ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೨ - ಯಾರು ನಿಜವಾಗಿ ತಿಳಿದವನು ?
ಉತ್ತರ - ಸಂಸಾರದ ಸಂಬಂಧವನ್ನು ಕತ್ತರಿಸಿಕೊಂಡವನು.
ಈಗ ಕೇಳುತ್ತಿರುವ ಪ್ರಶ್ನೆ- ಒಬ್ಬ ಬುದ್ಧಿಮಂತನಾದವನು ಏನು ಮಾಡಬೇಕು? ಎಂಬುದಾಗಿ. ಅದಕ್ಕೆ ಸಂಸಾರಛೇದ ಎಂಬುದು ಉತ್ತರ. ಅಂದರೆ ಸಂಸಾರವನ್ನು ಬಿಡುವಂಥದ್ದು. ಅಂದರೆ ಇಲ್ಲಿ ನಾವು ತಿಳಿಯಬೇಕಾದ ವಿಷಯ ಇಷ್ಟು, ಸಂಸಾರ ಏಕೆ ತ್ಯಾಜ್ಯವಾದದ್ದು? ಅಂದರೆ ಬಿಡಬೇಕಾದುದನ್ನು ತಿಳಿದು ಬಿಡುವಂಥದ್ದು ಎಂದು. ಯಾವುದು ನಿರಂತರವಾಗಿ ಮುಂದುವರೆದುಕೊಂಡು ಹೋಗುತ್ತದೆಯೋ ಅದಕ್ಕೆ 'ಸಂಸಾರ' ಎಂಬುದಾಗಿ ಕರೆಯುತ್ತಾರೆ. 'ಸಮ್ಯಕ್ ಸರತಿ ಇತಿ ಸಂಸಾರಃ' ಅಂದರೆ ಯಾವನು ಜನನ ಮತ್ತು ಮರಣ ಎಂಬ ಚಕ್ರಕ್ಕೆ ಸಿಲುಕಿ ಅದೇ ರೀತಿಯಾಗಿ ಮುಂದುವರೆದುಕೊಂಡು ಹೋಗುತ್ತಿದ್ದರೆ ವಸ್ತುತಃ ಆ ವ್ಯಕ್ತಿಗೇ ಸಂಸಾರ ಎಂಬುದಾಗಿ ಕರೆಯಬೇಕು. ಶ್ರೀರಂಗ ಮಹಾಗುರುಗಳು ಇದಕ್ಕೆ ಒಂದು ಮಾತನ್ನು ಹೇಳುತ್ತಿದ್ದರು - "ನಾವೆಲ್ಲ ಒಂದು ಕಾಲದಲ್ಲಿ ಭಗವಂತನ ಮಕ್ಕಳಾಗಿದ್ದೆವಪ್ಪ ಯಾವುದೋ ಕಾರಣಕ್ಕೆ ಇಲ್ಲಿಗೆ ಬಂದೆವು" ಎಂಬುದಾಗಿ. ಅಂದರೆ ನಾವೆಲ್ಲ ಭಗವಂತನ ಮಕ್ಕಳಾಗಿದ್ವು, ಭಗವಂತನಲ್ಲೇ ಒಂದಾಗಿದ್ದು, ಕಾರಣಾಂತರಗಳಿಂದ ಇಲ್ಲಿಗೆ ಬಂದು ಈ ಸಂಸಾರವನ್ನೇ - ಈ ಜಗತ್ತನ್ನೇ ಅಥವಾ ಪ್ರಪಂಚವನ್ನೇ ಆಸ್ಪಾದನೆ ಮಾಡುತ್ತಾ ಮಾಡುತ್ತಾ ಇಲ್ಲೇ ನಾವು ಮೈಮರೆತೆವು. ಇಲ್ಲಿಯ ಸೊಬಗನ್ನು ನೋಡಿ ಮತ್ತೆ ನಮಗೆ ಮೂಲಕ್ಕೆ ಹೋಗುವುದು ಮರೆತೇ ಹೋಯಿತು.
