Tuesday, 26 March 2019

ಸೀಮಂತೋನ್ನಯನ-2 (Seemanthonnayana-2)

ಲೇಖಕರು: ತಾರೋಡಿ ಸುರೇಶ


ಸೀಮಂತ ಸಂಸ್ಕಾರದಲ್ಲಿ ಒಂದು ವಿಶೇಷವಾದ ಮಂತ್ರವನ್ನು ಉಚ್ಛರಿಸಬೇಕು ಮತ್ತು  ಆ ಮಂತ್ರವನ್ನು ವೀಣೆಯಲ್ಲಿ ಕೂಡ ನುಡಿಸಬೇಕು. “ಸೋಮ ಏವನೋ ರಾಜೇತ್ಯಾಹು ಬ್ರಾಹ್ಮಣೀಃ ಪ್ರಜಾಃ ವಿವೃತ್ತಚಕ್ರಾ ಆಸೀನಾಸ್ತೀರೇಣ(ಅಸೌ) ಕಾವೇರಿ ತವಃ”ಎಂಬ ಪ್ರಸಿದ್ಧವಾದ ಮಂತ್ರವದು. ಈ ಮಂತ್ರವನ್ನು ಗಾಂಧಾರಗ್ರಾಮದಲ್ಲಿ ವೀಣೆಯಲ್ಲಿ ವಾದನ ಮಾಡಬೇಕು ಮತ್ತು ಜಪಿಸಬೇಕು. ಎಲ್ಲರಿಗೂ ಗಾಂಧಾರಗ್ರಾಮದಲ್ಲಿ ಉಚ್ಛರಿಸುವ ಸಾಮರ್ಥ್ಯವಿರುವುದಿಲ್ಲ. ಹಾಗೆ ಗಾಂಧಾರಗ್ರಾಮದಲ್ಲಿ ನುಡಿಸಲು ವೀಣೆಯು  ಅತ್ಯುತ್ತಮವಾದ ಸಾಧನವಾಗಿದೆ. ಪರಮಭಾಗವತೋತ್ತಮನಾದ ಪ್ರಹ್ಲಾದ ಗರ್ಭದಲ್ಲಿದ್ದಾಗ ಸಾಕ್ಷಾತ್ ನಾರದರೇ ಈ ವೀಣಾವಾದನದ ಸಂಸ್ಕಾರವನ್ನು ಕೊಟ್ಟಿದ್ದರು. ಐತರೇಯ ಉಪನಿಷತ್ತಿನಲ್ಲಿ ಬರುವ ಒಂದು ಮಾತನ್ನು ಶ್ರೀರಂಗಮಹಾಗುರುಗಳು ಉಲ್ಲೇಖಿಸುತ್ತಿದ್ದರು. ‘ಒಂದು ದೈವೀವೀಣೆ ಉಂಟು. ಅದರ ಅನುಕೃತಿಯಾಗಿ ಮಾನುಷೀವೀಣೆಯನ್ನು ಮಾಡಿಕೊಳ್ಳಬೇಕು. ನಮ್ಮೊಳಗೇ ಇರುವ ದೈವೀವೀಣೆಯನ್ನು ಅನುಕರಿಸಬೇಕು’. ಜ್ಞಾನಸಂತಾನವು ಆಗಲಿ ಎಂಬ ಸಂಕಲ್ಪದೊಡನೆ ವೀಣಾವಾದನವನ್ನು ಮಾಡಿದರೆ, ಕರ್ಣಕುಹರದ ಮೂಲಕ ಬ್ರಾಹ್ಮೀಶಕ್ತಿಯು ಶಿಶುವನ್ನು ಪ್ರವೇಶಿಸಿ ಜನ್ಮತಃ ಜ್ಞಾನಿಯ ಹುಟ್ಟಿಗೆ ಕಾರಣವಾಗುತ್ತದೆ. ಇದು ಸಮಸ್ತ ವಿಧಿ-ವಿಧಾನಗಳನ್ನು ಋಷಿಗಳ ಕ್ರಮದಂತೆ ವೈಜ್ಞಾನಿಕವಾಗಿ ನಡೆಸಿದಾಗ ಮಾತ್ರ ಎನ್ನುವುದನ್ನು ಮರೆಯುವಂತಿಲ್ಲ. ಆತ್ಮ ಹೇಳಿದಂತೆ ಬುದ್ಧಿಯೂ, ಬುದ್ಧಿ ಹೇಳಿದಂತೆ ಉಳಿದ ಕರಣಗಳೆಲ್ಲವೂ ನಡೆಯಬೇಕು ಎಂಬ ಮೌಲಿಕಾರ್ಥವನ್ನು ಇಲ್ಲಿ ಭಾವಿಸಬೇಕು.

