ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಶಂಖ-ಚಕ್ರ-ಗದಾಧಾರಿಯು ಕಾಪಾಡಲಿ
ವಿಷ್ಣುಸಹಸ್ರನಾಮವನ್ನು ಪಾರಾಯಣ ಮಾಡುವ ಸಂಪ್ರದಾಯದಲ್ಲಿ ಶ್ಲೋಕವೊಂದನ್ನು ಫಲಶ್ರುತಿಯ ಭಾಗದಲ್ಲಿ ಹೇಳುವ ರೂಢಿಯಿದೆ. ಅದೆಂದರೆ "ವನಮಾಲೀ ಗದೀ ಶಾರ್ಙ್ಗೀ ಶಂಖೀ ಚಕ್ರೀ ಚ ನಂದಕೀ | ಶ್ರೀಮಾನ್ ನಾರಾಯಣೋ ವಿಷ್ಣುಃ ವಾಸುದೇವೋಽಭಿರಕ್ಷತು ||" ಎಂಬುದಾಗಿ. ಏನಿದರರ್ಥ?
ಶಂಖ-ಚಕ್ರ-ವಿಷ್ಣು-ನಾರಾಯಣ - ಇವೆಲ್ಲ ಪ್ರಸಿದ್ಧವೇ. ವಾಸುದೇವನು ಕಾಪಾಡಲಿ ನಮ್ಮನ್ನು – ಎಂದಿಲ್ಲಿ ಪ್ರಾರ್ಥಿಸಿದೆ.
ಆದರೆ ಶಂಖೀ, ಚಕ್ರೀ - ಇತ್ಯಾದಿಗಳಲ್ಲಿ ಬಂದಿರುವ ಈ 'ಈ'ಕಾರವೇನು? ಅದೇನೋ ಯಾರನ್ನಾದರೂ ಸಲಿಗೆಯಿಂದ ಮಾತನಾಡಿಸಲು ಸೇರಿಸಿಕೊಂಡು ಕರೆಯುವ ಈಕಾರವಲ್ಲ: ಹೆಸರು ಸೋಮನಾಥ ಎಂದಿದ್ದರೆ "ಲೋ ಸೋಮೀ" - ಎಂದು ಪ್ರೀತಿಗೆ ಕರೆಯುವ ಬಗೆಯಲ್ಲ.
ಸಂಸ್ಕೃತದಲ್ಲಿ ಇದನ್ನು ಮತ್ವರ್ಥಕ - ಎನ್ನುತ್ತಾರೆ. ಏನು ಹಾಗೆಂದರೆ? 'ಹೊಂದಿರುವಿಕೆ' ಎಂದದರರ್ಥ. ಕನ್ನಡದಲ್ಲಿ 'ಧಣೀ' ಎನ್ನುವರಲ್ಲವೇ? ಸಾಹುಕಾರನಾದ ಒಡೆಯನನ್ನು ಕುರಿತು ಹಿಂದೆ ಈ ಪದವನ್ನು ಬಳಸುತ್ತಿದ್ದರು. ಈಗಲೂ ಅದೇ ಅರ್ಥ; ಇಂಗ್ಲೀಷಿನ ಪದವನ್ನು ಹಾಕುತ್ತಾರೆ, ಅಷ್ಟೆ: 'ಏನ್ ಬಾಸ್?' ಎನ್ನುವುದಿಲ್ಲವೇ?
ಧಣೀ ಎಂಬುದರ ಮೂಲ 'ಧನೀ' ಎಂಬುದು. ಧನವನ್ನುಳ್ಳವನು 'ಧನೀ'; ನಕಾರವನ್ನು ಣಕಾರಮಾಡಿಕೊಂಡಿದೆ. ಹಾಗೆಯೇ ಬುದ್ದೀ - ಎಂಬುದೂ. ಬುದ್ಧಿಯುಳ್ಳವರು - ಎಂಬ ಲೆಕ್ಕದ ಮೇಲೆ ಬುದ್ದೀ ಎಂದು ಕರೆಯುವುದು. ಅದು ಹೊಗಳಿಕೆಯ ಪದವಲ್ಲ; ಎಚ್ಚರಿಸುವ ಪದ!
