Wednesday, January 29, 2025

ಅಹಂಕಾರದಿಂದ ಅಧ:ಪತನ (Ahankaradinda Adhah Patana)

ಲೇಖಕರು; ವಿದುಷಿ ಸೌಮ್ಯಾ ಪ್ರದೀಪ್  ಎ. ಜೆ.

ಪ್ರತಿಕ್ರಿಯಿಸಿರಿ (lekhana@ayvm.in)



ಯಯಾತಿ ಕೃತಯುಗದ ರಾಜರುಗಳಲ್ಲಿ ಪ್ರಮುಖನಾದವನು.  ಉತ್ತಮ ರಾಜನಾಗಿ ಅನೇಕ ವರ್ಷಗಳ ಕಾಲ ರಾಜ್ಯಭಾರವನ್ನು ನಡೆಸಿ ಮಾಡುತ್ತಾನೆ.  ನಂತರ ಮಗನಾದ ಪೂರುವಿಗೆ ರಾಜ್ಯಭಾರವನ್ನು ವಹಿಸಿ ವಾನಪ್ರಸ್ಥನಾಗಿ ತಪಸ್ಯೆಯನ್ನು ಆಚರಿಸುತ್ತಾನೆ. ತಪಸ್ಯೆ ಹಾಗೂ ಸತ್ಕರ್ಮದ ಫಲವಾಗಿ  ಸ್ವರ್ಗಲೋಕದಲ್ಲಿ ಸ್ಥಾನವನ್ನು ಪಡೆಯುತ್ತಾನೆ. ಸ್ವರ್ಗಲೋಕದಲ್ಲಿ ಇಚ್ಛಾನುಸಾರವಾಗಿ ರೂಪಗಳನ್ನು ಹೊಂದಿ, ಬ್ರಹ್ಮಲೋಕದಲ್ಲಿಯೂ ಸಂಚರಿಸುತ್ತಾ, ಅನೇಕ ವರ್ಷಗಳ ಕಾಲ ಸುಖದಿಂದ ವಿಹರಿಸುತ್ತಾನೆ. 


 ಇಂದ್ರನು ಒಮ್ಮೆ ಯಯಾತಿಯೊಡನೆ ಸಂದರ್ಶನ ಮಾಡುವ ಸಂದರ್ಭದಲ್ಲಿ ಹೀಗೊಂದು ಪ್ರಶ್ನೆಯನ್ನು ಕೇಳುತ್ತಾನೆ, ಯಯಾತಿ ನೀನು ಅತಿ ಕಠಿಣವಾದ ತಪಸ್ಸನ್ನು ಮಾಡಿದೆ, ನೀನು ತಪಸ್ಸಿನಲ್ಲಿ ಯಾರಿಗೆ ಸಮನಾಗಿರುವೆ? ಅಥವಾ ನಿನ್ನ ತಪಸ್ಸು ಯಾವ ತಪಸ್ವಿಯ ತಪಸ್ಸನ್ನು ಹೋಲುವುದಾಗಿದೆ ಹೇಳುವೆಯಾ ? ಎಂಬುದಾಗಿ. 


ಅದಕ್ಕೆ ಯಾಯಾತಿಯು ಸ್ವಲ್ಪ ಅಟ್ಟಹಾಸದಿಂದ  ನಗುತ್ತಾ ಉತ್ತರಿಸಿದನು, ನನ್ನ ಹಾಗೆ ತಪಸ್ಸನ್ನು ಮಾಡಿರುವವರನ್ನು ಮಾನವರಲ್ಲಾಗಲೀ, ಗಂಧರ್ವರಲ್ಲಾಗಲೀ ಅಥವಾ ಮಹರ್ಷಿಗಳಲ್ಲೇ ಆಗಲಿ ನಾನು ಕಾಣೆನು. ಹೀಗಿರುವಾಗ ಬೇರೊಬ್ಬರ ತಪಸ್ಸಿಗೆ ನನ್ನ ತಪಸ್ಸನ್ನು ಹೋಲಿಸಲು ಹೇಗೆ ತಾನೇ ಸಾಧ್ಯ ಎಂಬುದಾಗಿ. ಆಗ ದೇವೇಂದ್ರನು ಯಯಾತಿಯನ್ನು ಕುರಿತು ನೀನು ಸದ್ಗುಣ ಸಂಪನ್ನನಾಗಿದ್ದರೂ 'ಅಹಂಕಾರ' ಎಂಬ ಒಂದು ಮಹಾದೋಷವು ನಿನ್ನಲ್ಲಿ ಉಳಿದೇ ಇದೆ. ನೀನು ಹಿರಿಯರನ್ನು, ಸಮಾನರನ್ನು ಮತ್ತು ಕಿರಿಯರನ್ನು ಅವರುಗಳ ತಪಶ್ಶಕ್ತಿ ಎಷ್ಟಿರಬಹುದು ಎಂದು ವಿವೇಚಿಸದೇ ಅಲಕ್ಷಿಸಿ ಮಾತನಾಡಿದೆಯಲ್ಲವೇ, ಇದರಿಂದ ನಿನ್ನ ಸತ್ಕರ್ಮಗಳ ಫಲವು ಇಂದಿಗೇ ಲುಪ್ತವಾಯಿತು. ಸತ್ಕರ್ಮಗಳ ಫಲವು ತೀರಿದ ನಂತರ ನೀನಿಲ್ಲಿರಲು ಸಾಧ್ಯವಾಗಲಾರದು, ನೀನು ಈ ಕೂಡಲೇ ಭೂಲೋಕಕ್ಕೆ ಹೋಗಿ ಬೀಳಬೇಕು ಎಂಬುದಾಗಿ ಆದೇಶಿಸಿದನು. ಆಗ ಯಯಾತಿಗೆ ತನ್ನ ತಪ್ಪಿನ ಅರಿವಾಗಿ, ಬದ್ಧಾಂಜಲಿಯಾಗಿ ಇಂದ್ರನನ್ನು ಹೀಗೆ ಪ್ರಾರ್ಥಿಸುತ್ತಾನೆ.


 ಯಯಾತಿ ಅತ್ಯಂತ ಮೇಧಾವಿ, ತಪಸ್ವಿ, ಧರ್ಮಿಷ್ಠನಾದ ರಾಜ. ತನ್ನ ಈ ಎಲ್ಲಾ ಗುಣಗಳಿಂದ ಸ್ವರ್ಗಲೋಕದಲ್ಲಿ ಸ್ಥಾನವನ್ನು ಪಡೆದಿದ್ದ, ಬ್ರಹ್ಮಲೋಕಕ್ಕೂ ಹೋಗಿಬರುತ್ತಿದ್ದ. ಅಲ್ಲಿ ಅತ್ಯಂತ ಸುಖವಾಗಿ ಕಾಲವನ್ನು ಕಳೆಯುತ್ತಿದ್ದ. ಆದರೆ ಅಹಂಕಾರವೆಂಬ ದೋಷ ಅವನನ್ನು ಆವರಿಸಿ, ನಾನೇ ಎಲ್ಲರಿಗಿಂತಲೂ ಶ್ರೇಷ್ಠ ಎಂಬ ಭಾವನೆ ಅವನಲ್ಲಿ ಮೂಡಿತು. ಅಹಂಕಾರವೆಂಬ ದೋಷ ಅವನನ್ನು ಈ ಎಲ್ಲಾ ಸುಖಗಳಿಂದ ವಂಚಿತನಾಗುವಂತೆ ಮಾಡಿತು. ಅವನ ಅಧ:ಪತನಕ್ಕೆ ಕಾರಣವಾಯಿತು. ಅವನು ಸಂಪಾದಿಸಿದ ಪುಣ್ಯರಾಶಿ ಎಲ್ಲವೂ ಕ್ಷಣಮಾತ್ರದಲ್ಲಿ ಭಸ್ಮವಾಗಿ ಹೋಯಿತು. ಅಹಂಕಾರ ಪಟ್ಟರೆ ಸತ್ಕರ್ಮದ ಫಲವು ಹೇಗೆ ನಾಶವಾಗುವುದೆಂಬುದಕ್ಕೆ ಯಯಾತಿಯೇ ಉದಾಹರಣೆಯಾಗುತ್ತಾನೆ. 


 ಅಹಂಕಾರ ಎಂಬುದು ನಮ್ಮ ಏಳಿಗೆಯನ್ನು ಕುಂಠಿತಗೊಳಿಸುವ ಮಹಾಶತ್ರು. ಎಷ್ಟೇ ಸಾಧನೆ ಮಾಡಿದರೂ  ಅದೆಲ್ಲರ ಹಿಂದೆ ಭಗವತ್ ಶಕ್ತಿಯ ಹರಿವು, ಗುರು ಹಿರಿಯರ ಆಶೀರ್ವಾದ ಕೆಲಸ ಮಾಡುತ್ತಲೇ ಇರುತ್ತದೆ ಎಂಬುದನ್ನು ಮರೆತು ಅಹಂಕಾರದಿಂದ ವರ್ತಿಸಿದರೆ ಅಧ:ಪತನ ನಿಶ್ಚಿತ ಎಂಬುದನ್ನು ಈ  ಕಥೆಯಿಂದ ಅರಿಯಬಹುದು. 'ಜೀವನ ವಿಕಾಸ ನಡೆಯುತ್ತಿರುವಾಗ ದೇವನಿಂದ ಶಕ್ತಿ ಸಪ್ಲೈ ಆಗುವುದು ಅದು ನಿಂತರೆ ಯಾವ ಕೆಲಸವೂ ಇಲ್ಲ. ಕರೆಂಟ್ ನಿಂತರೆ ರೇಡಿಯೋ ಫ್ಯಾನ್ ಎಲ್ಲಾ ನಿಲ್ಲುತ್ತದೆ',ಎಂಬ ಶ್ರೀರಂಗಮಹಾಗುರುಗಳ ವಾಣಿಯು ಸ್ಮರಣೀಯವಾಗಿದೆ. ಅಹಂಕಾರ ವರ್ಜಿತರಾಗಿ  ನಮ್ಮ ಏಳಿಗೆಗೆ ಕಾರಣೀಭೂತವಾದ ಆ ಎಲ್ಲಾ ಶಕ್ತಿಗಳಿಗೆ ತಲೆಬಾಗಿದಾಗ ಮಾತ್ರ ನಮ್ಮ ಸರ್ವತೋಮುಖ ಅಭಿವೃದ್ಧಿ ಸಾಧ್ಯ.


ಸೂಚನೆ: 29/01/2025 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Monday, January 27, 2025

ನಿಯಮಗಳ ಪಾಲನೆಯಿಂದಲೇ ವಿಕಾಸ (Niyamagaḷa Palaneyindale Vikasa)


ಲೇಖಕರು : 
ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)
ವ್ಯಕ್ತಿಯ ವಿಕಾಸವೆಂತು ಎಂಬುದನ್ನು ರಾಮಾಯಣದ ಈ ಕಥಾಭಾಗದಲ್ಲಿ ನೋಡಬಹುದು. ವಸಿಷ್ಠರ ಬ್ರಹ್ಮಬಲದ ಮುಂದೆ ತಮ್ಮ ಕ್ಷಾತ್ರಬಲವು ಕೆಲಸ ಮಾಡಲಿಲ್ಲ, ಎಂದು ಮನವರಿಕೆಯಾಯಿತು ವಿಶ್ವಾಮಿತ್ರರಿಗೆ. ಈ ಬ್ರಹ್ಮಬಲವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಆಸೆ ತೀವ್ರವಾಗಿಯೇ ಮೂಡಿತು. ತಪಸ್ಸಿನ ಮೂಲಕ ಕ್ರಮವಾಗಿ ರಾಜರ್ಷಿ, ಋಷಿ, ಮಹರ್ಷಿ, ಹಾಗೂ ಕೊನೆಗೆ ಬ್ರಹ್ಮರ್ಷಿ ಪದವಿಗಳನ್ನು ಪಡೆದ ಅವರ ಸಾಧನೆಗಳ ಕಥೆ ನಮಗೆ ಲೌಕಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಆದರ್ಶವಾಗಬಲ್ಲದು.

ಅವರ ಜೀವನದ ಆ ಭಾಗದ ಕಾಲ-ರೇಖೆಯನ್ನು ನಾವು ಗಮನಿಸಿದರೆ ನಮಗೆ ಸಿಗುವ ಘಟ್ಟಗಳು-ಪ್ರತಿಬಂಧಕಗಳು ಇವು. ಅವರು ರಾಜರ್ಷಿಯಾದ ಮೇಲೆ ನಡೆದದ್ದು ತ್ರಿಶಂಕುವಿನ ಹಾಗೂ ಅಂಬರೀಷ-ಶುನಃಶೇಫರ ಘಟನೆಗಳು. ಅವುಗಳಲ್ಲಿ ಅವರು ಸಾಕಷ್ಟೇ ತಪಃಫಲವನ್ನು ಕಳೆದುಕೊಂಡದ್ದಾಗಿತ್ತು - ಶಾಪಗಳನ್ನು ಕೊಡುವುದರ ಮೂಲಕ. ಋಷಿಯಾದ ನಂತರ ಮೇನಕೆಯ ಕಾಮಕ್ಕೆ ತುತ್ತಾಗಿ ಕಾಲ-ಶಕ್ತಿಗಳನ್ನು ನಷ್ಟಮಾಡಿಕೊಂಡರು. ಧ್ಯೇಯವನ್ನೂ ಮರೆತರು! ಹಳೆಯ ಸಂದರ್ಭಗಳಲ್ಲಿ ಶಾಪಕೊಡಲು ಮುಂದಾಗುತ್ತಿದ್ದ ಕೌಶಿಕರು, ಈಗ ಸ್ವ-ಪ್ರಜ್ಞೆಯಿಂದ ತಮ್ಮನ್ನು ತಾವು ಹತೋಟಿಯಲ್ಲಿಟ್ಟುಕೊಂಡರು; ಸಮಾಧಾನ-ಚಿತ್ತದಿಂದ ತಮ್ಮ ತಪಸ್ಸನ್ನು ಮತ್ತೂ ಏಕಾಗ್ರತೆಯಿಂದ ಮುಂದುವರೆಸಿದರು. ಯಾವ ದೊಡ್ಡ ಕೆಲಸವನ್ನು ಸಾಧಿಸಬೇಕಾದರೂ ಮನಸ್ಸಿನ ಮೇಲೆ ವಶ ಮುಖ್ಯವಾಗುತ್ತದೆ. ತದನಂತರ ಮತ್ತೆ ತಪಸ್ಸನ್ನು ಮುಂದುವರೆಸಿ ಮಹರ್ಷಿಯಾದ ಅವರಿಗೆ, ತಮ್ಮ ಧ್ಯೇಯಕ್ಕೆ ಬಹಳ ಹತ್ತಿರ ಬಂದಿದ್ದ ಕಾಲದಲ್ಲಿ ಇಂದ್ರ-ಮನ್ಮಥರು ರಂಭೆಯೊಟ್ಟಿಗೆ ಅವರ ತಪಸ್ಸಿಗೆ ವಿಘ್ನವನ್ನೊಡ್ಡಲು ಬಂದರು. ಆಗ, ಕ್ಷಣಮಾತ್ರದಲ್ಲೇ ಇಲ್ಲೇನೋ ತೊಂದರೆಯಿದೆಯೆಂದು ಅವರು ಬಗೆದರು; ಹಿಂದೆ ಬಿದ್ದಂತೆ ಕಾಮದ ಜಾಲಕ್ಕೆ ಬೀಳಲಿಲ್ಲ. ಆದರೆ ಬಲೆಯನ್ನು ತಪ್ಪಿಸಿಕೊಳ್ಳಹೋಗಿ ಬಾವಿಗೆ ಬಿದ್ದಂತಾಯಿತು ಅವರ ಪರಿಸ್ಥಿತಿ! ಅತ್ಯಲ್ಪಕಾಲ ಸಿಡಿದೆದ್ದ ಕೋಪದಿಂದಾಗಿ ರಂಭೆಗೆ ಶಾಪವಿತ್ತಿದ್ದರಿಂದ ಹಳೆಯ ಕಥೆಯ ಪುನರಾವರ್ತನೆಯಾದಂತಾಯಿತು. ಅದಕ್ಕೇ ಅವರು ಆ ಅಸಾಧಾರಣವಾದ ಅಕ್ರೋಧ-ಮೌನಗಳ ದೀಕ್ಷೆ ವಹಿಸಿದ್ದು. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ತಪೋಧನವನ್ನು ಕಳೆದುಕೊಳ್ಳುತ್ತಿದ್ದ ಅವರು, ಉಗ್ರ-ಸಂಯಮದ ದೀಕ್ಷೆ ಹೊತ್ತು ಕೊನೆಗೂ ತಮ್ಮ ಲಕ್ಷ್ಯವನ್ನು ಸಾಧಿಸಿದರು.

