Wednesday, February 12, 2025

ವ್ಯಾಸ ವೀಕ್ಷಿತ 123 ಬಾಣಗಳು ನೆಟ್ಟವು, ಅಗ್ನಿಯು ಸುಟ್ಟನು (Vyaasa Vikshita 123)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಹೀಗೆ ಕೃಷ್ಣಾರ್ಜುನರಿಬ್ಬರೂ ಹೇಳಿದ ಬಳಿಕ, ಅಗ್ನಿದೇವನು ತನ್ನ ತೇಜೋಮಯ-ರೂಪವನ್ನು ಧರಿಸಿದನು. ಧರಿಸಿ, ಆ ದಾವವನ್ನು, ಎಂದರೆ ಕಾಡನ್ನು, ದಹಿಸಲು ಮುಂದಾದನು. ತನ್ನ ಏಳೂ ನಾಲಿಗೆಗಳಿಂದ ಆ ಕಾಡನ್ನು ಸುತ್ತಲೂ ಮುತ್ತಿ, ಆ ಖಾಂಡವ-ವನವನ್ನು ದಹಿಸಲಾರಂಭಿಸಿದನು.

ಯುಗಾಂತ-ಸಮಯವನ್ನು ತೋರಿಸುತ್ತಿರುವನೋ ಆತ, ಎಂಬಂತಿತ್ತು ಅದು. ಆ ಕಾಡನ್ನು ಹೀಗೆ ತನ್ನ ವಶಕ್ಕೆ ತೆಗೆದುಕೊಂಡು ಆ ಅಗ್ನಿಯು ಮೋಡದ ಗರ್ಜನೆಯೊಂದಿಗೆ ದಹಿಸುತ್ತಾ ಅಲ್ಲಿಯ ಎಲ್ಲ ಪ್ರಾಣಿಗಳಲ್ಲೂ ನಡುಕವನ್ನು ಉಂಟುಮಾಡಿದನು. ಅಗ್ನಿಯು ಹಾಗೆ ಆ ದಾವವನ್ನು ಸುಡುತ್ತಿರಲು, ಅದು ಹೇಗೆ ಕಂಡಿತು! ಸೂರ್ಯನ ಕಿರಣಗಳಿಂದ ವ್ಯಾಪ್ತವಾದ ಇಡೀ ಮೇರು-ಪರ್ವತವೇ ಜ್ವಲಿಸುತ್ತಿದೆಯೋ – ಎಂಬಂತಿತ್ತು, ಆ ದೃಶ್ಯ!

ಎರಡು ರಥಗಳಲ್ಲಿ ಕುಳಿತು ಆ ವನದ ಎರಡು ಎಡೆಗಳಲ್ಲಿ ನಿಂತವರಾಗಿ, ಎಲ್ಲ ದಿಕ್ಕುಗಳಲ್ಲಿರುವ ಪ್ರಾಣಿಗಳ ಸಂಹಾರವನ್ನು ಕೃಷ್ಣಾರ್ಜುನರಿಬ್ಬರೂ ಮಾಡತೊಡಗಿದರು.

ಖಾಂಡವದಲ್ಲಿ ನೆಲೆಸಿದ್ದ ಪ್ರಾಣಿಗಳು ಎಲ್ಲೆಲ್ಲಿ ಪಲಾಯನ ಮಾಡುವುದು ತೋರುತ್ತಿತ್ತೋ ಅಲ್ಲಲ್ಲೆಲ್ಲಾ ಇವರಿಬ್ಬರೂ ಧಾವಿಸಿಹೋಗುತ್ತಿದ್ದರು. ರಥಗಳಲ್ಲಿ ಶೀಘ್ರವಾಗಿ ಇವರಿಬ್ಬರು ಸಂಚರಿಸುತ್ತಿರಲು, ಎಲ್ಲಿಯೂ ತಪ್ಪಿಸಿಕೊಂಡು ಹೋಗಲು ಒಂದು ಸಣ್ಣ ರಂಧ್ರವೂ ಇರದಾಯಿತು, ಪ್ರಾಣಿಗಳಿಗೆ.

ಪರಿಣಾಮವೇನಾಯಿತು? ಖಾಂಡವವು ಈ ರೀತಿ ದಹಿಸುತ್ತಿರಲು, ಎಲ್ಲೆಡೆ ಮಹತ್ತಾದ ಆರ್ತ-ನಾದವನ್ನು ಮಾಡುತ್ತಾ ಶತ-ಸಹಸ್ರಸಂಖ್ಯೆಗಳಲ್ಲಿ ಎಂದರೆ ಲಕ್ಷಗಟ್ಟಲೆ, ಪ್ರಾಣಿಗಳು ನೆಗೆದು ನೆಗೆದು ಬಿದ್ದವು. ಕೆಲವು ಪ್ರಾಣಿಗಳು ಭಾಗಶಃ ಸುಟ್ಟು ಹೋದವು. ಕೆಲವು ಬೆಂದೇ ಹೋದವು. ಕೆಲವುಗಳ ಕಣ್ಣುಗಳು ಒಡೆದು/ಸಿಡಿದುಹೋದವು. ಹಲವು ಅಸು ನೀಗಿದವು.

