ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರಾಣಪ್ರತಿಷ್ಠೆಯು ಕಳೆದ ವರ್ಷ ಈ ಹೊತ್ತಿಗೆ ನೆರವೇರಿತಷ್ಟೆ. ಆ ಸಂದರ್ಭದಲ್ಲಿ ರಾಮಾಯಣವನ್ನು ಕುರಿತಾದ ಲೇಖನ-ಮಾಲೆಯೊಂದನ್ನು ಇಲ್ಲಿ ಆರಂಭಿಸಲಾಯಿತು. ಇಪ್ಪತ್ತನಾಲ್ಕನೆಯ ಲೇಖನವಿದು. ವರ್ಷಾವಧಿಯಲ್ಲಿ ರಾಮಾಯಣದ ಸಂಕ್ಷಿಪ್ತ-ಸದುಕ್ತಿಗಳನ್ನು ಸಂಗ್ರಹಿಸಿ ಸಂಸ್ಕೃತಿಯ ಸಂದರ್ಶನವೊಂದನ್ನು ಇಲ್ಲಿ ಮೂಡಿಸಿದೆ.
ರಾಮಾಯಣವು ಹೇಗೆ ಪವಿತ್ರ? ಶಬರಿಯು ಹೇಗೆ ವಂದ್ಯಳು? ಗುಹನು ಹೇಗೆ ಅಭಿನಂದ್ಯನು? ಪಕ್ಷಿಗೂ ಕಪಿಗೂ ರಾಕ್ಷಸನಿಗೂ (ಎಂದರೆ ಜಟಾಯು-ಸುಗ್ರೀವ-ವಿಭೀಷಣರಿಗೆ) ಅನುಗ್ರಹವನ್ನು ರಾಮನು ಮಾಡಿದುದು ಹೇಗೆ? ವಾಲ್ಮೀಕಿ-ಶಾಪವು ಹೇಗೆ ಉಗ್ರವಲ್ಲ? ರಾಮಾಯಣ-ರಚನೆಯಲ್ಲಿ ಹೇಗೆ ಯೋಗ-ದೃಷ್ಟಿಯು ಕೆಲಸಮಾಡಿದೆ? - ಮುಂತಾದ ಪ್ರಶ್ನೆಗಳನ್ನೆತ್ತಿ ಉತ್ತರಗಳನ್ನಿತ್ತಿದೆ.
ರಾಮನನ್ನು ಧರ್ಮ-ಮೂರ್ತಿಯೆನ್ನುವರಲ್ಲಾ, ಅದೆಂತು? - ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದರೆ ರಾಮಾಯಣವನ್ನು ಕುರಿತಾದ ಈ ಲೇಖನ-ಮಾಲೆಗೆ ಕಲಶ-ಪ್ರಾಯವಾಗುವುದಲ್ಲವೇ?
ರಾಕ್ಷಸನಾದ ಮಾರೀಚನು ರಾಮನ ಕ್ಷಾತ್ತ್ರತೇಜಸ್ಸು-ಧರ್ಮಬುದ್ಧಿಗಳನ್ನು ಕಂಡುಕೊಂಡವನು. ಎಂದೇ ಆತನು ಹೇಳುವ ಮಾತೇ "ರಾಮೋ ವಿಗ್ರಹವಾನ್ ಧರ್ಮಃ". ಅರ್ಥಾತ್, ಧರ್ಮವೇ ಮೈತಾಳಿಬಂದಿತೆಂದರೆ ಅದುವೇ ಶ್ರೀರಾಮ.
ದುಷ್ಟ-ರಾವಣನು ಮಾರೀಚನಿಗೆ ಹೇಳಿದ್ದೇನು? "ನೀನು ಸುವರ್ಣ-ಮೃಗವಾಗಿ ಹೋಗಿ ಸೀತೆಯ ಮನಸ್ಸನ್ನು ಆಕರ್ಷಿಸು; ಅದನ್ನು ನನಗೆ ದೊರಕಿಸಿಕೊಡು - ಎಂದು ಸೀತೆಯು ರಾಮ-ಲಕ್ಷ್ಮಣರನ್ನು ಯಾಚಿಸುವಳು. ಅವರು ದೂರ ಸಾಗಿರಲಾಗಿ ನಾನು ಅವಳನ್ನು ಅಪಹರಿಸುವೆ."