ವಿಧಿ-ನಿಷೇಧಗಳ ನಿಯಮಗಳು ಯಾವುದೇ ಪ್ರಕ್ರಿಯೆಯ ಒಂದಂಶ. ತಪಸ್ಸಿನಲ್ಲೂ ವಿಹಿತ-ನಿಯಮಗಳನ್ನಾಚರಿಸುವುದು ಎಷ್ಟು ಮುಖ್ಯವೋ, ನಿಷಿದ್ಧ-ಪ್ರವೃತ್ತಿಗಳಿಂದ (ಉದಾಹರಣೆಗೆ ಕಾಮ-ಕ್ರೋಧಾದಿಗಳಿಂದ)  ದೂರವಿದ್ದು ತಪೋನಾಶವನ್ನು ತಡೆಗಟ್ಟುವುದೂ ಅಷ್ಟೇ ಮುಖ್ಯ. ತ್ರಿಶಂಕು-ಶುನಃಶೇಫರ ಸಂದರ್ಭಗಳಲ್ಲಿ ತಮಗೆ ನೇರವಾಗಿ ಬಾಧೆಯಾಗಿಲ್ಲದಿದ್ದರೂ ಅವರು ತಪ್ಪು ಮಾಡಿದವರಿಗೆ ಶಾಪಕೊಟ್ಟರು. ಆದರೆ ರಂಭಾ-ಪ್ರಸಂಗದಲ್ಲಿ ತಮ್ಮ ಮುಖ್ಯ-ಧ್ಯೇಯಕ್ಕೇ ಅವಳಿಂದ ಬಾಧೆಯಾಯಿತೆಂದು ಅವರಿಗೆ ಕ್ರೋಧ ಬಂದಿತು. ಪ್ರತಿಸಂದರ್ಭದಲ್ಲೂ ಶಾಪ ಕೊಟ್ಟಾದ ತಕ್ಷಣ ಅವರಿಗೆ ಅದರಿಂದ ಆಗುತ್ತಿರುವ ತೊಂದರೆ ತಿಳಿಯಿತು. ಅಲ್ಲಿಯವರೆಗೆ ಮಾಡದಿದ್ದ ಸಂಕಲ್ಪವನ್ನು ಅವರು ರಂಭಾ-ಶಾಪದ ನಂತರ ಮಾಡಿದರು - ಎಂತಹ ಸಂನಿವೇಶದಲ್ಲೂ ಇನ್ನು ಮುಂದೆ ಕೋಪಿಸಿಕೊಳ್ಳುವುದಿಲ್ಲ, ಮೌನವಾಗಿಯೇ ಇರುತ್ತೇನೆ - ಎಂದು. ಅಸಾಧಾರಣವಾದ ಧ್ಯೇಯೋದ್ದೇಶಗಳಿಗೆ ಅಸಾಧಾರಣವಾದ ಪರಿಶ್ರಮವೂ ಬೇಕಾಗುತ್ತದೆ!

ಇತ್ತ ಅವರು ಇಟ್ಟುಕೊಂಡ ಸಂಯಮ-ನಿಯಮಗಳನ್ನು ಗಮನಿಸಿದರೆ, ಅವರು ತಪಸ್ಸೋಪಾನ(ತಪಸ್ಸಿನ ಮೆಟ್ಟಿಲು)ಗಳನ್ನು ಏರುತ್ತಿದ್ದಂತೆ ಅವರ ಕಟ್ಟು-ಕಟ್ಟಳೆಗಳೂ ಏರಿದುದು ತಿಳಿಯುತ್ತದೆ. ಸಂಯಮಿಗಳಾಗಿದ್ದ ಅವರು ತಮ್ಮ ರಾಣಿಯೊಂದಿಗೆ ಸಂಸಾರಿಗಳಾಗಿಯೇ ಮುನಿಗಳ ಆಹಾರ-ನಿಯಮಗಳನ್ನು ಪಾಲಿಸುತ್ತಾ ಮೊದಲಿಗೆ ತಪೋನಿಷ್ಠರಾದದ್ದು. ನಂತರದ ಘಟ್ಟಗಳಲ್ಲಿ ಏಕಾಂತದಲ್ಲಿದ್ದರು. ಹಲವು ಕಾಲ ಕೇವಲ ವಾಯು-ಸೇವನೆ ಮಾಡಿಕೊಂಡೇ ತಪಸ್ಸನ್ನಾಚರಿಸಿ, ಕೊನೆಕೊನೆಯ ಹಂತಗಳಲ್ಲಿ ತಮ್ಮ ಉಚ್ಛ್ವಾಸ-ನಿಃಶ್ವಾಸಗಳನ್ನೂ ನಿಲ್ಲಿಸಿ (ಎಂದರೆ ಉಸಿರನ್ನೇ ಆಡದೆ) ತಮ್ಮ ತಪಸ್ಸನ್ನು ಮುಂದುವರೆಸಿದರು.

ಇದೇ ವಿನ್ಯಾಸವನ್ನು ನಾವು ಲೌಕಿಕವಾದ ಧ್ಯೇಯಸಾಧನೆಯಲ್ಲೂ ಕಾಣುತ್ತೇವೆ. ಯಾವುದೇ ಮುಖ್ಯ-ಯೋಜನೆಯ ಮೊದಲ ಹಂತಗಳಲ್ಲಿ ನಾವು ಅದಕ್ಕೆ ಸಂಬಂಧಪಟ್ಟ ಕೆಲಸವನ್ನು ಮಾಡುತ್ತಿದ್ದರೂ, ಬೇರೆಯ ಕಡೆಗೂ ಗಮನ ಕೊಡಲು ಸಾಧ್ಯವಿರುತ್ತದೆ. ಆದರೆ ಮುಕ್ತಾಯದ ಹಂತಗಳು ಹತ್ತಿರವಾದಾಗ ತಾದಾತ್ಮ್ಯದಿಂದ ಅದೊಂದರಲ್ಲೇ ತೊಡಗುವುದಾಗುತ್ತದೆ. ಹಾಗೆ ಮಾಡದಿದ್ದಲ್ಲಿ ಕಾರ್ಯ-ಸಿದ್ಧಿಯಾಗುವುದೂ ಕಷ್ಟವಾಗಬಹುದು. ಯೋಜನೆಗಳು ಸೂಕ್ಷ್ಮತರವೂ ಕಷ್ಟತರವೂ ಆದಂತೆ ಹೆಚ್ಚು ಹೆಚ್ಚು ನಿಯಮಗಳನ್ನೂ ಕಟ್ಟುಪಾಡುಗಳನ್ನೂ ಅವು ಅಪೇಕ್ಷಿಸುತ್ತವೆ. ಶ್ರೀರಂಗಮಹಾಗುರುಗಳ ಮಾತಿನಂತೆ "ನಿಯಮ-ಬದ್ಧವಾದ ನಡೆಯನ್ನು ವಿಕಾಸವೆಂದೂ, ನಿಯಮ ತಪ್ಪಿದ ನಡೆಯನ್ನು ವಿಕಾರವೆಂದೂ ಕರೆಯುವುದರಲ್ಲಿ ಅರ್ಥವಿದೆ...ವಿಕಾಸವು ಕೊನೆಗೆ ಪ್ರಕಾಶದಲ್ಲೇ ನಿಲ್ಲುತ್ತದೆ". ನಿಯಮ-ಬದ್ಧವಾಗಿ ತಮ್ಮ ತಪಸ್ಸನ್ನಾಚರಿಸಿ  ವಿಶ್ವಾಮಿತ್ರರು ಬ್ರಹ್ಮಜ್ಞರಾಗುವಂತಾಯಿತು.

ಒಬ್ಬ ಅಸಾಧಾರಣವಾಗಿ ದೃಢ-ನಿಶ್ಚಯನಾದ ವ್ಯಕ್ತಿಯು ನಿಯಮ-ಬದ್ಧವಾಗಿ ಪರಿಶ್ರಮಪಟ್ಟರೆ ಎಂತಹ ಸಾಧನೆಗಳನ್ನು ಮಾಡಬಲ್ಲ! - ಎನ್ನುವುದು ವಿಶ್ವಾಮಿತ್ರರ ತಪೋಗಾಥೆಯಿಂದ ತಿಳಿಯುತ್ತದಲ್ಲವೆ?


ಸೂಚನೆ : 25/1/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಗ್ನಿದೇವನಿತ್ತ ಬಿಲ್ಲು-ಬತ್ತಳಿಕೆಗಳು

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಅಗ್ನಿಯನ್ನು ಅರ್ಜುನನು ಹೀಗೆ ಕೇಳಿದನು: "ಪೂಜ್ಯನೇ, ಕಾರ್ಯಸಿದ್ಧಿಯಾಗಲು  ಉಪಾಯವೇನೆಂಬುದನ್ನು ಹೇಳು – ಮಹಾವನದಲ್ಲಿ ಮಹಾವರ್ಷವನ್ನು ಸುರಿಸುತ್ತಿರುವ ಇಂದ್ರನನ್ನೇ ನಾನೀಗ ತಡೆಯಬೇಕಲ್ಲವೇ? ಅಯ್ಯಾ ಅಗ್ನಿದೇವ, ಪೌರುಷದಿಂದ ಅದೇನು ಸಾಧಿಸಬೇಕೋ, ಅದನ್ನು ನಾವು ಮಾಡುವೆವು. ಆದರೆ ಅದಕ್ಕೆ ಬೇಕಾದ ಸಮರ್ಥ-ಸಾಧನಗಳನ್ನು ನೀನೇ ಒದಗಿಸಿಕೊಡಬೇಕು."

ಅರ್ಜುನನು ಹೀಗೆ ಹೇಳಲು, ಲೋಕಪಾಲನೂ ಜಲೇಶ್ವರನೂ ಅದಿತಿಪುತ್ರನೂ ಆದ ವರುಣನನ್ನು ಕಾಣಬಯಸಿ ಅಗ್ನಿದೇವನು ಆತನನ್ನು ಸ್ಮರಿಸಿದನು. ತನ್ನನ್ನು ಅಗ್ನಿಯು ಸ್ಮರಿಸಿದನೆಂದು ತಿಳಿದು, ವರುಣನು ದರ್ಶನವಿತ್ತನು. ಲೋಕಪಾಲರಲ್ಲಿ ನಾಲ್ಕನೆಯವನೆನಿಸಿದ ಆ ವರುಣನನ್ನು ಸ್ವಾಗತಿಸಿ, ಅಗ್ನಿಯು ಹೇಳಿದನು. "ವರುಣನೇ, ರಾಜನಾದ ಸೋಮನು ಯಾವ ಬಿಲ್ಲು- ಬತ್ತಳಿಕೆಗಳನ್ನು ನಿನಗಿತ್ತಿದ್ದನೋ ಅವೆರಡನ್ನೂ, ಜೊತೆಗೆ ಕಪಿಧ್ವಜವನ್ನು ಹೊಂದಿರುವ ರಥವನ್ನೂ - ಒಡನೆಯೇ ನನಗೆ ಕೊಡು. ಗಾಂಡೀವದಿಂದ ಅರ್ಜುನನೂ, ಚಕ್ರದಿಂದ ಕೃಷ್ಣನೂ ಮಹತ್ತಾದ ಕಾರ್ಯವೊಂದನ್ನು ನನಗೆ ಮಾಡಿಕೊಡಲಿರುವರು. ಆದ್ದರಿಂದ ಅವನ್ನು ನನಗೆ ಕೊಡು."

ಹಾಗೆಯೇ ಆಗಲೆಂದು ಹೇಳಿದ ವರುಣನು ಆ ಧನೂರತ್ನವನ್ನೂ, ಎಂದರೆ ಶ್ರೇಷ್ಠವಾದ ಬಿಲ್ಲನ್ನೂ, ಜೊತೆಗೆ ಅಕ್ಷಯವಾದ ಬತ್ತಳಿಕೆಯನ್ನೂ ದಯಪಾಲಿಸಿದನು.

ಎಂತಹ ಬಿಲ್ಲದು! ಅದ್ಭುತವಾದದ್ದು, ಮಹಾಶಕ್ತಿ-ಸಂಪನ್ನವಾದದ್ದು, ಬಳಸಿದವರಿಗೆ ಕೀರ್ತಿ-ಕರವಾದದ್ದು, ಅನ್ಯ-ಶಸ್ತ್ರಗಳಿಂದ ಘಾತಗೊಳ್ಳದಂತಹುದು, ಅನ್ಯ-ಶಸ್ತ್ರಗಳನ್ನು ನಾಶಪಡಿಸುವಂತಹುದು; ಸರ್ವಾಯುಧಗಳಿಗಿಂತಲೂ ಹಿರಿದಾದುದು; ಶತ್ರು-ಸೈನ್ಯ-ಧ್ವಂಸಿಯಾದದ್ದು. ಎದುರಾಳಿಯ ಒಂದು ಲಕ್ಷ ಆಯುಧಗಳಿಗೆ ಸಮವಾದದ್ದು. ಅದನ್ನು ಬಳಸಿದವನ ರಾಷ್ಟ್ರವು ವರ್ಧಿಸುವುದು. ನಾನಾವರ್ಣಗಳಿಂದ ಕೂಡಿದ್ದು ಅದು ಆಶ್ಚರ್ಯಕರವಾಗಿರುವುದು. ನುಣುಪಾಗಿರುವುದು ಹಾಗೂ ಏಟು ತಿಂದಿಲ್ಲದ್ದು. ಸುದೀರ್ಘ-ಕಾಲದಿಂದಲೂ ದೇವತೆಗಳಿಂದಲೂ ದಾನವರಿಂದಲೂ ಗಂಧರ್ವರಿಂದಲೂ ಪೂಜಿತವಾಗಿರುವಂತಹುದು.

ಅಂತಹ ಬಿಲ್ಲನ್ನೂ, ಅದಕ್ಕೊಪ್ಪುವ ಅಕ್ಷಯವೆನಿಸುವ ತೂಣೀರವನ್ನೂ ವರುಣನು ಅಗ್ನಿಗಿತ್ತನು. ಇದಲ್ಲದೆ ದಿವ್ಯಾಶ್ವಗಳಿಂದ ಕೂಡಿದ ರಥವನ್ನೂ ಕೊಟ್ಟನು. ಬಹಳ ವಿಶಿಷ್ಟವಾದ ರಥವದು! ಕಪಿ-ಶ್ರೇಷ್ಠನ ಧ್ವಜವನ್ನು ಅದು ಹೊಂದಿತ್ತು. ಅದರ ಕುದುರೆಗಳು ಗಂಧರ್ವ-ದೇಶದವು. ಚಿನ್ನದ ಮಾಲೆಗಳನ್ನು ಧರಿಸಿದ ಬೆಳ್ಳಿಯ ಕುದುರೆಗಳೆಂಬಂತಿದ್ದವು ಅವು. ವರ್ಣದಲ್ಲಿ ಬಿಳೀಮೋಡಗಳಂತಿದ್ದವು. ವೇಗದಲ್ಲಿ ಮನಸ್ಸಿಗೋ ವಾಯುವಿಗೋ ಸಮನೆನಿಸತಕ್ಕವು. ಎಲ್ಲ ಉಪಕರಣಗಳಿಂದಲೂ ಕೂಡಿದ್ದವು. ದೇವತೆಗಳಿಗೂ ದಾನವರಿಗೂ ಅವನ್ನು ಜಯಿಸಲಾಗುತ್ತಿರಲಿಲ್ಲ.

ಅಷ್ಟೇ ಅಲ್ಲ.ಆ ರಥವು ಮಹಾಪ್ರಭೆಯುಳ್ಳದ್ದು. ಅದರ ಧ್ವನಿಯು ಮಹತ್ತಾದುದು. ಸರ್ವ-ರತ್ನಗಳಿಂದಲೂ ಕೂಡಿದ್ದು ಮನೋಹರವಾಗಿರುವಂತಹುದು. ಭೌಮನ ಎಂಬ ಪ್ರಜಾಪತಿಯು, ಒಳ್ಳೆಯ ತಪಸ್ಸನ್ನು ಮಾಡಿ ಅದನ್ನು ನಿರ್ಮಾಣಮಾಡಿದ್ದನು. ಅದರ ರೂಪವನ್ನು ಹೀಗೆಂದು ಹೇಳಲಾಗದು. ಹೇಗೆ ಸೂರ್ಯನ ರೂಪವನ್ನು ಅದು ಹೀಗೆಂದು ಹೇಳಲಾಗುವುದಿಲ್ಲವೋ ಹಾಗೆ. ಆ ರಥವನ್ನು ಹತ್ತಿಹೋಗಿಯೇ ದಾನವರನ್ನು ಸೋಮನು ಗೆದ್ದುದು. ನವ-ಮೇಘದಂತೆ ಕಾಣುತ್ತಿತ್ತು ಆ ಶ್ರೇಷ್ಠರಥ. ತನ್ನ ಶೋಭೆಯಿಂದ ಜ್ವಲಿಸುತ್ತಿರುವಂತೆ ತೋರುತ್ತಿತ್ತು.

ಇಂದ್ರಾಯುಧಕ್ಕೆ ಸಮರಾದ ಕೃಷ್ಣಾರ್ಜುನರು ಆ ರಥವನ್ನು ಏರಿದರು. ಅದರಲ್ಲಿಯ ಧ್ವಜ-ದಂಡವು ಬಂಗಾರದ್ದಾಗಿದ್ದು ಕಳಕಳೆಯಾಗಿತ್ತು. ಅದರ ಮೇಲೆ ಧ್ವಜದಲ್ಲಿದ್ದ ವಾನರವೂ ಸಿಂಹದಂತೆಯೋ ಹುಲಿಯಂತೆಯೋ ತೋರುವುದಾಗಿತ್ತು. ಶತ್ರುಗಳನ್ನು ಸುಟ್ಟೇಬಿಡುವಂತೆ ಅದು ತೋರುತ್ತಿತ್ತು. ಆ ಧ್ವಜದಲ್ಲಿ ಬಗೆಬಗೆಯ ದೊಡ್ಡದಾದ ಭೂತಗಳೂ ನೆಲೆಸಿದ್ದುವು. ಅವುಗಳ ನಾದವೇ ಸಾಕು, ಶತ್ರುಗಳಿಗೆ ಮೂರ್ಛೆಯುಂಟುಮಾಡಲು!

ಸೂಚನೆ : 26/1/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 2

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೧ - ಯಾರು ಗುರು ?

ಉತ್ತರ - ತತ್ತ್ವವನ್ನು ತಿಳಿದವನು, ಶಿಷ್ಯನ ಉದ್ಧಾರಕ್ಕಾಗಿ ನಿತ್ಯವೂ ಪ್ರಯತ್ನಶೀಲನಾದವನು.


