Sunday, February 16, 2025

ಮಾತು ಅಮೃತಪ್ರಾಯವಾಗುವುದು ಹೇಗೆ ? (Matu Amrtaprayavaguvudu Hege?)

ವಿದುಷಿ ; ಸೌಮ್ಯಾ ಪ್ರದೀಪ್  ಎ. ಜೆ.

ಪ್ರತಿಕ್ರಿಯಿಸಿರಿ (lekhana@ayvm.in)



ಶ್ರೀರಾಮಚಂದ್ರನ ಪಟ್ಟಾಭಿಷೇಕವನ್ನು ಕಣ್ತುಂಬಿಕೊಂಡು ಕೃತಾರ್ಥರಾದಂತಹ ಅನೇಕ ಋಷಿಮುನಿಗಳು, ರಾಜ ಮಹಾರಾಜರುಗಳು ತಮ್ಮ ತಮ್ಮ ಸ್ಥಳಗಳಿಗೆ ಹಿಂತಿರುಗಲು  ಸಿದ್ಧರಾಗುತ್ತಾರೆ.ಅವರೆಲ್ಲರಿಗೂ ಶ್ರೀರಾಮಚಂದ್ರ - ಸೀತಾಮಾತೆಯರು ಅನೇಕ ವಿಧವಾದಂತಹ ಉಡುಗೊರೆಗಳನ್ನು ನೀಡಿ ಬಿಳ್ಕೊಡುತ್ತಾರೆ. ಶ್ರೀರಾಮಚಂದ್ರಪ್ರಭು ತಮ್ಮಂದಿರೊಡಗೂಡಿ ಧರ್ಮದಿಂದ ರಾಜ್ಯವನ್ನು ಆಳುತ್ತಾ ಇರುತ್ತಾನೆ. ಕೆಲ ಕಾಲದ ನಂತರ ಗುಪ್ತಚರರ ಮೂಲಕ ಅಯೋಧ್ಯೆಯ ಕೆಲ ಜನರು ಸೀತಾಮಾತೆಯ ಬಗ್ಗೆ ಸಲ್ಲದ ಮಾತುಗಳನ್ನು ಆಡುತ್ತಿರುವುದು ಶ್ರೀರಾಮನ ಅರಿವಿಗೆ ಬರುತ್ತದೆ.


 ಅಯೋಧ್ಯೆಯ ರಾಜನಾಗಿ ಶ್ರೀರಾಮಚಂದ್ರನು ತನ್ನ ಪ್ರಾಣಪ್ರಿಯಳಾದ, ಪರಮ ಪಾವನೆಯಾದ ಸೀತಾಮಾತೆಯನ್ನು ತ್ಯಾಗ ಮಾಡುವಂತಹ ನಿರ್ಧಾರವನ್ನು ಕೈಗೊಳ್ಳಲೇಬೇಕಾಗುತ್ತದೆ. ಆಗ ಲಕ್ಷ್ಮಣನನ್ನು ಕರೆದು ಸೀತಾಮಾತೆಯನ್ನು ಗಂಗಾನದಿಯ ತೀರದಲ್ಲಿರುವ ವಾಲ್ಮೀಕಿಗಳ ಆಶ್ರಮದ ಸಮೀಪದಲ್ಲಿ ಬಿಟ್ಟು ಬಾ ಎಂದು ಆದೇಶ ಮಾಡುತ್ತಾನೆ. 


