Sunday, February 16, 2025

ಕೃಷ್ಣಕರ್ಣಾಮೃತ 51 ವೇಣು-ವಾದಕನ ರುಚಿರ-ರೂಪ (Krishakarnamrta 51)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



 ಅಂಗುಲ್ಯಗ್ರೈರ್ ಅರುಣಕಿರಣೈರ್


ವೇಣುಗಾನ-ಲೋಲನಾದ ಶ್ರೀಕೃಷ್ಣನನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುವ ಶ್ಲೋಕವೊಂದಿಲ್ಲಿದೆ.

ನಂದಗೋಪಾಲ-ಸೂನುವನ್ನು, ಎಂದರೆ ನಂದಗೋಪಾಲನ ಮಗನನ್ನು, ಅರ್ಥಾತ್ ಶ್ರೀಕೃಷ್ಣನನ್ನು, ನಮಸ್ಕರಿಸುತ್ತೇನೆ - ಎನ್ನುತ್ತಾನೆ, ಲೀಲಾಶುಕ. ವೃಂದಾವನದಲ್ಲೆಲ್ಲಾ ಆತನ ಸು-ಚರಿತವು, ಎಂದರೆ ಸುಭಗವಾದ ಓಡಾಟವು, ಚೆನ್ನಾಗಿಯೇ ನಡೆದಿತ್ತಲ್ಲವೇ? ಎಂದೇ ವೃಂದಾವನ-ಸಂಚಾರಿಯಾದ ನಂದ-ನಂದನನನ್ನು ಈ ಶ್ಲೋಕದಲ್ಲಿ ಸ್ತುತಿಸಿದ್ದಾನೆ, ಲೀಲಾಶುಕ.

ಅಲ್ಲಿ ಎಲ್ಲೆಡೆ ಓಡಾಡಿದ ಕೃಷ್ಣನು, ಕೆಲವೊಮ್ಮೆ ಒಂದೆಡೆ ನಿಂತು ಮೈಮರೆತು ವೇಣು-ವಾದನವನ್ನು ಮಾಡಿದ್ದುಂಟು. ಅದಕ್ಕಾಗಿ ಆತನು ನಿಂತ ನಿಲುವು, ಬೆರಳಾಡಿಸಿದ ಬಗೆ, ಉಸಿರಿಸಿದ ಪರಿ - ಇವುಗಳೆಲ್ಲವನ್ನೂ ಕವಿಯು ಇಲ್ಲಿ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾನೆ.

ತನ್ನ ಅಂಗುಲಿಯ ಅಗ್ರಗಳಿಂದ, ಎಂದರೆ ಬೆರಳುಗಳ ತುದಿಯಿಂದ, ಆಗಾಗ್ಗೆ ಕೊಳಲಿನ ರಂಧ್ರಗಳನ್ನು ಸಂರುದ್ಧವಾಗಿಸುತ್ತಾನೆ, ಮತ್ತು ಮುಕ್ತವಾಗಿಸುತ್ತಾನೆ - ಎಂದರೆ ಮುಚ್ಚುತ್ತಾನೆ, ಮತ್ತು ಬಿಡುತ್ತಾನೆ. ರುದ್ಧವೆಂದರೆ ತಡೆಹಿಡಿದಿರುವುದು. ತಡೆಹಿಡಿದಿರುವುದನ್ನು ತೆಗೆದರೆ ಮುಕ್ತವಾಗುವುದು.

ಕೊಳಲಿನ ಬೇರೆ ಬೇರೆ ರಂಧ್ರಗಳನ್ನು ಸ್ವಲ್ಪವಾಗಿಯೋ ಹೆಚ್ಚಾಗಿಯೋ ಮುಚ್ಚುವುದರಿಂದಲೂ ಬಿಡುವುದರಿಂದಲೂ ಸ್ವರಗಳೂ ಗಮಕಗಳೂ ಉಂಟಾಗುವುವಷ್ಟೆ?

