ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಸ್ನಾನ-ಸಂಧ್ಯಾವಂದನೆಗಳೂ ಬೇಡವೇ?
ನಮ್ಮಿಂದ ಸರ್ವದಾ ಏನಾದರೂ ಒಂದು ಕೆಲಸ ನಡೆಯುತ್ತಲೇ ಇರುತ್ತದೆ. ಸುಮ್ಮನಾರು ಕುಳಿತಿರಬಲ್ಲರು? ಚಿಕ್ಕಮಕ್ಕಳ ವಿಷಯದಲ್ಲಂತೂ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. "ಏನೂ ಮಾಡದೆ ಹತ್ತು ನಿಮಿಷ ಸುಮ್ಮನೆ ಕುಳಿತುಕೋ" - ಎಂದುಬಿಡುವುದಕ್ಕಿಂತ ದೊಡ್ಡ ಶಿಕ್ಷೆಯೇ ಮಕ್ಕಳಿಗಿರಲಾರದು! ಕೈಕಾಲುಗಳಾಡದಿದ್ದರೂ ಮನಸ್ಸು ಆಡದೆ ಇದ್ದೀತೇ? ಉಸಿರನ್ನಾದರೂ ಆಡದೆ ಇರಲಾರದೀತೇ?
ಇದು ಒಂದು ಕೊನೆಯಾದರೆ, "ಇಂತಿಂತಹ ಕರ್ಮಗಳನ್ನು ಮಾಡ(ಲೇ)ಬೇಕು, ಇಂತಿಂತಹವನ್ನು ಮಾಡ(ಲೇ)ಬಾರದು - ಎಂದು ಶಾಸ್ತ್ರಗಳೇ ಹೇಳುವುದೂ ಉಂಟು. ಮಾಡಬೇಕೆಂಬುವುದನ್ನು ವಿಧಿಯೆಂದೂ, ಮಾಡಬಾರದೆಂಬುವುದನ್ನು ನಿಷೇಧವೆಂದೂ ಹೇಳಲಾಗುವುದು. ಇವನ್ನೇ ವಿಹಿತ-ಕರ್ಮ, ನಿಷಿದ್ಧ-ಕರ್ಮ ಎನ್ನುವುದೂ ಇದೆ.
ವಿಹಿತ-ಕರ್ಮಗಳಲ್ಲಿ ಕೆಲವನ್ನು ಪ್ರತಿದಿನವೂ ಮಾಡಬೇಕೆಂದು ಶಾಸ್ತ್ರವಿದೆ. ಅವು ನಿತ್ಯ-ಕರ್ಮಗಳಲ್ಲಿ ಸೇರುತ್ತವೆ. ಆದರೆ, ಮಗುವಿಗೆ ನಾಮಕರಣವನ್ನು ಮಾಡುವುದು ಆ ನಿಮಿತ್ತ (ಅಥವಾ ಪ್ರಸಂಗ) ಬಂದಾಗಲಷ್ಟೆ ಮಾಡುವುದು; ಎಂದೇ ಅದನ್ನು ನೈಮಿತ್ತಿಕ-ಕರ್ಮ ಎನ್ನುತ್ತಾರೆ. ಪರ್ವ-ಕಾಲಗಳು ಬಂದಾಗ ಮಾಡಬೇಕಾದವನ್ನು, ಅವು ಬಂದಾಗಲೆಲ್ಲ ಮಾಡಬೇಕಾದ್ದರಿಂದ, ಅವನ್ನು ನಿತ್ಯ-ನೈಮಿತ್ತಿಕ ಎನ್ನುತ್ತಾರೆ. ಇನ್ನು ನನಗೆ ಇಂತಹ ಫಲವು ದೊರೆಯಲಿ - ಎಂಬ ಉದ್ದೇಶದಿಂದ ಮಾಡತಕ್ಕದ್ದು ಕಾಮ್ಯ-ಕರ್ಮವೆನಿಸುತ್ತದೆ.
