ಲೇಖಕರು: ವಿದ್ವಾನ್ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in).
ಮಹಾಭಾರತದ ಯುದ್ಧವು ಸನ್ನಿಹಿತವಾಗುವ ಸಂದರ್ಭ. ಯುದ್ಧದ ಸಂಧಾನಕ್ಕಾಗಿ ಶ್ರೀಕೃಷ್ಣ ಪರಮಾತ್ಮ ಕೌರವನ ಬಳಿ ಬರುತ್ತಾನೆ. ಆಗ ದುರ್ಯೋಧನನು ಶ್ರೀಕೃಷ್ಣನ ಆತಿಥ್ಯಕ್ಕಾಗಿ ಆಡಂಬರದ ವ್ಯವಸ್ಥೆಯನ್ನು ಮಾಡುತ್ತಾನೆ. ಆದರೆ ಶ್ರೀಕೃಷ್ಣನು ಮಾತ್ರ ಅವನ ಭೂರಿಭೋಜನದ ಭಾರವನ್ನು ಬದಿಗಿರಿಸಿ ದಾಸೀಪುತ್ರನಾದ ವಿದುರನ ಮನೆಗೆ ಆತಿಥ್ಯಕ್ಕಾಗಿ ಹೋಗುತ್ತಾನೆ. ಪ್ರೀತಿಯ ಭೋಜನ ಮುಗಿಸಿ ಬಂದ ಶ್ರೀಕೃಷ್ಣನನ್ನು ದುರ್ಯೋಧನ ಹೀಗೆ ಪ್ರಶ್ನಿಸುತ್ತಾನೆ- "ಅಯ್ಯಾ ಗೊಲ್ಲ ! ಅರಮನೆಯ ಮೃಷ್ಟಾನ್ನ ಭೋಜನವನ್ನು ತಿರಸ್ಕರಿಸಿ ದಾಸೀಪುತ್ರ ವಿದುರನ ಮನೆಗೆ ಊಟಕ್ಕಾಗಿ ತೆರಳಿದ್ದೀಯಲ್ಲ ! ನನ್ನ ಅರಮನೆಯಲ್ಲಿ ನಿನಗಾಗಿ ಸುಗ್ರಾಸ ಭೋಜನಕ್ಕಾಗಿ ವ್ಯವಸ್ಥೆ ಮಾಡಿದ್ದೆ. ಆದರೆ ಇದನ್ನು ನೀನು ಏಕೆ ನಿರಾಕರಿಸಿದೆ?" ಎಂದು. ಅದಕ್ಕೆ ಭಗವಂತ ಶ್ರೀಕೃಷ್ಣನು ಮಾರ್ಮಿಕವಾಗಿಯೂ ಮತ್ತು ದುರ್ಯೋಧನನ ಅಹಂಕಾರವನ್ನು ಭಂಗಗೊಳಿಸುವ ರೀತಿಯಲ್ಲಿಯೂ ಉತ್ತರಿಸುತ್ತಾನೆ. "ಸಂಪ್ರೀತಿಭೋಜ್ಯಾನ್ಯನ್ನಾನಿ ಆಪದ್ಭೋಜ್ಯಾನಿ ವಾ ಪುನಃ | ನ ಚ ಸಂಪ್ರಿಯಸೇ ತಾತ ನ ಚ ಆಪದ್ಗತಾ ವಯಮ್ || - ನೋಡಪ್ಪ! ದುರ್ಯೋಧನ! ಅತ್ಯಂತ ಪ್ರೀತಿಯಿಂದ ಕೊಟ್ಟ ಅನ್ನ ಮತ್ತು ಹಸಿವಿನಿಂದ ಪ್ರಾಣಕ್ಕೆ ಆಪತ್ತು ಸನ್ನಿಹಿತವಾಗಿರುವಾಗ ಕೊಟ್ಟಿರುವ ಅನ್ನ, ಹೀಗೆ ಎರಡು ಸಂದರ್ಭಗಳಲ್ಲಿ ಅನ್ನಕ್ಕೆ ಕುಲ-ಗೋತ್ರ-ಪಾತ್ರ-ಜಾತಿ ಇದಾವುದನ್ನೂ ನೋಡಬಾರದು. ನೀನು ನನ್ನನ್ನು ಪ್ರೀತಿಸಿಲ್ಲ ಮತ್ತು ಅಂತಹ ಆಪತ್ತೂ ನನಗೆ ಬಂದಿಲ್ಲಪ್ಪ ! ಎಂದು ಶ್ರೀಕೃಷ್ಣನು ಉತ್ತರಿಸುತ್ತಾನೆ
