ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಅಂಗುಲ್ಯಾ ಕಃ ಕವಾಟಂ
ಕನ್ನಡದಲ್ಲಿ "ಗೆದ್ದೆತ್ತಿನ ಬಾಲ ಹಿಡಿಯುವುದು" ಎಂಬ ಪದಗುಚ್ಛ ಪ್ರಸಿದ್ಧವಾದದ್ದೇ. ಆದರೆ ಸೋತವರ ಪಕ್ಷವನ್ನು ಹಿಡಿಯುವುದು, ಅಥವಾ ಸೋತವರನ್ನೇ ಆಶ್ರಯಿಸುವುದು - ಇದನ್ನು ಯಾರಾದರೂ ಜಾಣರು ಮಾಡುವರೇ? ಲೀಲಾಶುಕನು ಮಾಡಿದ್ದಾನೆ. ಮುಷ್ಟಿಕಾದಿ-ಮಲ್ಲರನ್ನು ಗೆಲ್ಲಬಲ್ಲ ಕೃಷ್ಣ ಗೊಲ್ಲತಿಯೊಬ್ಬಳಿಂದ ಸೋಲು ಕಂಡಿದ್ದಾನೆ.
ಸೋತವರು ನಮ್ಮನ್ನು ಕಾಪಾಡುತ್ತಾರೆಯೇ? ಅಯ್ಯೋ ಪಾಪ, ಮೊದಲು ಅವರು ಆತ್ಮರಕ್ಷಣೆಯನ್ನು ಮಾಡಿಕೊಳ್ಳಲಿ – ಎಂದಲ್ಲವೇ ನಮಗೆನಿಸುವುದು? ಆದರೆ ಸೋತವನನ್ನೇ ಸಮಾಶ್ರಯಿಸುತ್ತಿದ್ದಾನೆ, ಲೀಲಾಶುಕ!
ಜೀವನದಲ್ಲಿ ಗೆಲ್ಲುತ್ತಿರುವುದೇ ಸರಿಯಾದ ಹಾದಿಯೆಂದೇನಲ್ಲ. ಗೆದ್ದು ಸೋಲುವುದೂ, ಸೋತು ಗೆಲ್ಲುವುದೂ ಉಂಟು. ಎಲ್ಲೆಲ್ಲಿ ಇಬ್ಬರ ನಡುವೆ ಒಂದು ಚಿರಕಾಲ ನಿಲ್ಲಬೇಕಾದ ಸತ್-ಸಂಬಂಧವುಂಟೋ ಅಲ್ಲೆಲ್ಲ ಈ ಲೆಕ್ಕವು ಆಗಾಗ್ಗೆ ಬೇಕಾಗುತ್ತಿರುವುದೇ. ಪ್ರಣಯಿಗಳಲ್ಲಿ ಈ ಬಗೆ ಉಪಕಾರಿಯೇ. ಹಠಹಿಡಿಯುವುದೇ ದೊಡ್ಡದಲ್ಲ. ಸೋತದ್ದೆಲ್ಲಾ ಭಂಗವೆಂದು ಸಹ ಅಲ್ಲ. ಚಿಕ್ಕಮಕ್ಕಳ ಮನ ನೊಂದಿರುವಾಗಲಂತೂ ಅವನ್ನು ಆಟಕ್ಕೆ ಕರೆದು ಆಗೊಮ್ಮೆ ಈಗೊಮ್ಮೆ ನಾವು ಬೇಕೆಂದೇ ಸೋತಲ್ಲಿ, ಅವುಗಳ ಖಿನ್ನತೆಯು ದೂರವಾಗುವುದಲ್ಲದೆ, ಅವುಗಳ ಮನಸ್ಸು ಪ್ರಫುಲ್ಲವಾಗುವುದೂ ಉಂಟು.