ಇವುಗಳಲ್ಲಿ ಸ್ನಾನ-ಸಂಧ್ಯಾವಂದನೆಗಳು, ದೇವತರ್ಪಣ-ಋಷಿತರ್ಪಣ - ಇವುಗಳು ನಿತ್ಯ-ಕರ್ಮಗಳೆನಿಸುತ್ತವೆ. ಯಾವ ಕರ್ಮಗಳನ್ನು ಮಾಡಲಿ, ಬಿಡಲಿ, ನಿತ್ಯ-ಕರ್ಮಗಳನ್ನು ತಪ್ಪಿಸುವಂತಿಲ್ಲವೆನ್ನುತ್ತದೆ, ಶಾಸ್ತ್ರ.
ಯಾವುದೇ ವಿಹಿತ-ಕರ್ಮಗಳನ್ನು ಮಾಡುವ ಮೊದಲೂ ಸ್ನಾನವಾಗಿರಬೇಕು. ಸ್ನಾನವು ಶೌಚ-ಕರ. ಶೌಚವೆಂದರೆ ಶುಚಿತೆ. ದೇಹಕ್ಕೆ ನಾನಾಬಗೆಯ ಮಾಲಿನ್ಯವು ಅಂಟಿಕೊಳ್ಳುವುದುಂಟು. ಅದನ್ನು ಹೋಗಲಾಡಿಸಿದರೆ ಶುಚಿತ್ವವು ಬರುವುದು. ಮಣ್ಣಲ್ಲಾಡಿಬಂದರೆ, ಧೂಳಿನ ಸಂಪರ್ಕವಾದರೆ, ಮೈ ಕೊಳೆಯಾಗುವುದು. ಹೊರಗಡೆಯಿಂದಾಗುವಂತೆ ಒಳಗಿನಿಂದಲೂ ಮಲವೇರ್ಪಡಬಹುದು: ಶ್ರಮದ ಕಾರ್ಯಗಳಿಂದ ಬೆವರೂ, ಅದರಿಂದ ದುರ್ಗಂಧವೂ, ಜನಿಸಬಹುದು. ಅವೆಲ್ಲವೂ ಹೋಗಲು ಸ್ನಾನ ಬೇಕು. ಸ್ನಾನದ ಪರಿಣಾಮವು ಮನಸ್ಸಿನ ಮೇಲೂ ಆಗುವುದು. ಆದುದರಿಂದಲೇ ನೈರ್ಮಲ್ಯ ಹಾಗೂ ಭಾವ-ಶುದ್ಧಿಗಳನ್ನು ಸ್ನಾನ-ಫಲಗಳೆನ್ನುವುದು. ಒಗೆದ ಬಟ್ಟೆಯನ್ನೇ ಸ್ನಾನಾನಂತರ ಉಟ್ಟುಕೊಳ್ಳುವುದು. ಇದರಿಂದಲೂ ಮನಸ್ಸಿಗೆ ಹೊಸತನ-ಹರ್ಷಗಳು ಬರುವುವು.
