Saturday, March 23, 2019

ಆತ್ಮಗುಣಗಳು (Aathmagunagalu)


                                                                ಲೇಖಕರು: ತಾರೋಡಿ ಸುರೇಶ


ಆತ್ಮಸ್ವರೂಪವನ್ನು ಹೊಂದಿಸುವ ಗುಣಗಳಿಗೆ ಆತ್ಮಗುಣಗಳೆಂದು ಹೆಸರು. ಇವು ಆತ್ಮಪ್ರಾಪಕವಲ್ಲದೆ ಅದಕ್ಕಿರುವ ವಿಘ್ನಗಳನ್ನೂ ನಿವಾರಿಸುತ್ತವೆ. ದಯೆ, ಕ್ಷಮೆ, ಅನಸೂಯಾ, ಶೌಚ, ಅನಾಯಾಸ, ಮಂಗಲ, ಅಕಾರ್ಪಣ್ಯ ಮತ್ತು ಅಸ್ಪೃಹಾ ಇವೇ ಆ ಎಂಟು ಆತ್ಮಗುಣಗಳು. ಸಾಧಕನು ಆತ್ಮಭಾವಕ್ಕೆ ಏರಿದಾಗ ಸಹಜವಾಗಿಯೇ ಆತ್ಮಗುಣಗಳು ಪ್ರಬೋಧಗೊಳ್ಳಬಹುದು ಮತ್ತು ಸಂಸ್ಕಾರಗಳಿಂದಲೂ, ಸ್ವಪ್ರಯತ್ನಗಳಿಂದಲೂ ಮೈಗೂಡಬಹುದು-ಹೀಗೆ ಎರಡೂ ಉಂಟು.ಈಗ ವಿವರಗಳನ್ನು ನೋಡೋಣ.


ದಯೆ:
ಆಪತ್ತಿಗೊಳಗಾದವರನ್ನು ರಕ್ಷಿಸುವ ಸಹಜವಾದ ಮನೋಧರ್ಮ. ಲೋಕದಲ್ಲಿ ಒಬ್ಬನು ಇನ್ನೊಬ್ಬನಿಗೆ ದಯೆಯನ್ನು ತೋರಿಸಿದರೆ ಇಬ್ಬರಿಗೂ ಲಾಭ ಉಂಟು. ತೋರಿಸಿದವನಿಗೆ ಶುದ್ಧಿ,ಪುಣ್ಯ ದೊರಕಿದರೆ, ದಯೆಗೆ ಪಾತ್ರನಾದವನಿಗೆ ಕಷ್ಟ ಪರಿಹಾರ. ಶ್ರೀರಾಮನಲ್ಲಿ ದಯೆ ಎನ್ನುವುದು ಸಹಜವಾಗಿಯೇ ತುಂಬಿತ್ತು. ದಯೆಯು ಭಗವಂತನ ಗುಣ. ಆದರೆ ಭಗವಂತನಿಗೆ ಯಾರಿಂದಲೂ ಏನೂ ಆಗಬೇಕಿಲ್ಲ. ಅದು ಅವನ ಸ್ವಭಾವ. ದಯೆಯ ಅಭಿವ್ಯಕ್ತಿ ಒಮ್ಮೆ ನೇರವಾಗಿರ-ಬಹುದು. ಅಥವಾ ಕಹಿಔಷಧಿಗೆ ಜೇನುತುಪ್ಪವನ್ನು ಲೇಪಿಸಿ, ರೋಗಿಗೆ ಗೊತ್ತಾಗದಂತೆ ಚಿಕಿತ್ಸೆ ಮಾಡುವ ವೈದ್ಯನ ದಯೆಯಂತೆಯೂ ಇರಬಹುದು. ದಯೆಯ ಮೂಲದಲ್ಲಿ ಎಲ್ಲ ಜೀವಿಗಳಲ್ಲಿ ಬೆಳಗುವ ಆತ್ಮಸ್ವರೂಪದ ನಂಟಿದೆ.