ಇಲ್ಲಿ ದುರ್ಯೋಧನನು ತನ್ನ ಶ್ರೇಷ್ಠತೆಯನ್ನು ಮತ್ತು ವಿದುರನ ಕನಿಷ್ಠತೆಯನ್ನು ಅಂತಸ್ತಿನ ಮೂಲಕ ಅಳೆಯುತ್ತಾನೆ. ಆದರೆ ಆಹಾರ ಸ್ವೀಕಾರಕ್ಕೆ ಅಂತಸ್ತಿನ ಪರಿಧಿ ಇಲ್ಲ ಎಂಬುದನ್ನು ಶ್ರೀಕೃಷ್ಣನು ವಿವರಿಸುತ್ತಾನೆ. ಊಟ ರುಚಿಸುವುದು ಅದಕ್ಕೆ ಬಳಸುವ ಪದಾರ್ಥದಿಂದ ಮಾತ್ರವಲ್ಲ. ಯಾವಾಗ ಅದರ ಜೊತೆ ಪ್ರೀತಿಯು ಸೇರುತ್ತದೆಯೋ ಆ ಊಟಕ್ಕೆ ಬೆಲೆ ಜಾಸ್ತಿ. ಹೊಟೇಲಲ್ಲೂ , ಮನೆಯಲ್ಲೂ ಊಟ ಸಿಗುತ್ತದೆ. ಎರಡೂ ಕಡೆ ಬಳಸುವ ಪದಾರ್ಥ ಒಂದೇ. ಆದರೆ ಅದರ ಒಳಗಿರುವ ಭಾವ ಭಿನ್ನ. ಹೊಟೇಲಿನವರಿಗೆ ಹಣಸಂಪಾದನೆಯೇ ಮುಖ್ಯ. ಆದರೆ ಅಮ್ಮ ಮಾಡಿದ ಅಡಿಗೆಯಲ್ಲಿ ಮಗುವಿನ ಶಾರೀರಕ, ಮಾನಸಿಕ ಸ್ವಾಸ್ಥ್ಯಕ್ಕೆ ಬೆಲೆ. ಶ್ರೀರಂಗಮಹಾಗುರುಗಳು "ಅಡಿಗಡಿಗೂ ಭಗವಂತನನ್ನು ಸ್ಮರಣೆ ಮಾಡುತ್ತಾ ಅಡಿಗೆ ಮಾಡಬೇಕಪ್ಪಾ" ಎನ್ನುತ್ತಿದ್ದರು. ಪ್ರತಿಯೊಂದು ತುತ್ತನ್ನು ತಿನ್ನುವಾಗಲೂ "ಕವಲೇ ಕವಲೇ ಗೋವಿಂದಮ್ " ಎಂದು ಭಗವಂತನನ್ನು ಸ್ಮರಿಸುತ್ತಾ ಆಹಾರವನ್ನು ಸ್ವೀಕರಿಸಬೇಕೆಂಬುದು ನಮ್ಮ ಋಷಿಮಹರ್ಷಿಗಳು ಕೊಟ್ಟ ಸಂಸ್ಕಾರ. ಊಟ ಎನ್ನುವುದು ಕೇವಲ ನಮ್ಮ ಶರೀರವನ್ನು ಬೆಳೆಸುವ ಪ್ರಕ್ರಿಯೆಯಲ್ಲದೇ, ಮನಸ್ಸನ್ನೂ, ಇದಕ್ಕೂ ಹಿಂದಿನ ಮನಸಸ್ಪತಿಯನ್ನೂ ಬೆಳಗಿಸುವ ದೀಪ.
ಆಹಾರವನ್ನು ಹೇಗೆ? ಯಾವಾಗ? ಎಲ್ಲಿ? ಸ್ವೀಕರಿಸಬೇಕೆಂಬುದಕ್ಕೆ ನಮ್ಮ ಪರಂಪರೆಯಲ್ಲಿ ಅನೇಕ ವಿಧಿ ನಿಷೇಧಗಳಿದ್ದರೂ. ಅದೆಲ್ಲವನ್ನೂ ಮೀರಿರುವ ಜಾಗ ಎಂದರೆ ಶ್ರೀಕೃಷ್ಣನೇ ಅಪ್ಪಣೆ ಕೊಡಿಸಿದಂತೆ ಪ್ರೀತಿ ಮತ್ತು ಪ್ರಾಣಾಪಾಯದ ಆಪತ್ತು.
ಮನಸಸ್ಪತಿಯನ್ನುಬೆಳಗಿಸುವ ಪ್ರೀತಿಯ ಭೋಜನವನ್ನು ಮಾಡೋಣ, ಮಾಡಿಸೋಣ.