ಹೀಗೆ ದೇಹಶುದ್ಧಿ-ಚಿತ್ತಶುದ್ಧಿ-ಹರ್ಷೋಲ್ಲಾಸ - ಇವುಗಳನ್ನು ಸಂಪಾದಿಸಿಕೊಂಡು ಮಾಡುವ ದೇವ-ಪೂಜಾದಿ-ಕಾರ್ಯಗಳು ಸುಸಂಪನ್ನವಾಗುತ್ತವೆ. ಅವುಗಳ ಮೊದಲ ಹೆಜ್ಜೆಯೇ ಸಂಧ್ಯಾ-ವಂದನೆ. ಸಂಧ್ಯಾ-ಕಾಲದಲ್ಲಿ ಮಾಡುವ ಕ್ರಿಯೆಯಿದು. ಸಂಧ್ಯಾ-ಕಾಲವೆಂಬುದು ಸಂಧಿ-ಕಾಲ. ಹಗಲು-ಇರುಳುಗಳು ಸಂಧಿಸುವ ಕಾಲವದು. ಇರುಳು ಕಳೆದು ಬೆಳಕು ಹರಿಯುವಾಗ ಪ್ರಾತಃಸಂಧ್ಯೆ. ಹಗಲು ಕಳೆದು ಕತ್ತಲಾವರಿಸುವಾಗ ಸಾಯಂಸಂಧ್ಯೆ. ಹಗಲಿನ ಮಧ್ಯಸಮಯದಲ್ಲಿ ಪೂರ್ವಾಹ್ಣ-ಅಪರಾಹ್ಣಗಳ ಸಂಧಿಯೊಂದುಂಟು. ನಡುರಾತ್ರಿಯಲ್ಲೂ ಒಂದು ಸಂಧಿಕಾಲವುಂಟು; ಅದು ಸಂನ್ಯಾಸಿಗಳಿಗೆ ಉಪಯುಕ್ತ/ಪ್ರಶಸ್ತ. ಉಳಿದವರಿಗೆ ಪ್ರಾತಃಸಂಧ್ಯೆ, ಮಧ್ಯಾಹ್ನ, ಸಾಯಂಸಂಧ್ಯೆಗಳೆಂಬ ತ್ರಿಕಾಲಗಳ ಕರ್ಮಗಳು ಆಚರಣೀಯವಾಗಿರುತ್ತವೆ.
ಸಂಧ್ಯಾವಂದನಾನಂತರ ದೇವತೆಗಳನ್ನೂ ಪಿತೃಗಳನ್ನೂ ಉದ್ದೇಶಿಸಿ ತರ್ಪಣವೆಂಬುದು ಆಚರಿತವಾಗತಕ್ಕದ್ದು. ತರ್ಪಣವೆಂದರೆ ತೃಪ್ತಿಪಡಿಸುವುದು. ಸ್ನಾನ-ಸಂಧ್ಯಾವಂದನಗಳನ್ನೂ ದೇವತರ್ಪಣ-ಋಷಿತರ್ಪಣಗಳನ್ನೂ ಬಿಡುವಂತಿಲ್ಲ.
ಧರ್ಮಶಾಸ್ತ್ರಕ್ಕೆ ಸಂಬಂಧಿಸುವ ಈ ಎಲ್ಲ ವಿಷಯಗಳಿಗೂ ಕೃಷ್ಣಕರ್ಣಾಮೃತಕ್ಕೂ ಏನು ಸಂಬಂಧ? - ಎಂಬ ಪ್ರಶ್ನೆಯು ಏಳುತ್ತದಲ್ಲವೇ? ಸಂಬಂಧವಿದೆ. ಸಂಧ್ಯಾವಂದನೆಯ ಬಗ್ಗೆಯೂ, ತರ್ಪಣಗಳ ಬಗ್ಗೆಯೂ ಲೀಲಾಶುಕನು ಒಂದು ಶ್ಲೋಕದಲ್ಲಿ ಹೇಳಿದ್ದಾನೆ. ಅಷ್ಟೇ ಅಲ್ಲ, ಬಿಡದೇ ಮಾಡಬೇಕಾದ ಅವುಗಳ ವಿಷಯದಲ್ಲಿ ಮಾಫಿಯನ್ನೂ ಬೇಡುತ್ತಿದ್ದಾನೆ!
