Friday, May 15, 2020

ಜಿಂಕೆ ಮತ್ತು ಋಷ್ಯಾಶ್ರಮಗಳ ಸಂಬಂಧ (Jinke Mattu Rsyasramagala Sambandha)

ಲೇಖಕರು: ವಾದಿರಾಜ. ಪ್ರಸನ್ನ
(ಪ್ರತಿಕ್ರಿಯಿಸಿರಿ lekhana@ayvm.in)


ಷ್ಯಾಶ್ರಮವೆಂದೊಡನೆಯೇ ಬರುವ ಚಿತ್ರವೆಂದರೆ ಕಾಡಿನಲ್ಲಿ ಒಂದು ಪರ್ಣಕುಟಿ, ಮರದ ಕೆಳಗೆ ಆಸೀನನಾಗಿರುವ ಮುನಿ, ಅವರ ಶಿಷ್ಯರು ಮತ್ತು ಅಲ್ಲಿಲ್ಲಿ ಓಡಾಡುತ್ತಿರುವ ಜಿಂಕೆಗಳು. ಅಂದೂ, ಇಂದೂ ಕೃಷ್ಣಮೃಗದ ಚರ್ಮವನ್ನು ಉಪಾಸಕರು, ಸಾಧಕರು, ಸಂನ್ಯಾಸಿಗಳು ಬಳಸುವುದುಂಟು. ಬ್ರಹ್ಮಚಾರಿಗಳು ತಮ್ಮ ಯಜ್ಞೋಪವೀತದಲ್ಲಿ ಕೃಷ್ಣಾಜಿನದ ಒಂದು ತುಂಡನ್ನು ನಿಯಮೇನ ಸೇರಿಸಿಕೊಳ್ಳುತ್ತಾರೆ.

ಜಿಂಕೆಯನ್ನು ಅದರ ಮನಮೋಹಕ ಸೌಂದರ್ಯ ಮತ್ತು ಚಪಲಗತಿಯ ಕಾರಣದಿಂದ ಮಾಯಾಮೃಗವೆಂದೇ ಕರೆಯುವುದುಂಟು. ಹೊನ್ನಜಿಂಕೆಯಮೇಲೆ ಮೋಹಗೊಂಡ ಸೀತೆಯ ಕಥೆ, ಲೋಕಮೋಹವನ್ನು ಬಿಟ್ಟು ವಾನಪ್ರಸ್ಥನಾಗಿ ಬಂದ ಭರತಮುನಿಯು ಜಿಂಕೆಯ ಮೇಲೆ ವ್ಯಾಮೋಹಗೊಂಡು ಪುನಃ ಭವಸಾಗರದ ಚಕ್ರಕ್ಕೆ ಸಿಕ್ಕಿದ ಕಥೆ ಎಲ್ಲವೂ ಪ್ರಸಿದ್ಧ.  ಆಶ್ರಮವಾಸಿಗಳಾದ ಋಷಿಗಳಿಗೆ ಜಿಂಕೆಯೊಂದಿಗಿನ ಈ ನಂಟು ಏಕೆ ಎಂಬುದನ್ನು ವಿಚಾರ ಮಾಡಬೇಕಿದೆ.    

