Wednesday, May 6, 2020

ಖಿನ್ನತೆಗೆ ಸಂಸ್ಕೃತಿಯ ಪರಿಹಾರ (Khinnatege Sanskrutiya Parihara)

ಲೇಖಕರು: ಜಿ. ನಾಗರಾಜ   
(ಪ್ರತಿಕ್ರಿಯಿಸಿರಿ lekhana@ayvm.in)

 

ಇಂದು ಕರೋನ ಹಾವಳಿಯಿಂದಾಗಿ ಸಾಗಬೇಕಾಗಿರುವ ಕೆಲಸಗಳು ಸಾಗದೇ ಅಡೆತಡೆಗಳುಂಟಾಗಿ ಹಲವರಲ್ಲಿ ಮಾನಸಿಕ ಖಿನ್ನತೆಯೂ ಕಾಣಿಸಿಕೊಳ್ಳುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿ ಕಂಡು ಬರುವ ಒಂದು ಸಮತೋಲನದ ಮನೋಭಾವು ಈ ಸಮಸ್ಯೆಗೆ ಪರಿಹಾರವನ್ನು ನೀಡಬಲ್ಲದು ಎನ್ನುವುದನ್ನು ಮುಂದಿನ ಕಥೆಯಿಂದ ತಿಳಿಯಬಹುದು.

ಒಮ್ಮೆ ಇಬ್ಬರು ತಪಸ್ವಿಗಳು ಬಹಳ ವರ್ಷಗಳಿಂದ ಆತ್ಮ ಸಾಕ್ಷಾತ್ಕಾರವಾಗಲೆಂದು ತಪಸ್ಸು ಮಾಡುತ್ತಿರುವಾಗ ಆ ದಾರಿಯಲ್ಲಿ ಸಂಚರಿಸುತ್ತಿದ್ದ ನಾರದ ಮಹರ್ಷಿಗಳು ಈ ತಪಸ್ವಿಗಳನ್ನು ಕಂಡು ಮಾತನಾಡಿಸಲು ಬರುತ್ತಾರೆ.
ಅವರಲ್ಲಿ ಒಬ್ಬ ತಪಸ್ವಿಯು - ಮಹರ್ಷಿಗಳೇ, ನಾನು ಅನೇಕ ವರ್ಷಗಳಿಂದ ತಪಸ್ಸು ಮಾಡುತ್ತಿದ್ದೇನೆ. ಯಾವಾಗ ನನಗೆ ಸಾಕ್ಷಾತ್ಕಾರವಾಗುತ್ತದೆಯೆಂದು ತಿಳಿಸಬಹುದೇ ಎಂದು ಕೇಳುತ್ತಾನೆ. ಆಗ ನಾರದರು, ನಿನಗೆ ಇನ್ನು ಇಪ್ಪತ್ತು ವರ್ಷಗಳ ನಂತರ ಸಾಕ್ಷಾತ್ಕಾರವಾಗುತ್ತದೆ ಎಂದು ಹೇಳುತ್ತಾರೆ. ಆಗ ಆ ತಪಸ್ವಿಯು ಅಯ್ಯೋ ಇನ್ನೂ ಇಪ್ಪತ್ತು ವರ್ಷಗಳು ಬೇಕೇ ಎಂದು ಕೊಂಚ ನಿರಾಶನಾಗಿ, ತಪಸ್ಸನ್ನು ಮುಂದುವರೆಸುತ್ತಾನೆ.

ನಂತರ, ಎರಡನೆಯ ತಪಸ್ವಿಯು ನಾನು ಎಂದು ಗುರಿ ಮುಟ್ಟಬಹುದು ಮಹರ್ಷಿಗಳೇ ಎಂದು ಕೇಳುತ್ತಾನೆ. ಆಗ ನಾರದರು ಎದುರಿಗಿದ್ದ ಒಂದು ಮರವನ್ನು ತೋರಿಸಿ, ಇದೋ ನೋಡು, ಈ ಮರದಲ್ಲಿ ಎಷ್ಟು ಎಲೆಗಳಿವೆಯೆಂಬುದನ್ನು ಲೆಖ್ಖ ಹಾಕು; ಅಷ್ಟು ಜನ್ಮಗಳಾದ ನಂತರ ನಿನಗೆ ಸಾಕ್ಷಾತ್ಕಾರವಾಗುತ್ತದೆ ಎಂದು ಹೇಳಿಬಿಡುತ್ತಾರೆ. ಆದರೆ ಎರಡನೇ ತಪಸ್ವಿಗೆ ಇದರಿಂದ ನಿರಾಶೆಯ ಬದಲು ಬಹಳ ಆನಂದವೇ ಆಗುತ್ತದೆ. ಏಕೆಂದರೆ, ಆತ್ಮ ಸಾಕ್ಷಾತ್ಕಾರವೇನೂ ಕಟ್ಟಿಟ್ಟ ಬುತ್ತಿಯಲ್ಲ. ತಪಸ್ಸು, ಸಾಧನೆ ಮಾಡುವವರೆಲ್ಲರೂ ಆ ಗುರಿಯನ್ನು ತಲುಪಿಯೇ ತಲಪುತ್ತಾರೆ ಎನ್ನುವ ಭರವಸೆಯೇನಿಲ್ಲಾ. ಆದುದರಿಂದ, ಈ ತಪಸ್ವಿಗೆ, ಅಷ್ಟೊಂದು ಜನ್ಮದ ನಂತರವಾದರೂ ಆತ್ಮ ಸಾಕ್ಷಾತ್ಕಾರವು ಖಚಿತವಾಗಿ ಆಗಿಯೇ ಆಗುತ್ತದಲ್ಲಾ ಎಂದು ತಿಳಿದು ಆನಂದದಿಂದ ಕುಣಿದು ಕುಪ್ಪಳಿಸಲು ಆರಂಭಿಸುತ್ತಾನೆ. ಆನಂದದಿಂದ ಕುಣಿದೂ ಕುಣಿದೂ ಅವನಲ್ಲಿ ಮುಖ್ಯವಾದ ನಾಡೀ ಕೇಂದ್ರಗಳು ತೆರೆದು ಒಡನೆಯೇ ಆತ್ಮ ಸಾಕ್ಷಾತ್ಕಾರವೇ ಆಗಿಬಿಡುತ್ತದೆ. ಅವನು ತತ್ಕಾಲದಲ್ಲಿಯೇ ಗುರಿಯನ್ನು ತಲುಪಿಬಿಡುತ್ತಾನೆ.