ತೀವ್ರ ಅನಾರೋಗ್ಯವಾಗಿದ್ದಾಗ ಗತ್ಯಂತರವಿಲ್ಲದೆ, ಎಂದರೆ ಬೇರೆ ಗತಿಯಿಲ್ಲದೆ, ಕರ್ತವ್ಯವನ್ನೂ ಕೈಬಿಡುವುದಾಗುತ್ತದೆಯಷ್ಟೆ. ಗತಿಯೆಂದರೆ ಇಲ್ಲಿ ದಾರಿ ಎಂದರ್ಥ. ಗತ್ಯಂತರವೆಂದರೆ ಅನ್ಯ-ಮಾರ್ಗ. ಹಾಗೆಯೇ ಸೂತಕ-ಮೃತಕಗಳೊದಗಿದಾಗ ಕೆಲವು ಕರ್ಮಗಳನ್ನು ಮಾಡುವುದು ಬೇಡವೆಂದು ಹೇಳುವುದುಂಟು. ಮನೆಯಲ್ಲಾಗುವ ಜನನ-ಮರಣಗಳು ಸಾಧಾರಣ-ಘಟನೆಗಳಲ್ಲ. ಮಗುವು ಜನಿಸಿದಾಗ ಮನೆಯ ಮಂದಿಯ ಪ್ರಕೃತಿಯಲ್ಲಿ ಒಂದು ಅಶುದ್ಧಿಯು ಏರ್ಪಡುತ್ತದೆ. ಯಾರಲ್ಲಿ ಎಷ್ಟು ಎಂಬೀ ಲೆಕ್ಕಗಳು ಇಲ್ಲಿ ಬೇಡ. ಎಲ್ಲ ವಿಹಿತ-ಕರ್ಮಗಳಿಗೂ ಶೌಚವೆಂಬುದು ಹೊರಗಡೆಯೆಂತೋ ಒಳಗಡೆಯೂ ಅಂತೆಯೇ ಬೇಕು. ಮನೆಯಲ್ಲಾಗುವ ಜನನ-ಮರಣಗಳಿಂದಾಗಿ ಅಂತಶ್ಶೌಚವು ಲುಪ್ತವಾಗುತ್ತದೆ. ಆಗ ಅ-ಶೌಚವೇರ್ಪಡುತ್ತದೆ. ಆಶೌಚವೆಂದರೂ ಅದೇ. ಮನೆಯಲ್ಲಿಯೋ ನಿಕಟ-ಬಂಧುಗಳಲ್ಲಿಯೋ ಶಿಶು-ಜನನವಾದಾಗ ಉಂಟಾಗುವ ಆಶೌಚಕ್ಕೆ ಸೂತಕವೆಂದು ಹೆಸರು; ಹಾಗೆಯೇ ಮರಣಗಳಿಂದೇರ್ಪಡುವ ಆಶೌಚಕ್ಕೆ ಮೃತಕವೆಂದು ಹೆಸರು. ಅಂತಹ ಸಂದರ್ಭಗಳಲ್ಲಿ ಕೆಲವು ಕರ್ಮಗಳಿಗೆ ಮಾಫಿಯುಂಟು. ಧರ್ಮಶಾಸ್ತ್ರದ ಭಾಷೆಯಲ್ಲಿ ಹೇಳುವುದಾದರೆ ಆಗ ಆ ಕರ್ಮಗಳನ್ನು ಮಾಡುವ ಅಧಿಕಾರವಿರುವುದಿಲ್ಲ. ಅಧಿಕಾರವೆಂದರೆ ಅರ್ಹತೆ.
ಈ ಶ್ಲೋಕದಲ್ಲಿ ಲೀಲಾಶುಕನು ಕೇಳಿಕೊಳ್ಳುತ್ತಿರುವ ಮಾಫಿಯು ಹೀಗೆ ಅಧಿಕಾರವಿಲ್ಲದಿರುವ ಕಾರಣದಿಂದಲ್ಲ. ಅಧಿಕಾರವೇ ಇಲ್ಲದಿರುವಾಗ ಮಾಫಿ ಕೇಳುವ ಪ್ರಸಂಗವೇ ಇರುವುದಿಲ್ಲ. ಬೇರೊಂದು ಕಾರಣಕ್ಕೇ ಆತನು ಸ್ನಾನ-ಸಂಧ್ಯೆ-ತರ್ಪಣಗಳಿಂದ ಮಾಫಿಯನ್ನು ಬೇಡುತ್ತಿರುವುದು.
