Sunday, March 10, 2019

ಹೆಸರಿನಲ್ಲೇನಿದೆ? (Hesarallenide?)

ಲೇಖಕರು: ತಾರೋಡಿ ಸುರೇಶ

ಹೆಸರಿಡುವುದನ್ನು ನಾಮಕರಣ ಎನ್ನುತ್ತಾರೆ. ಹೆಸರು ಒಂದು ವ್ಯಾವಹಾರಿಕ ಆವಶ್ಯಕತೆ. ಒಂದೊಮ್ಮೆ ಹೆಸರಿಡದಿದ್ದರೆ ತಾನಾಗಿಯೇ ವ್ಯಕ್ತಿಯಲ್ಲಿರುವ ವೈಶಿಷ್ಟ್ಯಕ್ಕನುಗುಣವಾಗಿ ಒಂದು ಹೆಸರು ಹುಟ್ಟಿಕೊಂಡುಬಿಡುತ್ತದೆ. ಹಲ್ಲು ಮುಂದೆ ಬಂದಿದ್ದರೆ ‘ಹಲ್ಲುಬ್ಬ’ ಎಂದೋ, ಬೆಕ್ಕಿನಂತಹ ಕಣ್ಣಿದ್ದರೆ ‘ಬೆಕ್ಕಿನಕಣ್ಣು’ ಎಂದೋ ಒಂದು ಹೆಸರು ಆವಿರ್ಭವಿಸಿಬಿಡುತ್ತದೆ.  ಇದು ಮನುಷ್ಯರಿಗೆ ಮಾತ್ರವಲ್ಲ.ವಿಶ್ವದಲ್ಲಿರುವ ಸಮಸ್ತ ಪದಾರ್ಥ, ಪ್ರಾಣಿ, ಸಸ್ಯ ಎಲ್ಲವುದಕ್ಕೂ ಅನ್ವಯಿಸುತ್ತದೆ.

ಶೇಕ್ಸ್‍ಫಿಯರ್ 'what is there in a name? A rose by any other name would smell as sweet.' ಎಂದು ಹೇಳುತ್ತಾನೆ. ರೋಸ್ ಗೆ ಮೋಸ್ ಎಂದೋ.ನೋಸ್ ಎಂದೋ ಕರೆದಾಕ್ಷಣ ಅದರ ವಾಸನೆ,ಬಣ್ಣ ಎಲ್ಲ ಬದಲಾಗಿಬಿಡುವುದೇ?  ಎನ್ನುವುದು ಈ ಮಾತಿನ ಅಭಿಪ್ರಾಯ. ಆದರೆ ಅದರ ಕೋಮಲತೆ,ವರ್ಣ,ಸೌರಭ ಸ್ವರೂಪಕ್ಕಗನುಗುಣವಾಗಿ ಹೆಸರಿಡುವುದೊಂದು ಕಲೆ ಎನ್ನುವುದನ್ನು ಅಲ್ಲಗಳೆಯಲಾಗದು.

ವ್ಯವಹಾರವೆಂದರೇನು?. ಮೂಲ ಆಶಯಕ್ಕನುಗುಣವಾಗಿ ನಡೆಸುವುದೆಲ್ಲವೂ ವ್ಯವಹಾರವೇ. ನಮ್ಮ ಪೂರ್ವಜರಾದ ಋಷಿಗಳು ವ್ಯವಹಾರವನ್ನು ಎರಡು ಬಗೆಯಾಗಿ ಕಂಡು, ಅವುಗಳಿಗೆ ಲೌಕಿಕ ಮತ್ತು ಪಾರಮಾರ್ಥಿಕ ಎಂದು ಹೆಸರಿಟ್ಟಿದ್ದಾರೆ. ಆದರೆ ಲೌಕಿಕವು ಪಾರಮಾರ್ಥಿಕಕ್ಕೆ ಅನುಗುಣವಾಗಿರಬೇಕು ಎಂದು ಪರಮಾತ್ಮಸುಖಕ್ಕೆ ಸೋಪಾನವಾಗಿ ಈ ವ್ಯವಹಾರಗಳನ್ನು ಅಳವಡಿಸಿದರು. ಅವೆರಡಕ್ಕೂ ಹೊಂದುವಂತೆ ಹೆಸರಿಡುವ ಪ್ರಕ್ರಿಯೆಯನ್ನು ತಂದಿದ್ದಾರೆ.