ಭಾರತೀಯ ಸಂಗೀತವು ಗಮಕ-ಪ್ರಧಾನವೆನ್ನುವರು. ಹಾಗಿರಲು, ಇವೆಲ್ಲವನ್ನೂ ಉಂಟಾಗಿಸುವುದು ಯಾವ ರಂಧ್ರವನ್ನು ಎಷ್ಟು ಮುಚ್ಚಿ ಎಷ್ಟು ತೆರೆದಿದ್ದರೆ ಸಾಧ್ಯವಾಗುವುದೆಂಬುದು. ಅದಾದರೂ, ಚೆನ್ನಾಗಿ ಕೈಪಳಗಿದವರಿಗೇ ಗೋಚರವಾಗುವಂತಹುದು. ಗಾನವೆಂಬುದು ಎಷ್ಟಾದರೂ ಪ್ರಯೋಗ-ವಿದ್ಯೆ. ಆದ್ದರಿಂದ ಇದರ ಸೂಕ್ಷ್ಮಗಳ ನೂರಾರು ವಿಷಯಗಳನ್ನು ಲಿಖಿತಮಾಡುವುದು ಯಾರಿಗಾದರೂ ದುಃಶಕವೇ ಸರಿ. ದುಃಶಕ ಅಥವಾ ದುಃಸಾಧ್ಯವೆಂದರೆ ಬಲು ಕಷ್ಟವಾದದ್ದು; ಹೆಚ್ಚು ಕಡಿಮೆ ಆಗದೆಂದೇ ಹೇಳಬಹುದಾದದ್ದು: ಬಹಳ ಶ್ರಮಪಟ್ಟು ಯತ್-ಕಿಂಚಿತ್ತನ್ನು ಸೂಚಿಸಬಹುದು ಅಷ್ಟೆ. ಎಂದೇ ಕವಿಯೂ ಸಾಧಾರಣರ ಕಣ್ಣಿಗೆ ಕಾಣಿಸುವ ಬೆರಳಾಟವನ್ನಷ್ಟೇ ಸೂಚಿಸಿರುವುದು: ಬೆರಳೆತ್ತು, ಬೆರಳೊತ್ತು – ಇವೇ ಮುಕ್ತ-ಸಂರುದ್ಧಗಳೆನಿಸುವ ಕಾರ್ಯಗಳು.

ಕೊಳಲನೂದುತ್ತಿರುವ ಕೃಷ್ಣನು ಕವಿಯ ಕಣ್ಮುಂದೆ ಕಾಣಿಸಿಕೊಂಡೇ ಇರುವನು! - ಎಂಬುದನ್ನು ಮನದಟ್ಟುಮಾಡುವ ಮತ್ತೊಂದು ಅಂಶವಿಲ್ಲಿದೆ. ಶ್ಲೋಕಾರಂಭದಲ್ಲಿ ಅಂಗುಲ್ಯಗ್ರ ಎಂದು ಹೇಳುತ್ತಲೇ, ಆ ಬೆರಳುಗಳು ಅದೆಷ್ಟು ಕೆಂಪಗಿವೆ - ಎಂಬುದು ಕವಿಯ ಕಂಗಳಿಗೆ ಕಂಡಿದೆ. ಅರುಣ-ವರ್ಣ ಅವುಗಳದ್ದು. ಸೂರ್ಯೋದಯಕ್ಕೆ ಮುಂಚೆ ಅರುಣೋದಯವಾಗುತ್ತದಷ್ಟೆ. ಅರುಣೋದಯ-ಸಮಯದಲ್ಲಿ ಆಕಾಶದಲ್ಲಿ ಒಂದು ವಿಶಿಷ್ಟವಾದ ಕೆಂಪನೆಯ ವರ್ಣವಿರುವುದು. ಆ ಬಣ್ಣವೇ ಇದೆ, ಕೃಷ್ಣನ ಬೆರಳುಗಳಿಗೆ. ಹೀಗೆ ಚಿಗುರಿನಂತಿರುವ ಕೆಂಬಣ್ಣದ ಬೆರಳುಗಳು, ಕೃಷ್ಣನವು. ಅವು ಕೆಂಪು ಬಣ್ಣದವು – ಎಂದಷ್ಟೇ ಅಲ್ಲ. ಅವುಗಳಿಂದ ಕೆಂಪು ಕಿರಣಗಳೇ ಹೊಮ್ಮುತ್ತಿವೆ – ಎನ್ನುತ್ತಾನೆ, ಲೀಲಾಶುಕ. ಸುಮ್ಮನೆ ಕೆಂಪಾಗಿರುವುದಕ್ಕೂ ಕೆಂಪು ಛವಿಯು ಅವಿಂದ  ಹೊಮ್ಮುವುದಕ್ಕೂ ಭೇದವಿದೆ. ಆರೋಗ್ಯದಿಂದಿರುವವರ ಶರೀರದಲ್ಲಿ ಕೆಲವು ಲಕ್ಷಣಗಳಿರುತ್ತವೆ. ಆರೋಗ್ಯವಂತರ ಮೈಯಲ್ಲಿ ರಕ್ತ-ಪುಷ್ಟಿಯು ಎದ್ದುಕಾಣುತ್ತಿದ್ದು, ಕೆಲವು ಅಂಗಗಳಲ್ಲಿ ರಕ್ತದ ಕೆಂಪು ಚಿಮ್ಮುವಂತೆ ತೋರುತ್ತದೆ. ಒಳ್ಳೆಯ ಆರೋಗ್ಯವಿದ್ದು ದುಂಡುದುಂಡಾಗಿರುವ ಎಳೇಮಕ್ಕಳ ಮೈಕೈಗಳ ಕೆಂಪು-ಹೊಳಪುಗಳನ್ನು ಕಂಡು ಸಂತೋಷಪಟ್ಟವರಿಗೆ ಇದನ್ನು ವಿವರಿಸಿ ಹೇಳಬೇಕಿಲ್ಲ.  ಅಂತೂ ಅದೆಲ್ಲಾ ಲೀಲಾಶುಕನ ಕಣ್ಮುಂದೆ ಬಂದು ನಿಂತಿದೆ.

