Wednesday, May 6, 2020

ಸಂಕಲ್ಪ ಮತ್ತು ಚಿತ್ತಚಾಂಚಲ್ಯ (Sankalpa Mattu Chittachancalya)

ಲೇಖಕಿ : ವಿಜಯಲಕ್ಷ್ಮೀ ಬೆಂಡೆಹಕ್ಕಲು
(ಪ್ರತಿಕ್ರಿಯಿಸಿರಿ lekhana@ayvm.in)   
ಕರ್ಣ ದಾನಶೂರ ಎಂಬುದು ಸುಪ್ರಸಿದ್ಧ. ಆತನು ಪ್ರತಿದಿನ ಬ್ರಾಹ್ಮಮುಹೂರ್ತದಲ್ಲಿ ಎದ್ದು ನದಿಯಲ್ಲಿ ಮಿಂದು ಶುಚಿರ್ಭೂತನಾಗಿ ಸೂರ್ಯನಿಗೆ ಅರ್ಘ್ಯಕೊಡುತ್ತಿದ್ದನು. ಆ ಸಮಯದಲ್ಲಿ ಯಾರು ಏನು ಯಾಚಿಸಿದರೂ 'ನಾಸ್ತಿ' (ಇಲ್ಲ) ಎಂದು ಹೇಳುತ್ತಿರಲಿಲ್ಲ. ಒಮ್ಮೆ ಕರ್ಣ ಅಭ್ಯಂಜನಕ್ಕೆ ಸಿದ್ಧವಾಗುತ್ತಿದ್ದ. ಎಡಗೈಯಲ್ಲಿ ರತ್ನಖಚಿತವಾದ ಚಿನ್ನದಬಟ್ಟಲಲ್ಲಿ ಎಣ್ಣೆ ಇಟ್ಟುಕೊಂಡು ಬಲಗೈಯಲ್ಲಿ ಎಣ್ಣೆಯನ್ನು ತೆಗೆದುಕೊಂಡು ಹಚ್ಚಿಕೊಳ್ಳುತ್ತಿದ್ದ. ಆಗ ಬೆಳಗಿನ ವಿಹಾರಕ್ಕೆಂದು ಶ್ರೀಕೃಷ್ಣ-ಅರ್ಜುನರು ಅತ್ತಕಡೆ ಬಂದರು. ಅರ್ಜುನನ ಕಣ್ಣು ಕರ್ಣನ ಕೈಯಲ್ಲಿದ್ದ ಬಟ್ಟಲಿನ ಮೇಲೆ ಬಿತ್ತು. 'ನನಗೂ ಇದೇ ತರಹದ ಬಟ್ಟಲಿನಲ್ಲಿ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಬೇಕೆಂದು ಆಸೆಯಾಗಿದೆ ಎಂದ. ಆಗ ಕೃಷ್ಣ 'ಕರ್ಣನನ್ನೇ ಕೇಳೋಣ, ಕೊಟ್ಟರೂ ಕೊಡಬಹುದು' ಎನ್ನುತ್ತಾನೆ.

ಕೃಷ್ಣನು ಕರ್ಣನ ಹತ್ತಿರ ಹೋಗಿ ನಿನ್ನಿಂದ ಒಂದು ವಸ್ತು ಕೇಳಬೇಕೆಂದಿದ್ದೇನೆ. ಹೇಗೆ ಕೇಳುವುದೆಂದು ಗೊತ್ತಾಗುತ್ತಿಲ್ಲ ಎನ್ನುತ್ತಾನೆ. ನಿಸ್ಸಂಕೋಚವಾಗಿ ಕೇಳು ಎಂದ ಕರ್ಣ. ಈ ಬಟ್ಟಲನ್ನು ಕೊಡುವೆಯಾ? ಎಂದು ಮಾತು ಮುಗಿಸುವುದರೊಳಗೇ ಎಡಗೈಯಲ್ಲಿದ್ದ ಬಟ್ಟಲನ್ನು ಕೃಷ್ಣಾರ್ಪಣಮಸ್ತು ಎಂದು ಆತನಿಗೆ ಕೊಟ್ಟು ವಿನೀತನಾಗಿ ನಮಸ್ಕರಿಸಿದ. ಅರ್ಜುನನಿಗೆ ನಂಬಲಾಗಲಿಲ್ಲ! ದಾನಶೂರ ಎನ್ನುವುದು ನಿನ್ನ ಹೊಗಳಿಕೆಯಲ್ಲ. ನಿನ್ನ ಸಹಜಸ್ಥಿತಿಯ ವರ್ಣನೆ ಎಂದು ಪ್ರಶಂಸಿದ ಕೃಷ್ಣ. ಆದರೆ ದಾನವನ್ನು ಬಲಗೈಯಲ್ಲಿ ಕೊಡಾಬೇಕಾಗಿತ್ತು. ಎಡಗೈಯಲ್ಲಿ ಕೊಟ್ಟಿದ್ದು ಸರಿಯಲ್ಲ ಎಂದ.

ಮನಸ್ಸು ಅತಿಚಂಚಲವಾದದ್ದಲ್ಲವೇ? ಎಡಗೈಯಿಂದ ಬಲಗೈಗೆ ಹೋಗುವುದರೊಳಗೆ ನಿರ್ಧಾರವೇ ಬದಲಾಗಬಹುದು ಎಂದ ಕರ್ಣ. ಕರ್ಣನ ದೃಢ ನಿಶ್ಚಯ ಮತ್ತು ಚಿತ್ತಚಾಂಚಲ್ಯದ ಬಗ್ಗೆ ಅವನಿಗಿದ್ದ ಆಳವಾದ ಅರಿವು ಕೃಷ್ಣಾರ್ಜುನರನ್ನು ಮೂಕರನ್ನಾಗಿಸಿತ್ತು.

ಯಾವ ವಿಚಾರದಲ್ಲಿಯೇ ಆಗಲಿ ಸಂಕಲ್ಪ ನೆರವೇರಿಸುವಾಗ ಚಿತ್ತಚಾಂಚಲ್ಯವಾಗದಂತೆ ಎಚ್ಚರ ವಹಿಸಬೇಕು. ಯಾವುದೇ ಕೆಲಸ ಮಾಡುವಾಗಲೂ ಸಂಕಲ್ಪಮಾಡಿಸುವ ಪದ್ಧತಿ ಇದೆ. ಸುದೃಢವಾಗಿ ಶಕ್ತಿಯುತವಾಗಿರುವ ಸಂಕಲ್ಪವನ್ನು ಹರಿಸಿಬಿಟ್ಟರೆ ಆ ಸಂಕಲ್ಪವೇ ಕೆಲಸವನ್ನು ಮಾಡಿಸಿಕೊಳ್ಳುತ್ತದೆ. ದಾರ ಸುತ್ತಿ ಬುಗುರಿಯನ್ನು ಆಡಿಸಿಬಿಟ್ಟರೆ ದಾರದ ಸಂಬಂಧ ತಪ್ಪಿದರೂ ಬುಗುರಿ ಸುತ್ತುತ್ತದೆ. ಸಂಕಲ್ಪ ಹರಿದುದಕ್ಕೆ ಅಷ್ಟು ದೂರ ಕೆಲಸ ಉಂಟು ಎಂಬ ಶ್ರೀರಂಗಮಹಾಗುರುಗಳ ಮಾತು ಸ್ಮರಣೀಯ. 

ಸೂಚನೆ: 6/05/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.