ಸಾಮಾನ್ಯವಾಗಿ ಗುರು ಎಂಬ ಪದಕ್ಕೆ ಅರ್ಥವನ್ನು ಹೇಳುವಾಗ 'ಒಂದಕ್ಷರಂ ಕಲಿಸಿದಾತಂ ಗುರುಂ'- ಯಾರು ಪಾಠವನ್ನು ಹೇಳಿಕೊಡುತ್ತಾರೋ ಅವರನ್ನು 'ಗುರು' ಎಂದು ಹೇಳುವ ರೂಢಿಯುಂಟು. ಇಂದು ಈ ಪದವನ್ನು ಎಲ್ಲೆಲ್ಲೋ ಬಳಸುವ ಅಭ್ಯಾವನ್ನು ಮಾಡಿಕೊಂಡಿದ್ದೇವೆ. 'ಏನ್ ಗುರು? ಏನ್ ವಿಶೇಷ?' ಎಂಬುದಾಗಿ ಯಾರಾನ್ನಾದರೂ ಮಾತನಾಡಿಸುವಾಗ ಈ ಪದವನ್ನು ಬಳಸುತ್ತೇವೆ. ಇಂತಹ ಬೇರೆ ಬೇರೆ ಸಂದರ್ಭಗಳಲ್ಲಿ ಅತಿವಿಶಿಷ್ಟಾರ್ಥವನ್ನು ಕೊಡುವ ಈ ಪದವನ್ನು ಹಗುರವಾಗಿ ಬಳಸುವ ಅಭ್ಯಾಸವಾಗಿದೆ. ಆದರೆ ನಿಜವಾದ ಅರ್ಥವೇನು? ಎಂಬ ಬಗ್ಗೆ ಶ್ರೀಶಂಕರ ಭಗವತ್ಪಾದರು ಸಂಕ್ಷಿಪ್ತವಾದ ಒಂದು ವಾಕ್ಯ ಅಥವಾ ಪದಗುಚ್ಛ ಅಥವಾ ಒಂದು ಪದದಿಂದ ಅರ್ಥವಿವರಣೆಯನ್ನು ನೀಡಿರುವುದನ್ನು ನಾವು ಮನನ ಮಾಡಬೇಕಾಗಿದೆ. 

 'ಗುರು' ಎಂಬ ವಿಷಯಕ್ಕೆ ನಾವು ಬಂದಾಗ ಪ್ರತಿದಿನ ಒಂದು ಶ್ಲೋಕವನ್ನು ಹೇಳುತ್ತೇವೆ. ಗುರುರ್ಬ್ರಹ್ಮಾ ಗುರುರ್ವಿಷ್ಣು:... ಇತ್ಯಾದಿಯಾಗಿ ಅಂದರೆ ಈ ಗುರುವು ಬ್ರಹ್ಮ ವಿಷ್ಣು ಶಿವಾತ್ಮಕನು ಮತ್ತು ಅದಕ್ಕಿಂತಲೂ ಮೀರಿರುವಂತಹ  ಯಾವ ತತ್ವವಿದೆಯೋ ಅದನ್ನೇ ಗುರು ಎಂಬುದಾಗಿ ಕರೆಯಬೇಕು ಎಂಬ ಅಭಿಪ್ರಾಯ.  ಅಂದರೆ ಈ ಗುರುವು ಸೃಷ್ಟಿ ಸ್ಥಿತಿ ಮತ್ತು ಲಯಕಾರಕನಾಗಿ ಅಷ್ಟಲ್ಲದೆ ಇದಕ್ಕೂ ಮೂಲನಾದ ಪರಬ್ರಹ್ಮ ಸ್ವರೂಪನಾಗಿ  ಇರುತ್ತಾನೆ. ಹಾಗಾಗಿ ಇಂತಹ ಗುರುವು ಮಾತ್ರ ಶಿಷ್ಯನ ಉದ್ಧಾರವನ್ನು ಮಾಡಲು ಸಾಧ್ಯ. 


ಈ ಗುರು ಶಿಷ್ಯನ ಬುದ್ಧಿಯಲ್ಲಿ ಇರುವ ಅಜ್ಞಾನವನ್ನು ನೀಗಿಸಿ ಸುಜ್ಞಾನವನ್ನು ಬೆಳಗಿಸಬಲ್ಲ. ಶಿಷ್ಯನಲ್ಲಿ ಇರುವ ಉತ್ತಮವಾದ ಗುಣವನ್ನು ಸೃಜಿಸಬಲ್ಲ ಅಂತಹ ಗುಣವನ್ನು ಬೆಳೆಸಬಲ್ಲ ಹಾಗೆಯೇ ಶಿಷ್ಯನಲ್ಲಿ ಇರುವ ಅವಗುಣಗಳನ್ನು ಸಾಯಿಸಬಲ್ಲ. ಹಾಗಾಗಿ ಇಂತಹ ಮೂರು ಗುಣಗಳಿಂದ ಕೂಡಿರುವವನು ಮಾತ್ರವೇ ಗುರುವಾಗಬಲ್ಲ. ಇದಕ್ಕೆ ಶ್ರೀರಂಗ ಮಹಾ ಗುರುಗಳು "ಗುರು" ಎಂಬಲ್ಲಿ ಎರಡು ಕೊಂಬು ಇದೆಯಪ್ಪ ಎಂಬುದಾಗಿ ಹೇಳಿ ಆ ಎರಡು ಕೊಂಬುಗಳನ್ನು ತೆಗೆದರೆ ಅದು ಗರ ಅಂದರೆ ವಿಷವಾಗುತ್ತದೆ.  ಗುರು ತನ್ನ ಎರಡು ಕೊಂಬುಗಳಿಂದ ಶಿಷ್ಯನನ್ನು ಉದ್ದರಿಸಬಲ್ಲ.ಗುರುವಾದವನು ಶಿಷ್ಯನ ಉದ್ಧಾರವನ್ನೇ ದೃಷ್ಟಿಯಾಗಿಸಿಕೊಂಡು ತನ್ನ ಕಾರ್ಯವನ್ನು ಮಾಡುತ್ತಾನೆ ಹಾಗಾಗಿ ಇಂತಹ ಶಿಷ್ಯನ ಉದ್ಧಾರಕ್ಕಾಗಿ ಸತತ ಪರಿಶ್ರಮವನ್ನು ಮಾಡುವ ತತ್ವವನ್ನು ತಿಳಿದವನು ಮಾತ್ರವೇ ಗುರುವಾಗಬಲ್ಲ. "ಗುಕಾರಸ್ತು ಅಂಧಕಾರಃ ಸ್ಯಾತ್ ರುಕಾರಸ್ತು ತನ್ನಿರೋಧಕಃ । ಅಂಧಕಾರನಿರೋಧಿತ್ವಾತ್ ಗುರುರಿತ್ಯಭೀಧೀಯತೇ" - ಶಿಷ್ಯನಲ್ಲಿರುವ ಜ್ಞಾನಕ್ಕೆ ಆವರಣವಾದ ಅಂಧಕಾರವನ್ನು ಹೋಗಲಾಡಿಸಿ ಜ್ಞಾನವನ್ನು ಉಂಟುಮಾಡಿ ತಾನು ಯಾವ ಜ್ಞಾನ ಆನಂದರೂಪವಾದ ಅನುಭವವನ್ನು ಪಡೆಯುತ್ತಾನೋ ಅಂತಹದ್ದೇ ಅನುಭವವನ್ನು ಉಂಟುಮಾಡಿಸಿದರೆ  ಆತ ಶಿಷ್ಯನಾಗುತ್ತಾನೆ. ಗುರುವಿನಲ್ಲಿ ಒಂದಾಗಿ ಶಿಷ್ಯನೂ ಆ ಗುರುರೂಪವನ್ನೇ ಪಡೆಯುತ್ತಾನೆ. ಇದೇ ಶಿಷ್ಯನ ಉದ್ಧಾರ. ಅಲ್ಲಿಯ ತನಕ ಯಾರು ಪ್ರಯತ್ನಶೀಲರೋ ಅವನು ತಾನೇ ನಿಜವಾದ ಗುರು!.


ಸೂಚನೆ : 26/1/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, January 26, 2025

ಕೃಷ್ಣಕರ್ಣಾಮೃತ 48 ದರ್ಪದ ಸರ್ಪದ ಮರ್ದನ (Krishakarnamrta 48)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಮದಮಯಮದಮಯದುರಗಂ


ಕೃಷ್ಣನು ಕಾಳಿಯಸರ್ಪದ ಮರ್ದನವನ್ನು ಮಾಡಿದ ಕಥೆ ಸುವಿದಿತವಷ್ಟೆ. ಕಾಲಿಯ/ಕಾಲೀಯ/ಕಾಲಿಂಗಗಳೆಂದರೂ ಅದೇ ಹಾವೇ. ಮದಮಯನಾದ ಕಾಲಿಯನನ್ನು ಆತನ ನೆಲೆಯಾದ ಯಮುನೆಗೇ ಇಳಿದು ದಮನ ಮಾಡಿದ ವೀರ್ಯಶಾಲಿಯೇ ಕೃಷ್ಣ - ಎಂದಷ್ಟೇ ಹೇಳುತ್ತದೆ, ಈ ಶ್ಲೋಕ.

ಎಂತಹ ಉರಗವದು? ಅದನ್ನೇಕೆ ದಮನ ಮಾಡಬೇಕಾಯಿತು? - ಎಂಬುದನ್ನಿಲ್ಲಿ ಹೇಳಿಲ್ಲ. ಲೀಲಾಶುಕನು ಕೃಷ್ಣಕರ್ಣಾಮೃತವನ್ನು ಬರೆದ ಕಾಲಕ್ಕೆ ಯಾರಿಗೆ ತಿಳಿದಿರಲಿಕ್ಕಿಲ್ಲ, ಈ ಕಥೆ? ಎಂದೇ ಹೆಚ್ಚು ವಿವರಗಳು ಅಂದಿಗೆ ಬೇಕಿರಲಿಲ್ಲ.

ಯಮುನಾನದಿಗೆ ಕಲಿಂದ-ನಂದಿನೀ, ಕಾಲಿಂದೀ ಎಂದೂ ಹೆಸರುಗಳುಂಟು. ಕೃಷ್ಣಾ ಎಂದರೆ ಯಮುನೆಯೂ ಹೌದು. ಅದರ ನೀರು ಕಾಲ-ವರ್ಣದ್ದು, ಎಂದರೆ ಸ್ವತಃ ಕಪ್ಪು ಬಣ್ಣದ್ದು. ವಿಷಮಯತೆಯಿಂದಾಗಿ ಮತ್ತೂ ಕಪ್ಪಾಗಿದೆ. ವಿಷವಾದರೂ ಅದರೊಳಗೆ ಸೇರಿಕೊಂಡಿರುವ ಕಾಲಿಯನದು. ಆತ ಕೃಷ್ಣ-ಸರ್ಪ, ಕಪ್ಪುಬಣ್ಣದವ. ತಮೋಗುಣದ ಕಪ್ಪು ಕಾಳಿಯನದು. ಭಗವಂತನಾದ ಕೃಷ್ಣನೂ ಕಪ್ಪೇ ಆದರೂ, ಆತನ ಕಾಲಿಮೆ, ಎಂದರೆ ಕಪ್ಪು, ತದ್ವಿರುದ್ಧವಾದುದು.

ಆ ಭುಜಂಗದ, ಎಂದರೆ ಸರ್ಪದ ವಿಷವು, ಅದೆಷ್ಟು ಉಗ್ರವಾಗಿತ್ತೆಂದರೆ ತನ್ನಿಮಿತ್ತ ಆ ನದಿಯ ನೀರೂ ಕುದಿಯುತ್ತಿತ್ತು! ಅದರ ಮೇಲೆ ಹಾರುವ ಹಕ್ಕಿಗಳಿಗೂ ಆ ವಿಷ-ಪ್ರಭಾವವು ತಟ್ಟಿ ಅವು ಸತ್ತುಬೀಳುತ್ತಿದ್ದವು! ಯಮುನೆಯ ಮೇಲೆ ಬೀಸುವ ಗಾಳಿಯೂ ವಿಷಮಯವಾಗಿದ್ದು, ಬಳಿ ಬೆಳೆದ ಗಿಡಮರಗಳೂ, ಬಳಿ ಸುಳಿದ ಪಶು-ಪ್ರಾಣಿಗಳೂ ಸಾವನ್ನಪ್ಪುತ್ತಿದ್ದವು!

ಇಂತಹ ಘಾತುಕ-ಖಳರನ್ನು ದಮಿಸಲೆಂದೇ, ಎಂದರೆ ದಮನಮಾಡಲೆಂದೇ, ಕೃಷ್ಣನ ಅವತಾರವಾಗಿರುವುದಷ್ಟೆ? ಆ ನದೀತೀರದಲ್ಲಿ ಒಂದೇ ಒಂದು ಕದಂಬ-ವೃಕ್ಷ ಮಾತ್ರ ಬೆಳೆದಿತ್ತು. ಗರುಡನು ಅಮೃತವನ್ನು ತರುತ್ತಿದ್ದಾಗ ಅದರೊಂದು ಬಿಂದುವು ಬಿದ್ದ ಎಡೆಯಲ್ಲಿ ಈ ಮರವು ಬೆಳೆದಿದ್ದರಿಂದ ಯಮುನಾ-ವಿಷವು ಇದನ್ನು ಪೂರ್ತಿಯಾಗಿ ಹಾಳಗೆಡವಲಾಗಲಿಲ್ಲವಂತೆ! ಆ ಮರವನ್ನೇ ಹತ್ತಿ ಅದರ ತುದಿಯಿಂದ ಧುಮುಕಿದ, ಕೃಷ್ಣ, ಈ ನೀರಿನೊಳಗೆ.

ಧುಮುಕಿದ ರಭಸಕ್ಕೆ ನೀರೆಲ್ಲ ಉಲ್ಲೋಲ-ಕಲ್ಲೋಲವಾಯಿತು (ಅಲ್ಲೋಲ-ಕಲ್ಲೋಲವೆಂಬ ಪದವು ಸರಿಯಲ್ಲ). ಉತ್ತುಂಗ-ತರಂಗಗಳೆದ್ದವು. ತನ್ನ ಧಾಮಕ್ಕೆ ಧಾಳಿ ಮಾಡಿರುವವರಾರೆಂದು ಕಾಣಲು ಕ್ರೋಧೋದ್ರೇಕದಿಂದ ಸರ್ರನೆ ಬಂದ ಸರ್ಪವು ಕಂಡದ್ದು ಈ ಮುದ್ದುಬಾಲಕನನ್ನು; ಶ್ರೀವತ್ಸ-ಚಿಹ್ನೆಯನ್ನು ಹೊಂದಿದ್ದ ಆತನು ಪೀತಾಂಬರ-ಧಾರಿ. ಸುಂದರ-ಮುಖ, ಮೃದು-ಚರಣಗಳುಳ್ಳವನಾಗಿ ಪ್ರೇಕ್ಷಣೀಯನಾಗಿದ್ದ ಬಾಲ!

ಈ ಭೀಕರ-ಭುಜಂಗಮ ಕಾಳಿಂಗನ ಪ್ರಥಮ ಪ್ರಹಾರವೆಂದರೆ ಕೃಷ್ಣನ ಮರ್ಮಾಂಗವನ್ನು ಕಚ್ಚುವುದು! ಅದರಿಂದೇನೂ ಬವಣೆಪಡದ ಕೃಷ್ಣ ನಿರ್ಭಯನಾಗಿಯೇ ಆಡುತ್ತಿದ್ದಾನೆ, ಈ ಅಹಿಯ ಹೆಡೆಯ ಮೇಲೆ: "ಆಡಿದನೋ ರಂಗ ಅದ್ಭುತದಿಂದಲಿ, ಕಾಳಿಂಗನ ಫಣೆಯಲಿ!" ಆ ರಂಗನ ಮೈಯನ್ನೇ ಸುತ್ತಿಕೊಂಡುಬಿಟ್ಟ ಆ ಪನ್ನಗ!

ಕೃಷ್ಣನ ಬಂಧುಮಿತ್ರರಿಗೆಲ್ಲಾ ಆತಂಕವೋ ಆತಂಕ! ಬಲರಾಮನೂ ಕೃಷ್ಣನ ಜೊತೆಗಿಲ್ಲವಲ್ಲಾ! ಅಯ್ಯೋ! - ಎಂದು ಎಲ್ಲರೂ ಓಡೋಡಿಬಂದಿದ್ದಾರೆ. ಬಲರಾಮನನ್ನು ಕರೆದರೆ, ಆತನಂತೂ ಮುಗುಳ್ನಗೆ ನಕ್ಕು ಆತ ಸುಮ್ಮನಿದ್ದಾನೆ! ಏನಾಗುತ್ತಿದೆಯೆಂಬುದು ಅವನಿಗೆ ಗೊತ್ತ್ತದ್ದೇ!

ಇವರೆಲ್ಲರ ಆಕ್ರಂದನವನ್ನು ಕಂಡ ಕೃಷ್ಣನಿಗೆ, ಇನ್ನು ಸುಮ್ಮನಿರುವುದು ಬೇಡವೆನಿಸಿ, ಸರ್ಪ-ಬಂಧದಿಂದಾಚೆಗೆ ಸೆಟೆದು ನಿಂತ. ಅದಕ್ಕೆ ಪ್ರತಿಯಾಗಿ, ತನ್ನ ಸೀಳುನಾಲಿಗೆಯನ್ನು ಹೊರಚಾಚುತ್ತಾ ಅತಿಕರಾಲವಾದ ವಿಷಾಗ್ನಿಯನ್ನು ಕಾರುತ್ತಾ ಬುಸುಬುಸುಗುಟ್ಟುತ್ತಾ ಹೆಡೆ ಬಿಚ್ಚಿ ಆಕ್ರಮಣ ಮಾಡಿದ, ಈ ಕರಾಳ-ವ್ಯಾಳ.

ಆತನನ್ನು ಸುತ್ತಿಸಿ ಸುತ್ತಿಸಿ ಸುಸ್ತಾಗಿಸಿದ, ಕೃಷ್ಣ. ಆತನ ಹೆಡೆಗಳನ್ನೇ ಮೆಟ್ಟುತ್ತಾ ಬಂದ. ನೂರೊಂದು ಹೆಡೆಗಳು; ಒಂದನ್ನು ಮೆಟ್ಟಿದರೆ ಮತ್ತೊಂದು ಪುಟಿದೇಳುವುದು. ಮೇಲೆದ್ದ ಫಣೆಗಳನ್ನು ತುಳಿತುಳಿದು ಕುಣಿಕುಣಿದು ದಿವ್ಯ-ನಾಟ್ಯವನ್ನೇ ಮಾಡಿದ, ಶ್ರೀಕೃಷ್ಣ!