ಮಗನಿಗೆ ಇಟ್ಟಿದ್ದ ‘ನಾರಾಯಣ’ ಎಂಬ ಶುಭ ನಾಮಧೇಯದ ಕಾರಣದಿಂದ ಅಜಾಮಿಳನಿಗೆ ಸದ್ಗತಿ ಪ್ರಾಪ್ತವಾಯಿತು ಎಂಬ ಕಥೆ ಇದೆ. ಸುಮ್ಮನೆ ಕರೆಯಲು ಒಂದು ಹೆಸರು ಎಂದು ನಮ್ಮ ದೇಶದಲ್ಲಿ ಬಂದಿಲ್ಲ. ಅದರ ಹಿನ್ನೆಲೆಯಲ್ಲಿ ಆಳವಾದ ವಿಜ್ಞಾನವಿದೆ. ‘ಮೊದಲು ತಾನೇತಾನಾಗಿ ಬೆಳಗುತ್ತಿದ್ದ ಪರತತ್ವವು ಸೃಷ್ಟಿಗೆ ಹೆಜ್ಜೆಯಿಟ್ಟಾಗ ತನ್ನನ್ನೇ ನಾಮ ರೂಪ ಪ್ರಪಂಚವಾಗಿ ಬೆಳೆಸಿಕೊಂಡಿತು’ ಎಂದು ಶ್ರುತಿಸ್ಮೃತಿಗಳು ಹೇಳುತ್ತವೆ. ಅಂದರೆ ಆಗ ಸೃಷ್ಟಿಗೊಂಡ ಸಮಸ್ತ ಜೀವಜಾತಿಗಳೊಂದಿಗೆ, ಮತ್ತು ಪದಾರ್ಥಗಳೊಂದಿಗೆ ಅವುಗಳ ಶಬ್ಧರೂಪವಾದ ಅಭಿವ್ಯಕ್ತಿಯಾಗಿ ಹೆಸರು(ಪದ)ಗಳೂ ಬಂದವು. ಅರ್ಥ(ಪದಾರ್ಥ)ಕ್ಕೆ ಪದವು ದೇಹವಾಗುತ್ತದೆ. ಅರ್ಥಕ್ಕೂ ಪದಕ್ಕೂ ಒಂದು ಅವಿನಾಭಾವಸಂಬಂಧವಿರುತ್ತದೆ. ಅರ್ಥವನ್ನು ಹಿಡಿದರೆ ಅದು ಪದಕ್ಕೂ, ಹಾಗೆಯೇ ಪದವನ್ನು ಹಿಡಿದರೆ ಅದು ಅರ್ಥಕ್ಕೂ ನಯನಮಾಡುವುದು. 