ಪ್ರಕೃತ, ಗೋಪಿಯೊಬ್ಬಳೊಡನೆ ಕೃಷ್ಣನು ಸೋತಿದ್ದಾನೆ, ಮಾತಿನಲ್ಲಿ. ಅದೆಂತು ಶಕ್ಯ? ಎಳಸಿನಿಂದಲೂ ಆತನು ವಾಕ್-ಪಟುವೇ ಅಲ್ಲವೇ? - ಎಂದೆನಿಸಬಹುದು. ಆದರೂ ವನಿತೆಯರಲ್ಲಿಯ ವಿವಿಧ-ವಾಕ್-ಚಾತುರ್ಯಗಳು ವಿಶಿಷ್ಟವಾದವು, ಅನುಪದಿಷ್ಟವಾದವು, ಎಂದರೆ ಯಾರೂ ಹೇಳಿಕೊಡದೆಯೇ ಬರುವಂತಹವು.
ಪ್ರಕೃತ-ಶ್ಲೋಕದಲ್ಲಿ ಮಾಧವ, ವಸಂತ, ಚಕ್ರೀ, ಧರಣಿ-ಧರ, ಘೋರಾಹಿ-ಮರ್ದೀ, ಹರಿ - ಎಂಬ ಆರು ಪದಗಳಿಗೆ ಅನ್ವಯಿಸಬಹುದಾದ ಎರಡೆರಡು ಅರ್ಥಗಳನ್ನು ಬಳಸಿ ಶಬ್ದ-ಕ್ರೀಡೆಯೊಂದನ್ನು ನಿರ್ಮಿಸಿದೆ.
ಶ್ಲೋಕದ ಪ್ರಸಂಗ ಹೀಗಿದೆ. ಕೃಷ್ಣನೊಮ್ಮೆ ಗೋಪಿಯೊಬ್ಬಳ ಮನೆಗೆ ಹೋಗಿದ್ದಾನೆ - ಮೊದಲೇ ಸೂಚಿಸಿಯೇ ಹೋಗಿರುವುದೆಂದುಕೊಳ್ಳಿ. ಆದರೆ ಕೃಷ್ಣನನ್ನು ಸ್ವಲ್ಪ "ಆಟ ಆಡಿಸ"ಬೇಕೆಂಬ ಮನಸ್ಸಾಗಿದೆ, ಆ ಗೋಪಿಗೆ. ಎಂದೇ ಕೃಷ್ಣನು ಆಕೆಯ ಮನೆಗೆ ಹೋಗಿ ಬಾಗಿಲು ತಟ್ಟಿದಾಗ ಬಾಗಿಲನ್ನು ತೆಗೆದಿಲ್ಲ, ಬದಲಾಗಿ ಕೆಣಕಿದ್ದಾಳೆ, ಈ ಕೀಟಲೆಸುಬ್ಬಿ.
ಬಾಗಿಲು ತಟ್ಟಿದವನನ್ನು ಕೇಳಿದ್ದಾಳೆ: "ಯಾರದು ಬಾಗಿಲುತಟ್ಟುತ್ತಿರುವವರು, ಬೆರಳಿಂದ?" ಹೇಳಿಯೇ ಬಂದಿದ್ದರೂ ಹೀಗೆ ಕೇಳುತ್ತಿರುವುದಕ್ಕಾಗಿ ಕೃಷ್ಣನಿಗವಳ ಮೇಲೆ ತುಸು ಕೋಪವೇ. ಎಂದೇ ಅವಳನ್ನು ಮೂದಲಿಸಿಯೇ ಮಾತನ್ನಾರಂಭಿಸಿದ್ದಾನೆ, "ಕುಟಿಲೇ" ಎಂದೇ ಸಂಬೋಧಿಸಿ. ಕುಟಿಲೆಯೆಂದರೆ ವಕ್ರ-ಬುದ್ಧಿಯುಳ್ಳವಳು. ಹಾರ್ದವಾಗಿ ಸ್ವಾಗತಿಸುವ ಬದಲು, ಆತನ ಆಗಮನವೇ ತನಗರಿಯದೆಂಬಂತೆ ನಟಿಸುತ್ತಾ ಹೀಗೆ ಕೇಳುತ್ತಿರುವವಳು ಕುಟಿಲೆಯಲ್ಲದೆ ಮತ್ತೇನು? ಋಜು-ಬುದ್ಧಿಯವಳಾಗಿದ್ದರೆ ಬಂದದ್ದಕ್ಕೇ ಅಮಿತಾನಂದವನ್ನು ತೋರ್ಪಡಿಸಿಕೊಳ್ಳುತ್ತಿದ್ದಳು. ಸಲಿಗೆ ಹೆಚ್ಚಾದಾಗ ನಟನೆ-ಕುಟಿಲತೆಗಳು ಮೈದೋರುವುದುಂಟಲ್ಲವೇ? ಇವಳಿಗೆ ಸ್ವಲ್ಪ ಬುದ್ಧಿ ಕಲಿಸಬೇಕು – ಎನಿಸಿರಬೇಕು, ಕೃಷ್ಣನಿಗೆ.