ಈ ನರ್ತನ-ಸಂದರ್ಭದಲ್ಲಿ ಶ್ರೀಮದ್ಭಾಗವತವು ಆತನನ್ನು "ಅಖಿಲ ಕಲೆಗಳ ಆದಿಗುರು" ಎಂದು ಹೇಳಿರುವುದನ್ನು ಶ್ರೀರಂಗಮಹಾಗುರುಗಳು ಎತ್ತಿ ಹೇಳುತ್ತಿದ್ದರು. ಭಾರತೀಯ-ಸಂಸ್ಕೃತಿಯಲ್ಲಿ ಆವಿರ್ಭಾವಗೊಂಡ ಎಲ್ಲ ಕಲೆಗಳ ಮೂಲವೂ ಲಕ್ಷ್ಯವೂ ಭಗವಂತನನ್ನು ತಲುಪುವುದೇ, ಅಲ್ಲವೇ?

ಆ ಸರ್ಪದ ಫಣಾ-ಮಣಿಗಳನ್ನು ಸ್ಪರ್ಶಿಸುತ್ತಿದ್ದಂತೆಯೇ ಅತಿಯಾಗಿ ಕೆಂಪಾಗುತ್ತಿತ್ತು, ಕೃಷ್ಣನ ಕಮಲ-ಸದೃಶವಾದ ಪಾದ. ಕೃಷ್ಣ-ನರ್ತನದ ವೈಭವವನ್ನು ಕಂಡು ತಾವೂ ನರ್ತನವನ್ನಾರಂಭಿಸಿದರು, ಆಕಾಶ-ಸ್ಥಿತರಾದ ಗಂಧರ್ವ-ಸಿದ್ಧ-ಚಾರಣರೂ ದೇವತಾಸ್ತ್ರೀಯರೂ. ಪಣವ-ಆನಕ-ಮೃದಂಗಾದಿ- ವಾದ್ಯಗಳ ವಾದನ, ಸ್ತುತಿ-ಗಾನಗಳು, ಪುಷ್ಪ-ವರ್ಷಗಳು - ಇವೆಲ್ಲವನ್ನೂ ಸಂತೋಷದಿಂದ ಅವರು ಮಾಡಿದರು.

ಹೆಡೆಗಳನ್ನು ಹೀಗೆ ಕೃಷ್ಣ-ಪಾದವು ಮೆಟ್ಟುತ್ತಾ ಕುಟ್ಟುತ್ತಾ ಮೊಟ್ಟುತ್ತಿರಲು, ಮೊದಮೊದಲು ಕಣ್ಣಿನಿಂದಲೂ ವಿಷಕಾರುತ್ತಿದ್ದ ಕಾಳಿಯ, ಈಗ ಬಾಯಿಮೂಗುಗಳಿಂದ ರಕ್ತವನ್ನು ಕಕ್ಕಲಾರಂಭಿಸಿದ. ನಿಮಿರಿ ನಿಂತಿದ್ದ ಮೈಯ ಬಲವು ಕುಗ್ಗಿತು, ಅಂಗಗಳ ಭಂಗಗಳಾದವು. ಆಗಷ್ಟೆ ನೆನೆಯಲಾರಂಭಿಸಿದ, ಭಗವಂತನನ್ನು. ಸಂಕಟ ಬಂದಾಗಲೇ ವೇಂಕಟರಮಣನಲ್ಲವೇ!

ಕಾಳಿಯನಿಗಾದ ದುಃಸ್ಥಿತಿ ತೀವ್ರವಾದದ್ದೇ: ಜಗತ್ತನ್ನೇ ತನ್ನ ಗರ್ಭದಲ್ಲಿಟ್ಟುಕೊಂಡಿದ್ದ ಈ ಅರ್ಭಕನ, ಎಂದರೆ ಶಿಶುವಿನ, ಮೈಭಾರದಿಂದ, ಹಾಗೂ ಹಿಮ್ಮಡಿಗಳ ಗುದ್ದುಗಳಿಂದ, ಹೆಡೆಗಳೆಂಬ ಕೊಡೆಗಳಿಗಾದ ಹೊಡೆತವು ತಡೆಯಲಾರದಾಯಿತು. ಪನ್ನಗನ ಪತ್ನಿಯರು ಕಂಗೆಟ್ಟರು, ಆರ್ತರಾದರು, ಕೃಷ್ಣನಿಗೆ ಶರಣಾದರು, ಪತಿಯ ಪ್ರಾಣಭಿಕ್ಷೆಯನ್ನು ಅಂಗಲಾಚಿ ಬೇಡಿಕೊಂಡರು.

"ಶತ್ರುವಾದರೇನು, ಪುತ್ರನಾದರೇನು? - ಖಲನಾದರೆ ನಿಗ್ರಹವೇ - ಅದಕ್ಕೇ ಆಗಿರುವ ಅವತಾರ ಕೃಷ್ಣನದು" - ಎಂಬುದನ್ನವರೀಗ ಮನಗಂಡರು. ದುಷ್ಟರಿಗಿಂತಹ ಕಷ್ಟವನ್ನು ಭಗವಂತನು ಕೊಟ್ಟರೆ, ಅದೂ ಒಳ್ಳೆಯದಕ್ಕೇ, ಅದೂ ಕಲ್ಮಷ-ಧ್ವಂಸಕ್ಕಾಗಿಯೇ!" -  ಎಂದುಸುರಿದರು. ಶ್ರೀರಂಗಮಹಾಗುರುಗಳ ಒಕ್ಕಣೆಯಲ್ಲಿ ಇದು "ನಿಗ್ರಹರೂಪವಾದ ಅನುಗ್ರಹ"!

ಭಗವಂತನು ಜ್ಞಾನ-ವಿಜ್ಞಾನ-ನಿಧಿಯೆಂಬುದನ್ನು ಕಂಡುಕೊಂಡು ಅವನನ್ನರು ಕೊಂಡಾಡಿದರು. ನಿನ್ನನ್ನರಿಯದ ನಮ್ಮ ಪತಿಯ ಪ್ರಥಮಾಪರಾಧವಿದೆಂದು ಪ್ರತಿಪಾದಿಸಿ, ಪುತ್ರ-ಸದೃಶನನ್ನು ಮನ್ನಿಸೆಂದು ಮನವಿ ಮಾಡಿದರು. ಕೊನೆಗೆ ಕಾಲಿಯನೂ ಕೈಮುಗಿದು ಕ್ಷಮೆಕೇಳಿದನು.

ಕೃಷ್ಣನ ಸೂಚನೆಯಂತೆ ಬೇರೊಂದು ದ್ವೀಪಕ್ಕೆ ಆತನು ಸಕುಟುಂಬನಾಗಿ ಸರಿಯುವುದಾಯಿತು. ಯಮುನೆಯಿನ್ನು ತಿಳಿಯಾಯಿತು. ಸರ್ವರಿಗೂ ಸಂಸೇವ್ಯವಾಯಿತು.

ಗರುಡನ ಭಯವಿತ್ತು, ಆ ನಾಗನಿಗೆ. "ನನ್ನ ಪಾದ- ಲಾಂಛನವು ನಿನ್ನ ಹೆಡೆಯ ಮೇಲಿರುವುದರಿದ ಗರುಡನಿನ್ನು ನಿನ್ನ ಬಳಿ ಬರನು" ಎಂದು ಕೃಷ್ಣನು ಅಭಯವಿತ್ತನು. ಸಂಧ್ಯಾ-ಕಾಲಗಳಲ್ಲಿ ಈ ಕಾಲಿಯಮರ್ದನ-ಪ್ರಸಂಗವನ್ನು ನೆನೆಯುವವರಿಗೂ ಸರ್ಪ-ಭಯವೆಂಬುದಿರದೆಂದು ಭಾಗವತವು ಹೇಳುತ್ತದೆ.

ಇಂತಹ ಅದ್ಭುತ-ಲೀಲಾ-ಪ್ರಸಂಗವನ್ನು ಲೀಲಾಶುಕನು  ಇಲ್ಲಿ ಚಿತ್ರಿಸಿದ್ದಾನೆ. ಮದಮಯ - ಮದಮಯವೆಂದು ಆರಂಭವಾಗುವ ಈ ಶ್ಲೋಕವು, ತಾಂಡವಕ್ಕೆ ತಾಳಕ್ಕೆ ಸರಿಯಾಗಿ ಬರುವ ಆರ್ಯಾ-ವೃತ್ತದಲ್ಲಿದೆ. ತೀರ್ಯ-ವೀರ್ಯಗಳ ಅನುಪ್ರಾಸವೂ ಘಟನೆಗೊಪ್ಪುವಂತಿದೆ.

ಉತ್ತರಾರ್ಧದ ಮಮರತಿ-ಮಮರತಿಯೂ ಅನುರಣಿಸುತ್ತದೆ. ಏನದರ ಆಶಯ?
ತ್ರಿಶಂಕುವನ್ನು ಬರಬೇಡ ಎಂದರಲ್ಲವೆ, ಅಮರರು, ಎಂದರೆ ದೇವತೆಗಳು? ಅವರ ಕೈಯಲ್ಲಿ ತಿರಸ್ಕೃತಿಯನ್ನು, ಎಂದರೆ ತಿರಸ್ಕಾರವನ್ನು, ಅನುಭವಿಸುವಂತೆ ಆಗದಿರುವ ಹಾಗೆ ಮಾಡುವ ಮುರಾರಿಯು ನನಗೆ ಮುದವೀಯಲಿ - ಎಂದು ಕವಿಯಿಲ್ಲಿ ಕೇಳಿಕೊಂಡಿದ್ದಾನೆ.

ಮದಮಯಮದಮಯದುರಗಂ

ಯಮುನಾಮವತೀರ್ಯ ವೀರ್ಯ-ಶಾಲೀ ಯಃ |

ಮಮ ರತಿಮಮರ-ತಿರಸ್ಕೃತಿ-

-ಶಮನ-ಪರಃ ಸ ಕ್ರಿಯಾತ್ ಕೃಷ್ಣಃ ||

ಸೂಚನೆ : 25/1/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Sunday, January 19, 2025

ಯಕ್ಷ ಪ್ರಶ್ನೆ 120 ಅಂತ್ಯಮಂಗಲಮ್(Yaksha prashne 120)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಕೃತ ಯಕ್ಷಪ್ರಶ್ನೆ ಎಂಬ ಶ್ರೀರ್ಷಿಕೆಯ ಅಡಿಯಲ್ಲಿ ೧೨೦ ಲೇಖನಗಳನ್ನು ಬರೆದಿದ್ದಾಗಿದೆ. ಇಲ್ಲಿ ಯಕ್ಷನು ಕೇಳುವ ಪ್ರಶ್ನೆಗಳಿಗೆ ಧರ್ಮರಾಜನು ಯಾವ ರೀತಿಯಾಗಿ ಉತ್ತರವನ್ನು ಕೊಡುತ್ತಾನೆ ಎಂಬುದನ್ನು ವಿಶ್ಲೇಷಿಸಿದ್ದಾಯಿತು. ಆರಂಭದ ಲೇಖನದಲ್ಲಿ ಹೇಳಿದಂತೆ ಇಲ್ಲಿ ಯಕ್ಷನು ಕೇಳುವ ಪ್ರಶ್ನೆಗಳು ಕುತೂಹಲದ ಪ್ರಶ್ನೆಗಳಲ್ಲ; ಜಿಜ್ಞಾಸೆಯ ಪ್ರಶ್ನೆಗಳಲ್ಲ. ಏಕೆಂದರೆ ಪ್ರಶ್ನೆಗಳನ್ನು ಕೇಳಿ ಯಕ್ಷನು ತಿಳಿದಿಕೊಳ್ಳಬೇಕಾದುದು ಏನೂ ಇಲ್ಲ. ಇಲ್ಲಿ ಯಕ್ಷನೆಂದರೆ ಯಮಧರ್ಮರಾಜನೇ ಈ ರೂಪದಲ್ಲಿ ಬಂದಿದ್ದು. ಆತನ ಮಗ ಯುಧಿಷ್ಠಿರ. ಆದ್ದರಿಂದಲೇ ಈತನನ್ನು ಧರ್ಮಜ ಅಥವಾ ಧರ್ಮರಾಜ ಎಂಬ ಹೆಸರು ಪ್ರಸಿದ್ಧವಾಗಿವೆ. ಧರ್ಮರಾಜನು ಒಬ್ಬ ವಿದ್ಯಾವಂತ, ಅಷ್ಟೇ ಅಲ್ಲ ಒಬ್ಬ ರಾಜನೀತಿ ಕುಶಲನೂ ಹೌದು. ಇದಕ್ಕಿಂತಲೂ ಮುಖ್ಯವಾಗಿ ಆತ ಧರ್ಮಜ್ಞ. ವಿದ್ಯೆಯೆಂಬುದು ಪರಿಪೂರ್ಣವಾಗುವುದು ಧರ್ಮದ ಅರಿವು ಆದಾಗ ಮಾತ್ರ. ಧರ್ಮಪ್ರಜ್ಞೆ ಮೂಡದಿದ್ದರೆ ಎಷ್ಟೇ ವೇದ, ಶಾಸ್ತ್ರ ಮುಂತಾದ ಯಾವುದೇ ಗ್ರಂಥಾಧ್ಯಯನ ಮಾಡಿದರೂ ಅವು ವ್ಯರ್ಥವೇ ಸರಿ. ಹಾಗಾಗಿ ಈತನಲ್ಲಿರುವ ಧರ್ಮಪ್ರಜ್ಞೆ ಜಗತ್ತಿಗೆ ತಲುಪಬೇಕು ಎಂಬ ಉದ್ದೇಶದಿಂದ ಯಮಧರ್ಮರಾಜನು ತನ್ನ ಪುತ್ರನಿಗೆ ಪ್ರಶ್ನೆಗಳನ್ನು ಮುಂದಿಡುತ್ತಾನೆ. ಇಲ್ಲಿನ ಉತ್ತರಗಳಿಂದ ಯುಧಿಷ್ಠಿರನ ಧರ್ಮಜ್ಞತೆಯನ್ನು ನಾವು ಅರಿಯಬಹುದು. 

ಧರ್ಮಜನ ನಾಲ್ವರು ಸಹೋದರರಿಗೂ ಯಕ್ಷನು ಪ್ರಶ್ನೆಯನ್ನು ಕೇಳಲು ಮುಂದಾಗುತ್ತಾನೆ. ಆದರೆ ಅವರಾರೂ ಯಕ್ಷನ ಪ್ರಶ್ನೆಗಳಿಗೆ ಉತ್ತರಿಸದೇ ತಮ್ಮ ಉದ್ಧಟತನವನ್ನು ತೋರಿಸಿದರು ಎಂದೇ ಹೇಳಬೇಕಾಗುತ್ತದೆ. ಕೊನೆಯಲ್ಲಿ ನೀರಿಗಾಗಿ ಬಂದ ಧರ್ಮಜನು ವಿನೀತನಾಗಿ ಯಕ್ಷನ ಪ್ರಶ್ನೆಗಳಿಗೆ ಉತ್ತರವನ್ನು ಕೊಡುವುದರ ಮೂಲಕ ತನ್ನ ವಿದ್ಯಾವಿಲಾಸವನ್ನು ಅರುಹಿದ್ದಲ್ಲದೇ ಮೃತರಾದ ನಾಲ್ವರು ಸಹೋದರರನ್ನು ಮತ್ತೆ ಪಡೆದ. ಇಲ್ಲಿನ ಪ್ರಶ್ನೋತ್ತರಗಳಲ್ಲಿ ನಾವು ಗಮನಿಸಬೇಕಾದ ವಿಷಯಗಳಿವೆ. ಅನುದಿನ ಅನುಸಂಧಾನಕ್ಕೆ ಯೋಗ್ಯವಾದ ವಿಚಾರಸಂಪತ್ತು ಇಲ್ಲಿದೆ. ಇಲ್ಲಿ ಮಥಿಸಲಾದ ವಿಚಾರಗಳು ನಮ್ಮ ನಿತ್ಯಜೀವನಕ್ಕೆ ಮಾರ್ಗದರ್ಶಕಗಳು, ಪ್ರೇರಕಗಳು, ಸ್ಫೂರ್ತಿದಾಯಕಗಳು. ಅತ್ಯಂತ ಗಹನವಾದ ಧರ್ಮ ಎಂಬ ವಿಚಾರದಿಂದ ಹಿಡಿದು ಅತ್ಯಂತ ಸುಲಭವಾದ ಭೂಮಿ ನೀರು ಮೊದಲಾದ ವಿಚಾರಗಳಿಗೂ ಇಲ್ಲಿ ಧರ್ಮಜನ ಉತ್ತರವಿದೆ. ಇಲ್ಲಿನ ಪ್ರಶ್ನೋತ್ತರಗಳು ಕೆಲವು ಮಾರ್ಮಿಕವಾಗಿವೆ; ಕೆಲವು ಒಗಟಾಗಿವೆ; ಇನ್ನು ಕೆಲವು ತಾತ್ತ್ವಿಕವಾಗಿವೆ; ಮತ್ತೆ ಕೆಲವು ನೇರವಾಗಿವೆ. ಹೀಗೆ ಉತ್ತರಗಳಲ್ಲಿ ವೈವಿಧ್ಯವಿದೆ. ಇಲ್ಲಿ ಬಂದಿರುವ ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ನಮಗೆ ಧರ್ಮ ಎಂಬ ವಿಷಯದ ಬಗ್ಗೆ ಸರಿಯಾದ ಕಲ್ಪನೆ ಬರಬೇಕಾಗುತ್ತದೆ. ಅದಿಲ್ಲವಾದರೆ ಅನೇಕ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಅಸಾಧ್ಯವೆಂಬುದು ನನ್ನ ಬುದ್ಧಿಗೆ ಬಂದ ಸತ್ಯಸಂಗತಿಯಾಗಿದೆ.  

