Sunday, February 16, 2025

ವ್ಯಾಸ ವೀಕ್ಷಿತ 122 ಅಡಿಯಿಂದ ಅಗ್ನಿ, ಮೇಲಿಂದ ಮಳೆ! (Vyaasa Vikshita 122)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಖಾಂಡವವು ಸುಡಲಾರಂಭಿಸಿತು. ಪ್ರದೀಪ್ತವಾದ ಆ ಅಗ್ನಿಯ ದೊಡ್ಡ ದೊಡ್ಡ ಕಿಡಿಗಳು ಗಗನಕ್ಕೆ ಜಿಗಿದವು, ಮತ್ತು ಆ ಕಾರಣಕ್ಕಾಗಿ ದೇವತೆಗಳಿಗೇ ಮಹತ್ತಾದ ಉದ್ವೇಗವನ್ನು ಉಂಟುಮಾಡಿದವು! ಆ ಜ್ವಾಲೆಗಳಿಂದ ಬಹುತಾಪಗೊಂಡ ದೇವತೆಗಳು ಋಷಿಗಳನ್ನು ಮುಂದಿಟ್ಟುಕೊಂಡವರಾಗಿ ದೇವ-ಲೋಕದ ಎಲ್ಲ ಮಹಾತ್ಮರೊಂದಿಗೆ ಹೊರಟರು. ಎಲ್ಲಿಗೆ? ಅಸುರ-ಮರ್ದನನೂ ದೇವೇಶನೂ ಸಹಸ್ರಾಕ್ಷನೂ ಶತ-ಕ್ರತುವೂ (ಎಂದರೆ ನೂರು ಅಶ್ವಮೇಧಗಳನ್ನು ಮಾಡಿದವನೂ) ಆದ ಇಂದ್ರನಲ್ಲಿಗೆ.


ದೇವತೆಗಳು ಇಂದ್ರನನ್ನು ಕುರಿತು, "ಇದೇನು, ಮಾನವರೆಲ್ಲರನ್ನೂ ಅಗ್ನಿದೇವನು ಸುಡುತ್ತಿದ್ದಾನೆಯೋ? ಲೋಕಗಳ ಪ್ರಳಯವೇನಾದರೂ ಉಂಟಾಗುತ್ತಿದೆಯೋ, ಓ ದೇವರಾಜನೇ?" – ಎಂದು ಕೇಳಿದರು.


ಅವರ ಮಾತುಗಳನ್ನು ಇಂದ್ರನು ಆಲಿಸಿದನು. ತಾನೇ ಅದನ್ನು ಅನುವೀಕ್ಷಿಸಿದನು: ಖಾಂಡವವನ್ನು ಬಿಡಿಸಬೇಕೆಂದು ತಾನೇ ಅಲ್ಲಿಗೆ ಹೋದನು. ದೊಡ್ಡ ರಥ-ಸಮೂಹದೊಂದಿಗೆ, ಹಾಗೂ ನಾನಾರೂಪಗಳಲ್ಲಿ, ಇಂದ್ರನು ಆಕಾಶವನ್ನೇ ಸುತ್ತುವರೆದು ಮಳೆಗರೆದನು. ಆ ದೇವರಾಜನಾದ ಇಂದ್ರನಿಂದ ಪ್ರೇರಿತವಾದ ಮೋಡಗಳು ಖಾಂಡವದತ್ತ ಧಾರೆಧಾರೆಯಾಗಿ ಭಾರೀ ಪ್ರಮಾಣದ ಮಳೆಗಳನ್ನು ಸುರಿಸಿದವು.


ಆದರೇನು? ಅಗ್ನಿಯ ತೇಜಸ್ಸಿನಿಂದ ಆ ಧಾರೆಗಳು ಅಗ್ನಿಯನ್ನು ಸೇರುವ ಮುಂಚೆಯೇ ಆಕಾಶದಲ್ಲಿಯೇ ಶೋಷಗೊಂಡವು, ಎಂದರೆ ಆರಿಹೋದವು: ಅಗ್ನಿಯನ್ನು ಸಮೀಪಿಸಲೇ ಆರದಾದವು!


ಇಂದ್ರನಿಗಂತೂ ತೀವ್ರವಾದ ಸಿಟ್ಟೇ ಬಂದಿತು. ಅಗ್ನಿಯ ಮೇಲೆ ಎಂದೇ ಮತ್ತೆ ಮಹಾ-ಮೇಘಗಳಿಂದ ಬಹುವಾದ ಮಳೆಯನ್ನೇ ಸುರಿದನು.


ಇತ್ತ ಅಗ್ನಿ-ಜ್ವಾಲೆ ಅತ್ತ ವರ್ಷಾ-ಧಾರೆ, ಇತ್ತ ಹೊಗೆ ಅತ್ತ ಮಿಂಚು, ಅಲ್ಲದೆ ಮಧ್ಯೆ ಮಧ್ಯೆ ಘೋರವಾದ ಗುಡುಗುಗಳು - ಇವುಗಳೆಲ್ಲದವುಗಳಿಂದಾಗಿ ಆ ಅರಣ್ಯವು ಘೋರವೇ ಆಗಿಹೋಯಿತು.