ಜಿಂಕೆಗಳು ಸಸ್ಯಾಹಾರಿ ಸುಂದರ ಸಾಧು ಪ್ರಾಣಿ. ಹುಲಿ- ಸಿಂಹಗಳಂತಹ ಮೃಗಗಳು ಹಾಗೂ ವಿಷಸರ್ಪಗಳು ಇಲ್ಲದ ಸ್ಥಳಗಳಲ್ಲಿ ತನ್ನ ವಾಸಸ್ಥಾನವನ್ನು ಸಹಜವಾಗಿಯೇ ಮಾಡಿಕೊಳ್ಳುತ್ತವೆ. ಇದು ವಾಸಿಸಲು  ಪುಷ್ಕಳವಾಗಿ ದರ್ಬೆ, ಹುಲ್ಲು, ಫಲಭರಿತ ವೃಕ್ಷಸಂಪತ್ತು ಇರುವ ಸ್ಥಳಗಳನ್ನೇ ಆಯ್ಕೆ ಮಾಡಿಕೊಳ್ಳುತ್ತವೆ. ಎಲ್ಲಿ ಹೊಗೆಯಿರುತ್ತದೋ ಅಲ್ಲಿ ಬೆಂಕಿ ಇರುತ್ತದೆಂಬ ಸಾಮಾನ್ಯ ಜ್ಞಾನದಂತೆಯೇ ಮಹರ್ಷಿಗಳು ಸಹಜವಾಗಿ ಜಿಂಕೆಗಳು ವಾಸಿಸುವ ಸ್ಥಾನ ಉಪದ್ರವ ಇಲ್ಲದ ಪ್ರದೇಶವೆಂದೂ, ನೀರು, ಫಲ ಪುಷ್ಪ, ದರ್ಭೆ-ಹುಲ್ಲುಗಳಿಂದ ಸಮೃದ್ಧವಾಗಿದ್ದು ಪವಿತ್ರವಾದ ಜಾಗವೆಂಬ ಸೃಷ್ಟಿಮರ್ಮವನ್ನರಿತಿದ್ದರು. ತಮ್ಮ ಧರ್ಮಾನುಷ್ಠಾನ, ತಪ - ಧ್ಯಾನ - ಯಜ್ಞ ಗಳಿಗೆ ಸೂಕ್ತ ಸ್ಥಳವೆಂದು ತಮ್ಮ ಆಶ್ರಮವನ್ನು ಅಂತಹ ಸ್ಥಳದಲ್ಲೇ ಕಟ್ಟುತ್ತಿದ್ದರು. ಯೋಗಸಾಧಕರಿಗೆ ಜಿಂಕೆಯ ದರ್ಶನವೇ  ಧರ್ಮದ ಸ್ಫೂರ್ತಿ ಕೊಡುವಂತಹದ್ದು ಎಂಬುದು ಅನುಭವಿಗಳ ಮಾತು. ಕೃಷ್ಣಸಾರಮೃಗದ ಸಾಧುಸ್ವಭಾವ ವಿಮಲಹೃದಯರಿಗೆ ತಮ್ಮ ಅಂತರಂಗದ ಪ್ರತಿಕೃತಿಯಂತೆ ಭಾಸವಾಗುತ್ತದೆಯಂತೆ. ಅದರ ಸ್ಪರ್ಶ, ಸಾನ್ನಿಧ್ಯಗಳು ಅವರ ಮನೋಧರ್ಮಕ್ಕೆ ಪೋಷಕವೆಂದು ಪ್ರಾಯೋಗಿಕವಾಗಿ ತಿಳಿದೇ ಕೃಷ್ಣಾಜಿನವನ್ನು (ಜಿಂಕೆಯ ಚರ್ಮ) ಯಜ್ಞಕಾರ್ಯದಲ್ಲಿ ಆಸನ ಮತ್ತು ಉತ್ತರೀಯವನ್ನಾಗಿ ಉಪಯೋಗಿಸುತ್ತಿದ್ದರು. ಯೋಗಿಗಳ ಒಳ ಅನುಭವದಲ್ಲಿ ಯಜ್ಞದೇವತೆಯು ಸಾರಂಗ ಮೃಗದ ರೂಪವನ್ನು ಹೋಲುವ ಆಕಾರದಲ್ಲಿಯೇ ದರ್ಶನಕ್ಕೆ ಬರುತ್ತದೆ ಎಂಬುದು ಜ್ಞಾನಿಗಳ ಅನುಭವದ ವಿಷಯ. ಸಾರಂಗ ಮೃಗವನ್ನು ಯಜ್ಞಪುರುಷನ ಪ್ರತಿರೂಪವೆಂದೇ ಭಾವಿಸುತ್ತದೆ ನಮ್ಮ ಸಂಸ್ಕೃತಿ.

ಕೇವಲ ಇಂದ್ರಿಯಗಳ ಸೆಳೆತಕ್ಕೆ ಬಾಗಿ ಇಷ್ಟ-ಅನಿಷ್ಟಗಳನ್ನು ನಿರ್ಣಯಿಸುವವರಲ್ಲ ಋಷಿಗಳು. ವಸ್ತುನಿಷ್ಠವಾಗಿ ತಮ್ಮ ಗುರಿಗೆ ಅನುಕೂಲ-ಪ್ರತಿಕೂಲಗಳನ್ನು ಲೆಕ್ಕಹಾಕಿ, ಅನುಭವ ಸಿದ್ಧವಾದ ತೀರ್ಮಾನಗಳನ್ನು ತೆಗೆದುಕೊಳ್ಳುವ ಮಹಾವಿಜ್ಞಾನಿಗಳು ಭಾರತೀಯ ಮಹರ್ಷಿಗಳು ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ. ನಮ್ಮಂತೆ ಅವರು ಬರಿಯ ಸ್ಥೂಲ ದೃಷ್ಟಿಯಿಂದ ಆಲೋಚಿಸಿ ತಾವು ತಂಗುವ ಜಾಗವನ್ನು ನಿಶ್ಚಯಿಸದೇ ಸ್ಥೂಲ, ಸೂಕ್ಷ್ಮ, ಪರಾ ದೃಷ್ಟಿಗಳಿಂದ ಈ ಮೂರೂ ಕ್ಷೇತ್ರಗಳಿಗೂ ತಂಪನ್ನು ನೀಡುವ ಪ್ರಶಸ್ತವಾದ ಇಂತಹ ಸ್ಥಳಗಳಲ್ಲಿ ಆಶ್ರಮ ಕಟ್ಟುತ್ತಿದ್ದುದು ಅವರ ದೂರದೃಷ್ಟಿಗೊಂದು ಉದಾಹರಣೆ. ಅಂತಹ ಋಷಿದೃಷ್ಟಿ ನಮ್ಮದಾಗಲಿ ಎಂದು ಪ್ರಾರ್ಥಿಸೋಣ.

ಸೂಚನೆ: 15/05/2020 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.