ಕ್ಷಮಾ:
ಅನ್ಯರ ಅಪರಾಧಗಳನ್ನು ತೀವ್ರವಾಗಿ ಗಣಿಸದೆ ಸಹಿಸುವ ಮನೋಧರ್ಮ. ಪ್ರತಿಯಾಗಿ ತೊಂದರೆಯನ್ನು ಕೊಡದಿರುವುದು. ಇತರರಿಂದ ಉಂಟಾದ ಒಳ-ಹೊರಗಿನ ಪ್ರಹಾರಗಳಿಂದ ವಿಚಲಿತನಾಗದಿರುವುದು. ಶ್ರೀರಾಮನು “ನ ಸ್ಮರತ್ಯಪಕಾರಾಣಾಂ ಶತಮಪಿ ಆತ್ಮವತ್ತಯಾ”- ತನ್ನಗೆ  ನೂರಾರು ಅಪಕಾರಗಳನ್ನು ಮಾಡಿದ್ದರೂ ಕೂಡ ಅವನ್ನು ಸ್ಮರಿಸುತ್ತಿರಲಿಲ್ಲ ಎನ್ನುತ್ತಾರೆ ವಾಲ್ಮೀಕಿಗಳು. “ಮನಸ್ಸಿನಲ್ಲಿಯೂ ಕೋಪ ಅಥವಾ ದುಃಖ ಉಂಟಾಗದಿದ್ದರೆ ಉತ್ತಮಕಲ್ಪ. ಹಾಗೆ ಉಂಟಾದರೂ ಹೊರಗಡೆ ಅದನ್ನು ಮುಂದುವರೆಸದಿದ್ದರೆ ಅಷ್ಟು ಪಾಪವಿಲ್ಲ” ಎಂದು ಶ್ರೀರಂಗಮಹಾಗುರುಗಳು ಹೇಳಿದ್ದರು.

ಅನಸೂಯಾ:
ಅಸೂಯೆ ಎಂದರೆ ಗುಣಗಳನ್ನೂ ಮತ್ತು ಗುಣಶಾಲಿಗಳನ್ನೂ ಸಹಿಸದ ಮನೋಧರ್ಮ. ಇದಲ್ಲದೇ- ಗುಣಶಾಲಿಯ ಬಗ್ಗೆ ಅಸೂಯೆ ಕೂಡದು. ಜೊತೆಗೆ ಅತ್ಯಲ್ಪ ಸದ್ಗುಣವಿದ್ದರೂ ಮೆಚ್ಚಬೇಕು. ಇನ್ನೊಬ್ಬನ ದೋಷದಲ್ಲಿ ರಮಿಸಬಾರದು-ಹೀಗಿದ್ದರೆ ಅದು ಅನಸೂಯಾ.

ಶೌಚ:
ದೇಹಶುದ್ಧಿಯ ಜೊತೆಗೆ ಪ್ರಧಾನವಾಗಿ ಧಾತುಗಳನ್ನು ದೂಷಿತಗೊಳಿಸುವ ಆಹಾರಗಳನ್ನು ಸೇವಿಸದಿರುವುದು, ದುಷ್ಟಸಹವಾಸವರ್ಜನೆ ಮತ್ತು ಸ್ವಧರ್ಮಾಚರಣೆಗಳನ್ನು ಶೌಚವೆಂದು ಕರೆದಿದ್ದಾರೆ. ಅಭಕ್ಷ್ಯವಾದ ಪದಾರ್ಥಗಳ ಸೇವನೆಯಿಂದ ಬಿಡುಗಡೆ ಪಡೆಯುವುದು ಬಹು ದುಸ್ತರ. ಮನಸ್ಸಿನಿಂದಲೂ ಬಯಸಬಾರದು, ಮತ್ತು ಅದು ಮೈಗೂಡಿದಲ್ಲಿ ಪರಮಾತ್ಮಸಾಕ್ಷಾತ್ಕಾರ ಮಾತ್ರದಿಂದಲೇ ಅದರ ನಿವಾರಣೆ ಸಾಧ್ಯ ಎಂದು ಜ್ಞಾನಿಗಳು ಹೇಳುತ್ತಾರೆ.

ಅನಾಯಾಸ:
ಮಿತಿಮೀರಿದ ಆಯಾಸ ಕೂಡದು. ಇದು ಪರ್ಯವಸಾನದಲ್ಲಿ ಆತ್ಮಸಮಾಧಿಗೆ ಭಂಗ ತರುತ್ತದೆ. ಆತ್ಮರಕ್ಷಣೆಗಾಗಿ ಶರೀರದ ರಕ್ಷಣೆ ಬಹುಮುಖ್ಯ. ಶ್ರೀರಾಮನನ್ನು ‘ಅಕ್ಲಿಷ್ಟಕರ್ಮಾ’ ಎಂದು ಕರೆದಿದ್ದಾರೆ. ಆತ್ಮಕ್ಲೇಷಕ್ಕೆ ಕಾರಣವಾಗುವ ಕೆಲಸಗಳನ್ನು ರಾಮನು ಮಾಡುತ್ತಿರಲಿಲ್ಲವೆಂದು ಇದರ ಒಂದು ಅರ್ಥ.

