ಲೇಖಕರು: ಶ್ರೀ. ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ : lekhana@ayvm. in)
ನಮ್ಮ ಮಹರ್ಷಿಗಳು ಕಣ್ಣು ಮುಚ್ಚಿ ಧ್ಯಾನಸ್ಥರಾಗಿ ಮೂಲದ ಶೋಧನೆಯಲ್ಲಿ ತೊಡಗಿದಾಗ ಈ ದೇಹವನ್ನು ಒಂದು ನಗರವಾಗಿ, ಆಲಯವಾಗಿ, ರಥವಾಗಿ ತಮ್ಮ ಅಂತರ್ದರ್ಶನದಲ್ಲಿ ಕಂಡರು. ಹಾಗೆ ಒಳಗೆ ಕಂಡುದನ್ನೇ ಹೊರಗೆ ಅದರ ಅನುಕೃತಿಯಾಗಿ ಇಲ್ಲಿ ನಾಗರಿಕತೆಯನ್ನು ಬೆಳೆಸಿದುದನ್ನು ಕಾಣುತ್ತೇವೆ. ಅಂತಹ ನಗರಗಳನ್ನು ನಿರ್ಮಿಸುವಾಗ ಆ ನಗರಗಳಿಗೆ ಮೂಲವನ್ನು ನೆನಪಿಸುವ ಹೆಸರನ್ನೇ ಇಟ್ಟರು. ಉದಾಹರಣೆಗೆ, ”ಅಯೋಧ್ಯಾ”- ಯುದ್ಧಮಾಡಿ ಜಯಿಸಲಾಗದುದು. ದೇವದೇವನು ವಾಸಿಸುವ ನಗರದಲ್ಲಿ ಯುದ್ಧದ ಮಾತೇ ಇಲ್ಲ. ಹೊರನಗರಗಳನ್ನು ಯುದ್ಧಮಾಡಿ ಜಯಿಸಬಹುದು. ಆದರೆ ಈ ದೇಹವು ಅವರ ದೃಷ್ಟಿಯಲ್ಲಿ ಒಳನಗರ. ಒಳಗೊಯ್ಯುವ ಹೊರನಗರವೂ ಸಹ. ಇದನ್ನು ಭಕ್ತಿಯಿಂದ, ಶರಣಾಗತಿಯಿಂದ ಸಾಧನೆಯಿಂದ ಮಾತ್ರ ಜಯಿಸಬಹುದಾಗಿದೆ.ಅದನ್ನು ನೆನಪಿಸುವ ಹೆಸರು.
ಅಂತೆಯೇ, ‘ಕಾಶೀ’-ಒಳಪ್ರಕಾಶವನ್ನೇ ನೆನಪಿಸುವ ಹೆಸರನ್ನು ಹೊರ ನಗರಕ್ಕೂ ಇಟ್ಟರು.
ಅಂತೆಯೇ, ‘ಕಾಶೀ’-ಒಳಪ್ರಕಾಶವನ್ನೇ ನೆನಪಿಸುವ ಹೆಸರನ್ನು ಹೊರ ನಗರಕ್ಕೂ ಇಟ್ಟರು.
ನಮ್ಮ ದೇವಸ್ಥಾನಗಳು:
ದೇಹದೊಳಗೆ ದೇವನನ್ನು ಸಾಕ್ಷಾತ್ಕರಿಸಿಕೊಂಡ ಈ ದೇಶದ ಜ್ಞಾನಿಗಳು ಈ ದೇಹದೇವಾಲಯದ ಅನುಕೃತಿಯಾಗಿ ಹೊರಗೂ ದೇವಸ್ಥಾನಗಳನ್ನು ನಿರ್ಮಿಸಿದರು. ಹೆಸರೇ “ದೇವಸ್ಥಾನ”. ನಮ್ಮನ್ನು ಪಾಂಚಭೌತಿಕವಾದ ಭೂತಸ್ಥಾನದಿಂದ ದೇವಸ್ಥಾನಕ್ಕೆ ಹತ್ತಿಸುವ ಉಪಾಯವೇ ಜ್ಞಾನಿಗಳು ತಂದ ದೇವಾಲಯಗಳು. ಇಲ್ಲಿನ ಶಿಲ್ಪಗಳು “ಶೀಲ ಸಮಾಧೌ” ಎಂಬಂತೆ ಸಮಾಧಿಸ್ಥಿತಿಯಿಂದಲೇ ಹೊರಹೊಮ್ಮಿದುವಾಗಿವೆ. ಸಾಮಾನ್ಯವಾಗಿ ದೇವಾಲಯಗಳ ಪ್ರಾಕಾರದ ಕೆಳಗಿನ ಅಂತಸ್ತುಗಳಲ್ಲಿ ಪಶುಪಕ್ಷಿಗಳ ಚಿತ್ರವಿರುತ್ತದೆ. ನಂತರ ಅಸುರರ ಚಿತ್ರಗಳು ನಂತರ ಮೇಲೆಮೇಲಿನ ಸುತ್ತುಗಳಲ್ಲಿ ಮನುಷ್ಯರ, ಗುರುಶಿಷ್ಯರ ಚಿತ್ರಗಳನ್ನು ಕಾಣುತ್ತೇವೆ. ನಂತರ ದೇವತೆಗಳ, ಭಗವಂತನ ಅವತಾರಗಳ ಚಿತ್ರಗಳು ಹಾಗೆಯೇ ಒಳ ಸುತ್ತುಗಳಲ್ಲಿ ತ್ರಿಮೂರ್ತಿಗಳ ಚಿತ್ರಗಳು ನಂತರ ದೇವಾಲಯದ ಗರ್ಭದಲ್ಲಿ- ಗರ್ಭಗುಡಿಯಲ್ಲಿ ದೇವದೇವನ ಶಿಲ್ಪವಿರುತ್ತದೆ.
