Monday, February 3, 2025

ವ್ಯಾಸ ವೀಕ್ಷಿತ 121 ಕೃಷ್ಣನಿಗೆ ಚಕ್ರ, ಅರ್ಜುನನಿಗೆ ಗಾಂಡೀವ (Vyaasa Vikshita 121)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಇಂತಹ ಅದ್ಭುತ-ಧ್ವಜದಿಂದ ಕೂಡಿ ಶೋಭಿಸುತ್ತಿದ್ದ ಆ ಶ್ರೇಷ್ಠತಮವಾದ ರಥವನ್ನು ಅಗ್ನಿದೇವನಿಂದ ಪಡೆದು, ಪಾರ್ಥನು ಅದನ್ನು ಹತ್ತಿದನು. ಮೊದಲು ಅದಕ್ಕೆ ಪ್ರದಕ್ಷಿಣಮಾಡಿದನು. ದೇವತೆಗಳಿಗೆ ವಂದಿಸಿದನು. ಕವಚ-ಖಡ್ಗ-ಗೋಧಾ-ಅಂಗುಲಿತ್ರಗಳನ್ನು ಧರಿಸಿದ್ದನು. ಧನುಸ್ಸಿನ ಹೆದೆಯ ಏಟು ತಗಲದಿರಲೆಂದು ತೋಳಿಗೆ ಕಟ್ಟುವ ಚರ್ಮದ ಪಟ್ಟಿಯೇ ಗೋಧಾ. ಅಂಗುಲಿತ್ರವೆಂದರೆ ಬಿಲ್ಲಿನ ಹೆದೆಯನ್ನು ಎಳೆಯುವಾಗ ಗಾಯವಾಗದಿರಲೆಂದು ಬೆರಳಿಗೆ ಹಾಕಿಕೊಳ್ಳುವ ಚರ್ಮದ ಹೊದಿಕೆ.


ಅಗ್ನಿಯಿತ್ತ ಆ ರಥವನ್ನು ಅರ್ಜುನನು ಹತ್ತಿದನು: ಪುಣ್ಯಶಾಲಿಯು ವಿಮಾನವನ್ನೇರುವ ಪರಿಯಲ್ಲಿ! ಬ್ರಹ್ಮನಿಂದ ನಿರ್ಮಿತವಾದ ಆ ಶ್ರೇಷ್ಠವಾದ ದಿವ್ಯ-ಧನುಸ್ಸನ್ನು - ಅರ್ಥಾತ್ ಗಾಂಡೀವವನ್ನು - ಕೈಗೆತ್ತಿಕೊಳ್ಳುತ್ತಿರುವಂತೆಯೇ ಅರ್ಜುನನಿಗೆ ಸಂತೋಷವುಕ್ಕಿತು.


ಬಲಶಾಲಿಯಾದ ಅರ್ಜುನನು ಹೆದೆಯನ್ನೇರಿಸುತ್ತಿರುವಾಗ ಧನುರ್-ಧ್ವನಿಯುಂಟಾಯಿತು. ರಥ-ಧನುಸ್ಸುಗಳನ್ನೂ  ಅಕ್ಷಯ-ತೂಣೀರವನ್ನೂ ಪಡೆದ ಅರ್ಜುನನು ಈಗ ಅಗ್ನಿಗೆ ಸಹಾಯ ಮಾಡಲು ಸಮರ್ಥನಾದನು. ಅಗ್ನಿಯು ಕೃಷ್ಣನಿಗೆ ಚಕ್ರಾಯುಧವನ್ನು ಕೊಟ್ಟನು. ಅದರ ಮಧ್ಯಭಾಗವು ವಜ್ರಕ್ಕೆ ಸಮನಾಗಿದ್ದಿತು. ಅಗ್ನಿಯಿತ್ತ ಈ ಚಕ್ರಾಸ್ತ್ರದಿಂದಾಗಿ ಶ್ರೀಕೃಷ್ಣನೂ ಅಗ್ನಿಗೆ ಉಪಕರಿಸಲು ಸಮರ್ಥನಾದನು.


ಅಗ್ನಿದೇವನು ಆತನಿಗೆ ಹೇಳಿದನು: ಈ ಚಕ್ರದಿಂದಾಗಿ ನೀನು ಅಮಾನುಷರನ್ನು ಸಹ ಯುದ್ಧದಲ್ಲಿ ಜಯಿಸುವೆ. ಅರ್ಥಾತ್, ಯುದ್ಧದಲ್ಲಿ ಮನುಷ್ಯರಷ್ಟೇ ಅಲ್ಲದೆ,  ದೇವತೆಗಳು, ರಾಕ್ಷಸರು, ಪಿಶಾಚರು, ದೈತ್ಯರು, ಹಾಗೂ ನಾಗರು - ಇವರುಗಳಿಗಿಂತ ಹೆಚ್ಚು ಶಕ್ತಿ-ಶಾಲಿಯಾಗುವೆ. ಅವರನ್ನು ಸಂಹರಿಸುವುದರಲ್ಲಿ ನಿಃಸಂಶಯವಾಗಿಯೂ ಉದ್ದಾಮನಾಗುವೆ. ಅಷ್ಟೇ ಅಲ್ಲ. ಯುದ್ಧದಲ್ಲಿ ಈ ಚಕ್ರವನ್ನು ಶತ್ರುಗಳ ಮೇಲೆ ನೀನು ಪ್ರಯೋಗಿಸಿದಾಗಲೆಲ್ಲಾ ಅದು ಅಪ್ರತಿಹತವಾಗಿ - ಎಂದರೆ ಶತ್ರುಗಳು ಬಳಸುವ ಶಸ್ತ್ರಾಸ್ತ್ರಗಳಿಂದ ಪರಾಭವಗೊಳ್ಳದೆ - ನಿನ್ನ ಹಸ್ತಕ್ಕೇ ಮತ್ತೆ ಬಂದು ಸೇರುವುದು!