ಹಾಗೆ ಮಳೆಸುರಿಯುತ್ತಿರಲು ಅರ್ಜುನನೂ ಸುಮ್ಮನಿರಲಿಲ್ಲ. ಪ್ರತಿಯಾಗಿ ತಾನೂ ಶರ-ವರ್ಷವನ್ನೇ, ಎಂದರೆ ಬಾಣಗಳ ಮಳೆಯನ್ನೇ, ಕರೆದನು. ತನ್ನ ಉತ್ತಮಾಸ್ತ್ರಗಳಿಂದಾಗಿ ಆ ಜಲಧಾರೆಯನ್ನೆಲ್ಲಾ ತಡೆದುಬಿಟ್ಟನು. ತನ್ನ ಬಹುಲವಾದ ಬಾಣಗಳಿಂದ ಆ ಪಾಂಡವನು ಖಾಂಡವ-ವನವನ್ನೆಲ್ಲಾ ಆಚ್ಛಾದನೆ ಮಾಡಿಬಿಟ್ಟನು, ಎಂದರೆ ಮುಚ್ಚಿಹಾಕಿಬಿಟ್ಟನು - ಹಿಮದಿಂದ ಹೇಗೆ ಚಂದ್ರನು ಎಲ್ಲವನ್ನೂ ಮುಚ್ಚಿ ಹಾಕುವನೋ ಹಾಗೆ.


ಸವ್ಯ-ಸಾಚಿಯಾದ ಅರ್ಜುನನು ಬಾಣ-ಪ್ರಯೋಗ ಮಾಡುತ್ತಿರಲು ಆಕಾಶವೆಲ್ಲಾ ಮುಚ್ಚಿಹೋಗುತ್ತಿದ್ದು, ಯಾವುದೇ ಪ್ರಾಣಿಯೂ ಖಾಂಡವದಿಂದ ಆಚೆಗೆ ಹೋಗಲು ಸ್ವಲ್ಪವೂ ಸಮರ್ಥವಾಗಲಿಲ್ಲ.


ಖಾಂಡವವು ಹೀಗೆ ಸುಟ್ಟುಹೋಗುತ್ತಿರುವ ಸಂದರ್ಭದಲ್ಲಿ ಮಹಾಬಲಶಾಲಿಯಾದ ನಾಗರಾಜ-ತಕ್ಷಕನು ಅಲ್ಲಿ ಇರಲಿಲ್ಲ. ಆತನು ಕುರುಕ್ಷೇತ್ರಕ್ಕೆ ಹೊರಟುಹೋಗಿದ್ದನು. ತಕ್ಷಕನ ಪುತ್ರನಾದ ಅಶ್ವಸೇನನೂ ಬಲಶಾಲಿ. ಅವನಲ್ಲಿದ್ದನು. ಬೆಂಕಿಯ ದೆಸೆಯಿಂದ ಬಿಡುಗಡೆಗಾಗಿ ಆತನು ತೀವ್ರವಾದ ಯತ್ನವನ್ನು ಮಾಡಿದನು. ಅರ್ಜುನನ ಬಾಣಗಳಿಂದ ತಡೆಯುಂಟಾಗಿದ್ದರಿಂದ ಆತನು ಹೊರಹೋಗಲು ಸಮರ್ಥನಾಗಲಿಲ್ಲ.


ಅದಕ್ಕಾಗಿ ಆತನ ತಾಯಿ ಸರ್ಪಿಣಿಯು ಉಪಾಯವೊಂದನ್ನು ಮಾಡಿದಳು. ಅದಾದರೂ ಹೀಗೆ: ಆಕೆಯು ಮೊದಲು ಆತನ ತಲೆಯನ್ನು ನುಂಗಿದಳು; ಹಾಗೆ ನುಂಗುತ್ತಾ ಹೋಗಿ ಕೊನೆಗೆ ಆತನ ಬಾಲವನ್ನೂ ನುಂಗಿದಳು. ಹಾಗೆ ಮಾಡಿ ಆತನಿಗೆ ಬಿಡುಗಡೆಯನ್ನುಂಟುಮಾಡಲೆಂದು ಅವಳು ಹೊರಹೊರಟಳು.


ಇತ್ತ ಅರ್ಜುನನ ತೀಕ್ಷ್ಣವಾದ ಬಾಣದ ಧಾರೆಯೂ ದೊಡ್ಡದಾಗಿತ್ತು. ಹೀಗಾಗಿ ಹೊರಹೋಗುತ್ತಿರುವ ಅವಳ ತಲೆಯನ್ನು ಅರ್ಜುನನು ಕತ್ತರಿಸಿಬಿಟ್ಟನು.


ಅವಳ ಆ ಸ್ಥಿತಿಯನ್ನು ಕಂಡ ಇಂದ್ರನು ಅಶ್ವಸೇನನನ್ನಾದರೂ ಬಿಡಿಸಬೇಕೆಂದು ಸಂಕಲ್ಪಿಸಿದನು.


ಸೂಚನೆ : 16/2/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.