ಹೇಗೆ ಧನವನ್ನು ಹೊಂದಿರುವವನು ಧನಿಯೋ, ಹಾಗೆಯೇ ಶಂಖವನ್ನು ಹೊಂದಿರುವವನು ಶಂಖೀ, ಚಕ್ರವುಳ್ಳವನು ಚಕ್ರೀ. ಶಂಖ-ಚಕ್ರಗಳನ್ನು ಹಿಡಿದಿರುವ ಯಾವನನ್ನು ಬೇಕಾದರೂ ಶಂಖೀ-ಚಕ್ರೀ ಎಂದು ಕರೆಯಬಹುದು; ಆದರೆ ವಿಷ್ಣುವೇ ಅವನ್ನು ಧರಿಸಿರುವ ಪ್ರಸಿದ್ಧಿಯುಂಟಲ್ಲವೇ?
ಹಾಗೆಯೇ ವನಮಾಲೆಯನ್ನುಳ್ಳವನು ವನಮಾಲೀ; ಗದೆಯುಳ್ಳವವನು ಗದೀ; ಶಾರ್ಙ್ಗವನ್ನುಳ್ಳವನು ಶಾರ್ಙ್ಗೀ; ನಂದಕವನ್ನುಳ್ಳವನು ನಂದಕೀ: ನಂದಕವೆಂಬುದು ವಿಷ್ಣುವಿನ ಖಡ್ಗದ ಹೆಸರು; ಶಾರ್ಙ್ಗವೆಂಬುದು ಅವನ ಬಿಲ್ಲಿನ ಹೆಸರು.
ವನಮಾಲೆಯೆಂದರೆ ಯಾವುದೋ ಕಾಡಿನ ಮಾಲೆಯೆಂದಲ್ಲ. ಅದಕ್ಕೆ ವಿಶಿಷ್ಟವಾದ ಅರ್ಥವಿದೆ. ಕಾಡಿನಲ್ಲಿ ಹುಟ್ಟಿದ ಹೂಗಳಿಂದ ಮಾಡಲಾಗಿರುವ ಮಾಲೆಯೇ ಅದಾಗಿದ್ದರೂ, ಶ್ರೀಕೃಷ್ಣನು ಧರಿಸುವ ಮಾಲಾವಿಶೇಷವದು. ಅದು ಆಜಾನು-ಲಂಬಿ, ಎಂದರೆ ಮಂಡಿಯವರೆಗೂ ಬರುವಷ್ಟು ಉದ್ದವಾದುದು. ಜಾನುವೆಂದರೆ ಮಂಡಿ. ಅಷ್ಟೇ ಅಲ್ಲ. ಎಲ್ಲ ಋತುಗಳ ಹೂಗಳನ್ನೂ ಅದರಲ್ಲಿ ಪೋಣಿಸಿದೆ. ಮತ್ತು ಆ ಕಾರಣಕ್ಕೇ ಅದು ಉಜ್ಜ್ವಲವಾಗಿದೆ. ಮತ್ತು ಹೂಮಾಲೆಯನ್ನು ಕಟ್ಟಿದರೆ ಅದರ ಮಧ್ಯಸ್ಥಾನದಲ್ಲಿ ಒಂದು ದಪ್ಪನೆಯ ಹೂವನ್ನೋ ಕಂದವನ್ನೋ ಕಟ್ಟುವುದುಂಟಲ್ಲವೇ? ಹಾಗೆ ಪದಕದಂತೆ ಮಧ್ಯಭಾಗದಲ್ಲಿ ದಪ್ಪನೆಯ ಕದಂಬ-ಪುಷ್ಪವನ್ನು ಸೇರಿಸಿರುವಂತಹುದು ವನಮಾಲೆ.
ಕೃಷ್ಣನು ಅಲಂಕಾರಪ್ರಿಯನೇನೋ ಹೌದು. ಎಂದೇ ವನಮಾಲೆಯನ್ನು ಧರಿಸಿರುವುದು ಒಪ್ಪತಕ್ಕದ್ದೇ. ಆದರೆ ಈ ಗದೆ-ಬಿಲ್ಲು-ಶಂಖ-ಚಕ್ರಗಳೇನು? ಶಂಖವನ್ನುಳಿದು ಮಿಕ್ಕ ಮೂರೂ ಆತನ ಪ್ರಸಿದ್ಧ ಆಯುಧಗಳೇ.
ಈಚೆಗೊಬ್ಬರು ಆಕ್ಷೇಪಿಸಿದರು: "ನಮ್ಮ ದೇವರುಗಳ ಕೈಯಲ್ಲಿ ಬಿಲ್ಲು-ಬಾಣಗಳುಂಟು. ರಾವಣ-ಸಂಹಾರವನ್ನು ರಾಮನು ಬಿಲ್ಲು-ಬಾಣಗಳಿಂದಲೇ ಮಾಡಿದನಲ್ಲವೇ? ಅಂದಿಗೆ ಅದು ಸರಿ. ಆದರೆ ಇಂದಿಗೂ ಅವೇ ಬೇಕೆ? ಇಂದಿಗೆ ದೇವತೆಗಳೂ ಮಾಡರ್ನ್ ಆಗಬೇಡವೇ? ಅದಕ್ಕೇ ಅವರ ಕೈಗಳಲ್ಲಿ ಗನ್ನು-ಗ್ರೆನೇಡುಗಳನ್ನು ಜೋಡಿಸಿದರೆ ಇನ್ನೂ ಚೆನ್ನಲ್ಲವೇ? - ಎಂದು.
