ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ನಾನರಿಯೆ - ಎನ್ನುತ್ತಾನೆ, ಲೀಲಾಶುಕ.
ಅರಿತವರ ಮಾತನ್ನಲ್ಲವೆ, ಕೇಳಬೇಕಾದುದು? - ಎಂದು ಮೊದಲು ತೋರಬಹುದು. ಆದರೆ ಏನನ್ನು ಅರಿಯೆನೆಂದು ಕವಿಯು ಹೇಳುತ್ತಿದ್ದಾನೆಂಬುದನ್ನು ಮೊದಲು ತಿಳಿದು ಆಮೇಲೆ ತಮ್ಮ ಪ್ರತಿಕ್ರಿಯೆಯನ್ನು ಕೊಡುವುದೊಳಿತು, ಅಲ್ಲವೆ?
ಏನನ್ನರಿಯೆ, ಲೀಲಾಶುಕ? – ಎಂದು ಕೇಳಿದರೆ, ಕೃಷ್ಣನಿಗಿಂತಲೂ ಮಧುರವೆನಿಸುವ ಮತ್ತಾವುದನ್ನೂ ನಾನರಿಯೆ - ಎನ್ನುತ್ತಾನೆ. ಹಾಗೇಕೆ ಹೇಳುತ್ತಾನೆ ಎಂಬುದನ್ನೊಮ್ಮೆ ಗಮನಿಸಬೇಕಷ್ಟೆ. ಇದೇ ಉತ್ಕೃಷ್ಟ, ಶ್ರೇಷ್ಠ ಎಂಬುದನ್ನು ಯಾರಾದರೂ ಹೇಳಬೇಕಾದರೆ, ಮಿಕ್ಕವುಗಳ ಪರಿಚಯವೂ ಇದ್ದು ಹಾಗೆ ಹೇಳಿದ್ದಲ್ಲಿ ಅದಕ್ಕೆ ಬೆಲೆಯುಂಟು, ಅಲ್ಲವೇ? ಹೌದು, ಅವುಗಳ ಪರಿಚಯದ ಹಿನ್ನೆಲೆಯಲ್ಲೇ ಹೇಳಿರುವ ಮಾತು, ಲೀಲಾಶುಕನದು.
ಏಕೆಂದರೆ, ಆತನ ಹೃದಯದಲ್ಲಿ ನಾನಾಭಾವಗಳು ಆಡಿವೆ. ಇಡೀ ಜಗತ್ತಿನಲ್ಲಿ ಎಲ್ಲರಿಂದಲೂ ಅಭಿಲಷಿಸಲ್ಪಡುವ ಪ್ರಭಾವವುಳ್ಳ ಭಾವಗಳು ಹಲವುಂಟು. ಅವುಗಳೆಲ್ಲದನ್ನು ಕುರಿತಾಗಿಯೂ ನನ್ನ ಹೃದಯದಲ್ಲಿ ಆಸೆಗಳು ಇದ್ದೇ ಇವೆ - ಎನ್ನುತ್ತಾನೆ, ಕವಿ. ಅದನ್ನೇ, "ಅನೇಕ ತೃಷ್ಣೆಗಳಿಗೆ ನನ್ನ ಹೃದಯವು ಸುಹೃತ್ತಾಗಿದೆ" - ಎಂದಿದ್ದಾನೆ. ಮಕ್ಕಳಾಗಲಿ ಸಂಪತ್ತಾಗಲಿ ಲಭ್ಯವಾದರೆ ಅದರಲ್ಲಿ ಸಂತೋಷವಿಲ್ಲವೆ? ಯಾರ ಹೃದಯದಲ್ಲಿರುವುದಿಲ್ಲ ಇಂತಹ ಪುತ್ರಾಶೆ-ವಿತ್ತಾಶೆಗಳು? ನನ್ನ ಹೃದಯದಲ್ಲಂತೂ ಅಂತಹ ಬಯಕೆಗಳೊಂದಿಗೆ ನಂಟು ಇದ್ದೇ ಇದೆ, ಎಂದೊಪ್ಪಿಕೊಳ್ಳುತ್ತಾನೆ, ಲೀಲಾಶುಕ. ಅಲ್ಲಿಗೆ, ಅವನ್ನೆಲ್ಲಾ ನಾನು ನನ್ನ ಹೃದಯದಿಂದ ತಳ್ಳಲಾಗಿಲ್ಲ. ಹೀಗಾಗಿ ಆ ತೆರನಾದ ಎಷ್ಟೋ ಭಾವಗಳು ನನ್ನ ಹೃದಯದಲ್ಲಿ ಆಗಾಗ ತೋರಿಕೊಳ್ಳುತ್ತಲೇ ಇರುತ್ತವೆ. ಆದರೂ, ಅವೆಷ್ಟಾದರೂ ತೋರಿಕೊಳ್ಳಲಿ, ಪರವಾಯಿಲ್ಲ - ಎನ್ನುತ್ತಾನೆ, ಲೀಲಾಶುಕ.
