಋಷಿಗಳಿಂದ ಭಾರತೀಯರ ಜೀವನದಲ್ಲಿ ಅಳವಡಿಸಲಟ್ಟಿದೆ.

ಇನ್ನೂ ಅನೇಕ ಪ್ರಶ್ನೆಗಳಿವೆ. ಈ ಚಿಕ್ಕ ಲೇಖನದಲ್ಲಿ ಎಲ್ಲವುದಕ್ಕೂ ಉತ್ತರ ಸಾಧ್ಯವಿಲ್ಲ. ಶಿವೋSಹಮ್ ಶಿವೋSಹಮ್ ಎಂಬ ಭಾವದಲ್ಲಿ ನೆಲೆಗೊಂಡು ಪುರುಷಾರ್ಥಮಯವಾದ ಬಾಳಾಟಕ್ಕೆ ಶಿವರಾತ್ರಿಯು  ಶಿವನ ದೊಡ್ಡ ವರದಾನವಾಗಿದೆ.