ಧರ್ಮದ ಅರಿವನ್ನು ಸರಿಯಾಗಿ ಮೂಡಿಸಲೋಸುಗವೇ ಇಲ್ಲಿ ಯಮಧರ್ಮರಾಜನು ಧರ್ಮಜ್ಞನಾದ ಯುಧಿಷ್ಠಿರನಿಗೆ ಇಂತಹ ಪ್ರಶ್ನೆಗಳನ್ನು ಕೇಳಿರಲೂ ಸಾಕು. ಯಕ್ಷನ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ಧರ್ಮದ ತಿಳಿವಳಿಕೆಯ ಆಧಾರದ ಮೇಲೆ ಕೊಟ್ಟಿರುವುದರಿಂದ ಆತ ಧರ್ಮರಾಜನೇ ಆದನು ಎಂಬುದನ್ನು ನಾವು ಅಂದುಕೊಳ್ಳಬಹುದು. ಎಷ್ಟೇ ಸಲ ಓದಿದರೂ. ಮನನ ಮಾಡಿದರೂ. ಉಪದೇಶವನ್ನೇ ಮಾಡಿದರೂ ಅರ್ಥವಾಗಲು ಅತ್ಯಂತ ಕಷ್ಟವಾದ ವಿಚಾರವೆಂದರೆ ಅದು ಧರ್ಮ. ಇದನ್ನು ತಿಳಿಯಲು ಮತ್ತು ತಿಳಿಸಲು ಶ್ರೀರಂಗಮಹಾಗುರು ಕೊಟ್ಟ ನೋಟವೇ  ಕಾರಣ ಎಂಬ ಕೃತಜ್ಞತಾಭಾವ ನನ್ನದಾಗಿದೆ. 

ಸೂಚನೆ : 12/1/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 119 (Vyaasa Vikshita 119)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಅಗ್ನಿಗೇ ಅಜೀರ್ಣವಾಯಿತು!

ಶ್ವೇತಕಿಯ ಮಾತುಗಳನ್ನು ಕೇಳಿ, ರುದ್ರನು ದುರ್ವಾಸರನ್ನು ಬರಮಾಡಿಕೊಂಡು, "ವಿಪ್ರ-ಶ್ರೇಷ್ಠನೇ, ಈತನು ಮಹಾತ್ಮನಾದ ಶ್ವೇತಕಿ. ನನ್ನ ಆಣತಿಯಂತೆ ಈ ರಾಜನಿಗೆ ಯಜ್ಞವನ್ನು ಮಾಡಿಸು" ಎಂದನು. ಅದಕ್ಕೆ ಆತನೂ ಆಗಲೆಂದನು.

ಆ ಬಳಿಕ ಆ ಮಹಾತ್ಮನಾದ ರಾಜನ ಯಜ್ಞವು ವಿಧ್ಯನುಸಾರ ಕಾಲಕ್ಕೆ ಸರಿಯಾಗಿ ನೆರವೇರಿತು. ಬಹುವಾದ ದಕ್ಷಿಣೆಯಿಂದ ಕೂಡಿದ್ದ ಯಜ್ಞವದು.

ಅದು ಮುಗಿಯಲು, ಯಾಜಕರಾಗಿ ಬಂದಿದ್ದವರು, ಎಂದರೆ ಯಜ್ಞವನ್ನು ಮಾಡಿಸಲೆಂದು ಬಂದಿದ್ದವರು, ದುರ್ವಾಸರಿಂದ ಅನುಮತಿಯನ್ನು ಪಡೆದವರಾಗಿ ತಮ್ಮ ತಮ್ಮ ಎಡೆಗಳಿಗೆ ಹೊರಟರು. ಯಜ್ಞದೀಕ್ಷೆಯಲ್ಲಿದ್ದ ಸದಸ್ಯರೂ ಹಿಂತಿರುಗಿದರು. ರಾಜನೂ ಸ್ವನಗರಕ್ಕೆ ಹೋದನು.

ಅಲ್ಲಿ ಆತನನ್ನು ವೇದ-ಪಾರಂಗತರಾದ ಬ್ರಾಹ್ಮಣರು ವಂದಿಸಿದರು. ವಂದಿಗಳು, ಎಂದರೆ ಹೊಗಳುಭಟರು, ಹಾಗೂ ನಾಗರಿಕರು ಆತನನ್ನು ಅಭಿನಂದಿಸಿದರು.

ಇಂತಹ ನಡತೆಯುಳ್ಳ ರಾಜ-ಶ್ರೇಷ್ಠನಾದ ರಾಜರ್ಷಿ-ಶ್ವೇತಕಿಯು ದೀರ್ಘಕಾಲಾನಂತರ ಋತ್ವಿಕ್ಕುಗಳಿಂದ ಪ್ರಶಂಸಿಸಲ್ಪಟ್ಟು ಸ್ವರ್ಗಕ್ಕೆ ತೆರಳಿದನು.

ಆತನ ಯಜ್ಞದಲ್ಲಿ ಅಗ್ನಿಯು ಹನ್ನೆರಡು ವರ್ಷಗಳ ಕಾಲ ಹವಿಸ್ಸನ್ನು, ಎಂದರೆ ಘೃತವನ್ನು ಕುಡಿದಿದ್ದನಷ್ಟೆ. ಇಂತಹ ಯಜ್ಞದಲ್ಲಿ ಹಾಗೆ ಹವಿಸ್-ಸ್ವೀಕಾರ ಮಾಡಿದ ಅಗ್ನಿಗೆ ಪರಮ-ತೃಪ್ತಿಯೇ ಉಂಟಾಯಿತು. ಆ ಬಳಿಕೆ ಮತ್ತಿನ್ನಾರು ಅರ್ಪಿಸುವ ಹವಿಸ್ಸನ್ನೂ ಸ್ವೀಕರಿಸುವ ಇಚ್ಛೆಯಾಗಲಿಲ್ಲ. ಮೈಬಿಳಿಚಿಕೊಂಡಂತಾಗಿ, ಬಾಡಿಹೋಗಿ ಹಿಂದಿನ ಪ್ರಕಾಶವೇ ಹೊರಟುಹೋಯಿತು.

ಭಗವಂತನಾದ ವಹ್ನಿಗೇ ಹೀಗೆ ವಿಕಾರವೇರ್ಪಟ್ಟಿತು. ತೇಜೋ-ಹೀನನಾದನು, ಅಗ್ನಿ. ಬಹಳ ಗ್ಲಾನಿಯೂ, ಎಂದರೆ ಆಯಾಸವೂ, ಆಯಿತು, ಅವನಿಗೆ. ತಾನು ನಿಸ್ತೇಜನಾಗಿರುವುದು ಅಗ್ನಿಗೆ ಗೊತ್ತಾಯಿತು.

ಆ ಕಾರಣ ಆತನು ಬ್ರಹ್ಮನ ಪುಣ್ಯ-ಧಾಮಕ್ಕೆ ಹೋದನು. ಅಲ್ಲಿ ಆಸೀನನಾಗಿದ್ದ, ಎಂದರೆ ಕುಳಿತಿದ್ದ, ಬ್ರಹ್ಮನ ಬಳಿ ಈ ಮಾತನ್ನು ಹೇಳಿದನು:

"ಪೂಜ್ಯನೇ, ಶ್ವೇತಕಿ-ಮಹಾರಾಜನು ತನ್ನ ಯಜ್ಞದಿಂದ ನನಗೆ ಬಹಳವೇ ಸಂತೋಷವನ್ನುಂಟುಮಾಡಿದ್ದಾನೆ. ಆದರೆ ಅದರಿಂದಾಗಿ ನನಗೆ ತೀವ್ರವಾದ ಅರುಚಿಯುಂಟಾಗಿಬಿಟ್ಟಿದೆ. ನನ್ನ ತೇಜಸ್ಸೂ ಬಲವೂ ಕ್ಷೀಣವಾಗಿವೆ. ನಿನ್ನ ಅನುಗ್ರಹದಿಂದ ನಾನು ಹಿಂದಿನ ದೃಢತೆಯನ್ನು ಅಪೇಕ್ಷಿಸುತ್ತಿದ್ದೇನೆ."

ಅಗ್ನಿಯು ಹೀಗೆ ಹೇಳಲು, ಮುಗುಳ್ನಗೆ ನಗುತ್ತಾ ಬ್ರಹ್ಮನು ಹೇಳಿದನು: "ಹನ್ನೆರಡು ವರ್ಷಗಳ ಕಾಲ "ವಸೋರ್ಧಾರಾ" ಎಂಬ ಹವಿಸ್ಸನ್ನು ಸೇವಿಸಿರುವೆ. ಅದಕ್ಕೇ ಈ ಶ್ರಮವಾಗಿದೆ. ತೇಜೋಹೀನನಾಗಿರುವೆ ಎಂಬ ಕಾರಣಕ್ಕೇ ನೀನು ಖೇದಗೊಳ್ಳಬೇಕಾಗಿಲ್ಲ. ನೀನು ಮತ್ತೆ ಹಿಂದಿನಂತೆಯೇ ಆಗುವೆ. ನಾನು ನಿನ್ನ ಅರುಚಿಯನ್ನು ಕಾಲ ಕಾದು ಹೋಗಲಾಡಿಸುವೆ.

ಹಿಂದೆ ದೇವತೆಗಳ ಆದೇಶದಂತೆ ನೀನು ದೈತ್ಯರ ನೆಲೆಯೆನಿಸಿದ್ದ ಘೋರವಾದ ಖಾಂಡವ-ವನವನ್ನು ಭಸ್ಮ ಮಾಡಿದ್ದೆಯಲ್ಲವೇ? ಈಗ ಅಲ್ಲಿ ಎಲ್ಲ ಪ್ರಾಣಿಗಳೂ ನಿವಾಸ ಮಾಡುತ್ತಿವೆ, ಅಗ್ನಿಯೇ. ಅವುಗಳ ಮೇದಸ್ಸಿನಿಂದ ತೃಪ್ತನಾಗಿ ನೀನು ಸ್ವಸ್ಥನಾಗುವೆ. ಆ ವನವನ್ನು ಸುಡಲು ಬೇಗನೆ ಹೊರಡು. ನಿನ್ನ ಈ ಬಾಡುವಿಕೆಯಿಂದ ಬಿಡುಗಡೆ ಹೊಂದುವೆ." ಬ್ರಹ್ಮನ ಬಾಯಿಂದ ಬಂದ ಈ ಮಾತನ್ನು ಕೇಳಿದ ಅಗ್ನಿದೇವನು ಬಹಳವೇ ವೇಗದಿಂದ ಅಲ್ಲಿಗೆ ಓಡಿದನು.

ಖಾಂಡವಕ್ಕೆ ಬಂದನು. ವಾಯುವಿನ ಸಹಾಯವನ್ನೂ ಪಡೆದುಕೊಂಡು, ಒಡನೆಯೇ ಕ್ರೋಧಾವೇಶದಿಂದ ಜ್ವಲಿಸಿದನು. ಖಾಂಡವವು ಉರಿಯುತ್ತಿದ್ದುದನ್ನು ಅಲ್ಲಿ ವಾಸಮಾಡುತ್ತಿದ್ದ ಪ್ರಾಣಿಗಳು ಕಂಡವು.ಬೆಂಕಿಯನ್ನು ತಣಿಸಲು ಮಹಾಯತ್ನವನ್ನು ಮಾಡಿದವು.

ಸೂಚನೆ : 12/1/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


ವ್ಯಾಸ ವೀಕ್ಷಿತ 120 (Vyaasa Vikshita 120)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಅಗ್ನಿಯು ಮಾಡಿದ ವರುಣನ ಆವಾಹನೆ


ಖಾಂಡವವನ್ನು ಸುಡಲು ಅಗ್ನಿಯು ಯತ್ನಿಸಿದನಷ್ಟೆ. ಆದರೆ ಕೆರಳಿದ ನೂರಾರು ಸಾವಿರಾರು ಆನೆಗಳು ತಮ್ಮ ಸೊಂಡಿಲುಗಳಿಂದ ನೀರನ್ನು ಬೇಗನೆ ತಂದು ಸಿಂಪಡಿಸಿದುವು. ಹಾಗೆಯೇ ಕೋಪಗೊಂಡ ಬಹು-ಶೀರ್ಷಗಳುಳ್ಳ ನಾಗಗಳೂ ಜಲಧಾರೆಯನ್ನು ತಮ್ಮ ಶಿರಸ್ಸಿನಿಂದ ತಂದು ಎರಚಿದವು. ಹಾಗೆಯೇ ಇತರ ಪ್ರಾಣಿಗಳೂ ತಮ್ಮ ತಮ್ಮ ಪ್ರಹಾರ-ಪ್ರಯತ್ನಗಳಿಂದ ಬೇಗನೆಯೇ ಬೆಂಕಿಯನ್ನು ತಣಿಸಿಬಿಟ್ಟವು. ಅಗ್ನಿಯಾದರೂ ಮತ್ತೆ ಮತ್ತೆ ಪ್ರಜ್ವಲಿಸಿದನು. ಆದರೆ ಏಳು ಬಾರಿ ಹೀಗೆ ಪ್ರಯತ್ನಿಸಿ ಕೊನೆಗೆ ಖಾಂಡವದಲ್ಲಿ ಶಾಂತನಾಗಿಹೋದನು.


ಅಗ್ನಿಗೆ ನಿರಾಸೆಯಾಯಿತು. ನಿರಂತರ ಖೇದದಿಂದ ಕೂಡಿದವನಾಗಿ, ಕ್ರೋಧದೊಂದಿಗೆ ಬ್ರಹ್ಮನ ಬಳಿ ಸಾಗಿದನು. ಯಥೋಚಿತವಾಗಿ ಎಲ್ಲವನ್ನೂ ಬ್ರಹ್ಮನಿಗೆ ಅರುಹಿದನು. ಕ್ಷಣಕಾಲ ಯೋಚನೆ ಮಾಡಿ ಬ್ರಹ್ಮನು ಆತನಿಗೆ ಹೇಳಿದನು:


"ನೀನು ಆ ಖಾಂಡವವನ್ನು ಹೇಗೆ ದಹಿಸಬಹುದೆಂಬುದಕ್ಕೆ ಉಪಾಯವೊಂದು ನನಗೆ ಹೊಳೆದಿದೆ. ಕೆಲ ಕಾಲ ಸಹಿಸಿಕೋ. ಆಮೇಲದನ್ನು ಸುಡುವಿಯಂತೆ. ನರ-ನಾರಾಯಣರು ನಿನಗೆ ಮುಂದೆ ಸಹಾಯಕರಾಗುವರು. ಅವರೊಡಗೂಡಿ ನೀನು ಆ ಕಾಡನ್ನು ದಹಿಸುವೆ." ಅಗ್ನಿಯೂ, ಹಾಗೇ ಆಗಲಿ, ಎಂದನು.


ಸಾಕಷ್ಟು ಕಾಲ ಕಳೆದಿರಲು, ನರ-ನಾರಾಯಣರು ಜನ್ಮತಾಳಿದ್ದಾರೆಂಬುದು ಅಗ್ನಿಗೆ ವಿದಿತವಾಯಿತು. ಬ್ರಹ್ಮನ ಆ ಮಾತನ್ನು ಸ್ಮರಿಸಿದ ಅಗ್ನಿಯು ಮತ್ತೆ ಬ್ರಹ್ಮನ ಬಳಿ ಸಾಗಿದನು. ಆಗ ಬ್ರಹ್ಮನು ಹೇಳಿದನು:


"ಅಗ್ನಿಯೇ, ಖಾಂಡವ-ವನವನ್ನು ನೀನೀಗ ದಹಿಸುವೆ - ಇಂದ್ರನೇ ನೋಡುತ್ತಿರುವಂತೆಯೇ! ಮೂಲತಃ ದೇವತೆಗಳೇ ಆದ ನರ-ನಾರಾಯಣರು ದೇವ-ಕಾರ್ಯಕ್ಕಾಗಿ ಈಗ ಮನುಷ್ಯ-ಲೋಕಕ್ಕೆ ಬಂದಿರುವರು, ಓ ಅಗ್ನಿಯೇ! ಲೋಕವು ಅವರನ್ನು ಅರ್ಜುನ ಹಾಗೂ ವಾಸುದೇವ - ಎಂಬುದಾಗಿ ತಿಳಿದಿದೆ. ಅವರಿಬ್ಬರು ಇದೀಗ ಖಾಂಡವ-ವನದ ಬಳಿ ಇರುವರು. ಖಾಂಡವ-ದಹನಕ್ಕಾಗಿ ನೀನು ಅವರ ಸಹಾಯವನ್ನು ಯಾಚಿಸು. ಖಾಂಡವಕ್ಕೆ ದೇವತೆಗಳ ರಕ್ಷೆಯಿದ್ದರೂ ನೀನು ಅದನ್ನು ಸುಡಬಲ್ಲವನಾಗುವೆ. ಆ ಪಾರ್ಥ-ವಾಸುದೇವರು ಪ್ರಾಣಿಗಳೆಲ್ಲವನ್ನೂ ಪ್ರಯತ್ನ-ಪೂರ್ವಕವಾಗಿ ತಡೆಹಿಡಿದುಬಿಡುವರು. ಇಂದ್ರನನ್ನೂ ಸಹ ಅವರು ತಡೆಯತಕ್ಕವರು. ನನಗದರಲ್ಲಿ ಸಂಶಯವಿಲ್ಲ."