ಹೇಗೆ ಒಬ್ಬ ಬಾಲಕನನ್ನು ಪೇಟೆಗೆ ಯಾವುದೋ ಒಂದು ಪದಾರ್ಥವನ್ನು ತರುವಂತೆ ಕಳಿಸಿದಾಗ ಆ ಬಾಲಕನು ಪೇಟೆಯ ಅಂದ ಚಂದ ನೋಡುತ್ತಾ ಮನೆಗೆ ಬರುವುದನ್ನೇ ಮರೆತನೋ, ಅಂತೆಯೇ ಈ ಜೀವ ಭಗವಂತನಿಂದ ಬೇರ್ಪಟ್ಟು ಜನ್ಮವನ್ನು ಪಡೆದು ಈ ಸಂಸಾರಚಕ್ರಕ್ಕೆ ಅದು ಸಿಲುಕಿಕೊಳ್ಳುತ್ತದೆ. ಆದರೆ ಪುನಃ ಸಂಸಾರಚಕ್ರದಿಂದ ಬಿಡುಗಡೆ ಪಡೆದು ನಾವು ಎಲ್ಲಿಂದ ಬಂದಿದ್ದೋ ಅಲ್ಲಿಗೆ ಹೋಗಬೇಕಾದದ್ದು ಅತ್ಯಂತ ಅವಶ್ಯ. ಬಿಡಿಸಿಕೊಂಡು ಮತ್ತೆ ಭಗವಂತನಲ್ಲಿಗೆ ಒಂದಾಗಿ ಸೇರುವಂತದ್ದು ನಿಜವಾದ ಅರ್ಥದಲ್ಲಿ ಮೋಕ್ಷ ಅಥವಾ ಬಿಡುಗಡೆ. ಹಾಗಾಗಿ ಯಾರು ಜ್ಞಾನಿ ಅಂತ ಕರೆಸಿಕೊಳ್ಳುತ್ತಾರೋ ಅವನು ಭಗವಂತನ ಆ ಸ್ವರೂಪವನ್ನು ತಿಳಿದು ಅವನಲ್ಲಿ ಒಂದಾದಾಗ, ಈ ಸಂಸಾರ ಎಂಬಂತಹ ಯಾವ ವಿಷಯ ಇದೆಯೋ ಅದು ನಮ್ಮಿಂದ ದೂರವಾಗುತ್ತದೆ. ಈ ಸಂಸಾರವು ಬಿಡಲೇಬೇಕಾದ್ದರಿಂದ ಇದನ್ನು ಅನೇಕರು ಬಗೆ ಬಗೆಯಲ್ಲಿ ದೂಷಣೆ ಮಾಡಿದ್ದನ್ನು ನಾವು ನೋಡಬಹುದು. ಶಂಕರ ಭಗವತ್ಪಾದರು ಶ್ರೀಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರದಲ್ಲಿ ಸಂಸಾದರ ಕರಾಳತೆಯನ್ನು ತೋರಿಸಿದ್ದಾರೆ. ಈ ಸಂಸಾರವನ್ನು ಕಾಡ್ಗಿಚ್ಚು, ಜಾಲ, ಆಳವಾದ ಬಾವಿ, ಭಯಂಕರ ಗಜ, ವಿಷಸರ್ಪ, ಇತ್ಯಾದಿಯಾಗಿ ಹೇಳಿದ್ದುಂಟು. ಆದ್ದರಿಂದ ಪ್ರತಿಯೊಬ್ಬರೂ ಮಾಡಬೇಕಾದದ್ದು ಇಷ್ಟೇ, ಸಂಸಾರವನ್ನು ದಾಟಿ ಸಂಸಾರದಿಂದ ಆಚೆ ಇರುವ ಪರಬ್ರಹ್ಮ-ಭಗವಂತನನ್ನು ಕಂಡು ಮೋಕ್ಷವನ್ನು ಪಡೆಯುವಂತಹದ್ದು. ಇದೇ ನಿಜವಾದ ಬುದ್ಧಿವಂತಿಕೆ. ಇದೇ ಪ್ರತಿಯೊಬ್ಬ ಮಾನವನ ಕರ್ತವ್ಯ.