Wednesday, March 13, 2019

‘ಪುಂಸವನ’ ಸಂಸ್ಕಾರ- ಜ್ಞಾನಿಗಳ ವಂಶಕ್ಕಾಗಿ (Pumsavana samskara - jnanigala vamshakkagi)

ಲೇಖಕರು: ತಾರೋಡಿ ಸುರೇಶ

ಗರ್ಭಾಧಾನದ ನಂತರ ನಡೆಯಬೇಕಾದ ಸಂಸ್ಕಾರವಿದು. ಪುಂ ಎಂದರೆ ಪುರುಷ. ಸವನ ಎಂದರೆ ಪ್ರಸವಿಸುವುದು. ಯಾವ ಸಂಸ್ಕಾರದಿಂದ ಪುರುಷಶಿಶುವನ್ನು ಪಡೆಯುತ್ತೇವೆಯೋ ಅದು ಪುಂಸವನ. ಹಾಗಿದ್ದರೆ ಸ್ತ್ರೀಸಂತತಿಯು ಬೇಡವೇ? ಹುಟ್ಟುವ ಶಿಶುಗಳೆಲ್ಲ ಪುರುಷರೇ ಆಗಿ ತಕ್ಕ ಸಂಖ್ಯೆಯ ಸ್ತ್ರೀಯರಿಲ್ಲದಿದ್ದರೆ ವಂಶವೃದ್ಧಿ ಹೇಗೆ? ಸ್ತ್ರೀಯರನ್ನು ಕುರಿತು ಈ ಪಕ್ಷಪಾತ ನ್ಯಾಯವೇ?

ಶಾಸ್ತ್ರಗಳನ್ನೇ ಉಲ್ಲೇಖಿಸಿ ಶ್ರೀರಂಗಮಹಾಗುರುಗಳು ಹೀಗೆ ಉತ್ತರಿಸಿದ್ದರು. ಪುರುಷ ಎಂದರೆ ಎರಡು ಅರ್ಥಗಳಿವೆ. ಬ್ರಹ್ಮಜ್ಞಾನಿ ಎಂದು ಒಂದರ್ಥ. ಬ್ರಹ್ಮಜ್ಞಾನಿಯಲ್ಲದವನನ್ನು ನಮ್ಮ ಸಾಹಿತ್ಯಗಳಲ್ಲಿ ಸ್ತ್ರೀ ಎಂದೇ ಕರೆದಿದ್ದಾರೆ. ಕಾರಣ ಪ್ರಕೃತಿಯ ಪ್ರತಿನಿಧಿ ಸ್ತ್ರೀ. ಅಂತಹ ಪ್ರಕೃತಿಕ್ಷೇತ್ರವನ್ನು, ಇಂದ್ರಿಯಕ್ಷೇತ್ರವನ್ನು ಮೀರಿ ದೈವಸಾಕ್ಷಾತ್ಕಾರ ಮಾಡಿಕೊಂಡಿದ್ದರೆ ಅವನು ಪುರುಷ. ಇಲ್ಲದಿದ್ದರೆ ಸ್ತ್ರೀ ಎಂಬ ತಾತ್ವಿಕ ಅಭಿಪ್ರಾಯವಿಲ್ಲಿದೆ. ಇಲ್ಲಿ ಪುರುಷಶಿಶುವನ್ನು ಪಡೆಯುವುದು ಎಂದರೆ ಜ್ಞಾನಿಯಾದ ಶಿಶುವನ್ನು ಪಡೆಯುವುದು ಎಂದರ್ಥ. “ಜ್ಞಾನಿಯಾಗಿದ್ದರೆ ಬಾಹ್ಯ ಲಕ್ಷಣಗಳು ಹೆಣ್ಣಿನಂತೆ ಇದ್ದರೂ ಸ್ತ್ರೀಯನ್ನೂ ಪುರುಷ ಎಂದೇ ಕರೆಯಬೇಕು” ಎಂದು ವೇದಮಾತೆಯು ಹೇಳುತ್ತಾಳೆ. ಪುರುಷದೇಹದ ಬಾಹ್ಯ ಚಿಹ್ನೆಗಳುಳ್ಳವನು ಪುರುಷ ಎನ್ನುವುದು ಎರಡನೆಯ ಅರ್ಥ.  ಗಂಡಸು ಎನ್ನುವ ಅಭಿಪ್ರಾಯದಲ್ಲಿ ಬಳಸುತ್ತೇವೆ. ಗಂಡುಶಿಶುವನ್ನು ಪ್ರಥಮಸಂತಾನವಾಗಿ ಬಯಸುವುದರಲ್ಲಿಯೂ ತಪ್ಪೇನಿಲ್ಲ. ಋಷಿಗಳು ತಮ್ಮ ಅತೀಂದ್ರಿಯ ದೃಷ್ಟಿಯಿಂದ ನೋಡಿ “ಪುತ್ರನು ತನ್ನ ಜನ್ಮದ ಕಾರಣದಿಂದಲೇ ಮಾತಾಪಿತೃಗಳನ್ನು ಪುತ್ ಎಂಬ ನರಕದಿಂದ ಪಾರುಮಾಡುತ್ತಾನೆ” ಎಂದಿದ್ದಾರೆ. ಇದು ವಿಶೇಷವಾಗಿ ಸ್ತ್ರೀಗರ್ಭಕ್ಕೆ ಮಾಡುವ ಸಂಸ್ಕಾರ. ಮಹಾಪಾಪ ಕೃತ್ಯಗಳನ್ನು ಮಾಡಿರದಿದ್ದರೆ ಮುಂದಿನ ಎಲ್ಲ ಗರ್ಭಗಳಿಗೂ ಈ ಶುದ್ಧಿಯೇ ಮುಂದುವರೆಯುತ್ತದೆ. ಪುಂಸವನದ ಆಚರಣೆ ಸಂಕ್ಷಿಪ್ತವಾಗಿ ಹೀಗಿದೆ. ಪುಂಸವನ ಸಂಸ್ಕಾರಕ್ಕೆ ಪತ್ನಿಯು ಗರ್ಭವತಿಯಾಗಿರುವುದು ಖಚಿತವಾಗಿರಬೇಕು. 2,4,6 ಅಥವಾ 8ನೆಯ ತಿಂಗಳು ಉತ್ತಮ. ಇವೆಲ್ಲವೂ ಸಮಸಂಖ್ಯೆಯಾಗಿರುವುದರಿಂದ ಪುರುಷಸಂತಾನಕ್ಕೆ ಪೋಷಕ. ಪುರುಷ ನಕ್ಷತ್ರಗಳೂ ಕೂಡಿಬಂದರೆ ಇನ್ನೂ ಅನುಕೂಲ. ಪತ್ನಿಯು ಮಂಗಳಸ್ನಾನ, ಮಹಾತ್ಮರ ಅಥವಾ ದೇವತೆಗಳ ದರ್ಶನ ಮಾಡಿ ಹೊಸಬಟ್ಟೆಯನ್ನು ಧರಿಸಿ ಶುದ್ಧಳಾಗಿರಬೇಕು.