ಏನಿದರ ಮರ್ಮ?
ಭಾರತದ ಜ್ಞಾನಿಗಳು ಇಡೀ ಸೃಷ್ಟಿ ರಹಸ್ಯವನ್ನೇ ನಮ್ಮೆದುರು ಬಿಚ್ಚಿಟ್ಟಿದ್ದಾರೆ. ಯಾವ ಸಂಸ್ಕಾರವೂ ಇಲ್ಲದಿದ್ದಾಗ ಪ್ರಾಣಿಗಳಂತೆ ಬದುಕುತ್ತೇವೆ. ನಂತರ ಹೊರಜೀವನದ್ದಷ್ಟೇ ಸಂಸ್ಕಾರ ಬೆಳೆದಾಗ ಅಸುರರಂತೆ ವರ್ತಿಸುತ್ತೇವೆ. “ಮನ ಅವಬೋಧನೇ”ಎಂಬಂತೆ ಅರಿತು ಮಾಡುವುದನ್ನು ಕಲಿತಾಗ ಮನುಷ್ಯರಾಗುತ್ತೇವೆ. ಅರಿತು ಮಾಡುವುದು ಎಂದಾಗ ಕೇವಲ ಭೌತಿಕ ಕ್ಷೇತ್ರದ ಅರಿವು ಮಾತ್ರವಲ್ಲದೇ ದೈವಿಕ, ಆಧ್ಯಾತ್ಮಿಕ ಕ್ಷೇತ್ರಗಳ ಅರಿವನ್ನೂ ಸೇರಿಸಿಕೊಂಡು ಜೀವನದಲ್ಲಿ ಹೆಜ್ಜೆಯಿಡುವವನಿಗೇ ವಾಸ್ತವವಾಗಿ “ಮಾನವ “, “ಮನುಷ್ಯ” ಎಂಬ ಪದಗಳು ಸಲ್ಲುತ್ತವೆ. ಇನ್ನೂ ಮೇಲಿನ ಮಜಲುಗಳಿಗೆ ಹತ್ತಿದ ಮನಸ್ಸು ಜೀವನ ಮೂಲವನ್ನು ಕಂಡ ಗುರುವನ್ನು ತನ್ನ ಉದ್ಧಾರಕ್ಕಾಗಿ ಆಶ್ರಯಿಸುತ್ತದೆ. ನಂತರ ನಿರಂತರ ಸಾಧನೆಯಿಂದ ತಪಸ್ಯೆಯಿಂದ ಒಳಗೆ ಶಕ್ತಿಸ್ವರೂಪರಾಗಿ ಬೆಳಗುವ ದೇವತೆಗಳನ್ನು ದರ್ಶನ ಮಾಡುತ್ತೇವೆ. ಇನ್ನೂ ಮುಂದೆ ಆ ದೇವತೆಗಳಿಗೆಲ್ಲ ಶಕ್ತಿಯನ್ನು ಹರಿಸಿ ಕಾರ್ಯನಿರ್ವಹಿಸುವಂತೆ ಮಾಡುವ ಒಂದೇ ಚೈತನ್ಯದ ಮೂರುರೂಪಗಳಾದ ತ್ರಿಮೂರ್ತಿಗಳ ದರ್ಶನ. ನಂತರ ಕಡೆಯಲ್ಲಿ ಸೃಷ್ಟಿಮೂಲನಾದ ವಿಕಾಸಮೂಲನಾದ ದೇವದೇವನ ದರ್ಶನ. ಹೀಗೆ ದೇವಾಲಯಗಳನ್ನು ನಾವು ನಮ್ಮ ಇಂದ್ರಿಯಜೀವನದ ವೇಗದಲ್ಲಿ ಮರೆತಿರುವ ನಡೆದುಬಂದ ದಾರಿಯನ್ನು ನೆನಪಿಸುವ ಸ್ಮಾರಕಗಳನ್ನಾಗಿ ತಂದಿದ್ದಾರೆ. ನಮ್ಮ ಶ್ರೀರಂಗ ಮಹಾಗುರುಗಳು ದೇವಾಲಯಗಳನ್ನು ಸ್ಮಾರಕ ಮಂದಿರಗಳು (Memory Hall) ಎಂದೇ ಕರೆದಿದ್ದಾರೆ. ಹೆಜ್ಜೆಹೆಜ್ಜೆಗೂ ಮೂಲದ ಸ್ಮರಣೆಯನ್ನು ತಂದುಕೊಟ್ಟು ವಿಸ್ಮರಣೆಯ ಕೊಳೆಯನ್ನು ತೆಗೆದು ಹಾಕುವ ನಿಜವಾದ ಸಂಸ್ಕೃತಿಯ ಕುರುಹು ಇಲ್ಲಿದೆ.