ಆದರೆ ಶ್ರೀರಂಗಮಹಾಗುರುಗಳು ಇಲ್ಲಿಯ ಮರ್ಮವನ್ನು ತಿಳಿಸಿದ್ದರು. "ಭಗವಂತನ ಕೈಯಲ್ಲಿರುವ ಆಯುಧಗಳು ಭೌತಿಕ-ಪದಾರ್ಥಗಳಲ್ಲ. ವಿಷ್ಣುವಿನ ಕೈಯಲ್ಲಿರುವ ಶಂಖ-ಚಕ್ರ ಮೊದಲಾದವುಗಳು ತತ್ತ್ವಾತ್ಮಕವಾದಂತಹವು" - ಎಂದು. ಇದು ಏನೋ ಕಲ್ಪಿತವಾದ ಉತ್ತರವಲ್ಲ, ಇದಕ್ಕೆ ಶಾಸ್ತ್ರಾಧಾರವೂ ಉಂಟು. ವಿಷ್ಣುವಿನ ಕೈಯಲ್ಲಿರುವ ಗದೆಯು ಬುದ್ಧಿತತ್ತ್ವವನ್ನು ಪ್ರತೀಕಿಸುತ್ತದೆ. ಹಾಗೆಯೇ ಶಂಖವೂ ಶಾರ್ಙ್ಗವೂ ಎರಡು ಬಗೆಯ ಅಹಂಕಾರಗಳನ್ನು ಸೂಚಿಸುತ್ತವೆ. ಚಕ್ರವು ಮನಸ್-ತತ್ತ್ವದ ಪ್ರತೀಕ. ಆತನ ನಂದಕವು ಜ್ಞಾನಕ್ಕೆ ಸೂಚಕವಾದುದು.
ಭಗವಂತನಿಗೂ ಅಹಂಕಾರವುಂಟೇ? ಅಹಂಕಾರವು ಕೆಟ್ಟದ್ದಲ್ಲವೆ? - ಎಂದು ಕೇಳಬಹುದು. ಗರ್ವದ ಅಹಂಕಾರವು ದುಷ್ಟವಾದದ್ದು; ಆದರೆ ಯಾವುದೇ ಕಾರ್ಯದಲ್ಲಿ ತೊಡಗಲು ಅವಶ್ಯವೇ ಆಗುವ ಅಹಂಕಾರವೆಂಬುದೊಂದುಂಟು. ಅಲ್ಲದೆ, ಇಲ್ಲಿ ಹೇಳಿರುವ ಎರಡು ಬಗೆಯ ಅಹಂಕಾರವನ್ನು ತಿಳಿಯಲು ಸಾಂಖ್ಯಶಾಸ್ತ್ರದ ಹೆಚ್ಚಾದ ಪರಿಚಯವೇ ಬೇಕು.
ಇನ್ನು ಇಲ್ಲಿ ಹೇಳಿರುವ ಮನಸ್ಸು-ಬುದ್ಧಿ-ಅಹಂಕಾರ ಹಾಗೂ ಜ್ಞಾನ - ಇವುಗಳೆಲ್ಲವೂ ಸಾಂಖ್ಯಶಾಸ್ತ್ರದಲ್ಲಿ ವಿವರಿಸಲಾಗಿರುವ ತತ್ತ್ವಗಳೇ. "ಮೇಲ್ಮುಖವಾದ ಶಂಖ-ಚಕ್ರಗಳು ಸಾತ್ತ್ವಿಕ-ಪ್ರವೃತ್ತಿಯನ್ನು ಸೂಚಿಸುವುವು" - ಎಂದೂ ಶ್ರೀರಂಗಮಹಾಗುರುಗಳು ಹೇಳಿದ್ದರು.
ಹೀಗೆ ಭಗವನ್ಮೂರ್ತಿಯನ್ನು ಭೂಷಿಸುವ ಆಯುಧಗಳು ತಾತ್ತ್ವಿಕವಾದಂತಹವು - ಎಂಬುದನ್ನು ತಿಳಿಯಬೇಕು.
ಸೂಚನೆ: 15/2//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.