ಲೇ ಖಕರು: ತಾರೋಡಿ ಸುರೇಶ
ಕೊಳೆಯನ್ನು ತೊಳೆದು ಹೊಳೆಯುವಂತೆ ಮಾಡುವುದೇ ಸಂಸ್ಕಾರ. ಈ ಪ್ರಕ್ರಿಯೆಯಲ್ಲಿ ವಸ್ತುವನ್ನು ಅದರ ಮೂಲರೂಪಕ್ಕೆ ತರುವ ವಿಜ್ಞಾನವಿದೆ. ಪ್ರಧಾನವಾಗಿ ಹದಿನಾರು ಸಂಸ್ಕಾರಗಳನ್ನು ಹೇಳಿದೆ. ಇವುಗಳಲ್ಲಿ ಗರ್ಭಾಧಾನವು ಆದ್ಯವಾದದ್ದು. ಆದ್ಯ ಎಂಬಲ್ಲಿ ಮೊದಲನೆಯದು ಮತ್ತು ಮಹತ್ವದ್ದು ಎಂಬೆರಡು ಅರ್ಥಗಳನ್ನೂ ಗ್ರಹಿಸಬೇಕು. ಯಾವ ಕರ್ಮದಿಂದ ಗರ್ಭವು ಇರಿಸಲ್ಪಡುತ್ತದೆಯೋ, ಗರ್ಭಧಾರಣೆಯಾಗುವುದೋ ಅದು ಗರ್ಭಾಧಾನ.
ಶ್ರೀರಂಗಮಹಾಗುರುಗಳು ಇದನ್ನು “ರೇತೋಯಜ್ಞ”ಎಂಬ ಪಾರಿಭಾಷಿಕ ಪದದಿಂದ ಕರೆಯುತ್ತಿದ್ದರು. ಇದು ಪ್ರಾಣಿಗಳಂತೆ ಕೇವಲ ಕಾಮದ ವ್ಯವಹಾರವಲ್ಲ. ಯಜ್ಞವೆಂದರೆ ದೇವಪ್ರೀತಿಕರವಾದ ಕರ್ಮ ಎಂದರ್ಥ. ಈ ಕ್ರಿಯೆಯು ದೀಪದ ಸಾನ್ನಿಧ್ಯದಲ್ಲಿಯೇ ನಡೆಯಬೇಕು.
ವಿವಾಹವಾದರೂ ‘ಧರ್ಮಪ್ರಜಾರ್ಥಂ ವೃಣೀಮಹೇ’ಎಂಬ ಸಂಕಲ್ಪದಿಂದಲೇ ನಡೆಯುವಂತಹದ್ದು. ಸತ್ಸಂತಾನಕ್ಕಾಗಿ ದಂಪತಿಗಳು ಸಂಕಲ್ಪಿಸುತ್ತಾರೆ. ಸತ್ಸಂಕಲ್ಪವೇ ಈ ಸಂಸ್ಕಾರಕ್ಕೆ ಜೀವಭೂತವಾದದ್ದು. ವರನು ಬ್ರಹ್ಮಚರ್ಯಾಶ್ರಮದಲ್ಲಿ ತಪೋಮಯನಾಗಿ, ಗುರುವಿನ ಅನುಮತಿಯನ್ನು ಪಡೆದು ಸುಶಿಕ್ಷಿತಳಾದ ಕನ್ಯೆಯನ್ನು ವರಿಸುತ್ತಾನೆ. ಬ್ರಹ್ಮಿಷ್ಠನ ಸಂತತಿಯನ್ನು ಅದರ ಧರ್ಮ ಕೆಡದಂತೆ ಧರಿಸಿ ಪಾಲಿಸಿ ಪೋಷಿಸಬೇಕಾದ ಜವಾಬ್ದಾರಿ ಪತ್ನಿಯದು. ನಂತರ ಗರ್ಭಾಧಾನ ಮತ್ತು ಆತ್ಮಗುಣಸಂಪನ್ನರಾದ ಪ್ರಜೆಗಳ ಜನನ. ತನ್ಮೂಲಕ ಸ್ವಸ್ಥಸಮಾಜ ನಿರ್ಮಾಣ- ಹೀಗೆ ಉದ್ದಕ್ಕೂ, ಆದ್ಯಂತವಾಗಿ ಸತ್ಪರಿಣಾಮ.
ಶುದ್ಧರಾಗಿರುವ ಪತಿಪತ್ನಿಯರು ರೇತೋಯಜ್ಞಕ್ಕೆ ಅರ್ಹರು. ತಾತ್ವಿಕವಾಗಿ, ಸೃಷ್ಟಿಮೂಲದಲ್ಲಿ ಬೆಳಗುತ್ತಿರುವ ಲಕ್ಷ್ಮೀನಾರಾಯಣರೇ,(ಶಿವ-ಶಕ್ತಿ) ಮೊದಲ ದಂಪತಿಗಳು.ಅವರ ಆಶಯವನ್ನು ಮುಂದುವರೆಸಿಕೊಂಡು ಹೋದರೆ ಮೌಲಿಕಶುದ್ಧಿ ಮುಂದುವರೆಯುತ್ತದೆ. ಅದಕ್ಕೆ ಬೇಕಾದ ವಿಧಿ-ನಿಷೇಧಗಳಿಗೊಳಪಟ್ಟು, ಸಂಯಮದ ಬಾಳಾಟವನ್ನು ನಡೆಸುವ ಹೊಣೆಗಾರಿಕೆಯಿದೆ. ಗರ್ಭಾಧಾನ ಸಂಸ್ಕಾರವು ಅಂತಹ ಬೀಜ ಮತ್ತು ಕ್ಷೇತ್ರಗಳೆರಡರ ಶುದ್ಧಿಯನ್ನು ಕೊಡುತ್ತದೆ.
