Saturday, May 9, 2020

ಕರ್ಮದ ಮರ್ಮ ಅರಿಯಿರಿ (Karmada Marma Ariyiri)


ಲೇಖಕರು : ವಿದ್ವಾನ್ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)



ಆದಿತ್ಯಚಂದ್ರೌ ಅನಲಾನಿಲೌ ಚ ದ್ಯೌರ್ಭೂಮಿರಾಪೋ ಹೃದಯಂ ಯಮಶ್ಚ |
ಅಹಶ್ಚ ರಾತ್ರಿಶ್ಚ ಉಭೇ ಚ ಸಂಧ್ಯೇ ಧರ್ಮಶ್ಚ ಜಾನಾತಿ ನರಸ್ಯ ವೃತ್ತಮ್ ||- ಗರುಡಪುರಾಣ. ಸಾರೋ.೩.೧೬


ಅರ್ಥ- ಸೂರ್ಯ ಚಂದ್ರ ಅಗ್ನಿ ವಾಯು ಆಕಾಶ ಭೂಮಿ ನೀರು ಹೃದಯ ಯಮ ಹಗಲು ರಾತ್ರಿ ಎರಡು ಸಂಧ್ಯಾಕಾಲ ಧರ್ಮ ಇವು ಮಾನವನ ಜೀವನದ ನಡವಳಿಕೆಗೆ ಸಾಕ್ಷಿಯಾಗಿರುತ್ತವೆ.

ವಿವರಣೆ- ನಾವು ನಮ್ಮ ಜೀವನದಲ್ಲಿ ಅನೇಕ ಕರ್ಮಗಳನ್ನು ಮಾಡುತ್ತೇವೆ. ಅವುಗಳಿಗೆ ಕುರುಹುಗಳನ್ನು ಕೇಳಿದರೆ ಹೇಳುವುದು ಕಷ್ಟ. ಎಷ್ಟೋ ಕರ್ಮಗಳಿಗೆ ಫಲವನ್ನು ನಮ್ಮ ಕಣ್ಮುಂದೆಯೇ ಕಾಣಬಹುದು ಆದರೆ ಎಷ್ಟೋ ಕರ್ಮಗಳಿಗೆ ಅವುಗಳ ಫಲವನ್ನು ಕಾಣುವುದು ಸಾಧ್ಯವಿಲ್ಲ. ಆದರೆ ಅವು ಎಲ್ಲೂ ತಮ್ಮ ಗುರುತನ್ನು ಮಾಡಿಲ್ಲ ಎಂದು ಹೇಳಲಾಗದು. ಊಟ ಮಾಡಿದರೆ ಅದಕ್ಕೆ ಸಾಕ್ಷಿಯನ್ನು ಬೇರೆಲ್ಲೂ ಕೇಳಬೇಕಾಗಿಲ್ಲ. ಹೊಟ್ಟೆ ತುಂಬಿದ್ದು ಎಲ್ಲರಿಗೂ ತಿಳಿಯುತ್ತದೆ. ಇದು ಭೌತಿಕ ಪರಿಣಾಮ ಅಥವಾ ಗುರುತು. ಭಾರತೀಯ ಆರ್ಷಪರಂಪರೆಯು ಯಾವುದೇ ಕರ್ಮ ಕೇವಲ ಭೌತಿಕವಾಗಿ ಮಾತ್ರ ಪರಿಣಾಮವನ್ನು ಬೀರುವುದಿಲ್ಲ. ಅದಕ್ಕೆ ಮುಂದೆ ಇನ್ನೂ ಎರಡು ಸ್ತರಗಳಿವೆ ಎಂಬುದನ್ನು ಆರ್ಷದೃಷ್ಟಿಯಿಂದ ಕಂಡು ಸಾರಿದೆ. ಅಂದರೆ ಊಟ ಎಂಬುವುದು ಹೊಟ್ಟೆ ತುಂಬುವುದರ ಮೂಲಕ ಶರೀರ ಪುಷ್ಟಿಯನ್ನು ಮಾತ್ರ ಮಾಡಿದರೆ ಸಾಲದು. ಊಟದ ಪರಿಣಾಮ ದೈವಿಕ ಮತ್ತು ಆತ್ಮದ ಸ್ತರದಲ್ಲೂ ಇದೆ ಎಂಬುದನ್ನು ತಿಳಿಯಬೇಕು. ಪ್ರತಿಯೊಬ್ಬ ಮಾನವನ ಜೀವನವು ಕೇವಲ ಭೌತಿಕಕ್ಷೇತ್ರಕ್ಕೆ ಸೀಮಿತವಾಗಿಲ್ಲದೇ ದೈವಿಕ ಮತ್ತು ಆಧ್ಯಾತ್ಮಿಕಕ್ಷೇತ್ರಕ್ಕೂ ಸಂಬಂಧಪಟ್ಟಿದೆ. ಈ ಕಾರಣದಿಂದಲೇ ನಾವು ಮಾಡಿದ ಕರ್ಮವು ಎಲ್ಲೆಲ್ಲಿ ತನ್ನ ಗುರುತನ್ನು ಮಾಡಿದೆ ಎಂದು ಮೂರೂ ಸ್ತರದ ಫಲಭಾಗಿತ್ವದಿಂದ ಪತ್ತೆಹಚ್ಚಬೇಕು. ಕರ್ಮವು ಜನ್ಮ ಜನ್ಮಾಂತರದ ಸಂಬಂಧವನ್ನು ಹೊಂದಿರುತ್ತದೆ. ಆದ್ದರಿಂದ ಇವಕ್ಕೆಲ್ಲ ಸಾಕ್ಷಿ ಚಿರಕಾಲೀನ ಸಂಬಂಧವನ್ನು ಹೊಂದಿರುವ ಸೂರ್ಯಾದಿಗಳಿಗೆ ಮಾತ್ರ ಸಾಧ್ಯವಷ್ಟೇ. ಹೀಗೆ ಕರ್ಮಗಳಿಗೆ ಇಷ್ಟು ಆಳವನ್ನು ಅರಿತು ನಮ್ಮ ಪೂರ್ವಜರು ಕರ್ಮದ ವಿಜ್ಞಾನವನ್ನು ವಿವರಿಸಿದರು. ಶ್ರೀರಂಗಮಹಾಗುರುಗಳು ಇದಕ್ಕೆ ಒಂದೇ ಮಾತನ್ನು ಹೇಳುತ್ತಿದ್ದರು "ಕರ್ಮವನ್ನು ಮರ್ಮವರಿತು ಆಚರಿಸಿ" ಎಂದು.

ಸೂಚನೆ: 9/05/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.