ಮುಂದಿನ ಎಲ್ಲ ಗರ್ಭಗಳೂ ಶುದ್ಧವಾಗಲಿ, ಪುರುಷಶಿಶುವು ಜನಿಸಲಿ ಮತ್ತು ಜ್ಞಾನಕ್ಕೆ ವಿರೋಧವಾದ ದುಷ್ಟಶಕ್ತಿಗಳ ನಿವಾರಣೆಯಾಗಲಿ ಎಂಬ ಸಂಕಲ್ಪ ಮಾಡಬೇಕು. ಅಂಗೈಯಲ್ಲಿ ನಿಗಧಿತಪ್ರಮಾಣದ ಮೊಸರನ್ನು ಪತಿಯಿಂದ ಹಾಕಿಸಿಕೊಂಡು, ಆ ಮೊಸರಿನ ಎಡಬಲಗಳಲ್ಲಿ ಲಿಂಗಾಕಾರದಲ್ಲಿ ಧಾನ್ಯವನ್ನಿಟ್ಟು ಪುಂ-ಭಾವವನ್ನು ಸೇವಿಸುತ್ತಿದ್ದೇನೆ ಎಂದು ಭಾವನೆ ಮಾಡಬೇಕು. ಆಲದ ಶಾಖೆಯನ್ನು ಅರೆಯಿಸಿ ಅದರ ರಸವನ್ನು ಪತಿಯು, ನಿರ್ದಿಷ್ಟ ಮಂತ್ರದೊಂದಿಗೆ ತನ್ನ ಅಂಗುಷ್ಠದ ಮೂಲಕ ತನ್ನ ಪತ್ನಿಯ ಮೂಗಿನ ಬಲಹೊಳ್ಳೆಯಲ್ಲಿ ಬಿಡುತ್ತಾನೆ. ಔಷಧಿಯ ಲಾಭ, ಪುರುಷಭಾವದ ಸ್ಮೃತಿ ಮತ್ತು ಪರಮಾತ್ಮನನ್ನು ಪ್ರತಿನಿಧಿಸುವ ಹೆಬ್ಬೆರಳಿನ ಮೂಲಕ ಔಷದಿಯ ರಸವನ್ನು ಬಿಡುವುದು ಇವೆಲ್ಲವೂ ಪುರುಷಸಂತಾನಕ್ಕೆ ಬೇಕಾದ  ಧರ್ಮವನ್ನು ಸ್ತ್ರೀಯ ಮೈಯಲ್ಲಿ ಪ್ರಬೋಧಗೊಳಿಸುವುದು. ಆಧ್ಯಾತ್ಮಿಕ, ಅಧಿದೈವ, ಅಧಿಭೌತಿಕ ಮೂರೂ ಕ್ಷೇತ್ರಗಳಿಗೂ ವ್ಯಾಪಿಸುವಂತೆ ಆಚರಣೆಗಳೊಂದಿಗೆ ಜ್ಞಾನಿಯಾದ ಪುರುಷಶಿಶುವನ್ನು ಪಡೆಯಲು ಋಷಿಗಳು ರೂಪಿಸಿಕೊಟ್ಟ ಸಂಸ್ಕಾರವೇ ಪುಂಸವನ.

ಸೂಚನೆ: ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.