ಆ ಸಂದರ್ಭದಲ್ಲಿ ವರುಣನೂ ಘೋರವಾದ ಗದೆಯೊಂದನ್ನು ಕೃಷ್ಣನಿಗೆ ಕೊಟ್ಟನು. ಅದರ ಹೆಸರು ಕೌಮೋದಕೀ. ಸಿಡಿಲಿನ ಧ್ವನಿಯನ್ನು ಮಾಡುವ ಅದು ದೈತ್ಯ-ನಾಶಕವಾದದ್ದು.


ಇದೆಲ್ಲವೂ ನೆರವೇರಲು ಅರ್ಜುನಾಚ್ಯುತರು, ಎಂದರೆ ಅರ್ಜುನ ಮತ್ತು ಕೃಷ್ಣರು, ಅಸ್ತ್ರ-ಸಂಪನ್ನರೂ ಶಸ್ತ್ರ-ಯುಕ್ತರೂ ರಥವಂತರೂ ಧ್ವಜ-ಸಹಿತರೂ ಆದರು. ಅಗ್ನಿಯನ್ನು ಕುರಿತು ಅವರು ಹೇಳಿದರು: "ಅಗ್ನಿದೇವನೇ, ಈಗ ರಥಾದಿಗಳಿಂದ ಕೂಡಿದ ನಾವು ಯಾವುದೇ ಸುರರೊಂದಿಗೂ ಅಸುರರೊಂದಿಗೂ ಸೆಣಸಲು ಸಮರ್ಥರಾಗಿದ್ದೇವೆ. ತಕ್ಷಕ-ನಾಗನ ರಕ್ಷಣೆಗಾಗಿ ಯುದ್ಧ ಮಾಡಲೂ ಸಂನದ್ಧನಾಗಿರುವ ವಜ್ರಾಯುಧ-ಧಾರಿಯಾದ ಇಂದ್ರನೊಡನೆ ಸೆಣಸುವುದು ಇನ್ನೆಷ್ಟರ ಮಾತು?" ಎಂದರು.


ಆ ಬಳಿಕ ಅರ್ಜುನನು ಹೇಳಿದನು: "ಓ ಅಗ್ನಿದೇವ, ಮಹಾಪರಾಕ್ರಮಿಯಾದ ಹೃಷೀಕೇಶನು, ಎಂದರೆ ಕೃಷ್ಣನು, ಚಕ್ರಪಾಣಿಯಾಗಿ, ಎಂದರೆ ಕೈಯಲ್ಲಿ ಈ ಚಕ್ರಾಯುಧವನ್ನು ಧರಿಸಿದವನಾಗಿ, ಯುದ್ಧಗಳಲ್ಲಿ ವಿಚರಿಸುವಾಗ, ಈ ಚಕ್ರವನ್ನು ಪ್ರಯೋಗಿಸಿದ್ದೇ ಆದರೆ, ಮೂರೂ ಲೋಕಗಳಲ್ಲಿಯೂ ಭಸ್ಮವಾಗದೇ ಏನೂ ಉಳಿಯಲೇ ಆರದು. ಓ ಅಗ್ನಿಯೇ, ಈ ಗಾಂಡೀವ-ಧನುಸ್ಸನ್ನೂ ಅಕ್ಷಯ್ಯವಾದ ಈ ಮಹತ್ತಾದ ಇಷುಧಿಯನ್ನೂ, ಎಂದರೆ ಬತ್ತಳಿಕೆಯನ್ನೂ,  ಹಿಡಿದು ಹೊರಟ ನಾನಾದರೂ ರಣದಲ್ಲಿ ಎಲ್ಲ ಲೋಕಗಳನ್ನೂ ಜಯಿಸಬಲ್ಲೆನೇ ಸರಿ. ಅಗ್ನಿಯೇ, ಸರ್ವ-ದಿಕ್ಕುಗಳಿಂದಲೂ ಸುತ್ತುವರಿದುಕೊಂಡು ಈ ಕಾಡನ್ನು ಯಥೇಚ್ಛವಾಗಿ ನೀನೀಗಲೇ ಸುಡಬಹುದು. ನಾವಿಬ್ಬರೂ ನಿನಗೆ ಸಹಾಯವೆಸಗಲಿಕ್ಕೆ ಸಿದ್ಧರಿದ್ದೇವೆ."

ಸೂಚನೆ : 19/1/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.