ಏಕೆ ಹಾಗೆ? ಏಕೆಂದರೆ ಇವೆಲ್ಲಕ್ಕಿಂತಲೂ ಮಿಗಿಲಾದುದೊಂದನ್ನು ನಾ ಕಂಡಿರುವೆ. ಯಾವುದದು? ನಂದನ ಪುಣ್ಯ-ಪ್ರವಾಹವೆನಿಸಿದ ಶ್ರೀಕೃಷ್ಣನ ವಕ್ತ್ರಾರವಿಂದವೇ ಅದು. ವಕ್ತ್ರಾರವಿಂದವೆಂದರೆ ಮುಖ-ಕಮಲ. ವಕ್ತ್ರವೆಂದರೆ ಮುಖವಲ್ಲವೇ? ಎಂತಿರುವ ಮುಖ-ಪದ್ಮವದು? ಸ್ಮೇರವಾದುದು, ಎಂದರೆ ಮಂದಹಾಸದಿಂದ ಕೂಡಿರುವುದು. ಆ ಮಂದಹಾಸವಾದರೂ ಯಾವ ಹಿನ್ನೆಲೆಯಲ್ಲಿ ಮೂಡಿದೆ?
ಕೃಷ್ಣನು ಲೀಲೆಯಿಂದ, ಎಂದರೆ ವಿಶೇಷ-ಯತ್ನವೇ ಇಲ್ಲದೆ, ಲೀಲಾ-ಜಾಲವಾಗಿ ವೇಣುವನ್ನು ನುಡಿಸುತ್ತಿರುವನಲ್ಲವೇ? ತನ್ನೊಂದು ಲೀಲೆಗಾಗಿ ವೇಣುಧ್ವನಿಯನ್ನು ಮಾಡುತ್ತಿರುವನೆಂದರೂ ಸರಿ, ಅಥವಾ ಲೀಲೆಯಾಗಿ ಹಾಗೆ ಮಾಡುತ್ತಿರುವನೆಂದರೂ ಸರಿಯೇ. ಅಂತೂ ಆ ವೇಣುಕ್ವಣಿತದ ಹಿನ್ನೆಲೆಯಲ್ಲಿ ಮೂಡಿರುವ ಮಂದಹಾಸವು ಆತನ ಕಮಲ-ಸದೃಶವಾದ ಮುಖದ ಮೇಲೆ ವಿರಾಜಿಸುತ್ತಿದೆ. ಹೀಗೆ ಮುಗುಳ್ನಗೆಯು ಮೂಡಿರುವ ಮುಖಾರವಿಂದಕ್ಕಿಂತಲೂ ಮಿಗಿಲಾದ ಮಧುರ-ಪದಾರ್ಥವು ಮತ್ತೊಂದಿರಲಾರದು - ಎನ್ನುತ್ತಾನೆ, ಕವಿ.
ಲೀಲಾಶುಕನೇನೂ ವಾನಪ್ರಸ್ಥನೋ ಸಂನ್ಯಾಸಿಯೋ ಆಗಿಬಿಟ್ಟಿಲ್ಲ. ಹಾಗಿರುವುದರಿಂದ ಜನರ ನಡುವಿನಲ್ಲೇ ಇದ್ದು, ಎಲ್ಲರೂ ಯಾವುದನ್ನು ಮಧುರವೆಂದುಕೊಳ್ಳುತ್ತಾರೆ? - ಎಂಬುದನ್ನೂ ಬಲ್ಲವನಾಗಿದ್ದು, ಈ ಮಾತನ್ನು ನುಡಿಯುತ್ತಿದ್ದಾನೆ. "ಯಾವುದೆಂತೇ ಇರಲಿ, ಕೃಷ್ಣ-ವದನ-ಪದ್ಮಕ್ಕಿಂತಲೂ ಹೆಚ್ಚು ಮಾಧುರ್ಯ-ಭರಿತವಾದದ್ದನ್ನು ನಾ ಕಾಣೆ" ಎಂದು ದೃಢವಾಗಿ ಹೇಳುತ್ತಿದ್ದಾನೆ.