ಬರೀ ಬೆರಳಾಡಿಸುವುದರಿಂದಲೇ ಸ್ವರಗಳು ಉತ್ಪನ್ನವಾಗಿಬಿಡುವುವೇ? ವಾಯುವು ವೇಣು-ರಂಧ್ರಗಳಿಂದ ಸರಿಯಾಗಿ ಹೊಮ್ಮಿದಾಗಲಷ್ಟೆ ನಾದವು ಉಂಟಾಗುವುದು? ಬೆರಳುಗಳನ್ನು ಮುಚ್ಚುವುದೂ ಬಿಡುವುದೂ ಮರುತ್ತಿನ ಸಂಚಾರವನ್ನು ನಿಯಮನಮಾಡಲೆಂದೇ. ಉಸಿರನ್ನು ಎಷ್ಟು ಹಿಡಿಯಬೇಕು, ಎಷ್ಟು ಬಿಡಬೇಕೆಂಬ ಲೆಕ್ಕಾಚಾರವಿರಬೇಕಷ್ಟೆ?

ಆದುದರಿಂದ ತನ್ನ ವದನ-ವಾಯುವಿನಿಂದ, ಎಂದರೆ ಬಾಯುಸಿರಿನಿಂದ, ಕೊಳಲನ್ನು ತುಂಬುತ್ತಿರಬೇಕು. ಯಾವ ಒತ್ತಡದ ಗಾಳಿಯನ್ನು ಎಷ್ಟು ದೀರ್ಘವಾಗಿ ಪೂರೈಸಬೇಕೆಂಬ ಲೆಕ್ಕಾಚಾರಗಳೂ ಇಲ್ಲಿ ಕೆಲಸಮಾಡುತ್ತವೆ. ಹೀಗೆ ವೇಣುವಿನ ಆಪೂರಣವು, ಎಂದರೆ ಗಾಳಿಯಿಂದ ತುಂಬುವಿಕೆಯು, ಮತ್ತೆ ಮತ್ತೆ ಆಗುತ್ತಿರಬೇಕು. ವಾರಂ ವಾರಂ ಎಂದರೆ ಪುನಃ ಪುನಃ.