ಏನದು ಕಾರಣ? "ಎಲ್ಲಿಯೋ ಒಂದೆಡೆ ಕುಳಿತು ಕೃಷ್ಣಸ್ಮರಣೆಯನ್ನು ನಾನು ಮಾಡಬೇಕು – ಅದಕ್ಕಾಗಿ" - ಎನ್ನುತ್ತಾನೆ, ಲೀಲಾಶುಕ.
ಸಂಧ್ಯಾಚರಣ-ತರ್ಪಣಕರಣಗಳನ್ನು ತಪ್ಪಿಸುವಂತಿಲ್ಲ. ನಿತ್ಯಕೃತ್ಯ-ಲೋಪವಾದರೆ ಪಾಪ-ಲೇಪ ತಪ್ಪಿದ್ದಲ್ಲ, ಅಲ್ಲವೇ? ಲೋಪವೆಂದರೆ ತಪ್ಪುವುದು; ಲೇಪವೆಂದರೆ ಮೆತ್ತಿಕೊಳ್ಳುವುದು, ಅಂಟುವುದು. ಈ ಅಂಶವು ಲೀಲಾಶುಕನಿಗೆ ಗೊತ್ತಿಲ್ಲದಿಲ್ಲ.
ಆದರೆ ಮತ್ತೆ ಮತ್ತೆ ಕೃಷ್ಣ-ಸ್ಮರಣೆ ಮಾಡುತ್ತಿರುವಷ್ಟರಿಂದಲೇ ಅನೇಕ ಅಘಗಳು ಅಳಿಯುವುದನ್ನು ಇಲ್ಲಿ ಜ್ಞಾಪಿಸುತ್ತಿದ್ದಾನೆ. ಅಘವೆಂದರೆ ಪಾಪ. ಎರಡು ಬಗೆಯ ಅಘಗಳ ಲೆಕ್ಕವಿಲ್ಲಿದೆ. ಸಂಧ್ಯಾದಿ-ಕರ್ಮಗಳ ಲೋಪದಿಂದ ಏರ್ಪಡುವ ಪಾಪ; ಜೊತೆಗೆ ನಮ್ಮ ಪ್ರಾಚೀನ-ಪಾಪಗಳು. ಎಂದರೆ, ಹುಟ್ಟಿದಾಗಿನಿಂದ ಘಟಿಸಿರುವ ಪಾಪಗಳು, ಹಾಗೂ ಅದಕ್ಕೂ ಮುಂಚೆ, ಎಂದರೆ ಪೂರ್ವಜನ್ಮಗಳಲ್ಲಿ ಘಟಿಸಿರುವ ಪಾಪಗಳು. ಪೂರ್ವ-ಪಾಪಗಳ ಜೊತೆಗೆ ಈಗಿನ ಕರ್ಮ-ಲೋಪದ ಪಾಪವೂ ಸೇರಿ ಮೊತ್ತವು ಇನ್ನೂ ಹೆಚ್ಚೇ ಆಯಿತಲ್ಲವೆ? - ಎಂಬುದು ಬರಬೇಕಾದ ಪ್ರಶ್ನೆ.
ಅದಕ್ಕೆ ಉತ್ತರವು ಹೀಗೆ. ಮನಸ್ಸು ಉತ್ಕಟವಾಗಿ ಭಗವದ್ಭಾವದಲ್ಲಿದ್ದು ಬಾಹ್ಯ-ಕ್ರಿಯೆಗಳತ್ತ ಹರಿವೇ ಉಂಟಾಗದಷ್ಟು ಉಮ್ಮಳಿಸಿದಾಗ, ಎಲ್ಲ ಪಾಪಗಳ ಪರಿಣಾಮವನ್ನೂ ಮೀರುವುದಾಗುತ್ತದೆ. ಆ ತುಂಗಭಾವವಿಲ್ಲದೆ ಕೇವಲ ಆ ನೆಪವನ್ನೊಡ್ಡಿ ಕರ್ತವ್ಯ-ಚ್ಯುತನಾಗುವುದು ತರವಲ್ಲ - ಎಂಬ ಎಚ್ಚರವನ್ನಿಲ್ಲಿ ತೆಗೆದುಕೊಳ್ಳಬೇಕು.