ಮಾರೀಚನು ಅದಕ್ಕೆ ಕೊಟ್ಟ ಉತ್ತರವು ತನಗೂ ಹಿತ, ರಾವಣನಿಗೂ ಹಿತವಾದದ್ದು – ಎನ್ನುತ್ತಾರೆ, ವಾಲ್ಮೀಕಿಗಳು: " ರಾಮನು ಮಹಾವೀರ್ಯ-ಸಂಪನ್ನ, ಜೊತೆಗೆ ಗುಣೋನ್ನತ - ಎಂದರೆ ಉತ್ಕೃಷ್ಟಗುಣ-ಸಂಪನ್ನ. ರಾವಣಾ, ರಾಕ್ಷಸ-ಕುಲಕ್ಕೇ ನಾಶವು ಬರುತ್ತಿದೆಯೇ? ನಿನ್ನ ಬಾಳನ್ನು ಕೊನೆಗಾಣಿಸಲೆಂದೇ ಸೀತೆಯು ಜನಿಸಿಲ್ಲವಷ್ಟೆ? ನೀನು ಸ್ವಜನ-ಸ್ವರಾಷ್ಟ್ರಗಳನ್ನು ಧ್ವಂಸಮಾಡಲು ಹೊರಟಿಲ್ಲವಷ್ಟೆ? ರಾಮನು ಸುಶೀಲ, ಸತ್ಯಸಂಧ, ಧರ್ಮಾತ್ಮಾ. ಹೆಚ್ಚೇನು ಆತನು ಧರ್ಮವೇ ಸಶರೀರವಾಗಿ ಬಂದಂತೆ! ರಾಮನೆಂದರೆ ಅಗ್ನಿ; ಆತನ ಬಾಣಗಳು ಜ್ವಾಲೆಗಳು; ಬಿಲ್ಲು-ಖಡ್ಗಗಳು ಇಂಧನಗಳು - ಅಂತಹ ಅಗ್ನಿಯೊಳಗೆ ಧುಮುಕುವೆಯಾ? ಆತನ ಪತ್ನಿ ಸೀತೆಯು ಮಹಾತೇಜಸ್ಸು; ಅಗ್ನಿಶಿಖೆ ಅವಳು! ಎಚ್ಚರ!" ಎಂದು. ಆತ್ಮನಾಶಕ್ಕೆ ಹೊರಟ ರಾವಣನ ಮುಂದಿನ ಕಥೆ ಗೊತ್ತಿರುವುದೇ.
ಬರೀ ಮಾರೀಚನೇ ಅಲ್ಲ, ವಾಲ್ಮೀಕಿಗಳೇ ರಾಮನ ಧರ್ಮಾತ್ಮತೆಯನ್ನು ಉದ್ದಕ್ಕೂ ಹೇಳುತ್ತಲೇ ಬಂದಿದ್ದಾರೆ. "ಧರ್ಮ" ಎಂಬ ಪದವೇ ರಾಮಾಯಣದಲ್ಲಿ ಸಾವಿರಬಾರಿಗಿಂತಲೂ ಹೆಚ್ಚಾಗಿ ಬಳಕೆಯಾಗಿದೆ. ರಾಮನನ್ನು ಧರ್ಮಜ್ಞನೆಂದೂ ಧರ್ಮದಲ್ಲಿ ನೆಲೆಗೊಂಡವನೆಂದೂ ಪ್ರಥಮ-ಸರ್ಗದಲ್ಲೇ ಬಗೆಬಗೆಯಾಗಿ ಹೇಳಿದೆ: ಆತನು ಗುಣವಂತ, ಕೃತಜ್ಞ, ಸತ್ಯ-ವಾಕ್ಯ, ಚಾರಿತ್ರದಿಂದ ಕೂಡಿದವ, ಸರ್ವ-ಭೂತಗಳಿಗೂ ಹಿತವನ್ನುಂಟುಮಾಡುವವ, ಆತ್ಮವಂತ, ಕ್ರೋಧವನ್ನು ಜಯಿಸಿದವ, ಅಸೂಯೆಯಿಲ್ಲದವ; ಅಷ್ಟೇ ಅಲ್ಲ, ಆತನು ವೀರ್ಯವಂತ, ದೇವತೆಗಳು ಸಹ ರಣದಲ್ಲಿ ಆತನ ರೋಷಕ್ಕೆ ಬೆದರುವವರೇ! ಆತನು ಶತ್ರು-ನಿಬರ್ಹಣ, ಎಂದರೆ ರಿಪುಗಳನ್ನು ದಮನ ಮಾಡುವವ; ಹಾಗೆ ಮಾಡುವುದರಿಂದಲೇ ಆತನು ಜೀವಲೋಕ-ರಕ್ಷಕ, ಧರ್ಮ-ಪರಿರಕ್ಷಕ, ಸ್ವಧರ್ಮ-ರಕ್ಷಕ, ಸ್ವಜನ-ರಕ್ಷಕ, ಕ್ರೋಧವೇ ಬಂದಲ್ಲಿ ಕಾಲಾಗ್ನಿಗೇ ಸಮ - ಎಂದೆಲ್ಲ ಹೇಳಿದೆ.