ಅದಕ್ಕೇ ಆತನ ಉತ್ತರ, "ಕುಟಿಲೇ, ನಾನು ಮಾಧವ" ಎಂದು. ಮಾ ಎಂದರೆ ಲಕ್ಷ್ಮಿ; ಲಕ್ಷ್ಮಿಯ ಗಂಡ - ಎಂಬ ಅರ್ಥದಲ್ಲಿ ಮಾ-ಧವ. ಆದರೆ ಮಾಧವ-ಪದವನ್ನು ವಸಂತ-ಋತುವಿಗೂ ಬಳಸುವುದುಂಟು. ಅದಕ್ಕಿರುವ ವಿಷ್ಣು ಮತ್ತು ವಸಂತ ಎಂಬ ಎರಡರ್ಥಗಳಲ್ಲಿ ಎರಡನೆಯದನ್ನೇ ಹಿಡಿದುಕೊಂಡು ಕೇಳಿದಳು: "ಹಾಗೆಂದರೆ ವಸಂತನೆಂದೋ?" ಎಂದು.
ಅವನು, "ಇಲ್ಲ, ನಾನು ಚಕ್ರೀ" ಎಂದ. ಚಕ್ರೀ ಎಂದರೆ ಚಕ್ರಾಯುಧವನ್ನು ಧರಿಸಿರುವವನು. ಆದರೆ ಕುಂಬಾರನು ಮಡಕೆಯನ್ನು ನಿರ್ಮಿಸುವಾಗ ಚಕ್ರವನ್ನು ಬಳಸುವನಾದ್ದರಿಂದ ಅವನೂ ಚಕ್ರಿಯೇ – ಎಂಬ ಲೆಕ್ಕದ ಮೇಲೆ ಕೇಳಿದಳು " ಓ, ನೀನು ಕುಂಬಾರನೋ?"
ವೀರ-ಕ್ಷತ್ರಿಯ-ರಾಜನನ್ನು ಕುಂಬಾರನೆಂದರೆ ಕೆರಳುವುದಿಲ್ಲವೇ? ಕುಂಬಾರನು ಹಿಡಿಮಣ್ಣನ್ನು ಹಿಡಿದು ಕೆಲಸಮಾಡುವವ. ಎಂದೇ ಅದಕ್ಕೆ ಪ್ರತಿಯಾಗಿ ತಾನು ಧರಣಿ-ಧರ ಎಂದ. ಧರಣಿ-ಧರನೆಂದರೆ ಇಡೀ ಭೂಮಿಯನ್ನು ಧರಿಸಿರುವವ, ಭೂ-ರಕ್ಷಕ, ರಾಜ. ವಿಷ್ಣುವಿನ ಕೆಲಸವಲ್ಲವೇ ಭೂ-ರಕ್ಷಣೆ?