ಶ್ಲೋಕ ಹೀಗಿದೆ:
ತೇ ತೇ ಭಾವಾಃ ಸಕಲ-ಜಗತೀ-ಲೋಭನೀಯ-ಪ್ರಭಾವಾಃ /
ನಾನಾ-ತೃಷ್ಣಾ-ಸುಹೃದಿ ಹೃದಿ ಮೇ ಕಾಮಮ್ ಆವಿರ್ಭವಂತಾಮ್ |
ಲೀಲಾ-ವೇಣು-ಕ್ವಣಿತ-ಲಸಿತ-ಸ್ಮೇರ-ವಕ್ತ್ರಾರವಿಂದಾತ್ /
ನಾಹಂ ಜಾನೇ ಮಧುರಂ ಅಪರಂ ನಂದ-ಪುಣ್ಯಾಂಬುಪೂರಾತ್ ||
***
ಕೃಷ್ಣನು ಇಗೋ ಬರುತ್ತಿದ್ದಾನೆ, ಎನ್ನುತ್ತಿದೆ ಈ ಶ್ಲೋಕ. ಎಂತಹ ಕೃಷ್ಣನಿವನು? ಈತನು ನನ್ನ ನಯನ-ಬಂಧು. ಅಲ್ಲದೆ ಅನನ್ಯ-ಬಂಧುವೂ ಹೌದು.
ಹಾಗೆಂದರೇನು? ಬಂಧುಗಳು ಕಷ್ಟಕ್ಕಾಗುವರು - ಎಂಬ ಮಾತಿದೆಯಲ್ಲವೇ? ಹಾಗೆಂದರೆ, ಕಷ್ಟಗಳು ಬಂದಾಗ ಸಹಾಯಕ್ಕೆ ನಿಲ್ಲುವರು - ಎಂದರ್ಥ. ಕಷ್ಟವನ್ನು ಪರಿಹರಿಸುವವರು, ಸಂತಾಪವನ್ನು ಹೋಗಲಾಡಿಸುವವರು ಯಾರೋ ಅವರೇ ಬಂಧುಗಳು - ಎಂದರ್ಥ. ಕೃಷ್ಣನು ನಯನ-ಬಂಧುವೆಂದರೆ, ನನ್ನ ಕಣ್ಣುಗಳಿಗುಂಟಾಗಿರುವ ನೋವನ್ನು ಪರಿಹರಿಸತಕ್ಕವನು. ಕೃಷ್ಣನನ್ನಿನ್ನೂ ಕಂಡಿಲ್ಲವೆಂಬುದೇ ನನ್ನ ಸಂತಾಪವಾಗಿತ್ತು. ಈಗ ಕಂಡೆನಲ್ಲವೇ? ನನ್ನ ತಾಪ ಕಳೆಯಿತು. ಬಂಧುವೆಂಬ ಪದಕ್ಕೇ ಮತ್ತೊಂದು ಅರ್ಥವೂ ಉಂಟು. ಬಂಧನವನ್ನುಂಟುಮಾಡುವವನೇ ಬಂಧು. ಒಳ್ಳೆಯ ಬಂಧುಗಳಾದರೆ ನಮ್ಮನ್ನು ಪ್ರೇಮಪಾಶದಿಂದ ಕಟ್ಟಿಹಾಕುವವರೇ, ಅಲ್ಲವೇ? ಹಾಗಾಗಿ ನಮ್ಮ ಕಣ್ಣುಗಳನ್ನು ಈತ ಕಟ್ಟಿಹಾಕಿದ್ದಾನೆ. "ಕಣ್ಣಿಗೆ ಕಟ್ಟಿದಂತಿದೆ" ಎಂದೂ ಕನ್ನಡದಲ್ಲಿ ಬಳಕೆಯುಂಟಷ್ಟೆ?