ಮೇಲೆ ಹೇಳಿರುವ ಅನೇಕ ಗುಣಗಳಲ್ಲಿ ಎರಡು ಎಳೆಗಳನ್ನು ವಿಶಿಷ್ಟವಾಗಿ ಕಾಣಬಹುದು. ಆತನ ಸದ್ವರ್ತನೆ ಹಾಗೂ ಶತ್ರು-ಧ್ವಂಸಕತೆ.
ರಾಮನಿಗಾರು ಶತ್ರು? ಅಧರ್ಮವೇ ಶತ್ರು. ರಾವಣನಾದರೋ ಅಧರ್ಮವೇ ಮೈತಾಳಿದವನು. ಅವನಿಗೆ ಬಲದುಂಬಿದ ಪುತ್ರ ಇಂದ್ರಜಿತ್ತೂ ಅಧರ್ಮ-ಪ್ರತೀಕವೇ. ಎಂದೇ ಇಂದ್ರಜಿತ್-ಸಂಹಾರದ ಸಮಯದಲ್ಲಿ ಲಕ್ಷ್ಮಣನು ಮಾಡುವ ಆಣೆ "ಶ್ರೀರಾಮನು ಧರ್ಮಾತ್ಮನೇ ಆಗಿದ್ದಲ್ಲಿ, ಓ ಬಾಣವೇ ಈ ಇಂದ್ರಜಿತ್ತನ್ನು ಕೊಲ್ಲು" ಎಂದಿರುವುದು.
ಶ್ರೀರಂಗಮಹಾಗುರುಗಳ ಮಾತಿನಲ್ಲಿ ಹೇಳುವುದಾದರೆ, "ಲಕ್ಷ್ಮಣನಿಗೆ ರಾಮನು ಬೇಕು; ಅದಕ್ಕಿಂತಲೂ ಮೊದಲು ಬೇಕಾದದ್ದು ಧರ್ಮ"! ಇದಕ್ಕಾದರೂ ಕಾರಣವಿದು: "ದೇಶ-ಕ್ಷೇಮವು ಏರ್ಪಡುವುದು ಧರ್ಮದಿಂದ; ದೇಶ-ಕ್ಷೋಭೆಯು ಅಧರ್ಮದಿಂದ. ಇದು ಸಿದ್ಧವಾದ ಮೇಲೆ ಧರ್ಮವೇ ದೇಶವನ್ನಾಳಬೇಕು, ಅಲ್ಲವೇ?"
ರಾವಣನು ಲೋಕ-ರಾವಣ, ಎಂದರೆ ಲೋಕಗಳನ್ನೆಲ್ಲ ಗೋಳಾಡಿಸುವವನು. ಇದುವೇ ಲೋಕ-ಕ್ಷೋಭೆ. ಹನುಮಂತನು ಸಹ ರಾವಣನಲ್ಲಿ ಅಧರ್ಮವೇ ಬಲಿಷ್ಠವಾಗಿರುವುದನ್ನು ಉಸುರುತ್ತಾನೆ.
ಹೀಗೆ ರಾಮ-ರಾವಣರು ಧರ್ಮ-ಅಧರ್ಮಗಳೇ ಮೈತಾಳಿಬಂದಂತೆ. ಅಧರ್ಮವು ತಳೆಯುವ ಬಗೆಬಗೆಯ ವೇಷಗಳನ್ನೂ ಧೋರಣೆಗಳನ್ನೂ, ಅದನ್ನು ಹತ್ತಿಕ್ಕುವಲ್ಲಿ ಧರ್ಮವು ಇಡಬೇಕಾದ ಹೆಜ್ಜೆಗಳನ್ನೂ ತಂತ್ರಗಳನ್ನೂ ರಾಮಾಯಣವು ತೋರಿಗೊಡುವುದು.
ಹೀಗೆ ಎಂದೆಂದಿಗೂ ಜೀವನಕ್ಕೆ ಅವಶ್ಯವಾದ ಪಾಠಗಳನ್ನೂ ಮೌಲ್ಯಗಳನ್ನೂ ಕಥಾದ್ವಾರಾ ತಿಳಿಸುವ ರಾಮಾಯಣವು ಶಾಶ್ವತ-ಕಾವ್ಯವೆಂಬುದರಲ್ಲಿ ಅಚ್ಚರಿಯೇನು?
ಸೂಚನೆ: 1/2//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.