ಇಲ್ಲಿ ಇಬ್ಬರಿಗೂ ಉಂಟಾದ ವಿಭಿನ್ನವಾದ ಪರಿಣಾಮದ ಹಿಂದೆ ಒಂದು ಮನೋಧರ್ಮದ ಒಂದು ಸೂಕ್ಷ್ಮವಿದೆ. ಎರಡನೆಯ ತಪಸ್ವಿಯು ಕೂಡಲೇ ಗುರಿ ಸಾಧನೆಯಾಗಬೇಕೆಂಬ ತವಕ ಮತ್ತು ಎಷ್ಟು ಜನ್ಮಗಳಾದರೂ ತೆಗೆದುಕೊಳ್ಳಲಿ ಎನ್ನುವ ತಾಳ್ಮೆ - ಈ ಎರಡೂ ಮನೋಭಾವಗಳ ಸಮತೋಲನವನ್ನು ಕಾಪಾಡಿಕೊಂಡಿರುತ್ತಾನೆ. ಆದುದರಿಂದ ಮೊದಲನೇ ತಪಸ್ವಿಗೆ ಆದ ಹಾಗೆ ನಿರಾಶೆಯಾಗುವ ಬದಲು ಆನಂದಾತಿರೇಕ ಉಂಟಾಗಿ, ಆನಂದಾತಿರೇಕವು ಪರಮಾನಂದ ರೂಪವಾದ ಆತ್ಮಾನುಭವಕ್ಕೆ ದಾರಿ ಮಾಡಿಕೊಟ್ಟುಬಿಡುತ್ತದೆ.

ಈ ಸಮತೋಲನದ ಮನೋಭಾವ ಅಧ್ಯಾತ್ಮಿಕ ತಪಸ್ಯೆಗಷ್ಟೇ ಅಲ್ಲದೇ ಸರ್ವಕಾರ್ಯ ಸಾಧನೆಗೂ ಕೀಲಿಕೈಯಂತೆ ಇದ್ದು ಕಾರ್ಯ ಸಾಧನೆಗೆ ಬೇಕಾದ ಉತ್ಸಾಹವನ್ನೂ ತುಂಬುತ್ತದೆ ಮತ್ತು ದೀರ್ಘಕಾಲದ ಪರಿಶ್ರಮ ಪಡುವ ತಾಳ್ಮೆಯನ್ನೂ ತುಂಬುತ್ತದೆ. ದೈವಾನುಗ್ರಹ ಮತ್ತು ಪುರುಷ ಪ್ರಯತ್ನ, ರಥದ ಎರಡೂ ಚಕ್ರಗಳಿದ್ದ ಹಾಗೆ ಎನ್ನುವ ಶ್ರೀರಂಗ ಮಹಾಗುರುಗಳ ಮಾತಿಲ್ಲಿ ಸ್ಮರಣೀಯ. ಪುರುಷ ಪ್ರಯತ್ನದಿಂದ ಸಂಯಮವನ್ನು ಮೆರೆಯೋಣ. ಉಳಿದುದನ್ನು ದೈವಕ್ಕೆ ಬಿಡೋಣ. 
ಇಂದಿನ ಕರೋನಾ ಹಾವಳಿಯಿಂದ ಖಿನ್ನತೆ ಮುಂತಾದ ಸಮಸ್ಯೆಗಳಿಗೆ ರಾಮಬಾಣದಂತಹಾ ಪರಿಹಾರವಾಗಿದೆ.

ಸೂಚನೆ: 6/05/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.