ಅಣ್ಣನ ಈ ನಿರ್ಧಾರದಿಂದ ಅತ್ಯಂತ ದುಃಖಿತನಾದ ಲಕ್ಷ್ಮಣನು ಒಲ್ಲದ ಮನಸ್ಸಿನಿಂದ ಸೀತಾಮಾತೆಯನ್ನು ವಾಲ್ಮೀಕಿ ಮಹರ್ಷಿಗಳ ಆಶ್ರಮದ ಸಮೀಪದಲ್ಲಿ ಬಿಟ್ಟು ಬರುತ್ತಾನೆ. ಸೀತಾಮಾತೆಗೆ ಪತಿಯು ತನ್ನನ್ನು ತ್ಯಾಗ ಮಾಡಿದ ವಿಚಾರ ಹಾಗು ಅದಕ್ಕೆ ಕಾರಣ ಲಕ್ಷ್ಮಣನಿಂದ ತಿಳಿಯಲ್ಪಡುತ್ತದೆ. ಶ್ರೀರಾಮಚಂದ್ರನ ಈ ನಿರ್ಧಾರದಿಂದ ಅವಳಿಗೆ ಅವನ ಬಗ್ಗೆ ಯಾವುದೇ ಬೇಸರವಾಗುವುದಿಲ್ಲ, ತನ್ನಿಂದ ಬಂದ ಅಪವಾದ ಈ ಮೂಲಕ ಅಂತ್ಯವಾಗುವುದಾದರೆ ಅದೇ ಶ್ರೇಷ್ಠ ಎಂಬುದಾಗಿ ಚಿಂತಿಸುತ್ತಾಳೆ. ಆದರೆ ಅಗ್ನಿ ಪ್ರವೇಶದ ಮೂಲಕ ತನ್ನ ಪಾತಿವ್ರತ್ಯವನ್ನು ಲೋಕದ ಮುಂದೆ, ದೇವಾನುದೇವತೆಗಳ ಸಮ್ಮುಖದಲ್ಲಿ ಸಾಬೀತುಪಡಿಸಿದ್ದರೂ ಮತ್ತೆ ಅಂತಹ ಅಪವಾದದಿಂದ ಅವಳ ಮನಸ್ಸು ಅತ್ಯಂತ ಕುಗ್ಗಿ ಹೋಗುತ್ತದೆ. ಅವಳು ಗಂಗಾ ನದಿಯ ತೀರದಲ್ಲಿ ರೋಧಿಸುತ್ತಾ ಇರುತ್ತಾಳೆ. ಆಗ ವಾಲ್ಮೀಕಿ ಮಹರ್ಷಿಗಳಿಗೆ ತಮ್ಮ ಶಿಷ್ಯಂದಿರ ಮೂಲಕ ಸೀತಾಮಾತೆ ಅಲ್ಲಿರುವುದು ತಿಳಿಯುತ್ತದೆ. ವಾಲ್ಮೀಕಿ ಮಹರ್ಷಿಗಳೇ ಸ್ವತಃ ಸೀತಾಮಾತೆಯನ್ನು ತಮ್ಮ ಆಶ್ರಮಕ್ಕೆ ಕರೆ ತರಲು ಅಲ್ಲಿಗೆ ಧಾವಿಸುತ್ತಾರೆ. ಆಗ ಅವರು ಸೀತಾಮಾತೆಯನ್ನು ಉದ್ದೇಶಿಸಿ ಆಡುವ ಮಾತುಗಳು ಮಾನಸಿಕವಾಗಿ ಕುಗ್ಗಿ ಹೋದ ಸೀತಾಮಾತೆಯಲ್ಲಿ  ಸ್ಥೈರ್ಯವನ್ನು ತುಂಬುವಂತಹವು. ಶ್ರೀರಾಮಚಂದ್ರ ಸೀತಾ ಮಾತೆಯರನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಂಡ ಜ್ಞಾನಿಗಳು ಅವರು. ಅವರು ಸೀತಾಮಾತೆಯನ್ನು ಉದ್ದೇಶಿಸಿ , ' ಪತಿವ್ರತೆಯೇ! ನೀನು ದಶರಥರಾಜನ ಸೊಸೆ. ಶ್ರೀರಾಮನಿಗೆ ಅತ್ಯಂತ ಪ್ರಿಯವಾದ ಪಟ್ಟದರಾಣಿ. ಜನಕರಾಜನ ಮಗಳು. ಸಾದ್ವಿಯಾದ ನಿನಗೆ ಸ್ವಾಗತವನ್ನು ಬಯಸುತ್ತೇನೆ. ನಾನು ತಪಸ್ಸಿನ ಮೂಲಕ ಪಡೆದುಕೊಂಡಿರುವ ದಿವ್ಯದೃಷ್ಟಿಯಿಂದ ನೀನು ನಿಷ್ಪಾಪಳೆಂಬುದನ್ನು ತಿಳಿದಿದ್ದೇನೆ. 


ಆದುದರಿಂದ ನೀನು ಧೈರ್ಯದಿಂದಿರು. ಈಗ ನೀನು ನನ್ನ ಆಶ್ರಮದಲ್ಲಿಯೇ ವಾಸವಾಗಿರು'. ಸೀತಾಮಾತೆಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂತಹ ವಾಲ್ಮೀಕಿ ಮಹರ್ಷಿಗಳ ಅಮೃತಪ್ರಾಯವಾದ ಈ ಮಾತುಗಳು ನೊಂದ ಸೀತಾಮಾತೆಯ ಮನಸ್ಸಿಗೆ ಚೈತನ್ಯವನ್ನು ತುಂಬುತ್ತದೆ. ಸಮಾಧಾನವನ್ನು ಉಂಟು ಮಾಡುತ್ತದೆ. 