ಕೃಷ್ಣನು ಯಾದವಕುಲೋತ್ತಂಸ, ಎಂದರೆ ಯದು-ಕುಲಕ್ಕೆ ಶಿರೋಮಣಿ. ಕಂಸನಂತೂ ಕಲಿ-ಪುರುಷ. ಆದ್ದರಿಂದ ಕಂಸ-ಸಂಹಾರವು ಧರ್ಮಕಾರ್ಯವೇ. ಈ ಕಂಸ-ದ್ವೇಷಿಯ ಸಂಸ್ಮರಣೆಯಾಗುತ್ತಿರಬೇಕು. ಸ್ಮೃತಿ-ಸಂತಾನವೇ, ಎಂದರೆ ನಿರಂತರವಾದ ಸ್ಮೃತಿಯೇ, ಧ್ಯಾನ. ಭಗವಂತನನ್ನೇ ನೆನೆನೆನೆದು ಆರ್ದ್ರವಾದ ಹೃದಯವಾಗುವಂತಾದಲ್ಲಿ ಅದು ಸರ್ವ-ಪಾಪ-ಹರವೇ.
ದೇವತೆಗಳೇ ಪಿತೃಗಳೇ – ಎಂದು ಅವರನ್ನು ಸಂಬೋಧಿಸುವುದು ಸಹಜ; ಆದರೆ, ಓ ಸ್ನಾನವೇ! ಓ ಸಂಧ್ಯಾ-ವಂದನೆಯೇ! – ಎಂದು ಅಮೂರ್ತವಾದವನ್ನೂ ಯಾರಾದರೂ ಸಂಬೋಧಿಸುವರೇ? ಆದರೆ ಧ್ಯಾನದತ್ತ ಒಳಸೆಳೆತವು ಉತ್ಕಟವಾದಾಗ ಅವಕ್ಕೂ ನಮಸ್ಕಾರ ಹೇಳಿ ಅವನ್ನು ಉಪೇಕ್ಷಿಸುವುದಾಗುವುದು. ಈ ಶ್ಲೋಕದಲ್ಲಿಯ ಯುಕ್ತಿಯನ್ನು ಯಾರೂ ತಮ್ಮ ಮೈಗಳ್ಳತನಕ್ಕೆ ಬಳಸಿಕೊಳ್ಳಬಾರದಷ್ಟೆ!
ಸಂಧ್ಯಾ-ವಂದನ! ಭದ್ರಮಸ್ತು ಭವತೇ, ಭೋಃ ಸ್ನಾನ! ತುಭ್ಯಂ ನಮೋ/
ಭೋ ದೇವಾಃ ಪಿತರಶ್ಚ ತರ್ಪಣ-ವಿಧೌ ನಾಹಂ ಕ್ಷಮಃ ಕ್ಷಮ್ಯತಾಮ್ |
ಯತ್ರ ಕ್ವಾಪಿ ನಿಷೀದ್ಯ ಯಾದವ-ಕುಲೋತ್ತಂಸಸ್ಯ ಕಂಸ-ದ್ವಿಷಃ/
ಸ್ಮಾರಂ ಸ್ಮಾರಂ ಅಘಮ್ ಹರಾಮಿ ತದಲಂ ಮನ್ಯೇ, ಕಿಮ್ ಅನ್ಯೇನ ಮೇ? ||
ಸೂಚನೆ : 8/2/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.