ನಾನು ಸೋತೆನೆಂದುಕೊಂಡಳೇ ಆ ಗೋಪಿ? ಸುತರಾಂ ಇಲ್ಲ. ಪುರಾಣಕಥೆಗಳನ್ನು ಚೆನ್ನಾಗಿಯೇ ಬಲ್ಲವಳಾಗಿದ್ದಳಾದ್ದರಿಂದ ಅವಳಿಗೆ ಗೊತ್ತಿತ್ತು, ಭೂಮಿಯನ್ನು ಆದಿಶೇಷನು ಹೊತ್ತಿರುವನು - ಎಂಬುದಾಗಿ. ಹೀಗಾಗಿ, ಧರಣಿಯನ್ನು ಧರಿಸಿರುವವನು ಎಂದರೆ ಆದಿಶೇಷನೂ ಆಗಬಹುದೆಂದಾಯಿತು. ಅದನ್ನೇ ಹಿಡಿದು, "ನೀನು ಆದಿಶೇಷನೋ?" ಎಂದು ಕೇಳಬಹುದಾಗಿತ್ತು; ಅದರ ಬದಲಾಗಿ, ಇನ್ನೂ ಚೆನ್ನಾಗಿ ಕೆರಳಿಸುವ ಪರಿಯಲ್ಲಿ ಕೇಳಿದಳು; ನೇರಾಗಿ "ನೀನು ಸರ್ಪರಾಜನೋ?" ಎಂದು ಕೂಡ ಕೇಳಲಿಲ್ಲ; ಬದಲಾಗಿ, "ಅಲ್ಲಿಗೆ, ನೀನು ಎರಡು ನಾಲಿಗೆಯ ಸರ್ಪಾಧಿಪತಿಯೋ?" ಎನ್ನುತ್ತಾಳೆ. ಎರಡು ನಾಲಿಗೆಯವನು ಎಂದರೆ, ಆಡಿದ ಮಾತಿಗೆ ತಪ್ಪುವವ - ಎಂಬ ಧ್ವನಿಯೂ ಬರುತ್ತದಲ್ಲವೇ? ಜೊತೆಗೆ ಹಾವಿನ ಹೋಲಿಕೆ ಬೇರೆ. ಕೆರಳಿಕೆ ಹೆಚ್ಚಾಯಿತೇ.
ಕೃಷ್ಣನಿಗೆ ಮತ್ತಷ್ಟು ಕೋಪವೇ. "ತಾನು ಹಾವಲ್ಲ"ವೆಂದಷ್ಟೇ ಹೇಳುವುದಿಲ್ಲ; ಬದಲಾಗಿ, ತಾನು ಕಾಳಿಯ-ಮರ್ದನವನ್ನು ಮಾಡಿದ ವೀರಾವೇಶವನ್ನು ನೆನೆಸಿಕೊಂಡು, "ನಾನು ಘೋರವಾದ ಅಹಿಯನ್ನು, ಎಂದರೆ ಸರ್ಪವನ್ನು, ಮೆಟ್ಟಿದವನು" ಎಂದ. ಎಲ್ಲರೂ ಭಯಪಡುವ ವಿಷಮಯವಾದ ಸರ್ಪವನ್ನು ಬಾಲ್ಯದಲ್ಲಿಯೇ ಮೆಟ್ಟಿದ್ದ ತನ್ನನ್ನು "ನೀನು ಹಾವಾ?" ಎಂದರೆ ಕೋಪವುಕ್ಕದೇ?
ಆದರೇನು? ಅವಳಿಗೆ ಪೌರಾಣಿಕ ಕಥೆಗಳು ಬೇಕಾದಷ್ಟೇ ಗೊತ್ತಿದ್ದವು. ಹಿಂದೊಮ್ಮೆ ಗರುಡನು ಸರ್ಪಗಳನ್ನೆಲ್ಲ ಮಟ್ಟಹಾಕಿದ್ದನಲ್ಲವೇ? ಅದನ್ನು ಸ್ಮರಿಸಿಕೊಂಡು, "ಹಾಗೆಂದರೆ ನೀನು ಗರುಡನೇ?" ಎಂದು ಕೇಳಿಬಿಟ್ಟಳು.
ಕೃಷ್ಣನಿಗೆ ಸಾಕಾಗಿಹೋಯಿತೇನೋ? ತನ್ನ ಸ್ವ-ಸ್ವರೂಪವನ್ನೇ ಜ್ಞಾಪಿಸಿಕೊಂಡನೋ ಏನೋ? ಅದಕ್ಕೇ, "ಇಲ್ಲಾ, ನಾನು ಹರಿ" ಎಂದು ಸರಳವಾಗಿ ಸುಸ್ಪಷ್ಟವಾಗಿ ಉತ್ತರವಿತ್ತನು. ಅವಳೋ ಸೋಲೊಪ್ಪದ ಮಲ್ಲಿ. ಬಿಟ್ಟಾಳೇ? ಅದಕ್ಕೂ ಕೊಕ್ಕೆ ಹಾಕಿದಳು. ಹರಿ ಎಂಬ ಪದಕ್ಕೆ ಕೋತಿಯೆಂಬ ಅರ್ಥವೂ ಇದೆಯಾದ್ದರಿಂದ "ಹಾಗಾದರೆ ನೀನು ಕಪೀಂದ್ರನೇ?" ಎಂದುಬಿಟ್ಟಳು.