ಮಂಗಲ:
ಶುಭವಾದದ್ದನ್ನು ಮಾತ್ರ ಆಚರಿಸಿ ತದ್ವಿರುದ್ಧವಾದದ್ದನ್ನು ತ್ಯಜಿಸುವುದು ಮಂಗಲ. ಸಾಧಕನು ಸದಾ ಮಂಗಲವನ್ನೇ ಆಚರಿಸಬೇಕು.ಮಂಗಲವೆಂದರೆ ಸುಖವನ್ನು ತರುವಂತಹದ್ದು ಎಂದರ್ಥ. ಆತ್ಮನಿಗನುಗುಣವಾಗಿ ಶರೀರವನ್ನು ಸ್ಥೂಲಸೂಕ್ಷ್ಮಪರಗಳಲ್ಲಿ ಚೆನ್ನಾಗಿಡುವಂತಹ ಕರ್ಮಗಳನ್ನು, ದ್ರವ್ಯಗಳನ್ನು ಬಯಸಿ ಸೇವಿಸುವುದು.

ಅಕಾರ್ಪಣ್ಯ:
ಅತ್ಯಲ್ಪ ಸಂಪತ್ತಿದ್ದರೂ ಸಂತೋಷದಿಂದ ಸತ್ಪಾತ್ರನಿಗೆ ನಿತ್ಯವೂ ಕಿಂಚಿತ್ತಾದರೂ ದಾನ ಮಾಡುವಿಕೆಗೆ ಅಕಾರ್ಪಣ್ಯ ಎಂದು ಹೆಸರು. ಹಾಗೆ ಮಾಡುವ ಗುಣವಿಲ್ಲದವನು ಕೃಪಣ. ಶ್ರೀರಂಗಮಹಾಗುರುಗಳು ಇದಕ್ಕೆ ಇನ್ನೊಂದು ವಿವರಣೆಯನ್ನು ಕೊಟ್ಟಿದ್ದರು; 
ಬ್ರಹ್ಮಭಾವವಿಲ್ಲದವನು ಕೃಪಣ. ಆತ್ಮಜ್ಞಾನವನ್ನು ಪಡೆದು, ಅಭ್ಯಾಸದಿಂದ ತನ್ನ ಸಪ್ತಧಾತುಗಳಲ್ಲಿಯೂ ಆ ಭಾವವನ್ನು ಸಾತ್ಮ್ಯಮಾಡಿಕೊಂಡವನೇ ಪರಿಪೂರ್ಣನಾದ ಬಹ್ಮಜ್ಞಾನಿ. ಅವನಲ್ಲಿ ಸಹಜವಾಗಿಯೇ ಅಕಾರ್ಪಣ್ಯವು ನೆಲೆಸಿರುತ್ತದೆ. ಇದು ಉಳಿದವರಿಗೆ ಆದರ್ಶ.

ಅಸ್ಪೃಹಾ:
ಸತ್ಕರ್ಮಗಳ ಫಲರೂಪವಾಗಿ ಬಂದಿದ್ದರಲ್ಲಿ ಸಂತೋಷಪಡುವುದು, ತನ್ನದಲ್ಲದ್ದನ್ನು ಬಯಸದಿರುವುದು.ಸಂಸ್ಕಾರಗಳಿಂದ ಸುಸಂಸ್ಕೃತನಾದ ಸದಾ ಆತ್ಮಗುಣಸಂಪನ್ನನು ಋಷಿಹೃದಯ, ದೇವತಾಪ್ರೀತಿ ಮತ್ತು ಬ್ರಹ್ಮಸಾಯುಜ್ಯದ ಮಹದಾನಂದವನ್ನು ಪಡೆಯುತ್ತಾನೆ ಎಂದು ಶಾಸ್ತ್ರಗಳು ಒಕ್ಕೊರಲಿನಿಂದ ಸಾರುತ್ತವೆ. ಸ್ವಸ್ಥಸಮಾಜಕ್ಕೂ ಆತ್ಮಗುಣಗಳು ಅತ್ಯಗತ್ಯ.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.