ಕೊಳಲುಗಳೂ ಬಗೆಬಗೆ, ಅವುಗಳ ವಾದನದ ಪ್ರಕಾರಗಳೂ ಬಗೆಬಗೆ, ಅವುಗಳ ಫಲಗಳೂ ಬಗೆಬಗೆ. ಸೈನ್ಯದ ಬ್ಯಾಂಡ್-ಸೆಟ್ಟಿನಲ್ಲಿ ಸಹ ಕೊಳಲನ್ನೂದುವುದಿರಬಹುದು. ಅಲ್ಲಿ ಉದ್ದಿಷ್ಟವಾದ ಫಲವೇ ಬೇರೆ: ಅಲ್ಲಿ ವೀರ-ರಸವುಕ್ಕಬೇಕಲ್ಲವೇ? ಹಾಗೆಯೇ ಇಂದಿನ ಆರ್ಕೆಸ್ಟ್ರಾಗಳಲ್ಲಿಯೂ ಮಧ್ಯ-ಮಧ್ಯದಲ್ಲಿ ಪಕ್ಕವಾದ್ಯವಾಗಿ ಕೊಳಲನ್ನೂದುವುದಿರಬಹುದು: ಅಲ್ಲಿಯ ಉದ್ದೇಶವಂತೂ ಮನೋರಂಜನೆಯೇ ಸರಿ. ಇನ್ನು ಸಂಗೀತ-ಕಚೇರಿಗಳ ಬಗೆಯೂ ಭಿನ್ನವೇ. ಅಲ್ಲಿಯದು ಶಾಸ್ತ್ರಾನುಸಾರಿಯಾದ ಗಾನ: ಕೇಳುಗರಿಗೆ ಸಂಸ್ಕಾರವಿರಬೇಕು; ಹಾಡುವವರಿಗೆ ಸಾಧನೆಯಿರಬೇಕು.

ಆದರೆ ಕೃಷ್ಣನು ನುಡಿಸುವ ಪರಿ ಇವೆಲ್ಲಕ್ಕಿಂತಲೂ ವಿಭಿನ್ನವೇ ಸರಿ. ಏಕೆಂದರೆ, ಆತನ ಗಾನದ ಫಲವೂ ಬೇರೆಯೇ. ಮೊದಲು ಹೇಳಿದ ಸಂನಿವೇಶಗಳಲ್ಲಿ ನಡೆಯುತ್ತಲೋ ನಿಂತೋ ಕುಳಿತೋ ನುಡಿಸಬಹುದು. ಆದರೆ ಕೃಷ್ಣನು ನುಡಿಸುವಾಗಿನ ಭಂಗಿಯೇ ಬೇರೆ.

ಕೃಷ್ಣಕರ್ಣಾಮೃತದಲ್ಲಿಯೇ ಮತ್ತೊಂದೆಡೆ ಹೇಳುವಂತೆ, ಕೃಷ್ಣನು ನುಡಿಸುತ್ತಿರುವುದು ನಿಂತುಕೊಂಡು; ನಿಂತಿರುವುದೂ ಮರದ ಬುಡದಲ್ಲಿ:  ಕಲ್ಪವೃಕ್ಷದ ಮೂಲದಲ್ಲಿ. ಅದೂ ತ್ರಿಭಂಗಿಯಲ್ಲಿ.

ಈ ಶ್ಲೋಕದಲ್ಲಿ ಅದನ್ನು ಹೇಳಿರುವುದು ಆತನು ವ್ಯತ್ಯಸ್ತಾಂಘ್ರಿಯಾಗಿ ನಿಂತಿದ್ದಾನೆಂದು. ಏನು ಹಾಗೆಂದರೆ? ಅಂಘ್ರಿಯೆಂದರೆ ಚರಣ. ವ್ಯತ್ಯಸ್ತವೆಂದರೆ ವ್ಯತ್ಯಾಸವಾಗಿರುವುದು. ಅಸ್ತ- ಎಂಬುದರ ಹಿಂದೆ ವಿ ಮತ್ತು ಅತಿಗಳು ಸೇರಿದಾಗ "ವ್ಯತ್ಯಸ್ತ"ವಾಗುವುದು. ಅವನ ಕಾಲುಗಳು ವ್ಯತ್ಯಾಸವಾಗಿವೆ. ಎಂದರೇನು? ಆತನ ಬಲಗಾಲನ್ನು ಎಡಕ್ಕಿಟ್ಟಿದೆ, ಎಡಗಾಲನ್ನು ಬಲಕ್ಕಿಟ್ಟಿದೆ. ಕೃಷ್ಣನ ಈ ಭಂಗೀ-ವಿಶೇಷವನ್ನು ಚಿತ್ರಗಳಲ್ಲೂ ಶಿಲ್ಪಗಳಲ್ಲೂ ಎಲ್ಲರೂ ಕಂಡಿರುವವರೇ.

