ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೩ - ಮೋಕ್ಷವೃಕ್ಷಕ್ಕೆ ಬೀಜ ಯಾವುದು ?
ಉತ್ತರ - ಅನುಭವದಿಂದ ಸಾಧಿಸಿದ ಸಮ್ಯಕ್ ಜ್ಞಾನ.
ಮೋಕ್ಷ ಎಂಬ ವೃಕ್ಷಕ್ಕೆ ಬೀಜ ಯಾವುದು? ಎಂಬುದು ಪ್ರಶ್ನೆಯಾಗಿದೆ. ಅದಕ್ಕೆ ಉತ್ತರ ಕ್ರಿಯಾಸಿದ್ಧವಾದವಾದ ಸಮ್ಯಕ್ ಜ್ಞಾನ ಎಂಬ ಉತ್ತರ ಬಹಳ ಮನೋಜ್ಞವಾಗಿದೆ. ಇಲ್ಲಿ ನಾವು ವಿಚಾರಿಸಬೇಕಾದ ವಿಷಯಗಳು ಇಷ್ಟು - ಮೋಕ್ಷ ಎಂಬುದು ಒಂದು ಬೆಳೆಯಬೇಕಾದ ವೃಕ್ಷ. ಅದಕ್ಕೆ ಬೀಜ ರೂಪವಾಗಿ ಅಂದರೆ ಅತ್ಯಂತ ಅವಶ್ಯವಾಗಿ ನಾವು ಪಡೆಯಬೇಕಾಗುತ್ತದೆ. ನಿಶ್ಚಯಾತ್ಮಕವಾದ ಜ್ಞಾನ, ಸಂದೇಹವಿಲ್ಲದ ಜ್ಞಾನ, ಈ ಜ್ಞಾನವು ಕ್ರಿಯೆಯಿಂದ ಅಥವಾ ಕರ್ಮದಿಂದ ಅಥವಾ ಅನುಭವದಿಂದ ಬಂದ ಜ್ಞಾನವಾಗಿರಬೇಕು. ಇಂತಹ ಜ್ಞಾನವು ಮಾತ್ರ ಮೋಕ್ಷಕ್ಕೆ ಸಾಧನವಾಗಹುದು. ಅದಕ್ಕೆ ಉಪನಿಷತ್ತಿನ ಮಾತು ಇದಕ್ನೇ ಸಾರುಗುತ್ತದೆ 'ಜ್ಞಾನದೇವತು ಕೈವಲ್ಯಂ' ಎಂಬುದಾಗಿ. ಅಂದರೆ ಜ್ಞಾನವೇ ಮೋಕ್ಷಕ್ಕೆ ಸಾಧನ ಎಂಬುದು ನಿಶ್ಚಿತ.
ಈ ವಿಷಯವನ್ನು ತಿಳಿಯಬೇಕಾದರೆ ಮೋಕ್ಷ ಎಂದರೇನು ಎಂಬುದನ್ನು ತಿಳಿಯಬೇಕು. ಏಕೆ ಸಾಧಿಸಬೇಕು ಎಂದೂ ತಿಳಿಯಬೇಕಾಗುತ್ತದೆ. ಇದಕ್ಕೆ ಪೂರಕವಾದ ಶ್ರೀರಂಗ ಮಹಾಗುರುಗಳ ಒಂದು ಮಾತನ್ನು ಇಲ್ಲಿ ನಾನು ನೆನಪಿಸಿಕೊಳ್ಳುತ್ತೇನೆ. "ಮೋಕ್ಷ ಎಂಬುದು ಪ್ರತಿಯೊಬ್ಬ ಮಾನವನ ಜನ್ಮಸಿದ್ಧ ಹಕ್ಕಪ್ಪ!. ಹೇಗೆ ಭಾರತೀಯ ಪ್ರಜೆಗೆ ಹದಿನೆಂಟು ವರ್ಷವಾದರೆ ಮತ ಚಲಾಯಿಸುವ ಹಕ್ಕು ಎಂಬುದು ಸಹಜವಾಗಿ ಬರುತ್ತದೆಯೋ ಹಾಗೆ ಒಬ್ಬ ಮನುಷ್ಯ ಹುಟ್ಟಿದಾಗಲಿಂದಲೇ ಅವನಿಗೆ ಮೋಕ್ಷ ಪಡೆಯಬೇಕಾದದ್ದು ಅವನ ಹಕ್ಕಾಗಿರುತ್ತದೆಯಪ್ಪಾ" ಎಂಬುದಾಗಿ. ಹಾಗಾದರೆ ಮೋಕ್ಷ ಎಂದರೆ ಬಿಡುಗಡೆ; ಬಂಧನದಿಂದ ಮುಕ್ತಿ ಎಂದರ್ಥ. ಇದಕ್ಕೆ ಒಂದು ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ ಒಂದು ಬೀಜ ವೃಕ್ಷವಾಗುತ್ತದೆ. ಅಂದರೆ ಆ ಬೀಜವು ತನ್ನನ್ನು, ತನ್ನ ಚೈತನ್ಯಶಕ್ತಿಯನ್ನು ವೃಕ್ಷದೊಳಗೆ ಹರಿಸುತ್ತದೆ. ಆಗ ನಾವು ಆ ವೃಕ್ಷದಲ್ಲಿ ಬೀಜವನ್ನು ಕಾಣಲಾರೆವು. ಬೀಜವು ವೃಕ್ಷದಲ್ಲಿ ಬಂಧಿತವಾಗಿದೆ, ಮರೆಯಾಗಿದೆ. ಮತ್ತೆ ಬೀಜವನ್ನು ಕೊನೆಯಲ್ಲಿ ನೋಡಬೇಕಾಗುತ್ತದೆ. ಅಂದರೆ ವೃಕ್ಷದ ತನವನ್ನೆಲ್ಲ ಕಳೆದುಕೊಂಡಾಗ ಕೊನೆಯಲ್ಲಿ ಅದು ಮತ್ತೆ ಬೀಜವಾಗಿ ನಿಲ್ಲುತ್ತದೆ. ಹೀಗೆ ಬೀಜದಿಂದ ಮತ್ತೆ ಬೀಜವಾಗುವಿಕೆ ಏನುಂಟೋ ಅದನ್ನೇ ಬೀಜದ ಮೋಕ್ಷ ಎಂಬುದಾಗಿ ಕರೆಯಬಹುದು ಹಾಗೆಯೇ ಒಂದಾನೊಂದು ಕಾಲದಲ್ಲಿ ನಾವೆಲ್ಲರೂ ಭಗವಂತನ ಮಡಿಲಲ್ಲಿ ಇದ್ದೆವು. ಅಲ್ಲಿಂದ ಬೇರಾಗಿ ಬಂದು ನಮ್ಮಿಂದ ದೂರವಾಯಿತು. ಅಂತೆಯೇ ಈ ಸಂಸಾರವೆಂಬ ವೃಕ್ಷದಲ್ಲಿ ನಾವು ಕಳೆದು ಹೋದೆವು. ಇದು ನಿಜವಾದ ಬಂಧನ. ಈ ಸಂಸಾರವನ್ನು ಸರಿಯಾಗಿ ತಿಳಿದುಕೊಂಡು ಮತ್ತೆ ನಾವು ಎಲ್ಲಿಂದ ಬಂದೆವು, ಅಲ್ಲಿಗೆ ಹೋಗಬೇಕಾದದ್ದು ಅನಿವಾರ್ಯವೂ ಅವಶ್ಯವೂ ಆಗಿದೆ. ಅದಕ್ಕೆ ಬೇಕು ಸರಿಯಾದ ಜ್ಞಾನ, ಅದು ಕರ್ಮದಿಂದ ಬಂದ ಜ್ಞಾನ ಆಗಿರಬೇಕು. ಕರ್ಮವನ್ನು ತಿಳಿದು ಮಾಡಿದಾಗ ಅನುಭವವು ಅಷ್ಟೇ ಸಮರ್ಪಕವಾಗಿದೆ ಅಂತಹ ಅನುಭವವು ಮಾತ್ರ ಸಮ್ಯಕ್ ಜ್ಞಾನವನ್ನು ಉಂಟುಮಾಡಲು ಸಾಧ್ಯ. ಇದುವೇ ಮೋಕ್ಷಕ್ಕೆ ಸಾಧನ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.
ಸೂಚನೆ : 16/2/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.