ಈ ಮಾತನ್ನು ಕೇಳಿದ ಅಗ್ನಿಯು ತ್ವರಿತವಾಗಿ ಕೃಷ್ಣ-ಪಾರ್ಥರ ಬಳಿಗೆ ಬಂದು ಬೇಡಿಕೊಂಡನು. ಇಂದ್ರನಿಗೆ ಅದು ಇಷ್ಟವಿಲ್ಲದಿದ್ದರೂ ಸಹ, ಖಾಂಡವವನ್ನು ಸುಡುವವನಾಗಿದ್ದ ಅಗ್ನಿ-ದೇವನಿಗೆ ಅರ್ಜುನನು ಆ ಸಮಯಕ್ಕೆ ಸರಿಯಾದ ಮಾತನ್ನು ಹೇಳಿದನು:


"ಅಯ್ಯಾ ಅಗ್ನಿಯೇ, ನನ್ನಲ್ಲಿ ದಿವ್ಯವೂ ಉತ್ತಮವೂ ಆದ ಅಸ್ತ್ರಗಳು ಹಲವು ಇವೆ. ಅದರಿಂದಾಗಿ ಹಲವರು ವಜ್ರಧಾರಿಗಳನ್ನು ನಾನೆದುರಿಸಬಲ್ಲೆ. ಆದರೆ ನನ್ನ ಬಳಿ, ನನ್ನ ಬಾಹುಬಲಕ್ಕೆ ಸರಿತೂಗುವ ಧನುಸ್ಸಿಲ್ಲ. ಯುದ್ಧದಲ್ಲಿ ನನ್ನ ವೇಗವನ್ನು ಸಹಿಸುವಂತಹ ಒಂದು ಬಿಲ್ಲಿರಬೇಕಲ್ಲವೇ? ಜೊತೆಗೆ ಬಾಣಗಳನ್ನು ನಾನು ಕ್ಷಿಪ್ರವಾಗಿ ಬಿಡುತ್ತಿರಬೇಕಲ್ಲವೆ? ಅದಕ್ಕಾಗಿ ಅಕ್ಷಯವಾದ ಬಾಣಗಳೂ ಅವಶ್ಯ. ನಾ ಬಯಸುವ ಅಷ್ಟೊಂದು ಶರಗಳನ್ನು ಹೊರತಕ್ಕ ರಥವೂ ಕೂಡ ನನ್ನ ಬಳಿಯಿಲ್ಲವಲ್ಲಾ?


ಹೀಗಾಗಿ ನನಗೆ ವಾಯು-ವೇಗವುಳ ಶ್ವೇತ-ವರ್ಣದ ದಿವ್ಯಾಶ್ವಗಳು ಬೇಕು, ಸೂರ್ಯ-ಸಮವಾದ ತೇಜಸ್ಸುಳ್ಳ ಹಾಗೂ ಮೇಘದಂತೆ ಗಂಭೀರವಾದ ಸ್ವನವುಳ್ಳ ರಥವೂ ಬೇಕು.

ಹಾಗೆಯೇ, ನಾಗಗಳನ್ನೂ ನಿಶಾಚರರನ್ನೂ ರಣದಲ್ಲಿ ಸಂಹರಿಸಲೋಸುಗ, ಶ್ರೀಕೃಷ್ಣನಿಗೂ ಆತನ ವೀರ್ಯಕ್ಕೆ ಸಮವೆನಿಸುವ ಆಯುಧವೂ ಬೇಕಾಗಿದೆ.


ಸೂಚನೆ : 19
/1/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ ಮೊದಲ ಮಾತು ( Prasnottara Ratnamalike 1)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)





ಶ್ರೀ ಶಂಕರ ಭಗವತ್ಪಾದರು ಮನುಕುಲದ ಉದ್ಧಾರಕ್ಕಾಗಿ ಅನೇಕ ಸ್ತೋತ್ರಗಳನ್ನು ರಚಿಸಿದ್ದಾರೆ. ಸಾಮಾನ್ಯವಾಗಿ ಸ್ತೋತ್ರಗಳು ಎಂದರೆ ಯಾವುದೋ ಒಂದು ದೇವತೆಯನ್ನು ಉದ್ದೇಶವಾಗಿ ಇಟ್ಟುಕೊಂಡು, ಅದರ ಗುಣವಿಶೇಷವನ್ನು ವರ್ಣಿಸುವಂಥದ್ದು. ಇಲ್ಲಿ ಶ್ರೀ ಶಂಕರಾಚಾರ್ಯರು ರಚಿಸಿರುವ ಒಂದು ವಿಶಿಷ್ಟವಾಗಿರುವ ಸ್ತೋತ್ರ 'ಪ್ರಶ್ನೋತ್ತರ ರತ್ನಮಾಲಿಕಾ' ಎಂಬುದಾಗಿದೆ. ಇಲ್ಲಿ ಪ್ರಶ್ನೆಗಳಿಗೆ ಉತ್ತರಿಸುವ ರೀತಿಯಲ್ಲಿ ಸ್ತೋತ್ರಗಳನ್ನು ಹೇಳಲಾಗಿದೆ. ಇಲ್ಲಿ ಯಾವುದೇ ದೇವಾತಾಪರವಾದ ಸ್ತುತಿ ಇಲ್ಲ. ಆದರೆ  ಪ್ರಪಂಚದಲ್ಲಿರುವ ಅನೇಕ ವಿಷಯಗಳ ಬಗ್ಗೆ ಮಾಹಿತಿ ಇದೆ. ಅಂತಹ ಅತ್ಯಪೂರ್ವ ವಿಷಯಗಳ ಮಹತ್ವವನ್ನು ಸಾರಲು, ಅವುಗಳಲ್ಲಿರುವ ತತ್ತ್ವವನ್ನು ಸಾರಲು ಇಲ್ಲಿ ಪ್ರಶ್ನೋತ್ತರದ ರೂಪವನ್ನು ಸ್ವೀಕರಿಸಲಾಗಿದೆ. ಉದಾಹರಣೆಗೆ - ಯಾರು ಗುರು? ಎಂಬುದಾಗಿ ಪ್ರಶ್ನಿಸಿ, ಯಾರು ಅಧಿಗತ ತತ್ತ್ವನೋ, ಶಿಷ್ಯನ ಹಿತಕ್ಕೋಸ್ಕರ ಪ್ರತಿನಿತ್ಯವೂ ಯಾರು ಉದ್ಯಮಶೀಲನೋ ಅವನನ್ನು ' ಗುರು ' ಎಂಬುದಾಗಿ ಕರೆಯಬೇಕು ಎಂಬ ಉತ್ತರವನ್ನು ನೀಡಿದ್ದನ್ನು ನಾವು ಕಾಣಬಹುದು. ಇದೇ ರೀತಿಯಾಗಿ ಅನೇಕ ಧಾರ್ಮಿಕವಾದ ವಿಚಾರಗಳನ್ನು ಒಳಗೂಡಿಸಿ ಈ ಪ್ರಶ್ನೋತ್ತರರೂಪದಲ್ಲಿ ಅಳವಡಿಸಲಾಗಿದೆ. 


ಹಾಗಾಗಿ ಓದುಗರ ಮುಂದೆ  ಶಂಕರರ ವಿಚಾರವನ್ನು ಶ್ರೀರಂಗ ಮಹಾಗುರುಗಳ ವಿಶೇಷ ನೋಟದೊಂದಿಗೆ  ಪ್ರಸ್ತುತಪಡಿಸಬೇಕು ಎಂಬ ಉದ್ದೇಶದಿಂದ ಈ ಪ್ರಶ್ನೋತ್ತರ ರತ್ನಮಾಲಿಕೆ ಎಂಬ ಲೇಖನ ಸರಣಿಯನ್ನು ಆಯ್ದುಕೊಳ್ಳುವ ಮನಸ್ಸನ್ನು ಮಾಡಿದ್ದೇನೆ. ಇದು ಕಾಲಾತೀತವಾಗಿ ಆಬಾಲ ವೃದ್ಧರಿಗೂ ಬರುವ ಸಂಶಯಗುಚ್ಚವಾಗಿದೆ! ಸಮಗ್ರ ಉತ್ತರವು ಇಂದಿಗೂ ಅಳವಡಿಸಿಕೊಳ್ಳಬಹುದಾಗಿದೆ. ಹಾಗಾಗಿ ಇಂತಹ ವಿಷಯಗಳಿಂದ ಪರಿಕಲ್ಪಿತವಾದ ಈ ಸ್ತೋತ್ರಪುಷ್ಪವನ್ನು ಸಮರ್ಪಿಸುವವನಾಗಿದ್ದೇನೆ.


ಮಾನವನು ತನ್ನ ಜೀವಿತವನ್ನು ಇತರ ಪ್ರಾಣಿಗಳಂತೆ ಮಾಡಬಾರದು.  ಜೀವಿತಾವಧಿಯಲ್ಲಿ ವಿವೇಕವನ್ನು ಪಡೆದುಕೊಳ್ಳಬೇಕು. ಅದಕ್ಕಾಗಿ ನಮ್ಮ ಸುತಮುತ್ತಲಿನ ವಿಷಯ ಅರಿವು ಅತ್ಯಗತ್ಯ. ಅದು ಸಜ್ಜನರ ಸಂಸರ್ಗದಿಂದ ಮತ್ತು ವೇದ ಶಾಸ್ತ್ರ ಮೊದಲಾದ ವಿದ್ಯೆಗಳ ಅಧ್ಯಯನದಿಂದ ಲಭ್ಯವಾಗುತ್ತದೆ. ಎಲ್ಲಾ ವೇದ ಅಥವಾ ಶಾಸ್ತ್ರಾದಿ ವಿದ್ಯೆಗಳನ್ನು ಅರಿತುಕೊಂಡೇ ಜೀವಿತವನ್ನು ಧನ್ಯವಾಗಿ ಮಾಡಿಕೊಳ್ಳಬೇಕಾದ ಅನಿವಾರ್ಯವಿಲ್ಲ. ಆದರೆ ಯಾರು ಇಂತಹ ವಿಷಯವನ್ನು ತಮ್ಮ ತಪಸ್ಸು ಸಾಧನಗಳಿಂದ ಸೃಷ್ಟಿಯಲ್ಲಿ ಇರುವ ಪ್ರತಿಯೊಂದು ವಿಷಯ ಮತ್ತು ಅವುಗಳಿಗಿರುವ ಸಂಬಂಧ ಮತ್ತು ಪ್ರಯೋಜನವನ್ನು ಸಮಗ್ರವಾಗಿ ತಿಳಿದಿರುತ್ತಾರೋ ಅವರ ಅನುಭದ ಸಾರವನ್ನು ತಿಳಿದರೂ ಸಾಕು. ಅಂತಹ ಅನುಭವದ ಸಾರರೂಪವಾದ ಮಾತನ್ನೇ ಜೋಡಿಸಿ ಸ್ತೋತ್ರರತ್ನವಾಗಿಸಿ ನಮಗೆ ಶ್ರೀಂಕರಭಗವತ್ಪಾದರು ಅನುಗ್ರಹಿಸಿರುತ್ತಾರೆ. ಹಾಗಾಗಿ ಇಂತಹ ವಿಷಯಗಳ ತಾತ್ತ್ವಿಕಸ್ವರೂಪವನ್ನು ಅರಿಯಲು ನಾವು ಅಷ್ಟು ಶ್ರಮಪಡುವ ಅವಶ್ಯಕತೆಯೂ ಇರುವುದಿಲ್ಲ. ಅದನ್ನು ಈ ಸ್ತೋತ್ರದಲ್ಲಿ ಕಾಣಬಹುದು. ಅಂತಹ ವಿಷಯವನ್ನೇ ಆಯ್ದುಕೊಂಡು ನನ್ನ ಬುದ್ಧಿಗೆ ಸೀಮಿತವಾಗಿ ವಿವರಿಸಲು ಪ್ರಯತ್ನಪಡುತ್ತಿದ್ದೇನೆ. ನನ್ನ ಬುದ್ಧಿಗೆ ಸಂಸ್ಕಾರವನ್ನು ಕೊಟ್ಟು ಈ ವಿಷಯವನ್ನು ಅರ್ಥಮಾಡಿಕೊಳ್ಳಲು ಶ್ರೀರಂಗ ಮಹಾಗುರುಗಳ ಅನುಗ್ರಹದ  ಬಲದ ಮೇಲೆ ನಾನು ಇಂತಹ ಗಹನವಾದ ವಿಷಯಗಳನ್ನು ವಿವರಿಸುವ ಸಾಹಸೀಪ್ರವೃತ್ತಿಯನ್ನು ಮಾಡುತ್ತಿದ್ದೇನೆ.


ಸೂಚನೆ : 19/1/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 47 ಕೃಷ್ಣ-ಕಟಾಕ್ಷ-ಸೌಂದರ್ಯ, ವೇಣು-ನಾದ-ಮಾಧುರ್ಯ (Krishakarnamrta 47)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಕದಾ ವಾ ಕಾಲಿಂದೀ

ನಮಗೆ ತುಂಬ ಇಷ್ಟರಾದವರನ್ನು ಕಾಣಬೇಕೆಂಬ, ಮತ್ತೆ ಮತ್ತೆ ಕಾಣುತ್ತಿರಬೇಕೆಂಬ, ತವಕವು ಯಾರಿಗಿರದು? ನಮ್ಮ ಆದರಕ್ಕೆ ಪಾತ್ರರಾದವರನ್ನು ಕಂಡರೆ ಸಂತೋಷವಾಗುವುದು. ಆದರೆ ಅವರು ನಮ್ಮತ್ತ ದೃಷ್ಟಿಬೀರಿದರೆಂದರೆ  ಮತ್ತೂ ಹೆಚ್ಚು ಸಂತೋಷವೇ. ಕೃಷ್ಣನನ್ನು ಕುರಿತಾಗಿ ಇಂತಹ ಹಂಬಲ ಲೀಲಾಶುಕನದು. 

ಕೃಷ್ಣನು ಕಟಾಕ್ಷ ಬೀರಿದನೆಂದಷ್ಟೇ ಆದರೂ ಸಾಲದು.  ನಮ್ಮತ್ತ ಆತನು ಹಾಗೆ ದೃಷ್ಟಿಹಾಯಿಸಿದುದು ನಮಗೆ ಗೊತ್ತಾಗಬೇಕು. ಅದೂ ನಾವೇ ಕಣ್ಣಾರ ಕಂಡು ಗೊತ್ತಾಗಬೇಕು. ಅರ್ಥಾತ್, ಕೃಷ್ಣನೇ ಎದುರಿಗೆ ತೋರಬೇಕು, ಆತನ ಕಟಾಕ್ಷಗಳು ತನ್ನ ದೃಷ್ಟಿಗೆ ಗೋಚರವಾಗಬೇಕು - ಎಂಬುದೇ ಭಕ್ತ-ಲೀಲಾಶುಕನ ಹಂಬಲಿಕೆಯಾಗಿದೆ. ಎಂದು ಕಂಡೇನೋ ಆತನನ್ನು? - ಎಂದು ತನ್ನ ಹಾರ್ದವಾದ ಅಭಿಲಾಷವನ್ನು ತೋಡಿಕೊಳ್ಳುತ್ತಿದ್ದಾನೆ.

ಎಂತಹವು ಕೃಷ್ಣನ ಕಟಾಕ್ಷಗಳು? ಕೃಷ್ಣನೇ ಕಪ್ಪು; ಆತನ ಕಣ್ಗುಡ್ಡೆಯು ಮತ್ತೂ ಕಪ್ಪಾಗಿರಬೇಕಷ್ಟೆ. ಕಪ್ಪೆಂದ ಕೂಡಲೇ ಕೃಷ್ಣನಿಗೆ ಸಂಬಂಧಿಸಿದ ಕಪ್ಪೆಂದರೆ ಸ್ಮರಣೆಗೆ ಬರುವುದು, ಯಮುನೆಯ ಕಪ್ಪೇ.

ವೇದಗಳಲ್ಲಿ ಸಹ ಗಂಗೆ-ಯಮುನೆಯರನ್ನು ಸಿತಸರಿತ್-ಅಸಿತಸರಿತ್ ಎಂದಿದೆ. ಸಿತವೆಂದರೆ ಬೆಳ್ಳಗಿರುವುದು. ಅಸಿತ-ಸರಿತ್ ಎಂದರೆ ಕಪ್ಪುಬಣ್ಣದ ನದಿ, ಅರ್ಥಾತ್ ಯಮುನೆ. ಇಂದೂ ಸಹ ತ್ರಿವೇಣೀ-ಸಂಗಮದಲ್ಲಿ ಈ ಎರಡು ವರ್ಣದ ಪ್ರವಾಹಗಳು ಗೋಚರವಾಗುತ್ತವೆ. ಕಾಲ-ವರ್ಣದ ಯಮುನೆಗೆ ಇನ್ನೊಂದು ಹೆಸರೇ ಕಾಲಿಂದೀ.

ಶ್ಯಾಮಲ-ವರ್ಣಕ್ಕೇ ಹೆಸರಾದ ಮತ್ತೊಂದು ವಸ್ತುವೆಂದರೆ ಕನ್ನೈದಿಲೆ (ಕುವಲಯ). ಹೀಗೆ ಕಾಲಿಂದಿಯಂತೆಯೂ ಕುವಲಯದ ದಳಗಳಂತೆಯೂ ಕಪ್ಪಗಿರುವುವು ಶ್ರೀಕೃಷ್ಣನ ಕಣ್ಗುಡ್ಡೆಗಳು, ಅರ್ಥಾತ್ ಕಟಾಕ್ಷಗಳು.

"ಕಾಲಿಂದಿಯಲ್ಲಿರುವ ಕುವಲಯದಳಗಳಂತೆ" - ಎಂದೂ ಅರ್ಥಮಾಡಬಹುದು. ಅಂತೆಯೇನು? ಕಾಲಿಂದಿಯ ಕುವಲಯಗಳಿಗಿಂತಲೂ ಮಿಗಿಲಾಗಿ  ಕಪ್ಪಗಿರುವುವು ಅವು - ಎಂದೂ ಅರ್ಥವು ಶಕ್ಯ! ಒಂದರ್ಥದಲ್ಲಿ, ಕೃಷ್ಣನನ್ನೇ ಕಾಲಿಂದಿಯೆಂದುಕೊಂಡರೆ, ಅವನ ಕಟಾಕ್ಷಗಳೇ ಅಲ್ಲಿಯ ಕುವಲಯಗಳು!