ಪ್ರಕೃತ, ಆತನನ್ನು ಕಂಡರೆ ನಮ್ಮ ದೃಷ್ಟಿಯು ಅಲ್ಲಿಯೇ ಲಗ್ನವಾಗಿಬಿಡುತ್ತದೆ. ಮತ್ತೆಲ್ಲೂ, ಮತ್ತೇನನ್ನೂ ನೋಡಲೇ ಮನಬರದು. ಆತನನ್ನೇ ನೋಡುತ್ತಿರಬೇಕೆನಿಸುತ್ತದೆ. ಹೀಗೆ ಆತನು ನಯನಬಂಧು: ನಮ್ಮ ನೋಟವನ್ನು ತನ್ನಲ್ಲಿಯೇ ಬಂಧಿಸಿರುವವನು. ಯಾವನಿಗೆ ದಿಕ್ಕಾಗಿ ಮತ್ತೊಬ್ಬರಿಲ್ಲವೋ ಅಂತಹವರಿಗೆ ಬಂಧುವಾದವನು ಅನನ್ಯ-ಬಂಧು. "ನನಗಿನ್ನಾರೂ ಇಲ್ಲ; ಅಂತಹ ನನಗೆ ಕೃಷ್ಣನೇ ಬಂಧು; ಹೀಗಾಗಿ ಕೃಷ್ಣನೊಬ್ಬನೇ ನನಗೆ ಬಂಧು" – ಎಂಬುದಾತನ ಭಾವ.
ಕೃಷ್ಣನ ಆಗಮನದಿಂದಾಗಿ ನನ್ನ ಮೇಲೆ ಒಂದು ವಿಶೇಷ-ಪರಿಣಾಮವೂ ಆಗುವುದು. ಆತನು ತನ್ನ ವೇಣುವನ್ನು ನುಡಿಸಿಕೊಂಡು ಬರುವನಲ್ಲವೇ, ವಿಲಾಸ-ಯುತವಾಗಿ? ಎಂದೇ ಅದು ಆತನ ವಿಲಾಸಮುರಳಿ. ಆತನ ವಿಲಾಸಕ್ಕೆ ಆ ಮುರಳಿಯೇ ಕಾರಣವೆಂದಾದರೂ ಭಾವಿಸಬಹುದು. ಹಾಗೂ ಅದು ವಿಲಾಸಮುರಳಿಯೇ. ಅಂತೂ ಆ ವಿಲಾಸ-ಮುರಳಿಯಿಂದ ಹೊಮ್ಮುವ ನಾದವು ಆಪ್ಯಾಯಕವಾಗಿರುತ್ತದೆ, ಅಮೃತದಂತೆ. ಇಂತಹ ಮುರಳಿಯ ಆ ನಿನದಾಮೃತವೇ ನನ್ನ ಮೇಲೆ ವಿಶೇಷ ಪರಿಣಾಮವನ್ನುಂಟುಮಾಡುತ್ತಿರುವುದು.
ಆ ಅಮೃತವು ನನ್ನ ಕಿವಿಗೆ ಸಿಂಚನವಾಗುತ್ತಿದೆ. ನನ್ನ ಎರಡೂ ಕಿವಿಗಳೂ ಅದರ ಅಮೃತ-ಸೇಕವನ್ನು ಹೊಂದಿವೆ. ಸೇಕವೆಂದರೆ ಹುಯ್ಯುವುದು. ಇದರ ಪರಿಣಾಮವಾಗಿ, ಎಂದರೆ ಅಮೃತದಂತಿರುವ ಗಾನದ ಶ್ರವಣದಿಂದಾಗಿ, ನನ್ನ ಎರಡೂ ಕಿವಿಗಳೂ ನಿಮಿರಿ ನಿಂತಿವೆ. ಉದಂಚಿತವೆಂದರೆ ಮೇಲಕ್ಕೆ ನೀಟಿರುವುದು, ನಿಮಿರಿನಿಂತಿರುವುದು. ಹೇಗೆ ಕುದುರೆಯ ಕಿವಿಯು ತನಗಿಷ್ಟವಾದ ದನಿಯು ಕೇಳಿಸಿದೊಡನೆಯೇ, ಆ ಧ್ವನಿಯನ್ನೇ ಲಕ್ಷಿಸಿಕೊಳ್ಳುತ್ತಾ, ನಿಮಿರಿ ನಿಲ್ಲುವುದೋ, ಹಾಗೆ ನನ್ನ ಕಿವಿಗಳೆರಡೂ ಆ ಧ್ವನಿಯನ್ನು ಆಲಿಸುವುದರಲ್ಲೇ ಮಗ್ನವಾಗಿದೆ: ಬಾಲ-ಕೃಷ್ಣನ ಮುರಳೀ-ಗಾನವು ಹೀಗೆ ಕರ್ಣಾಮೃತವಾಗಿದೆ, ಎನಗೆ.