ಕೃಷ್ಣನ ವೇಣು-ಗಾನಕ್ಕೆ ನಾನಾ-ಫಲಗಳೇ ಉಂಟು. ಆದರೂ ಒಂದು ವಿಶಿಷ್ಟವಾದ ಅಂತರ್ಮುಖತೆಯನ್ನು ಉಂಟುಮಾಡುವುದು ಅದರ ಮುಖ್ಯ-ಫಲ. ಭಗವಂತನ ಉಸಿರೇ ವೇದಗಳೆಂಬುದನ್ನು ಉಪನಿಷತ್ತುಗಳು ಹೇಳುತ್ತವಲ್ಲವೆ? ಅಂತಹ ದಿವ್ಯವಾದ ಉಸಿರು ಆತನದು.

ಕೃಷ್ಣನು ನಿಂತಿರುವ ಈ ಭಂಗಿಗೂ ಆತನು ತನ್ನ ಕೊಳಲ ಮೂಲಕ ಹೊಮ್ಮಿಸುವ ನಾದಕ್ಕೂ ಸಂಬಂಧವಿರುವುದನ್ನು ಶ್ರೀರಂಗಮಹಾಗುರುಗಳು ಪ್ರತಿಪಾದಿಸಿದ್ದರು.

ಅಂತೂ ಕೃಷ್ಣನ ಬೆರಳು-ಉಸಿರು-ನಿಲುವುಗಳನ್ನು ಹೇಳಿದ್ದಾಯಿತು. ಇವನ್ನೆಲ್ಲಾ ಗಮನಿಸಿ, ಆತನ ಕಣ್ಣನ್ನೇ, ಅದರ ಸೊಬಗನ್ನೇ, ಗಮನಿಸದಿದ್ದರೆ ಚಿತ್ರಿಸದಿದ್ದರೆ ಏನು ಬಂತು? ಆತನ ನೇತ್ರವಂತೂ ಪದ್ಮದಂತಿರುವುದು. ಸುಮ್ಮನೆ ಪಂಕಜದಂತಿದೆಯೆಂದರೆ ಸಾಕೇ? ಅದು ವಿಕಚವಾದ ಕಮಲದಂತಿರುವುದು. ವಿಕಚವೆಂದರೆ ವಿಕಸಿತವಾದದ್ದು, ಅರಳಿರುವುದು. ಅರ್ಥಾತ್, ಅರಳಿದ ಕಮಲದ ಛಾಯೆಯನ್ನೇ ಹೊಂದಿರುವುವು, ಆತನ ಲೋಚನಗಳು.

ಛಾಯೆಯೆಂಬುದಕ್ಕೆ ನೆರಳೆಂಬ ಅರ್ಥವು ಪ್ರಸಿದ್ಧ; ಆದರೆ ಸಂಸ್ಕೃತದಲ್ಲಿ ಈ ಅರ್ಥದ ಜೊತೆಗೆ, ಕಾಂತಿಯೆಂಬ ಅರ್ಥವೂ ಇದೆ. ಹೀಗೆ ಕಾಂತಿಯುತವಾದ ಅಕ್ಷಿಗಳು ಕೃಷ್ಣನವು. ಹೀಗೆ ಕಾಂತಿಯನ್ನೂ ಹೊಂದಿದ್ದು ವಿಸ್ತಾರವಾಗಿಯೂ ಇರುವುವು ಈ ನಂದ-ನಂದನನ ನಯನಗಳು. ಹೀಗಿರುವ, ವೃಂದಾವನ-ಚಾರಿಯಾದ ಈತನನ್ನು ವಂದಿಸುವೆ - ಎಂದಿದ್ದಾನೆ, ಲೀಲಾಶುಕ.

ಶ್ಲೋಕ ಹೀಗಿದೆ:

ಅಂಗುಲ್ಯಗ್ರೈರರುಣ-ಕಿರಣೈರ್ಮುಕ್ತ-ಸಂರುದ್ಧ-ರಂಧ್ರಂ/

ವಾರಂ ವಾರಂ ವದನ-ಮರುತಾ ವೇಣುಮ್ ಆಪೂರಯಂತಂ |

ವ್ಯತ್ಯಸ್ತಾಂಘ್ರಿಂ ವಿಕಚ-ಕಮಲಚ್ಛಾಯ-ವಿಸ್ತಾರಿ-ನೇತ್ರಂ/

ವಂದೇ ವೃಂದಾವನ-ಸುಚರಿತಂ ನಂದಗೋಪಾಲ-ಸೂನುಂ ||

ಸೂಚನೆ : 15/02/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.