ಇನ್ನು ರಾಕಾ, ಧಾತೃ, ನೇಜಮೇಶ ಇವರೆಲ್ಲರೂ ಕೂಡ ಗರ್ಭಕ್ಕೆ ಸಂಬಂಧಿಸಿದ ದೇವತೆಗಳು. ಅವರೂ ಪ್ರಸನ್ನರಾಗಬೇಕು. ಇಲ್ಲಿ ವೃಷಭವನ್ನು ದಾನ ಮಾಡಬೇಕು.  ಪತ್ನಿಯು ಗಂಡು ಕರುವನ್ನು ಸ್ಪರ್ಷ ಮಾಡಬೇಕು. ಒಟ್ಟಾರೆ ಸ್ಪರ್ಷ, ದರ್ಶನ, ದೇವತಾಪ್ರಸನ್ನಕರವಾದ ಮಂತ್ರಗಳು ಮತ್ತು ಅನ್ಯಾನ್ಯ ತಂತ್ರಗಳು- ಎಲ್ಲೆಡೆಯಲ್ಲಿಯೂ ಪುಂ-ಭಾವವೇ ಇದ್ದು ಪುರುಷಶಿಶುವಿನ ಜನನಕ್ಕೆ ಬೇಕಾದ ಯೋಜನೆ ಅತ್ಯಂತ ಮನೋಹರವಾಗಿದೆ. ಈ ಸಂಸ್ಕಾರದ ಮುಖ್ಯ ಉದ್ದೇಶಕ್ಕನುಗುಣವಾಗಿ ಶುದ್ಧಿ ಮತ್ತು ರಕ್ಷಣೆಯ ಹಿನ್ನೆಲೆಯಲ್ಲಿ ಅನೇಕ ನಿಯಮಗಳನ್ನು ಶಾಸ್ತ್ರಗಳು ಬೋಧಿಸುತ್ತವೆ. ಗರ್ಭಿಣಿಯು ಪ್ರಾಣಿಗಳ ಸವಾರಿ, ಬೆಟ್ಟ, ಮಹಡಿಗಳನ್ನು ಹತ್ತುವುದು, ಗಾಡಿಯಲ್ಲಿ ಪ್ರಯಾಣ ಇವುಗಳನ್ನು ಮಾಡಕೂಡದು. ಕುಟ್ಟುವುದು, ರುಬ್ಬುವುದು, ಕಲಹ ಕೂಡದು. ಸಂಧ್ಯಾಕಾಲದಲ್ಲಿ ಭೋಜನ ನಿಷಿದ್ಧ. ಮೈಥುನ ಕ್ರಿಯೆ ಮಾಡಬಾರದು.

ದಾನ, ಪರಿಶುದ್ಧವಾದ ಗೃಹದಲ್ಲಿ ವಾಸ, ಪ್ರಶಸ್ತವಾದ ಮಾಲೆಗಳ ಧಾರಣೆ, ಸ್ತೋತ್ರ ಹಾಗೂ ಸದ್ಗ್ರಂಥಗಳ ಅನುಸಂಧಾನ ಇವೆಲ್ಲವೂ ವಿಧಿಗಳು. ಸಂತೋಷವಾಗಿರುವುದು, ಮಹಾತ್ಮರ ದರ್ಶನ, ದೇವಾಲಯಗಳಿಗೆ ಹೋಗುವುದು ಇವೆಲ್ಲವೂ ಗರ್ಭಿಣಿಗೂ, ಗರ್ಭದಲ್ಲಿರುವ ಶಿಶುವಿಗೂ ಕ್ಷೇಮಕಾರಿ. ಹಾಗೆಯೇ ಪತಿಯೂ ಪತ್ನಿಯಿಂದ ಕಷ್ಟಕರವಾದ ಕೆಲಸಗಳನ್ನು ಮಾಡಿಸಬಾರದು. ಆಕೆಯ ಒಳ್ಳೆಯ ಅಪೇಕ್ಷೆಗಳನ್ನು ಈಡೇರಿಸಬೇಕು. ಪತ್ನಿಯ ಇಚ್ಛೆಯೂ ಧರ್ಮಕ್ಕನುಗುಣವಾಗಿರಬೇಕು. ದೂರಪ್ರಯಾಣ ಮಾಡಬಾರದು. ಕ್ಷೌರ, ಮೈಥುನ,  ಕೂಡದು. ಹೀಗೆ ಪತಿ ಪತ್ನಿಯರಿಬ್ಬರಿಗೂ ಇನ್ನೂ ಅನೇಕ ವಿಧಿ-ನಿಷೇಧಗಳನ್ನು ಹೇಳಿದ್ದಾರೆ. ಅವುಗಳ ವಿಜ್ಞಾನವನ್ನು ವಿವರಿಸುವುದು ಈ ಸಂಕ್ಷಿಪ್ತ ಲೇಖನದಲ್ಲಿ ಸಾಧ್ಯವಿಲ್ಲ.

ಜಗದಾದಿದಂಪತಿಗಳ ದಿವ್ಯವಾದ ದಾಂಪತ್ಯಭಾವವನ್ನು, ಕುಂದಿಲ್ಲದಂತೆ ಮುಂದುವರೆಸುವಂತಹ ಪವಿತ್ರವೂ, ಮಂಗಳಕರವೂ ಆದ ಕರ್ಮ ಸೀಮಂತೋನ್ನಯನ. ಧ್ಯಾನಸಮಾಧಿಯಲ್ಲಿ ಅನುಭವಿಸಿದ್ದನ್ನು ರೇತೋಯಜ್ಞದಲ್ಲಿ  ಸರಿಯಾಗಿ ಅರ್ಥಮಾಡಿಕೊಂಡು ಮುಂದುವರೆಸುವ ನಿಜವಾದ ಅರ್ಥದಲ್ಲಿ ಉನ್ನಯನ ಮಾಡುವಂತಹ ಸಂಸ್ಕಾರ.

ಸೂಚನೆ: ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.


To know more about Astanga Yoga Vijnana Mandiram (AYVM) please visit our Official Website, Facebook and Twitter pages