ಲೇಖಕಿ : ಶ್ರೀಮತಿ ಆಶಾ ಸೋಮಯಾಜಿ
ಪರೀಕ್ಷೆಯಲ್ಲಿ ಪಾಸ್ ಆದಾಗ, ಒಳ್ಳೆಯ ಕೆಲಸ ಸಿಕ್ಕಿದ್ದರೆ, ಮಗು ಹುಟ್ಟಿದರೆ, ಶುಭ ಸನ್ನಿವೇಶಗಳು ಒದಗಿದಾಗ ಸಂತೋಷದೊಡನೆ, ಸಿಹಿ ಹಂಚುವ ಪದ್ಧತಿ ಸಾಮಾನ್ಯ. ಸಿಹಿ ಎಂದ ಕೂಡಲೇ ನಾಲಿಗೆಯಲ್ಲಿ ಮಧುರ-ರಸ ಜಿನಗುತ್ತದೆ. ಮಕ್ಕಳಿಗೆ ಅತಿಪ್ರಿಯ, ಹಬ್ಬ ಹರಿ ದಿನಗಳಲ್ಲಂತೂ ಸಿಹಿ ಇಲ್ಲದೇ ಮುಂದಿನ ಮಾತೇ ಇಲ್ಲ. ಸಂತೋಷಕ್ಕೂ ಸಿಹಿಗೂ ಈ ಬಲವಾದ ನಂಟು ಏಕೆ ?
ಸೂಕ್ತ ಪ್ರಮಾಣದಲ್ಲಿದ್ದರೆ ಸಿಹಿ ಮನಸ್ಸಿನ ಪ್ರಸನ್ನತೆಯನ್ನು ಹೆಚ್ಚಿಸುತ್ತದೆ. ಸಾತ್ವಿಕರು ಸಹಜವಾಗಿಯೇ ಮಧುರ ಪ್ರಿಯರು ಎನ್ನುವ ಮಾತಿದೆ. ಈ ಸತ್ತ್ವಗುಣವು ತೃಪ್ತಿ, ಲಾಘವ, ನೆಮ್ಮದಿಗಳನ್ನೂ ತರುತ್ತದೆ. ಆದ್ದರಿಂದಲೇ ಸಿಹಿ, ಸಂತೋಷಗಳು ಒಂದೇ ಗೂಡಿನ ಹಕ್ಕಿಗಳು. ನಮ್ಮೊಳಗೆ ದೇವರ ದರ್ಶನ ಎಣೆಯಿಲ್ಲದ ಸಂತೋಷವನ್ನುಂಟುಮಾಡುತ್ತದೆ ಎಂಬುದು ಋಷಿಗಳ ಮಾತು. ಸಿಹಿಯು ನಮ್ಮಲ್ಲಿ ದೇವತಾ ಕೇಂದ್ರಗಳನ್ನು ತೆರೆಯಲೂ ಸಹಾಯ ಮಾಡುತ್ತದೆಂಬುದೂ ಅವರ ಅನುಭವ. ಭಗವಂತನ ದರುಶನದಿಂದ ಉಂಟಾದ ಆನಂದದ ರಸಕ್ಕೆ, ಸಿಹಿಯ ಆಸ್ವಾದನೆಯು ಸಮೀಪವಾಗಿದೆಯೆಂದು ಅರಿತು ಸಕ್ಕರೆ, ಬೆಲ್ಲ, ಜೇನು ಮುಂತಾದ ಪದಾರ್ಥಗಳನ್ನು ನಿತ್ಯ ಜೀವನದ ಆಹಾರದಲ್ಲಿ ಅಳವಡಿಸಿ ಕೊಟ್ಟಿದ್ದಾರೆ.
ಸಿಹಿ ಚಪ್ಪರಿಸುವುದರಿಂದ ಎಷ್ಟು ಆನಂದ ಅನುಭವಿಸುತ್ತೇವೋ ಅದರ ಕೋಟಿ ಪಟ್ಟು ಆನಂದ ಭಗವಂತನ ಸ್ಮರಣೆ ಮತ್ತು ದರ್ಶನದಿಂದ ಉಂಟಾಗುತ್ತದೆ ಎಂದು ನಮ್ಮ ಮಹರ್ಷಿಗಳ ಅನುಭವದ ಮಾತು. ಇದನ್ನು ನೆನಪಿಸಲು ವಿಶೇಷವಾಗಿ ಸಂಕ್ರಾಂತಿ ಹಬ್ಬದಲ್ಲಿ ಎಳ್ಳಿನ ಜೊತೆಗೆ ಸಕ್ಕರೆಯ ಅಚ್ಚಿನ ಬೇರೆ, ಬೇರೆ ಆಕಾರದ ಗೊಂಬೆಗಳನ್ನು ಕೊಡುವ ಪದ್ಧತಿ ಇದೆ. ಮಕ್ಕಳು ತಮಗೆ ಕುದುರೆ ಬೇಕು, ಆನೆ ಬೇಕು, ಹುಲಿ ಬೇಕು ಎಂದು ಹೇಳುವುದುಂಟು. ಆದರೆ ಕಣ್ಣನ್ನು ಮುಚ್ಚಿ ಯಾವುದೇ ಗೊಂಬೆಯನ್ನು ಬಾಯಿಗೆ ಹಾಕಿದರೂ ಸಿಹಿಯೇ ಅನುಭವವಾಗುವುದು. ನಾಮ ರೂಪಗಳು ಬೇರೆಯಾದರೂ ಎಲ್ಲರ ಸ್ವರೂಪವೂ ಸಿಹಿಯಾದ ಪರಮಾತ್ಮನೇ ಎಂಬ ತತ್ತ್ವವನ್ನು ಶ್ರೀರಂಗಮಹಾಗುರುಗಳು ಜ್ಞಾಪಿಸುತ್ತಿದ್ದರು. ನಾವು ಸಿಹಿಯನ್ನು ಸೇವಿಸುವಾಗ ನಿಜವಾದ ಸಿಹಿಯಾದ ಸರ್ವೇಶ್ವರನ ನೆನಪಿನೊಡನೆ ಸವಿಯುವಂತಾಗಲಿ ಎಂದು ಆಶಿಸೋಣ.
To know more about Astanga Yoga Vijnana Mandiram (AYVM) please visit our Official Website, Facebook and Twitter pages