ಆನಂದವು ಚಿಗುರೊಡೆದಿರುವುದು – ಎಂಬುದನ್ನು ಆನಂದ-ಕಂದಳಿತವಾದದ್ದು ಎನ್ನುವರು. ಯಾವುದದು ಹಾಗಾಗಿರುವುದು? ಆತನ ಕೇಲಿ-ಕಟಾಕ್ಷಗಳು, ಎಂದರೆ ವಿಲಾಸ-ದೃಷ್ಟಿಗಳು. ಅವೇ ಆನಂದ-ಕಂದಳಿತವಾಗಿರುವುದು. ಅಂತಹ ಕಟಾಕ್ಷಗಳೂ ಒಂದೆರಡಲ್ಲ, ಹಲವು. ಆ ಲೀಲಾಕಟಾಕ್ಷಗಳು ನನ್ನನ್ನೇ ಲಕ್ಷ್ಯಮಾಡಿಕೊಂಡಿವೆ, ನನ್ನತ್ತಲೇ ಹರಿದಿವೆ. ಒಟ್ಟಿನಲ್ಲಿ, ಕೃಷ್ಣನು ನನ್ನ ನಯನ-ಬಂಧು, ಅನನ್ಯ-ಬಂಧು. ತೋಷವನ್ನು ಅರಳಿಸುವುವು, ಆತನ ಕಟಾಕ್ಷ-ವಿಲಾಸಗಳು. ಅಂತಹ ಕೃಷ್ಣನು ನನ್ನತ್ತ ಬರುತ್ತಲೇ ವಿಲಾಸ-ಮುರಳಿಯ ನಾದಾಮೃತವನ್ನು ಸುರಿಸುತ್ತಿದ್ದಾನೆ. ಆ ಅಮೃತಕ್ಕಾಗಿ ಹಾತೊರೆಯುವ ನನ್ನ ಎರಡೂ ಕಿವಿಗಳು ಆ ಅಮೃತದ ಸೇಕವನ್ನು ನಿಮಿರಿ ನಿಂತು ಆಸ್ವಾದಿಸುತ್ತಿವೆ. ಸುಖಾಂಕುರವನ್ನು ಹೊರಡಿಸತಕ್ಕವು, ಆತನ ಕೇಲಿಕಟಾಕ್ಷಗಳು. ನನ್ನ ನೇತ್ರ-ಶ್ರೋತ್ರಗಳನ್ನು ಆವರಿಸಿಕೊಂಡಿದ್ದಾನೆ, ಶ್ರೀಕೃಷ್ಣ – ಎಂಬುದು ಒಟ್ಟಿನ ತಾತ್ಪರ್ಯ.
ಶ್ಲೋಕ ಹೀಗಿದೆ:
ಸೋಽಯಂ ವಿಲಾಸ-ಮುರಲೀ-ನಿನದಾಮೃತೇನ/
ಸಿಂಚನ್ ಉದಂಚಿತಂ ಇದಂ ಮಮ ಕರ್ಣಯುಗ್ಮಂ |
ಆಯಾತಿ ಮೇ ನಯನ-ಬಂಧುರ್ ಅನನ್ಯ-ಬಂಧುಃ/
ಆನಂದ-ಕಂದಲಿತ-ಕೇಲಿ-ಕಟಾಕ್ಷ-ಲಕ್ಷ್ಯಃ ||
ಸೂಚನೆ : 14/12/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.