ಆ ಪ್ರಾಣಿಗಳಲ್ಲಿ ತಮ್ಮ ಮರಿಗಳನ್ನು ಆಲಿಂಗಿಸಿಕೊಂಡು ಕೆಲವೂ, ಅಪ್ಪಂದಿರನ್ನೂ ಅಣ್ಣಂದಿರನ್ನೂ ಕೆಲವೂ, ಕಟ್ಟಿಕೊಂಡಿದ್ದು, ಸ್ನೇಹದ ಕಾರಣ ಬಿಟ್ಟುಹೋಗಲಾಗದೆ, ಅಲ್ಲಿಯೇ ನಿಧನ ಹೊಂದಿದವು. ಹಲ್ಲು ಕಚ್ಚಿಕೊಂಡು ಮತ್ತೆ ಕೆಲವು ಹಲವು ಬಾರಿ ನೆಗೆದವು. ಆಮೇಲೆ ತೀವ್ರವಾಗಿ ಸುತ್ತಿ ಸುತ್ತಿ ಅಗ್ನಿಯೊಳಗೇ ಬಿದ್ದುಹೋದವು.

ದಾವದ ಎರಡೂ ಕಡೆ ನಿಂತ ಕೃಷ್ಣಾರ್ಜುನರು ಎರಡು ರಥಗಳಲ್ಲಿ ಕುಳಿತವರಾಗಿ ದಿಕ್ಕು ದಿಕ್ಕುಗಳಲ್ಲಿಯೂ ಪ್ರಾಣಿ-ಸಂಹಾರವನ್ನು ಮಾಡತೊಡಗಿದರು. ರೆಕ್ಕೆಗಳು ಸುಟ್ಟುಹೋದಂತಹವೂ, ಕಣ್ಣೋ ಕಾಲೋ ದಗ್ಧವಾಗಿರುವಂತಹವೂ, ನೆಲದ ಮೇಲೆ ಹೊರಳಾಡುತ್ತಾ ಸಾಯುತ್ತಿದ್ದಂತಹವೂ ಆದ ಪಶು-ಪಕ್ಷಿಗಳು ಅಲ್ಲಲ್ಲಿ ತೋರುತ್ತಿದ್ದವು.

ಜಲಾಶಯಗಳೇ ಬಿಸಿಗೊಂಡು ಬೆಂಕಿಯಿಂದಾಗಿ ಕುದಿಯುತ್ತಲಿರಲು, ಅವುಗಳ ಸುತ್ತ ಕೂರ್ಮಗಳೂ ಮತ್ಸ್ಯಗಳೂ ಪ್ರಾಣಕಳೆದುಕೊಂಡು ಬಿದ್ದಿರುವುದು ಕಾಣುತ್ತಿತ್ತು. ಮೈಗೆಲ್ಲ ಬೆಂಕಿ ಹೊತ್ತಿಕೊಂಡ ಮತ್ತೆ ಕೆಲವು ಪ್ರಾಣಿಗಳಂತೂ ಅಗ್ನಿಯೇ ಮೈತಾಳಿಬಂದಂತೆ ತೋರುತ್ತಿದ್ದುವು!

ಅಗ್ನಿಯು ಹಾಗೆ ಪ್ರದೀಪ್ತವಾಗಿದ್ದರೂ, ಹಾರಿಹೋಗುತ್ತಿದ್ದ ಕೆಲವು ಪಕ್ಷಿಗಳನ್ನು ಪಾರ್ಥನು ತನ್ನ ಬಾಣಗಳಿಂದ ಚೂರುಚೂರಾಗಿಸಿ ಕೆಳಕ್ಕೆ ಬೀಳಿಸಿದನು. ಮೈಗೆಲ್ಲಾ ಬಾಣಗಳು ನೆಟ್ಟ ಅವು ಜೋರಾಗಿ ಕಿರುಚುತ್ತಾ ಮೇಲಕ್ಕೆ ವೇಗದಿಂದ ಹಾರಿ ಮತ್ತೆ ಆ ಖಾಂಡವದೊಳಗೇ ಬಿದ್ದುಹೋದವು. ಬಾಣಗಳ ಹೊಡೆತಗಳನ್ನು ತಿನ್ನುತ್ತಿದ್ದ ಆ ವನ್ಯಗಳ ಸಾಮೂಹಿಕ-ವಿರಾವದಿಂದ, ಎಂದರೆ ಒಟ್ಟಾಗಿ ಗಟ್ಟಿಯಾಗಿ ಅರಚಿಕೊಳ್ಳುವುದರಿಂದ, ಉಂಟಾದ ಶಬ್ದವು ಘೋರವಾಗಿತ್ತು - ಸಮುದ್ರವನ್ನು ಮಥಿಸಿದಾಗ ಉಂಟಾದ ಶಬ್ದದಂತಿತ್ತು!

ಸೂಚನೆ : 10/2/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.