ಕಣ್ಮನಸ್ಸುಗಳನ್ನು ಸೆಳೆಯುವ ಆ ಕಟಾಕ್ಷಗಳಲ್ಲಿ ಮತ್ತೆರಡು ವಿಶೇಷಗಳೂ ಇವೆ. ಅವುಗಳು ತರಲ, ಎಂದರೆ ಚಂಚಲ; ಎಂದೇ ಆಕರ್ಷಕವೂ. ಅಲೆಗಳ ಪ್ರಭಾವದಿಂದಾಗಿ ಯಮುನಾ-ಕುವಲಯಗಳೂ ಚಂಚಲವಲ್ಲವೇ? ಎರಡನೆಯದಾಗಿ, ಹೀಗೆಂದು ಹೇಳಲಾಗದ ಕರುಣಾ-ಲಹರಿಯಿಂದ ಅವು ವ್ಯಾಪ್ತವಾಗಿವೆ.

ಕೃಷ್ಣನನ್ನು ಎದುರಿಗೇ ಕಾಣುವಷ್ಟು ಭಾಗ್ಯವಿಲ್ಲವೆನ್ನುವುದಾದರೆ, ಸ್ವಲ್ಪ-ದೂರದಿಂದಲೇ ಅದಾಗುವುದಾದರೂ ಅದೂ ಭಾಗ್ಯವೇ: ಕಣ್ಣಿಗಲ್ಲದಿದ್ದರೆ ಕಿವಿಗಾದರೂ ಬೀಳಬಹುದಲ್ಲಾ, ಆತನ ಮುರಳಿಯ ಕೇಲಿ-ನಿನದಗಳು? ಕೇಲಿಯೆಂದರೆ ಕ್ರೀಡೆ. ನಿನದವೆಂದರೆ ನಾದವೇ.

 ವೇಣು-ವಾದನದಲ್ಲಿ ಎಲ್ಲೆಯಿಲ್ಲದ ಸಾಮರ್ಥ್ಯವುಳ್ಳವನು, ಆತನು:  ಅಪ್ರಯತ್ನವಾಗಿ ಆಟಕ್ಕೆಂದು ವಾದನಮಾಡಿದರೂ ಸಾಕು, ಅದರ ಮಹತ್ತ್ವ-ಪ್ರಭಾವಗಳು ಏನೂ ಊನವಾಗವು. ಕಲೆಯು ಒಲಿದುಬಿಟ್ಟಿದ್ದರೆ, ಯತ್ನವಿಲ್ಲದೆಯೇ ಅದರಲ್ಲಿ ಮಾಧುರ್ಯವೂ ತಾರಕತ್ವವೂ ಮೂಡಿರುವುವಲ್ಲವೇ?

ಅತ್ಯಂತಪಟುವಾದ ಚಿತ್ರಕಾರನು ಒಮ್ಮೊಮ್ಮೆ ಹರಟುತ್ತ  ಗೀಚಿದರೂ ಒಳ್ಳೆಯ ಚಿತ್ರವೇ ಮೂಡುವುದುಂಟಲ್ಲವೇ? ಸರ್ಕಸ್ಸಿನಲ್ಲಿ ಪಳಗಿರುವವರು ಅದೆಷ್ಟು ಸರಳವೆಂಬಂತೆ ಮಾಡುವ ಮಹಾದ್ಭುತಗಳು ಮೆಚ್ಚುಗೆಯನ್ನೂ ಅಚ್ಚರಿಯನ್ನೂ ನೋಡುಗರಲ್ಲಿ ಮೂಡಿಸುವುವಲ್ಲವೇ? ಹಾಗೆಯೇ, ಇಂತಿಂತಹ ರಾಗ-ತಾಳಗಳೊಂದಿಗೆ ಈ ಭಾವವನ್ನು ತರಬೇಕೆಂಬ ಲೆಕ್ಕಾಚಾರಗಳೇ ಇಲ್ಲದೆಯೇ, ಸುಮ್ಮನೆಯ ಕೊಳಲೊಳ-ಹೊರಗುಗಳಲ್ಲಿನ ಉಸಿರಾಟ-ಬೆರಳಾಟಗಳಿಂದ ಇಲ್ಲಿ ಹೊಮ್ಮುವ ನಾದವೂ ಉತ್ಕೃಷ್ಟವಾದದ್ದೇ. ಕಟಾಕ್ಷಗಳನ್ನು ಅತ್ತಿತ್ತ ಬೀರುತ್ತ ನುಡಿಸುತ್ತಲಿರುವ ಈ ವೈಣವಿಕನ, ಎಂದರೆ ಕೊಳಲುಗಾರನ,  ಗಾನ-ವೈಖರಿಯ ಪ್ರಶಂಸನೀಯ-ವೈಭವವನ್ನು ವರ್ಣಿಸಲಾದೀತೇ?

ಯಾವುದನ್ನು 'ಇದು ಹೀಗೆ' ಎಂದು ಬಿಡಿಸಿಹೇಳಬಲ್ಲೆವೋ ಅದು ನಿರ್ವಚನೀಯವೆನಿಸಿಕೊಳ್ಳುತ್ತದೆ. ಯಾವುದು ಅನಿರ್ವಚನೀಯವೋ ಅದನ್ನು ಹೇಳಲು "ಕೋಽಪಿ/ಕಾಪಿ/ಕಿಮಪಿ"ಗಳನ್ನು ಬಳಸುತ್ತೇವೆ. ಎಂದರೆ "ಯಾವುದೋ ಒಂದು (ಅದ್ಭುತವಾದದ್ದು)", ಎಂದರೆ ಮಾತಿಗೆ ನಿಲುಕದ್ದು ಎಂದರ್ಥ. ಶ್ಲೋಕದ ಪೂರ್ವಾರ್ಧದಲ್ಲಿ ಕರುಣೆಯ ಬಗೆಗೆ "ಕಿಮಪಿ" ಹೇಳಿದ್ದರೆ, ಉತ್ತರಾರ್ಧದಲ್ಲಿ ಮುರಳೀನಿನಾದದಿಂದ ಉಂಟಾಗುವ ಅಂತಸ್-ತೋಷವನ್ನು ಅರ್ಥಾತ್ ಒಳಗಣ ಮುದವನ್ನು, "ಕಮಪಿ" ಎಂಬುದು ಹೇಳುತ್ತದೆ. ಮಿಕ್ಕ ಸಂತೋಷಗಳು ಬಾಹ್ಯವಾದವು, ಎಂದೇ ಮಿತವೂ ಹೌದು. ಆದರಿದು ಅಮಿತಾನಂದ-ಪ್ರದವಾದುದು.

ಏನೀ ವೇಣು-ಧ್ವನಿಯ ವಿಶೇಷ? ಅದು ತಂಪಂತೆ! ನಾದದಲ್ಲೂ ತಂಪಿರುವುದುಂಟೇ? ಎಷ್ಟು ತಂಪು, ಮತ್ತದರಿಂದೇನು? ಶಿವನು ಶಿರಸ್ಸಿನಲ್ಲಿ ಧರಿಸಿರುವ ಚಂದ್ರನೆಷ್ಟು ತಂಪೋ ಅಷ್ಟು ತಂಪು.

ನಮಗೆ ಗೊತ್ತಿರುವ ಚಂದ್ರನಿಗೆ ಏರಿಳಿತಗಳುಂಟು: ಶುಕ್ಲ-ಪಕ್ಷದಲ್ಲಿ ವೃದ್ಧಿ, ಕೃಷ್ಣ-ಪಕ್ಷದಲ್ಲಿ ಕ್ಷಯ. ಶಿವ-ಶಿರಸ್ಸಿನ ಚಂದ್ರನಿಗೆ ವೃದ್ಧಿ-ಕ್ಷಯಗಳಿಲ್ಲ.

ಸೂರ್ಯನು ತಾಪಕಾರಿಯಾದರೆ ಚಂದ್ರನು ತಾಪಹಾರಿ. ಚಂದ್ರನದು "ಬಾಡಿಗೆ ಬೆಳಕು", ಸೂರ್ಯನಿಂದ ಬಂದದ್ದರ ಪ್ರತಿಫಲನವಷ್ಟೆ. ಆದರೆ ಶಿವನ ತಲೆಯ ಮೇಲಿನ ಚಂದ್ರ ಸ್ವತಃ ಪ್ರಕಾಶಿಸುವವನು, ನಿತ್ಯ-ಶೀತಲ. ಆತನ ಸ್ಥಾನದ ಪ್ರಭಾವವೂ ಅಲ್ಲಿದೆ. ಶಿವನ ಜಟೆಯಲ್ಲಿಯೇ ಗಂಗೆಯುಂಟು. ಹಿಮಗಿರಿ-ತನಯೆಯಾದ ಗಂಗೆಯೇ ಶೀತಲೆ. ಇನ್ನು ಶಿವನ ತಲೆಯ ಮೇಲಿರುವವಳು ಮತ್ತೂ ತಂಪೇ. ಶಿವ-ಜಟೆಯ ನಡುವೆ ಹರಿಯುವ ಗಂಗೆಯ ಸಂಗವುಳ್ಳ ಚಂದ್ರನನ್ನು ಇಲ್ಲಿ ಜಟಾ-ಚಂದ್ರನೆಂದಿದೆ. ಆತನಿನ್ನೆಷ್ಟು ಶಿಶಿರ!

ಇಲ್ಲಿ ಮತ್ತೊಂದು ಧ್ವನಿಯೂ ಇದೆ. ನಾವೆಲ್ಲ ತಾಪಕ್ಕೆ ಒಳಗಾದವರು. ಕಾಮ-ಕ್ರೋಧಗಳು ತಾಪವಲ್ಲವೆ? ಲೋಭ-ಮೋಹ-ಮದ-ಮಾತ್ಸರ್ಯಗಳೂ ತಾಪವೇ. ಅವಾವುದರ ಸೋಂಕೂ ಇಲ್ಲದವ ಶಿವ. ಇಲ್ಲಿ ಹೇಳಿದ ಆರಕ್ಕೂ ಮೂಲ ಕಾಮವೇ ಸರಿ. ಅದನ್ನೇ ಗೆದ್ದವನಿಗೆ ಮಿಕ್ಕವೇನು ಲೆಕ್ಕವೇ? ಶಿವನು ಕಂದರ್ಪ-ಪ್ರತಿಭಟ. ಎಂದರೆ ಕಾಮನನ್ನೇ ಅಡಗಿಸಿದವ.  ಎಂದೇ ಉಳಿದವೂ ಆತನನ್ನು ಏನೂ ಮಾಡವು. ಎಂದೇ ಆತನ ತಂಪು ವಿಶಿಷ್ಟವಾದದ್ದು.

ಇಂತಹ ತಂಪಾದ ಪುರುಷನ ಶಿರಸ್ಸೂ ತಂಪೇ. ನಾವುಗಳಾದರೆ ಸಣ್ಣಸಣ್ಣದಕ್ಕೂ ತಲೆ ಕಾಯಿಸಿಕೊಳ್ಳತಕ್ಕವರು! ಶಿವನ ಜಟಾ-ಸ್ಥಾನವು ಸ್ವತಃ ತಂಪೇ. ಅಲ್ಲಿಯ ಗಂಗೆಯೂ ತಂಪೇ. ಇವೆರಡರಿಂದಲೂ ತನ್ನ ತಂಪನ್ನು ಹೆಚ್ಚಿಸಿಕೊಂಡವನೇ ಆ ಚಂದ್ರ. ಅಂತಹ ತಂಪನ್ನೇ, ಅಥವಾ ಅದಕ್ಕೂ ಮಿಗಿಲಾದ ತಂಪನ್ನೇ, ಸೂಸತಕ್ಕವು ಶ್ರೀಕೃಷ್ಣನ ಮಧುರ-ವೇಣುನಾದಗಳು!

ಹೀಗೆ ಶ್ಲೋಕದ ಪೂರ್ವಾರ್ಧವು ನಯನ-ಗೋಚರವಾಗುವಂತಹ ವಿಷಯವನ್ನು ಹೇಳಿದರೆ ಉತ್ತರಾರ್ಧವು ಶ್ರವಣ-ಗೋಚರವಾಗುವಂತಹುದನ್ನು ಹೇಳುತ್ತದೆ. ಅದನ್ನಾದರೂ ಎಂದು ಕಂಡೇನು, ಇದನ್ನಾದರೂ ಎಂದು ಕೇಳೀಯೇನು? - ಎಂಬುದನ್ನು ತೋರಿಸಲೆಂದೇ ಶ್ಲೋಕದ ಪೂರ್ವಾರ್ಧವೂ ಉತ್ತರಾರ್ಧವೂ "ಕದಾ ವಾ" ಎಂದೇ ಆರಂಭಗೊಂಡಿರುವುದು. ಕದಾ ಎಂದರೆ ಎಂದು ಎಂದು.

ಹೀಗೆ, ಯಮುನೆಯ ಕುವಲಯಗಳಂತೆ ಇರುವ, ಅಥವಾ ಅವನ್ನೇ ಮೀರಿಸಿರುವ, ಶೀತಲತೆಯು ಕಟಾಕ್ಷದಲ್ಲಿದೆ; ಜಟಾಧಾರಿಯಾದವನ ಚಂದ್ರನಂತೆ ಇರುವ, ಅಥವಾ ಅದನ್ನೂ ಮೀರಿಸಿರುವ, ತಂಪು ವೇಣುನಾದದಲ್ಲಿದೆ. ಹೀಗೆ ಕಣ್ಣಿಗೂ ಕಿವಿಗೂ ತಂಪನ್ನೆರೆಯುವುದರ ಅನುಭವಗಳು ನನಗೆ ಅದೆಂದು ಆಗುವುವೋ? - ಎಂದು ಎದುರುನೋಡುತ್ತಾ, ಅಭಿಲಷಿಸುವನು ನಮ್ಮ ಲೀಲಾಶುಕ.

ಹೇಗೆ ಶಿವ-ಶಿರೋ-ಜಟಾ-ವರ್ತಿಯಾದ ಚಂದ್ರನು ಕಲಾ-ಮಾತ್ರನಾಗಿದ್ದು ಸೂಕ್ಷ್ಮನಾಗಿರುವನೋ, ಹಾಗೆಯೇ ಕೃಷ್ಣ-ಮುರಲೀ-ಕೇಲಿ-ನಾದಗಳೂ ಸೂಕ್ಷ್ಮವಾದವೇ. ಹೀಗೆ ಭಗವದ್-ಯೋಗ-ಭಾವವನ್ನು ಸೂಚಿಸುವ ಸೂಕ್ಷ್ಮದೃಶ್ಯ-ಸೂಕ್ಷ್ಮನಾದಗಳೆರಡನ್ನೂ ಕವಿಯು ನಮ್ಮ ಮುಂದೆ ತಂದಿರಿಸಿದ್ದಾನೆ!

ಕಕಾರ-ಲಕಾರ-ಚಕಾರ-ಟಕಾರಗಳ ಅನುಪ್ರಾಸಗಳಿವೆ.

ಕದಾ ವಾ ಕಾಲಿಂದೀ-ಕುವಲಯ-ದಲ-ಶ್ಯಾಮಲತರಾಃ

ಕಟಾಕ್ಷಾ ಲಕ್ಷ್ಯಂತೇ ಕಿಮಪಿ ಕರುಣಾ-ವೀಚಿ-ನಿಚಿತಾಃ? |

ಕದಾ ವಾ ಕಂದರ್ಪ-ಪ್ರತಿಭಟ-ಜಟಾ-ಚಂದ್ರ-ಶಿಶಿರಾಃ

ಕಮಪ್ಯಂತಸ್ತೋಷಂ ದದತಿ ಮುರಲೀ-ಕೇಲಿ-ನಿನದಾಃ? ||

ಸೂಚನೆ : 18/1/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Monday, January 6, 2025

ಕೃಷ್ಣಕರ್ಣಾಮೃತ 45 ಅಮ್ಮನನ್ನೇ ಆಟವಾಡಿಸಿದ ಕಿಶೋರ (Krishakarnamrta 45)

 ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)

ಸಂಬಾಧೇ  ಸುರಭೀಣಾಮ್

ಬಾಲಕನನ್ನು ನಾನು ಅವಲಂಬಿಸುತ್ತೇನೆ, ಎನ್ನುತ್ತಾನೆ ಲೀಲಾಶುಕ. ಯಾರುಬಾಲಕ? ಮತ್ತಾರು, ನಮ್ಮ ಕೃಷ್ಣನೇ, ಬಾಲಕೃಷ್ಣನೇ. ಆದರೆ ಆತನ ಹೆಸರನ್ನು ಹೇಳುತ್ತಿಲ್ಲ, ನಮ್ಮ ಕವಿ. ಬದಲಾಗಿ ಆತನ ಕ್ರಿಯೆಯನ್ನು ಹೇಳುತ್ತಿದ್ದಾನೆ. ಅದಾದರೂ, ಎಲ್ಲ ಮಕ್ಕಳೂ ಮಾಡುವ ಕ್ರಿಯೆಯೇ, ಎಲ್ಲ ಚಿಣ್ಣರೂ ಆಡುವ ಆಟವೇ. ಆದರೂ ಅದರಲ್ಲಿ ವಿಶೇಷಗಳಿಲ್ಲದಿಲ್ಲ. 

ಏನು ಮಾಡುತ್ತಿದ್ದಾನೆ, ಈ ಬಾಲಕ? ಅಮ್ಮನನ್ನು ಆಯಾಸಪಡಿಸುತ್ತಿದ್ದಾನೆ. ಹೇಗೆ? ಆತ ಓಡುತ್ತಿದ್ದಾನೆ, ಅಮ್ಮ ಆತನನ್ನು ಅಟ್ಟಿಸಿಕೊಂಡು ಬರುತ್ತಿದ್ದಾಳೆ. ಅವನ ಹಿಂದೆ ಓಡಿ ಓಡಿ ದಣಿಯುವುದಷ್ಟೇ ಆಗುತ್ತಿದೆ, ಓಡುತ್ತಿರುವ ಬಾಲಕ ಮಾತ್ರ ಕೈಗೆ ಸಿಗುತ್ತಿಲ್ಲ. 