ಗೋಪಿಯ ಈ ಮಾತಿಗೆ ಕೋಪಿಯಾದರೂ ಮುಂದಕ್ಕೆ ಇನ್ನೇನೂ ತೋಚದಾಯಿತು, ಕೃಷ್ಣನಿಗೆ. ಹೀಗೆ ಮಾತಿನ ಮಲ್ಲಿಯಾದ ಗೊಲ್ಲತಿಯೊಬ್ಬಳೆದುರಿಗೆ ಸೋತುಹೋದ, ಈ ಕೃಷ್ಣ-ಭೂಪ!
ಹೀಗೆ ಮಾತಿನಲ್ಲಿ ಸೋತ ಚಕ್ರ-ಪಾಣಿಯಾದ ಕೃಷ್ಣನು ನಮ್ಮನ್ನು ಪೊರೆಯಲಿ - ಎಂದು ಬೇಡಿಕೊಳ್ಳುತ್ತಾನೆ, ಲೀಲಾಶುಕ.
ತಮ್ಮ ಬಳಿ ಸೋತವನನ್ನು ಕಂಡರೆ ಕೆಲವು ನಾರಿಯರಿಗೆ ಹೆಚ್ಚು ಪ್ರೀತಿಯಂತೆ. ಮಾತಿನಲ್ಲಿ ಸೋತು ಹೃದಯವನ್ನು ಗೆದ್ದವ, ಕೃಷ್ಣ! ಹೀಗೆ ವಾಕ್-ಚಮತ್ಕಾರದಿಂದ ನಡೆದ ವಾಗ್ಯುದ್ಧವು ಕೃಷ್ಣ-ಗೋಪಿಕೆಯರ ಪ್ರೀತಿಯನ್ನೇ ವರ್ಧಿಸುವಂತಹುದು.
ಒಂದರ್ಥದಲ್ಲಿ ಈ ಪ್ರಸಂಗವನ್ನೇ ವಿಸ್ತಾರವಾಗಿ ಪ್ರಸ್ತಾವಿಸುತ್ತಾ ಲೀಲಾಶುಕನು ಮಾಡಿರುವುದೂ ಒಂದು ಬಗೆಯ ಮೂದಲಿಕೆಯೇ. ಆದರೂ ನಮ್ಮ ಕೃಷ್ಣ ಅಷ್ಟಕ್ಕೆಲ್ಲಾ ಬೇಜಾರುಮಾಡಿಕೊಳ್ಳದವ, ಅಲ್ಲವೇ?! ನೋಡಬೇಕಾದದ್ದು ಮಾತನ್ನಲ್ಲ, ಮನಸ್ಸನ್ನು. ಭಾವ-ಗ್ರಾಹಿಯಲ್ಲವೇ ಭಗವಂತ?
"ಅಂಗುಲ್ಯಾ ಕಃ ಕವಾಟಂ ಪ್ರಹರತಿ?" "ಕುಟಿಲೇ! ಮಾಧವಃ"
"ಕಿಂ ವಸಂತಃ?"/ "ನೋ ಚಕ್ರೀ"
"ಕಿಂ ಕುಲಾಲಃ?" "ನಹಿ ಧರಣಿ-ಧರಃ"
"ಕಿಂ ದ್ವಿ-ಜಿಹ್ವಃ ಫಣೀಂದ್ರಃ?"/ "ನಾಹಂ ಘೋರಾಹಿ-ಮರ್ದೀ"
"ಕಿಮಸಿ ಖಗ-ಪತಿಃ?" "ನೋ ಹರಿಃ"
"ಕಿಂ ಕಪೀಂದ್ರಃ?"
– ಇತ್ಯೇವಂ ಗೋಪಕನ್ಯಾ-ಪ್ರತಿವಚನ-ಜಿತಃ ಪಾತು ವಃ ಚಕ್ರಪಾಣಿಃ||
ಸೂಚನೆ : 1/2/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.