ಉಳಿದ ಸಂಸ್ಕಾರಗಳಂತೆಯೇ ಗರ್ಭಾಧಾನದಲ್ಲಿಯೂ ಮಂತ್ರ-ತಂತ್ರ-ದ್ರವ್ಯ-ಕಾಲ ಇವುಗಳೆಲ್ಲದರ ವೈಜ್ಞಾನಿಕವಾದ ಅಳವಡಿಕೆಯನ್ನು ನೋಡುತ್ತೇವೆ. ಉದಾಹರಣೆಗೆ ಧರ್ಮಶಾಸ್ತ್ರ, ಆಯುರ್ವೇದ, ಜ್ಯೌತಿಷಗಳಲ್ಲಿ ಕಾಲಧರ್ಮದ ಮಹತ್ವವು ಆಶ್ಚರ್ಯಕರವಾಗಿ ಮೂಡಿಬಂದಿವೆ. ಈ ಸಂಕ್ಷಿಪ್ತಲೇಖನದಲ್ಲಿ ಸಾರಾಂಶವನ್ನು ಮಾತ್ರ ನೀಡಲಾಗಿದೆ.
ಗರ್ಭಾಧಾನಕ್ಕೆ ಸಂಧ್ಯಾಕಾಲವು ನಿಷಿದ್ಧ. ಏಕೆಂದರೆ ಅದು ಧ್ಯಾನಕ್ಕಾಗಿ ಇರುವ ಕಾಲ. ಕಷ್ಯಪ ಪ್ರಜಾಪತಿಯನ್ನು ಸಂಧ್ಯಾಕಾಲದಲ್ಲಿ ಒತ್ತಾಯಪೂರ್ವಕವಾಗಿ ಆತನ ಪತ್ನಿಯು ಮೈಥುನಕ್ಕೆಳೆದಾಗ ಅದರಿಂದ ಹಿರಣ್ಯಾಕ್ಷ ಹಿರಣ್ಯಕಶಿಪುವಿನಂತಹ ದೈತ್ಯರು ಹುಟ್ಟಿದರೆಂಬ ಕಥೆಗೆ ಇದೇ ಹಿನ್ನೆಲೆ. ರಜಸ್ವಲೆಯಾದಂದಿನಿಂದ ಹದಿನಾರು ರಾತ್ರಿಗಳಲ್ಲಿ 4,5,8,9,10,12,14,15 ಮತ್ತು 16ನೇ ರಾತ್ರಿಗಳು ಪ್ರಶಸ್ತ. ಮೊದಲನೆಯ ನಾಲ್ಕು ದಿನಗಳು, ಏಕಾದಶಿ, ತ್ರಯೋದಶಿ, ಪರ್ವದಿನಗಳು ಅಂದರೆ ಅಮಾವಾಸ್ಯೆ, ಪೂರ್ಣಿಮೆ, ಅಷ್ಟಮಿ, ಜನ್ಮದಿನ, ಜನ್ಮನಕ್ಷತ್ರ, ಜನ್ಮತಿಥಿಗಳು, ಹಗಲು, ಪ್ರದೋಷಕಾಲಗಳು ನಿಷಿದ್ಧ. ಇದಕ್ಕೆ ಕೆಲವು ಅಪವಾದಗಳೂ ಇವೆ. ಅಪರರಾತ್ರಿಯಲ್ಲಿಯೇ ನಡೆಯಬೇಕು.
ಎಷ್ಟನೆಯ ರಾತ್ರಿಯಲ್ಲಿ ದಂಪತಿಗಳು ಸೇರಿದರೆ ಎಂತಹ ಶಿಶುವು ಜನಿಸುತ್ತದೆ ಎಂಬ ಲೆಕ್ಕಾಚಾರವಿದೆ. ಉದಾಹರಣೆಗೆ 14ನೇ ರಾತ್ರಿಯಲ್ಲಿ ಸೇರಿದರೆ ಧರ್ಮಜ್ಞ, ಗುಣಶಾಲಿ, ಮತ್ತು ನಾಯಕನಾದ ಪುತ್ರನು ಹುಟ್ಟುತ್ತಾನೆ. ಬಲಮೂಗಿನಲ್ಲಿ ಶ್ವಾಸಸಂಚಾರವಿದ್ದರೆ ಪುರುಷಸಂತಾನ, ಎಡನಾಸಿಕದಲ್ಲಿ ಆಡುತ್ತಿದ್ದರೆ ಸ್ತ್ರೀಸಂತಾನವೆಂಬುದನ್ನೂ ಗುರುತಿಸಿದ್ದಾರೆ.
ಬೀಜ ಮತ್ತು ಕ್ಷೇತ್ರಗಳ ಶುದ್ಧಿ, ತನ್ಮೂಲಕ ಯೋಗ-ಭೋಗಮಯ ಬಾಳಾಟದ ಯೋಗ್ಯತೆಯುಳ್ಳ ಸಂತ್ಸಂತಾನಕ್ಕಾಗಿ ಋಷಿಗಳು ರೂಪಿಸಿಕೊಟ್ಟ ಸಂಸ್ಕಾರವು ಬಹು ಮುಖ್ಯವಾದದ್ದು. ಅನ್ಯಸಂಸ್ಕಾರಗಳಿಗೆ ಮೂಲಭೂತವಾದದ್ದು.
ಸೂಚನೆ: ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.