ಅವನ ಓಟವು ಏತಕ್ಕೆಎಂದು ಕೇಳುವುದಕ್ಕಿಂತ, ಎಲ್ಲಿ - ಎಂದು ಕೇಳಬಹುದು. ಓಡುತ್ತೋಡುತ್ತಾ ಮೈಯೆಲ್ಲಾ ಕೆಸರು ಮಾಡಿಕೊಂಡಿದ್ದಾನೆ, ಈ ಬಾಲ. ಏಕೆ? ಅವನು ಓಡುತ್ತಿರುವುದು ಸುರಭಿಗಳ ಸಂಬಾಧದಲ್ಲಿ, ಎಂದರೆ ಗೋವುಗಳ ಮಂದೆಯಲ್ಲಿ. ಅಲ್ಲಿರದೇ ಪಂಕ, ಕೆಸರು? ಅದು ಅಂಟಿದೆ. 

ಎಳಸಿನಿಂದಲೇ ಗೋ-ಪ್ರಿಯ, ನಮ್ಮ ಕೃಷ್ಣ: ಹಸುಗಳ ಸಂಗವೇ ಆತನಿಗೆ ಅಚ್ಚುಮೆಚ್ಚು. ಓಡುತ್ತೋಡುತ್ತ ಕೊಚ್ಚೆಯಲ್ಲಿ ಬಿದ್ದನೋ, ಸಗಣಿ ಹಾರಿಸಿಕೊಂಡನೋ, ಅಂತೂ ಮೈಯೆಲ್ಲಾ ಕೊಳೆ. ತನು-ವಿಲಗ್ನವೆಂದರೆ ತನುವಿಗೆ ವಿಲಗ್ನವಾಗಿರುವುದು, ಮೈಗೆ ಮೆತ್ತಿಕೊಂಡಿರುವುದು. ಜಂಬಾಲವೆಂದರೆ ಪಂಕ, ಕೆಸರುಜಂಬಾಲವಾಗಿದೆ ಮೈಯೆಲ್ಲಾ! ಮೈಗೆ ಬಟ್ಟೆಯನ್ನು ಸಹ ಹಾಕಿಕೊಂಡಿರುವನೋ ಇಲ್ಲವೋ! 

ಪುಟ್ಟ ಪುಟ್ಟ ಹೆಜ್ಜೆಗಳಾದರೂ ಪುಟಪುಟನೆ ಓಡುವ ಆತನನ್ನು, ಯಶೋದೆಯು ಅಟ್ಟಿಸಿಕೊಂಡುಬಂದಳಾದರೂ ಹಿಡಿಯಲಾದೀತೇ? ಗೋಸಮೂಹದಲ್ಲಿಯ ಸಂದಿಗೊಂದಿಗಳಲ್ಲಿ ಆತನ ಓಟ, ಧಾವಂತ. ಅಮ್ಮನ ಕೈಗೆ ಸಿಕ್ಕಬಾರದೆಂಬ ಆತಂಕ. ಆತಂಕವೆಂಬ ಆಟ. 

ಅಮ್ಮನಿಗೆ ಇಷ್ಟೊಂದು ಆಟವಾಡಿಸಿ ತ್ರಾಸಕೊಟ್ಟರೂ ಮುದ್ದೇ ನಮ್ಮ ಕೃಷ್ಣ. ಏಕೆ? ನೋಡಿದರೆ ದೃಷ್ಟಿಯಾಗುವಂತಿರುವ ಲಂಬಾಲಕ ಆತನದು. ಲಂಬವಾದ ಅಲಕ - ಅರ್ಥಾತ್ ನೀಳವಾದ ಮುಂಗುರುಳು. ಏನು ಮುಂಗುರುಳೆಂದರೆ? ಮುಂದೆ ಎಂದರೆ ಮುಖದ ಮುಂದೂ, ಲಂಬಿಸುವ ಕುರುಳು. ಕುರುಳೆಂದರೆ ಕೂದಲು. ಹೀಗೆ ಮುದ್ದಾದ ಉದ್ದವಾದ ಮುಂಗುರುಳುಗಳಿಂದ ಕಂಗೊಳಿಸುವ ಕಡುಮುದ್ದಿನ ಕೂಸೇಕೃಷ್ಣ. 

ಶ್ಲೋಕದಲ್ಲಿಯ ಅನುಪ್ರಾಸ ಆಸ್ವಾದ್ಯ: ಸಂಬಾಧ-ಅಂಬಾ-ಲಂಬಾಲಕ-ಜಂಬಾಲಗಳಲ್ಲದೆ, ತಂ ಬಾಲಂ ಮತ್ತು ಅವಲಂಬೇ - ಎಂಬುದಾಗಿ ಆರು ಎಡೆಗಳಲ್ಲಿ "ಅಂಬಾ" ಶಬ್ದವು ಕೇಳಿಬರುವುದಲ್ಲವೇ? ಗೋ-ಸಮೂಹದಲ್ಲಿಯೇ ಅಂಬಾ-ಶಬ್ದವು ಕೇಳಿಬರುತ್ತಲೇ ಇರುವುದಲ್ಲವೇ? ಹೀಗೆ ಯುಕ್ತ-ಶಬ್ದ-ಪ್ರಯೋಗದಿಂದಲೇ ಅರ್ಥದ ಸಂನಿವೇಶವನ್ನು, ಪರಿಸರದ ಪರಿಚಯವನ್ನು, ಒದಗಿಸಿಬಿಡಬಲ್ಲ, ನಮ್ಮ ಕವಿ! ಕಿವಿಗೆ ಕೊಟ್ಟದ್ದು ಕಣ್ಣಿನ ಮುಂದೆ ತಂದಿಡುತ್ತದೆ: ಶಬ್ದವೇ ರೂಪಕ್ಕೆ ದಾರಿಯಾಯಿತು. ಇದಲ್ಲದೆ, ಬಾಲ-ಜಂಬಾಲಗಳಲ್ಲೂ ಶಬ್ದಚಮತ್ಕಾರವಿಲ್ಲವೇ? 

ಏನೋ ದನಗಳ ನಡುವೆ ಓಡಾಡುವ ಅನಾಗರಿಕ ದನಗಾರನೆಂದುಕೊಳ್ಳಬೇಡಿ, ಈತನನ್ನು. ಇಲ್ಲಿರುವ ಗೋವುಗಳನ್ನು ಸುಮ್ಮನೆ ಪಶುವೆಂದಿಲ್ಲ. ಇವು ಸುರಭಿಗಳು. ಸುರಭಿಯೆಂದರೆ ಕಾಮಧೇನುವೇ ಸರಿ! "ನೀನಾರಿಗಾದೆಯೋ ಎಲೆ ಮಾನವ?" ಎಂದೋ (ಅಥವಾ ಇನ್ನೂ, "ಹುಲುಮಾನವ!" ಎಂದೋ) ಕೇಳಬಲ್ಲಂತಹವು! 

ಸುರಭಿಯೆಂದರೆ ಒಳ್ಳೆಯ ಪರಿಮಳವುಳ್ಳ ವಸ್ತುವೂ ಹೌದು; ಎಂದೇ ಸೌರಭವೆಂದರೆ ಸುಗಂಧ. ಆರೋಗ್ಯವಾಗಿರುವ ಗೋಗಳ ಸ್ತೋಮವು ಪವಿತ್ರವೂ ಹೌದು. ಕೊಟ್ಟಿಗೆಯೆಂಬುದು ಧ್ಯಾನಕ್ಕೆ ಸಹ ಪ್ರಶಸ್ತವಾದ ಎಡೆಯೆಂದು ಯೋಗಶಾಸ್ತ್ರವು ಹೇಳುತ್ತದೆ. ಗೋವುಗಳ ಅಂಗಗಳಲ್ಲಿ ನಾನಾ-ದೇವತಾ-ಸಾಂನಿಧ್ಯವೇ ಇರಬಲ್ಲುದು. ಗೋಮಯ-ಗವ್ಯಗಳು ಮೇಲ್ನೋಟಕ್ಕೆ ಕೊಳಕಾಗಿ ಕೆಲವರಿಗೆ ಕಾಣಿಸಬಹುದಾದರೂ ಅವಲ್ಲಿ ಪಾವಿತ್ರ್ಯವುಂಟು. ಪಂಚ-ಗವ್ಯವೆಂಬುದು ಪಾಪಹರ-ದ್ರವ್ಯಗಳಲ್ಲಿ ಪ್ರಶಸ್ತವಲ್ಲವೇ? ಮತಾಂತರಗೊಂಡವರು ಹಿಂದಿರುಗಬೇಕೆಂದರೆ ಪಂಚಗವ್ಯ-ಸ್ವೀಕಾರವೇ ಮೊದಲ ಹೆಜ್ಜೆಯೆನ್ನುತ್ತಾರೆ. ಗೋ-ಮೂತ್ರಕ್ಕೆ ಅನೇಕ ಔಷಧೀಯ ಗುಣಗಳುಂಟೆಂಬುದನ್ನು ಆಧುನಿಕ-ವಿಜ್ಞಾನವೂ ಖಚಿತಪಡಿಸುತ್ತಿದೆ. ಗೋವುಗಳು ರಾಷ್ಟ್ರದ ಸಂಪತ್ತು. ಗೋ-ರಕ್ಷೆಯೆಂಬುದು ವೈಶ್ಯರಿಗೆ ವೃತ್ತಿಯೇ ಹೌದು. ಕೃಷಿ-ಗೋರಕ್ಷೆ-ವಾಣಿಜ್ಯಗಳಲ್ಲಿ ಪರಸ್ಪರ ಒಂದಕ್ಕೊಂದರ ನಂಟಿದೆ, ಕೂಡ. ಗೋಕುಲದ ಗೊಲ್ಲರೆಂದರೆ ವೈಶ್ಯರೇ. 

ಎಳೆಮಕ್ಕಳನ್ನು ಗೋವುಗಳು ಗುಮ್ಮವು, ತುಳಿಯವು. ಮನೆಯ ಗೋವುಗಳೆಂದರಂತೂ ಹೇಳಲೇಬೇಕಿಲ್ಲ. ಪ್ರೀತಿಯಿಂದ ಬೆಳೆಸಿದ ಇವು ತುಂಟಹಸುಗಳಲ್ಲ. ಎಂದೇ ಮನೆಯಲ್ಲಿ ಗೋ-ವೃಂದ, ಎಂದರೆ ಗೋ-ಸಮೂಹವೇ, ಇದೆ. ಎಂದೇ ಗೋಪಾಲಕನ ಮಗನಾಗಿ ಬೆಳೆದ ಪುಟ್ಟಕೃಷ್ಣನ ಆಟ ಗೋ-ಸ್ತೋಮದಲ್ಲೇ. ಅದನ್ನೇ ಶ್ಲೋಕದಲ್ಲಿ ಸುರಭಿಗಳ ಸಂಬಾಧವೆಂದಿರುವುದು. ಸಂಬಾಧವೆಂದರೆ ಕಿಕ್ಕಿರಿದಿರುವೆಡೆ. 

ಅವುಗಳಲ್ಲಿ ಪರಸ್ಪರವಿರುವ ಕಿಂಚಿತ್ತಾದ ಸಂದಿಯಲ್ಲಿ ಓಡಿದನೋ, ಅವುಗಳ ಕಾಲುಗಳ ನಡುವೆಯೇ ತೂರಿಹೋಗುತ್ತಿದ್ದನೋ, ಪುಟ್ಟಕೃಷ್ಣ. ಒಟ್ಟಿನಲ್ಲಿ ಅಟ್ಟಿಸಿಕೊಂಡುಬಂದರೂ ಅಮ್ಮನಿಗೆ ಹಿಡಿಯಲಾದ ಓಟಬಾಲನದು! ಅಮ್ಮನಿಗೆ ಕಾಟ ಈತನ ಆಟ! 

ಸಂಬಾಧೇ ಸುರಭೀಣಾಂ 

ಅಂಬಾಂ ಆಯಾಸಯಂತಂ ಅನುಯಾಂತೀಮ್ | 

ಲಂಬಾಲಕಮ್ ಅವಲಂಬೇ 

ತಂ ಬಾಲಂ ತನು-ವಿಲಗ್ನ-ಜಂಬಾಲಮ್ || 


ಮತ್ತೊಂದು ಶ್ಲೋಕ. 

  

ಯಾವುದಾದರೂ ನಿಷ್ಪ್ರಯೋಜಕವಾದ ಕೆಲಸವನ್ನು ನಾವು ಮಾಡುವುದಾದಲ್ಲಿ, ಹಿರಿಯರು ಹಿತೋಕ್ತಿಯೊಂದನ್ನು ಹೇಳುವುದುಂಟು: "ಪುಣ್ಯವಿಲ್ಲ, ಪುರುಷಾರ್ಥವಿಲ್ಲ" ಎಂದೋ, "ಇಹವಿಲ್ಲ, ಪರವಿಲ್ಲ" ಎಂದೋ ಮೂದಲಿಸುವುದುಂಟು. 

ಕೆಲವೊಮ್ಮೆ ಇಹ-ಪರವೆಂದೋ ಐಹಿಕ-ಆಮುಷ್ಮಿಕವೆಂದೋ ಸಹ ಎರಡಾಗಿ ಹೇಳುವುದುಂಟು. ಇಹ ಎಂದರೆಲೋಕ; ಐಹಿಕವೆಂದರೆಲೋಕಕ್ಕೆ ಸಂಬಂಧಪಟ್ಟುದು. ಪರವೆಂದರೆ ಬೇರೆಯದು, ಶ್ರೇಷ್ಠವಾದುದು. ಪರಲೋಕವೆಂದರೆ ಬೇರೆಯ ಲೋಕ. ಸ್ವರ್ಗವನ್ನು ಪರವೆನ್ನುವುದುಂಟು. ಪರಂಧಾಮವೆನ್ನುವಾಗಲೂ ಶ್ರೇಷ್ಠವಾದ ನೆಲೆಯೆಂಬರ್ಥವೇ. 

ಕೆಲವೊಮ್ಮೆ ತ್ರಿವರ್ಗ-ಅಪವರ್ಗವೆಂದೋ ಅಭ್ಯುದಯ-ನಿಃಶ್ರೇಯಸವೆಂದೋ ಹೇಳುವುದುಂಟು. ತ್ರಿವರ್ಗವೆಂದರೆ ಧರ್ಮ-ಅರ್ಥ-ಕಾಮಗಳು. ಇವೇ ಅಭ್ಯುದಯಗಳು. ನಿಃಶ್ರೇಯಸವೆಂದರೂ ಅಪವರ್ಗವೆಂದರೂ ಒಂದೇ: ಮೋಕ್ಷ. ನಿರ್ವಾಣವೆಂದರೂ ಮೋಕ್ಷವೇ. 

"ಶರೀರಕ್ಕೆ ಸಂಬಂಧಿಸಿದ ಹಾಗೂ ಮನಸ್ಸಿಗೆ ಸಂಬಂಧಿಸಿದ ಎಲ್ಲ ಸಂಕಲ್ಪಗಳನ್ನೂ ಯಾವನು ತೊರೆಯುವನೋ ಆತನು ನಿರ್ವಾಣವನ್ನು ಪಡೆಯುವನು - ಇಂಧನಗಳು ಮುಗಿದುಹೋಗಿರುವ ಅಗ್ನಿಯ ಹಾಗೆ" - ಎಂಬುದಾಗಿ ಮಹಾಭಾರತದ ಶ್ಲೋಕವೊಂದು ಹೇಳುತ್ತದೆ. 

ನಿರ್ವಾಣವನ್ನು ಆಚಿನದು ಎಂದು ಹೇಳಿ, ಇತರ ಪುರುಷಾರ್ಥ-ತ್ರಯವನ್ನು ಈಚಿನದು ಎನ್ನುವುದೂ ಉಂಟು. ಅರ್ವಾಚೀನವೆಂದರೆ ಈಚಿನದು. ಹೀಗೆ ನಿರ್ವಾಣ-ಅರ್ವಾಚೀನಗಳು ಜೀವನದ ಲಕ್ಷ್ಯಗಳು. 

ಕೃಷ್ಣನನ್ನು ಎಲ್ಲಿಯೇ ಆಗಲಿ ಸ್ಮರಿಸಿ ಆತನಲ್ಲಿ ಪೂರ್ಣವಿಶ್ವಾಸವಿಟ್ಟಲ್ಲಿ ನಿರ್ವಾಣವೂ ದುರ್ವಾರ - ಎಂದರೆ ತಡೆಯಲಾಗದ್ದು, ಅರ್ಥಾತ್ ದೊರೆತೇ ದೊರೆಯತಕ್ಕದ್ದು; ಹೀಗಿರುವಾಗ ಅರ್ವಾಚೀನಗಳ ಮಾತೇನು? - ಎಂದುಶ್ಲೋಕದಲ್ಲಿ ಕೇಳಿದೆ. ಕಷ್ಟವಾದದ್ದೇ ಸುಲಭವಾಯಿತೆಂದರೆ, ಸುಲಭವಾದದ್ದೂ ದೊರೆಯುವುದೆಂಬುದನ್ನು ಬಾಯಿಬಿಟ್ಟೇ ಹೇಳಬೇಕೇ?  

ಅಲ್ಲಿಗೆ, ಕೃಷ್ಣನನ್ನು ನೆಚ್ಚಿ ನಡೆದುಕೊಂಡವನಿಗೆ ನಾಲ್ಕೂ ಪುರುಷಾರ್ಥಗಳೂ ದಕ್ಕುವುವು. ಕೃಷ್ಣನಲ್ಲಿ ಅಚಲವಾದ ವಿಶ್ವಾಸವು ಹುಟ್ಟಿತೆಂದರೆ ಇಹ-ಪರಗಳೆರಡೂ ಅವಶ್ಯವಾಗಿ ಲಭಿಸುವುವು - ಎನ್ನುತ್ತದೆಶ್ಲೋಕ. ಇನ್ನೇನು ಬೇಕು ಜೀವನಕ್ಕೆ? 


ಯತ್ರ ವಾ ತತ್ರ ವಾ ದೇವ 

ಯದಿ ವಿಶ್ವಸಿಮಸ್ತ್ವಯಿ | 

ನಿರ್ವಾಣಮಪಿ ದುರ್ವಾರಮ್ 

ಅರ್ವಾಚೀನಾನಿ ಕಿಂ ಪುನಃ? || ೩.೭೧ 

ಸೂಚನೆ : 28/12/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.