ಈ ರೀತಿ ಸೃಷ್ಟಿಯಲ್ಲಿ ಸಹಜವಾಗಿರುವ ಪದ ಪದಾರ್ಥಗಳ ಸಂಬಂಧವನ್ನು ಅರಿತು, ಯಾವುದೇ ವ್ಯಕ್ತಿಗೂ ಮತ್ತು ಪದಾರ್ಥಗಳಿಗೂ ಹೆಸರನ್ನಿಡುವ ಕಲೆ,ವಿಜ್ಞಾನ ನಮ್ಮ ದೇಶದಲ್ಲಿದ್ದಿತ್ತು. “ನಾಮ ಎನ್ನುವುದು ಚೈತನ್ಯದ ಶಬ್ಧರೂಪವಾದ ಮೂರ್ತಿ” ಎಂದು ಶ್ರೀರಂಗಮಹಾಗುರುಗಳು ವರ್ಣಿಸುತ್ತಿದ್ದರು. ವ್ಯಕ್ತಿಯೊಬ್ಬನು ಜೀವ, ಮನೋಬುದ್ಧೀಂದ್ರಿಯಗಳು, ಪುಣ್ಯಪಾಪಗಳ ಸಂಸ್ಕಾರಗಳು, ಇವುಗಳೆಲ್ಲಕ್ಕೂ ಒಡಲಾಗಿರುವ ದೇಹದಿಂದ ಕೂಡಿರುತ್ತಾನಷ್ಟೆ.  ಮೂಲದಲ್ಲಿ ಪರಮಾತ್ಮತತ್ವವೂ ಬೆಳಗುತ್ತಿರುತ್ತದೆ. ಜ್ಞಾನಿಗಳಾದ ಮಾತಾಪಿತೃಗಳು ಗುರುಜನರು ಇದೆಲ್ಲವನ್ನು ತಮ್ಮ ಯೋಗದೃಷ್ಟಿಯಿಂದ ಅರಿತು ಆ ಜೀವಕ್ಕೆ ಸಹಜವಾದ ಶಬ್ಧರೂಪವಾದ ಹೆಸರನ್ನಿಡುವ ಪದ್ಧತಿಯಿತ್ತು.  ಅದರ ಉಚ್ಛಾರ, ಸ್ಮರಣೆಗಳು ವಿಜ್ಞಾನಸಹಿತವಾಗಿದ್ದಾಗ ಆ ಜೀವಿಯನ್ನು ಪರಮಾತ್ಮನಲ್ಲಿ ಲಯಗೊಳಿಸುವ ಮಂತ್ರರೂಪವಾದ ಸಾಧನವಾಗುತ್ತಿದ್ದವು. ಆದ್ದರಿಂದಲೇ ನಮ್ಮ ರಾಷ್ಟ್ರಕವಿಯಾದ ಕಾಳಿದಾಸನು  ‘ಶಬ್ದ(ಪದ,ಹೆಸರು) ಮತ್ತು ಅರ್ಥಗಳು ಎಂದಿಗೂ ಬೇರೆಯಾಗದ ಪಾರ್ವತೀಪರಮೇಶ್ವರರಂತೆ’ ಎಂದಿದ್ದಾನೆ. ಜೊತೆಗೆ, ದೇವರು, ದೇವರಿಗೆ ಸಮರ್ಪಿಸುವ ಪದಾರ್ಥಗಳಿಗೆ ಹೆಸರಿಡುವಾಗ, ಜೀವನದ ಮಹಾಧ್ಯೇಯಸಾಧನೆಗೆ ಸ್ಫೂರ್ತಿದಾಯಕವಾದ, ಸ್ತ್ರೀಪುರುಷ ಧರ್ಮಗಳಿಗೆ ಹೊಂದಿಕೊಳ್ಳುವ ಹೆಸರುಗಳನ್ನು ಇಡುತ್ತಿದ್ದರು - ಹೀಗೆಲ್ಲಾ ಋಷಿಗಳ ಚಿಂತನೆ ತುಂಬಾ ಆಳವಾಗಿ ಸಾಗಿದೆ. ಹೆಸರು ಆರ್ಥಶುದ್ಧಿ,ವರ್ಣಶುದ್ಧಿ,ಮಂತ್ರಶುದ್ಧಿಯನ್ನು ಹೊಂದಿ,ಅಂತ್ಯದಲ್ಲಿ ನಾಮರೂಪಗಳ ಸೀಮೆಯನ್ನು ದಾಟಿ ಪರತತ್ವದಲ್ಲಿ ನೆಲೆಗೊಳಿಸುತ್ತದೆ.

ಒಟ್ಟಿನಲ್ಲಿ, ನಾಮ, ರೂಪ ಮತ್ತು ಅವುಗಳ ವಿಕಾಸಕ್ಕೂ ಮೊದಲಿನ ಬೀಜರೂಪವಾದ ಭಗವಂತ- ಈ ಮೂರರ ಸಂಯೋಜನೆಯಿಂದಾಗಿ ಹೆಸರಿಟ್ಟುಕೊಂಡವನಲ್ಲಿ ಒಂದು ಧರ್ಮವು ಉದ್ಬೋಧಗೊಂಡು ಅದೊಂದು ಸಂಸ್ಕಾರವಾಗಿ ಆ ಜೀವಿಯ ಉದ್ಧಾರಕ್ಕೆ ಕಾರಣವಾಗುತ್ತದೆ. ಹೆಸರೇ ಒಂದು ಸಾಧನಾಕ್ರಮವಾಗಿ ಜೀವಿಯನ್ನು ಪರಮಾತ್ಮತತ್ವದ ಉಪಾಸನೆಯಲ್ಲಿ ನೆಲೆನಿಲ್ಲಿಸುವುದು ಅದೆಂತಹ ಅದ್ಭುತವಾದ ವಿಷಯವಾಗಿದೆ.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.