ಮಾತು ಅನ್ನುವಂತಹದ್ದು ಇನ್ನೊಬ್ಬರ ಮನಸ್ಸನ್ನು ಕುಗ್ಗಿಸುವುದಕ್ಕೂ ಅಥವಾ ಹಿಗ್ಗಿಸುವುದಕ್ಕೂ ಒಂದು ಸಾಧನವೇ ಆಗಿದೆ. 'ಮಾತೇ ಮುತ್ತು ಮಾತೇ ಮೃತ್ಯು' ಎಂಬುದಾಗಿ ಒಂದು ಗಾದೆಯೂ ಇದೆ , ಮಾತಿಗೆ ಅಷ್ಟೊಂದು ಶಕ್ತಿ ಇದೆ. ಹಾಗಾಗಿ ಯಾವ ಸಂದರ್ಭದಲ್ಲಿ ಎಂತಹ ಮಾತುಗಳನ್ನು ಆಡಬೇಕು, ಅದರಿಂದ ಯಾರ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎಂಬ ಪ್ರಜ್ಞೆ ಇರಬೇಕಾಗುತ್ತದೆ. "ವಾಕ್ಕು ಪರಮಪುರುಷನ ರಸ (ರೂಪ) ವಾಗಿದೆ. ಆ ರಸವನ್ನು ವ್ಯಕ್ತಪಡಿಸುವಂತಹ ಮಾತುಗಳನ್ನಾಡಬೇಕು. ಪ್ರಪಂಚವೆಲ್ಲವೂ ಮಾತಿನಮೇಲೆ ನಿಂತಿದೆ. ಮಾತಿನಿಂದಲೇ ವಿಷವುಂಟಾಗುತ್ತದೆ. ಮಾತಿನಿಂದಲೇ ಅಮೃತ ಉಂಟಾಗುತ್ತದೆ. ಮೃತವಾದ ಮಾತಿನಿಂದ ಮಿತ್ತು (ಮೃತ್ಯು) , ಅಮೃತವಾದ ಮಾತಿನಿಂದ ಅಮೃತ್ಯು (ಸತ್) ಉಂಟಾಗುತ್ತದೆ. ಆದ್ದರಿಂದ ಸದ್ವಸ್ತುವನ್ನು ಕೋರುವ ಮಾತನಾಡಬೇಕು". ಎಂಬ ಮಾತುಗಳನ್ನು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು . ಮಹಾತ್ಮರಿಗೆ ವಾಕ್ ಶುದ್ಧಿ ಎನ್ನುವುದು ಸಹಜವಾಗಿಯೇ ಇರುತ್ತದೆ. ಸಾಮಾನ್ಯರು ಅದನ್ನು ಪ್ರಯತ್ನದಿಂದ ಸಾಧಿಸಿಕೊಳ್ಳಬೇಕಾಗಿದೆ. ಮನಸ್ಸು ಶುದ್ಧವಾಗಿದ್ದ ಪಕ್ಷದಲ್ಲಿ ವಾಕ್ಕು ಶುದ್ಧವಾಗಿಯೇ ಹರಿದು ಬರುತ್ತದೆ. ಅಂತರಂಗವನ್ನು ಶುದ್ಧವಾಗಿಟ್ಟುಕೊಂಡು ಇನ್ನೊಬ್ಬರ ಮನಸ್ಸಿಗೆ ಉಲ್ಲಾಸವನ್ನು , ಸ್ಫೂರ್ತಿಯನ್ನು ತುಂಬುವಂತಹ ಮಾತುಗಳನ್ನಾಡುವ ಅಭ್ಯಾಸವನ್ನು ಬೆಳೆಸಿಕೊಂಡಾಗ ಮಾತು ಅಮೃತಪ್ರಾಯವಾಗುತ್ತದೆ ಹಾಗೂ ವಾಕ್ಕಿನ ಮೂಲ ಸ್ಥಾನವಾದ ವಾಗೀಶನಾದ ಭಗವಂತನ ಪ್ರೀತಿಗೆ ಕಾರಣವಾಗುತ್ತದೆ.


ಸೂಚನೆ : 15/2/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.